ADVERTISEMENT

ಶೀಘ್ರಲಿಪಿ ಹುದ್ದೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಕಡ್ಡಾಯಕ್ಕೆ ಆಗ್ರಹ

ಬೆರಳಚ್ಚುಗಾರರ ಮತ್ತು ಶೀಘ್ರಲಿಪಿಗಾರರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ರೂಗಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 10:29 IST
Last Updated 9 ಮಾರ್ಚ್ 2017, 10:29 IST
ವಿಜಯಪುರ:  ಕರ್ನಾಟಕ ಲೋಕ ಸೇವಾ ಆಯೋಗವು ಕನ್ನಡ ಶೀಘ್ರಲಿಪಿ ಹಾಗೂ ಕನ್ನಡ ಬೆರಳಚ್ಚುಗಾರರ ನೇಮಕಾತಿಗೆ ಈ ಬಾರಿ ಪಿಯುಸಿ ವಿದ್ಯಾರ್ಹತೆ ಆಧಾರದ ಮೇಲೆ ನೇಮಕಾತಿಗೆ ಮಾಡಿಕೊಳ್ಳಲು ಮುಂದಾಗಿರುವ ಕ್ರಮವನ್ನು ಹಿಂಪಡೆದು ಎಸ್‌.ಎಸ್‌. ಎಲ್‌.ಸಿ. ವಿದ್ಯಾರ್ಹತೆಯನ್ನು ಕಡ್ಡಾಯಗೊಳಿಸಬೇಕು ಎಂದು ನಿರುದ್ಯೋಗಿ ಬೆರಳಚ್ಚುಗಾರರ ಮತ್ತು ಶೀಘ್ರಲಿಪಿಗಾರರ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ರೂಗಿ ಆಗ್ರಹಿಸಿದರು.
 
2016ನೇ ಸಾಲಿಗಿಂತ ಮೊದಲು ಎಸ್‌.ಎಸ್‌.ಎಲ್‌.ಸಿ. ಹಾಗೂ ಕನ್ನಡ ಬೆರಳಚ್ಚು, ಶಿಘ್ರಲಿಪಿ ಅಂಕಗಳ ಆಧಾರದ ಮೇಲೆ ನೇಮಕಾತಿ ಮಾಡಿದ್ದಾರೆ. ಇದರಿಂದ ಹಲವು ವಿದ್ಯಾರ್ಥಿಗಳು ಸರ್ಕಾರದ ವಿವಿಧ ಕಚೇರಿಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಸ್ವಾವಲಂಬಿಯಾಗಿ ಜೀವನ ನಡೆಸುತ್ತಿದ್ದಾರೆ.

ಆದರ, ಈ ಬಾರಿ ಎಸ್‌.ಎಸ್‌.ಎಲ್‌.ಸಿ. ಬದಲಾಗಿ ಪಿ.ಯು.ಸಿ. ವಿದ್ಯಾರ್ಹತೆ ಕಡ್ಡಾಯಗೊಳಿಸುವುದರಿಂದ ಎಸ್‌.ಎಸ್‌.ಎಲ್‌.ಸಿ. ಮುಗಿಸಿದ, ತರಬೇತಿ ಪಡೆದ ವಿದ್ಯಾರ್ಥಿಗಳು ನಿರುದ್ಯೋಗದ ಸಮಸ್ಯೆ ಎದುರಿಸುವಂತಾಗಿದೆ ಎಂದು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. 
 
ಇಲ್ಲಿನ ಮಹಿಳಾ ವೃತ್ತಿ ತರಬೇತಿ ಕೇಂದ್ರದಲ್ಲಿ ಎಸ್‌.ಎಸ್‌.ಎಲ್‌.ಸಿ. ಮುಗಿಸಿದ ಹಲವು ವಿದ್ಯಾರ್ಥಿಗಳು ಹೊಲಿಗೆ, ಶಿಘ್ರಲಿಪಿ, ಬೆರಳಚ್ಚು ತರಬೇತಿ ಪಡೆಯುತ್ತಿದ್ದಾರೆ. ಹಲವು ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿರುವ ರಾಜ್ಯದ ಏಕೈಕ ಈ ಕೇಂದ್ರವು ಸ್ವಂತ ಕಟ್ಟಡವನ್ನು ಹೊಂದಿಲ್ಲ. ಸರ್ಕಾರದಿಂದ ಸಹಾಯ ಧನವು ಸಮರ್ಪಕವಾಗಿ ಸಿಗುತ್ತಿಲ್ಲ. ಇಂಥದರಲ್ಲಿ ಸರ್ಕಾರ ಪಿಯುಸಿ ಮಾನದಂಡ ಹೊರಡಿಸಿರುವುದು ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಅಘಾತ ಮೂಡಿಸಿದೆ ಎಂದರು.
 
ನವಭಾಗ್‌ದಲ್ಲಿನ ಮಹಿಳಾ ವೃತ್ತಿ ತರಬೇತಿ ಕೇಂದ್ರದಲ್ಲಿ ತರಬೇತುದಾರ ರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಶಿಷ್ಯ ವೇತನದ ಆಧಾರದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆಯುತ್ತಿರುವ ಈ ಕೇಂದ್ರ ಎಸ್‌.ಸಿ, ಎಸ್‌.ಟಿ. ಮತ್ತು ಓಬಿಸಿ ವಿದ್ಯಾರ್ಥಿಗಳು ತರಬೇತಿ ಪಡೆದು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಆದರೆ, ಸರ್ಕಾರ ಇತ್ತೀಚೆಗೆ ಹೊರಡಿಸಿದ ಹೊರಡಿಸಿರುವುದರಿಂದ ಈ ಕೇಂದ್ರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಆದ್ದರಿಂದ ಸರ್ಕಾರ ಈ ನಿಯಮ ಸಡಿಲಿಸಿ, ಪಿಯುಸಿ ಬದಲಾಗಿ ಎಸ್‌.ಎಸ್‌. ಎಲ್‌.ಸಿ. ವಿದ್ಯಾರ್ಹತೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು. 
ಸಂಸ್ಥೆಯ ಸಚಿನ್‌ ಬಂಡೆ, ಮಹಾಂತೇಶ ವಕದುರ್ಗ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.