ADVERTISEMENT

ವೇತನ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2017, 7:23 IST
Last Updated 21 ಏಪ್ರಿಲ್ 2017, 7:23 IST
ವಿಜಯಪುರ ನಗರದಲ್ಲಿ ಪೌರ ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು
ವಿಜಯಪುರ ನಗರದಲ್ಲಿ ಪೌರ ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು   

ವಿಜಯಪುರ: ಮಹಾನಗರ ಪಾಲಿಕೆ­ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ವೇತನ ಪಾವತಿ ಹಾಗೂ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರು ಸಿಐಟಿಯು ನೇತೃತ್ವ­ದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ರ್‌್ಯಾಲಿ ನಡೆಸಿದರು.ನಗರದ ಗಾಂಧಿ ವೃತ್ತದ ಬಳಿಯಿರುವ ಮಹಾನಗರ ಪಾಲಿಕೆ ವಲಯ ಕಚೇರಿಯಿಂದ ಆರಂಭಗೊಂಡ ರ್‌್ಯಾಲಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಮಹಾನಗರ ಪಾಲಿಕೆ ಪ್ರಧಾನ ಕಚೇರಿಗೆ ತಲುಪಿತು. ಅಲ್ಲಿ ಕೆಲ ಕಾಲ ಪೌರ ಕಾರ್ಮಿಕರು ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಪೌರ ಕಾರ್ಮಿಕರು ವೇತನವಿಲ್ಲದೆ ಮೂರು ತಿಂಗಳಿನಿಂದ ಹೈರಾಣಾಗಿದ್ದಾರೆ. ವೇತನವನ್ನೇ ನಂಬಿ ಬದುಕುತ್ತಿರುವ ಬಡ ಪೌರ ಕಾರ್ಮಿಕರು ವೇತನವಿಲ್ಲದೆ ಜೀವನ ಸಾಗಿಸುವು­ದಾದರೂ ಹೇಗೆ ಎಂದು ಪ್ರಶ್ನಿಸಿದರು.ಇಎಸ್ಐ ಕಾರ್ಡ್‌ ವಿತರಣೆ ಮಾಡಿಲ್ಲ, ಇಎಸ್ಐ ಹಣವನ್ನು ಕಡಿತ ಮಾಡಿ­ದ್ದರೂ ಸಹ ಆ ಹಣ ಜಮಾ­ವಣೆಯಾದ ಬಗ್ಗೆ ಮಾಹಿತಿ­ಯನ್ನೂ ನೀಡಿಲ್ಲ.

ಎಲ್ಲ ಸಮಸ್ಯೆಗ­ಳನ್ನು ಹಲ ಬಾರಿ ಪಾಲಿಕೆ ಆಡಳಿತಕ್ಕೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಿದರು. ಸೋಮಪ್ಪ ಆಯಟ್ಟಿ ಮಾತ­ನಾಡಿ ಮಹಾನಗರಪಾಲಿಕೆಯಲ್ಲಿ ಕೆಲಸ ಮಾಡುವ, ಮನೆ ಮನೆ ಕಸತುಂಬುವ, ಟಿಪ್ಪರ್‌ ಗಾಡಿ ಕಾರ್ಮಿ­ಕರಿಗೆ ಸರ್ಕಾರ ನಿಗದಿ ಪಡಿಸಿದ ವೇತನವನ್ನು ನೀಡದೆ ಕಡಿಮೆ ವೇತನ­ವನ್ನು ನೀಡಿ ಕಾರ್ಮಿ­ಕರನ್ನು ಗುತ್ತಿಗೆ­ದಾರರು ವಂಚಿಸುತ್ತಿ­ದ್ದಾರೆ. ಇದನ್ನು ಕೇಳಲು ಹೋದರೆ ಸರಿ­ಯಾಗಿ ಸ್ಪಂದಿ­ಸುತ್ತಿಲ್ಲ. ಬೆಳಿಗ್ಗೆ ನೀಡುವ ಉಪಾಹಾರ ಕಳಪೆ ಗುಣ­ಮಟ್ಟ­ದಾಗಿರುತ್ತದೆ. ಇದನ್ನು ಮಹಾನಗರ ಪಾಲಿಕೆ ಗಮನಕ್ಕೆ ತಂದರೂ ಮಹಾನಗರ ಪಾಲಿಕೆಗೆ ನಮ್ಮ ಸಮಸ್ಯೆ ಕೇಳಿಸುತ್ತಿಲ್ಲ ಎಂದು ದೂರಿದರು.

ADVERTISEMENT

ಧರಣಿ ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ವೇತನದ ಚೆಕ್ಕನ್ನು ನೀಡಿದ ನಂತರ ಪ್ರತಿಭಟನಾಕಾರರು ಮುಷ್ಕರವನ್ನು ಹಿಂಪಡೆದರು. ಇತರೆ ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲು ಇದೇ 25ರಂದು ಸಭೆ ನಡೆಸುವುದಾಗಿ ಹರ್ಷಶೆಟ್ಟಿ ಇದೇ ಸಂದರ್ಭ ಭರವಸೆ ನೀಡಿದರು.ರೈತ ಮುಖಂಡ ಭೀಮಶಿ ಕಲಾದಗಿ, ಸುರೇಖಾ ರಜಪೂತ ಮಾತನಾಡಿದರು. ಚಿಕ್ಕಯ್ಯ ಚಂಚಲಕರ್. ಶಮ್ಮಿರ ಶಿರೋಳ, ದಯಾನಂದ ಅಲಿಯಾಬಾದಿಕ, ಭೀಮ­ಣ್ಣ ಪೂಜಾರಿ , ರಘುನಾಥ ಪುಕಾಳೆ, ಗೋವಿಂದ ನಾಯಕ, ಪಂಡಿತ ರಾಠೋಡ, ವೀರಪ್ಪ ಚಲವಾದಿ, ಮಾದೇವಿ ಯಾದಿಮನಿ, ರುಕ್ಮವ್ವ ವಾಘ್ಮೋರೆ, ಕಮಲವ್ವ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.