ADVERTISEMENT

ವಿಜಯಪುರ: 18.50 ಲಕ್ಷ ಪಠ್ಯಪುಸ್ತಕ ಕೊರತೆ

​ಪ್ರಜಾವಾಣಿ ವಾರ್ತೆ
Published 26 ಮೇ 2017, 8:50 IST
Last Updated 26 ಮೇ 2017, 8:50 IST
ವಿಜಯಪುರ: 18.50 ಲಕ್ಷ ಪಠ್ಯಪುಸ್ತಕ ಕೊರತೆ
ವಿಜಯಪುರ: 18.50 ಲಕ್ಷ ಪಠ್ಯಪುಸ್ತಕ ಕೊರತೆ   

ವಿಜಯಪುರ: ಶೈಕ್ಷಣಿಕ ವರ್ಷದ ಆರಂಭದ ದಿನವೇ ಜಿಲ್ಲೆಯ 2300 ಸರ್ಕಾರಿ ಪ್ರಾಥಮಿಕ, ಮಾಧ್ಯಮಿಕ, 160 ಪ್ರೌಢಶಾಲೆಗಳ 3.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ವಿತರಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಜ್ಜಾಗಿದೆ.

ಜಿಲ್ಲೆಯ 17–18ನೇ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕಗಳ ಬೇಡಿಕೆ 33 ಲಕ್ಷ. ಬುಧವಾರದವರೆಗೂ 14 ಲಕ್ಷ ಪಠ್ಯಪುಸ್ತಕ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ಕೈ ಸೇರಿದ್ದು, ಇದೇ 22ರಿಂದಲೇ ಶಾಲೆಗಳಿಗೆ ಕಳುಹಿಸಿಕೊಡುವ ಕಾರ್ಯ ಭರದಿಂದ ನಡೆದಿದೆ.

ನಗರದ ಎಸ್‌.ಆರ್‌,ಕಾಲೊನಿಯ ನಮ್ಮ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ನಂಬರ್‌ 42ರ ಕೊಠಡಿಗಳು ಸೇರಿದಂತೆ ಆಯಾ ಶೈಕ್ಷಣಿಕ ತಾಲ್ಲೂಕು ವ್ಯಾಪ್ತಿಯಲ್ಲಿ ಪಠ್ಯಪುಸ್ತಕ ದಾಸ್ತಾನು ಮಾಡಲಾಗಿದೆ. ಈ ದಾಸ್ತಾನು ಕೇಂದ್ರಗಳಿಂದ ಜಿಲ್ಲೆಯ ಏಳು ಶೈಕ್ಷಣಿಕ ತಾಲ್ಲೂಕು ಕೇಂದ್ರಗಳ ಸರ್ಕಾರಿ ಶಾಲೆ ಗಳಿಗೆ ಈಗಾಗಲೇ ಪೂರೈಕೆ ಮಾಡ ಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶ್ರೀಶೈಲ ಎಸ್‌.ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಕೊರತೆ: ಕರ್ನಾಟಕ ಟೆಕ್ಸ್ಟ್‌ ಬುಕ್ ಸೊಸೈಟಿ ಹೈದರಾಬಾದ್‌, ಮುಂಬಯಿ, ತಮಿಳುನಾಡು, ಬೆಂಗಳೂರಿನ ಮುದ್ರಣಾಲಯಗಳಿಗೆ ಪುಸ್ತಕ ಮುದ್ರಣಕ್ಕೆ ಟೆಂಡರ್‌ ನೀಡಿದ್ದು, ಜಿಲ್ಲೆಗೆ ಅಗತ್ಯವಿರುವ ಭಾಷಾ ವಿಷಯದ ಪುಸ್ತಕ ಸೇರಿದಂತೆ ಇನ್ನಿತರ ವಿಷಯಗಳ ಭಾಗ–1 ಶೇ 90ರಷ್ಟು ಬಂದಿವೆ. ಉಳಿಕೆ 10% ಸದ್ಯದಲ್ಲೇ ಬರಲಿದೆ.

ಭಾಗ–2ರ ಪುಸ್ತಕಗಳು ಜೂನ್ ಎರಡನೇ ವಾರದೊಳಗೆ ಇಲಾಖೆಗೆ ಪೂರೈಕೆಯಾಗಲಿದ್ದು, ಎಲ್ಲ ಶಾಲೆಗಳಿಗೂ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಗ್ರಾಣ ಪಾಲಕ ಎಂ.ಬಿ.ಪಾಟೀಲ ಮಾಹಿತಿ ನೀಡಿದರು.

ಇನ್ನೂ 18.50 ಲಕ್ಷ ಪಠ್ಯಪುಸ್ತಕಗಳ ಕೊರತೆಯಿದೆ. ಇವುಗಳಿಗಾಗಿ ಕಾಯದೆ ವಿತರಣೆಗೆ ಚಾಲನೆ ನೀಡಲಾಗಿದೆ. ಏಳು ಶೈಕ್ಷಣಿಕ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಭೆ ನಡೆಸಿ, ಪಠ್ಯಪುಸ್ತಕಗಳನ್ನು ಶಾಲೆಗೆ ತಲುಪಿಸುವ ಜವಾಬ್ದಾರಿ ನೀಡಲಾಗಿದೆ.

ಸೋಮವಾರದಿಂದಲೇ ಶಾಲೆಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಪ್ರತಿ ವಿದ್ಯಾರ್ಥಿಗೆ ₹ 1.50 ರಂತೆ ಸಾಗಣೆ ವೆಚ್ಚವನ್ನು ರಾಜ್ಯ ಸರ್ಕಾರ ನೀಡಿದ್ದು, ಈ ಅನುದಾನ ಬಳಸಿಕೊಂಡು ವಿಶೇಷ ಸಾರಿಗೆ ವ್ಯವಸ್ಥೆ ಆಯೋಜಿಸಿದ್ದು, ಶಾಲೆ ಗಳ ಬಾಗಿಲಿಗೆ ಪಠ್ಯ ಪೂರೈಸ ಲಾಗುತ್ತಿದೆ ಎಂದು ಎಂ.ಬಿ.ಪಾಟೀಲ ಹೇಳಿದರು.

ಸಾಂಕೇತಿಕ ವಿತರಣೆ
‘ಜೂನ್‌ ಮೊದಲ ವಾರದಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾ–ತಾಲ್ಲೂಕು ಪಂಚಾಯ್ತಿ ಸದಸ್ಯರು, ಶಾಸಕರ ಸಮಕ್ಷಮ ಕಾರ್ಯಕ್ರಮ ಆಯೋಜಿಸಿ ಪಠ್ಯಪುಸ್ತಕ ವಿತರಿಸುವಂತೆ ಎಲ್ಲ ಶಾಲೆಗಳ ಮುಖ್ಯೋಪಾಧ್ಯಾಯರಿಗೆ ಈಗಾಗಲೇ ಸೂಚನೆಯನ್ನು ಸಹ ರವಾನಿಸಲಾಗಿದೆ’ ಎಂದು ಉಗ್ರಾಣ ಪಾಲಕ ಎಂ.ಬಿ.ಪಾಟೀಲ ಹೇಳಿದರು.

ಅಂಕಿ–ಅಂಶ
10620 ಮಾರಾಟ ಪುಸ್ತಕಗಳ ಪೂರೈಕೆ

30ರ  ಒಳಗಾಗಿ ಶಾಲೆಗೆ ಪಠ್ಯಪುಸ್ತಕ ಪೂರೈಕೆ

93550 ಉಚಿತ ಪುಸ್ತಕಗಳ ಪೂರೈಕೆ

8.21% ರಷ್ಟು ಪಠ್ಯಪುಸ್ತಕ ವಿತರಣೆ

* * 

ಪಠ್ಯಪುಸ್ತಕಗಳನ್ನು ಶಾಲೆಗಳ ಬಾಗಿಲಿಗೆ ತಲುಪಿಸುವ ಜವಾಬ್ದಾರಿಯನ್ನು ಇಲಾಖೆ ಸಮರ್ಥವಾಗಿ ನಿಭಾಯಿಸುತ್ತಿದೆ. ಪುಸ್ತಕ ಕೊರತೆ ಕಾಡದು
ಶ್ರೀಶೈಲ ಎಸ್‌.ಬಿರಾದಾರ  ಡಿಡಿಪಿಐ

* * 

ಶೇ 44ರಷ್ಟು ಪುಸ್ತಕಗಳು ಜಿಲ್ಲೆಗೆ ಬಂದಿವೆ. ಉಳಿದ ಪುಸ್ತಕಗಳು ಜೂನ್‌ ಮೊದಲ ವಾರದೊಳಗೆ ಪೂರೈಕೆಯಾಗಲಿದ್ದು, ಎಲ್ಲ ಶಾಲೆಗಳಿಗೆ ತಲುಪಿಸಲಾಗುವುದು
ಎಂ.ಬಿ.ಪಾಟೀಲ  ಉಗ್ರಾಣ ಪಾಲಕ, ಶಿಕ್ಷಣ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.