ADVERTISEMENT

ರಸ್ತೆ ಅತಿಕ್ರಮಣ; ಪಾಲಿಕೆಯಿಂದ ತೆರವು

​ಪ್ರಜಾವಾಣಿ ವಾರ್ತೆ
Published 24 ಮೇ 2017, 8:56 IST
Last Updated 24 ಮೇ 2017, 8:56 IST

ವಿಜಯಪುರ: ಇಲ್ಲಿನ ಕನಕದಾಸ ಬಡಾವಣೆ ಹಿಂಭಾಗದಲ್ಲಿರುವ ರುದ್ರಭೂಮಿ ಪಕ್ಕದ 60 ಅಡಿ ರಸ್ತೆಯನ್ನು ಅತಿಕ್ರಮಣ ಮಾಡಿದ್ದನ್ನು ಮಂಗಳವಾರ ಮಹಾನಗರ ಪಾಲಿಕೆ ವತಿಯಿಂದ ತೆರವುಗೊಳಿಸಲಾಯಿತು.

ಉಪ ಮೇಯರ್ ಗೋಪಾಲ ಘಟಕಾಂಬಳೆ, ಆಯುಕ್ತ ಹರ್ಷಶೆಟ್ಟಿ ನೇತೃತ್ವದಲ್ಲಿ ಜಾಗಕ್ಕೆ ಹಾಕಿದ್ದ, ತಂತಿ ಬೇಲಿ, ಗೇಟನ್ನು ಜೆಸಿಬಿ ಮೂಲಕ ತೆರವುಗೊಳಿಸಿ, ರುದ್ರಭೂಮಿಗೆ ಅವಶ್ಯವಿರುವ 33 ಗುಂಟೆ ಜಮೀನು ನೀಡಿ, ಮೂಲ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಯಿತು.

ಚಪ್ಪರಬಂದ ಸಮಾಜದ ಧುರೀಣರಾದ ಮೌಲಾಲಿ ಪುಂಗಿವಾಲೆ (ಹೆಬ್ಬಾಳ), ಹಾಜಿಲಾಲ ಪುಂಗಿವಾಲೆ, ಅಲ್ಹಜ್ ಇಮಾಮಸಾಬ್ ಹುಲ್ಲೂರ, ಚೂಟ ಪಡೇಕನೂರ ಈ ಸಂದರ್ಭ ಆಕ್ಷೇಪ ವ್ಯಕ್ತಪಡಿಸಿದರು. ಒಂದೆಡೆ ಜಾಗ ತೆರೆವುಗೊಳಿಸುತ್ತಿರುವುದು ಸರಿಯಲ್ಲ.

ADVERTISEMENT

ನಮ್ಮ ಸಮಾಜಕ್ಕೆ ಸೇರಿದ ರುದ್ರಭೂಮಿ ಜಾಗದಲ್ಲಿ ರಸ್ತೆ ನಿರ್ಮಾಣ ಮಾಡಬಾರದು ಎಂದು ಪಟ್ಟು ಹಿಡಿದರು. ಉಪ ಮೇಯರ್ ಗೋಪಾಲ ಘಟಕಾಂಬಳೆ ಸಮಾಜದ ಮುಖಂಡರ ಮನವೊಲಿಸುವಲ್ಲಿ ಯಶಸ್ವಿಯಾದರು.

ಡಿವೈಎಸ್‌ಪಿ ಡಾ.ರಾಮ್‌ ಎಲ್‌ ಅರಿಸಿದ್ದಿ, ಸಿಪಿಐ ಚೌಧರಿ, ಬಸವರಾಜ ಯಲಿಗಾರ, ಪಿಎಸ್ಐ ಮಹೇಂದ್ರ ನಾಯ್ಕ್‌ ಮೊದಲಾದ ಅಧಿಕಾರಿಗಳು ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

ಅತಿಕ್ರಮಣ ತಡೆಗೆ ಪಾಲಿಕೆ ಬದ್ಧವಾಗಿದೆ. ನಗರವನ್ನು ಸುಂದರ ನಗರಿಯನ್ನಾಗಿ ನಿರ್ಮಿಸುವ ಉದ್ದೇಶ ದಿಂದ ಅತಿಕ್ರಮಣ ತೆರವು ಗೊಳಿಸಬೇಕಿರುವುದು ಅವಶ್ಯವಾಗಿದೆ, ಸಾರ್ವಜನಿಕರು ಸಹ ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ಇದೇ ಸಂದರ್ಭ ಮನವಿ ಮಾಡಿದರು. ಪಾಲಿಕೆ ಎಂಜಿನಿಯರ್ ಎಸ್.ಆರ್. ಜಗದೀಶ, ಗಾಣಿಗೇರ, ರಿಯಾಜ ಹುಬ್ಬಳ್ಳಿ, ಗುತ್ತಿಗೆದಾರ ದೊಡಮನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.