ADVERTISEMENT

ಸಾರಿಗೆ ನಿಗಮದ ನೌಕರರ ಅಳಲು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2017, 3:51 IST
Last Updated 10 ಸೆಪ್ಟೆಂಬರ್ 2017, 3:51 IST

ವಿಜಯಪುರ: ‘ಸಾರಿಗೆ ಇಲಾಖೆಯ ಅಂತರ ನಿಗಮ ವರ್ಗಾವಣೆ ನೀತಿ ಅವೈಜ್ಞಾನಿಕವಾಗಿದ್ದು, ಇದರಿಂದ ವಿವಿಧ ಸಾರಿಗೆ ನಿಗಮಗಳಲ್ಲಿ (ಸಂಸ್ಥೆ ಗಳಲ್ಲಿ) ಕಾರ್ಯ ನಿರ್ವಹಿಸುತ್ತಿರುವ ವಿಜ ಯಪುರ ಜಿಲ್ಲೆಯ ನೌಕರರಿಗೆ ಅನ್ಯಾಯವಾಗಿದೆ’ ಎಂದು ಕೆಎಸ್‌ ಆರ್‌ಟಿಸಿ, ಎನ್‌ಡಬ್ಲುಕೆಆರ್‌ಟಿಸಿ, ಬಿಎಂಟಿಸಿಯಲ್ಲಿ ಕಾರ್ಯನಿರ್ವಹಿಸು ತ್ತಿರುವ ಜಿಲ್ಲೆಯ ನೌಕರರು ದೂರಿದ್ದಾರೆ.

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ (ಎನ್‌ಇಕೆಆರ್‌ಟಿಸಿ) ವ್ಯಾಪ್ತಿ ಗೊಳಪಡುವ ವಿಜಯಪುರ ಜಿಲ್ಲೆಯ ನೌಕರರು,  ಹಲವು ವರ್ಷಗಳಿಂದ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲು ಕೆಆರ್‌ಟಿಸಿಯಲ್ಲಿ ಚಾಲಕರಾಗಿ, ನಿರ್ವಾ ಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಅಂತರ ನಿಗಮ ವರ್ಗಾವಣೆಯಲ್ಲಿ  ಎನ್‌ಇಕೆಆರ್‌ಟಿಸಿಗೆ ಹೈದರಾಬಾದ್‌ ಕರ್ನಾಟಕ ಪ್ರದೇಶ ವರಿಗೇ ಆದ್ಯತೆ ನೀಡಲಾಗಿದೆ ಎಂಬುದು ಅವರ ಆರೋಪ.

‘ಎನ್‌ಇಕೆಆರ್‌ಟಿಸಿಯಲ್ಲಿ ಪ್ರಸ್ತುತ 1,012 ನಿರ್ವಾಹಕ ಹುದ್ದೆ ಖಾಲಿಯಿದ್ದು, ಈ ಪೈಕಿ ಕೇವಲ 112 (ಹೈ.ಕ 49, ಸಾಮಾನ್ಯ 63) ಸಿಬ್ಬಂದಿಯನ್ನು ಇಲ್ಲಿಗೆ ವರ್ಗಾಯಿಸಲಾಗಿದೆ. ಚಾಲಕ ಹುದ್ದೆ ಖಾಲಿ ಇರದಿದ್ದರೂ 166 ಚಾಲಕರನ್ನೂ (ಹೈ.ಕ 132, ಸಾಮಾನ್ಯ 34) ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.

ADVERTISEMENT

ಆದರೆ ಇವರಲ್ಲಿ ಹೈದರಾಬಾದ್‌ ಕರ್ನಾ ಟಕ ವ್ಯಾಪ್ತಿಯ ಜಿಲ್ಲೆಗಳ ನೌಕರರಿಗೇ ಹೆಚ್ಚಿನ ಅವಕಾಶ ನೀಡಲಾಗಿದ್ದು, ನಮ್ಮನ್ನು ಸಂಪೂರ್ಣ ಕಡೆಗಣಿಸಲಾಗಿದೆ’ ಎಂದು ಸಾರಿಗೆ ಇಲಾಖೆಯ ವಿವಿಧ ನಿಗಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಜಯಪುರ ಜಿಲ್ಲೆಯ ನೊಂದ ನೌಕರರು ‘ಪ್ರಜಾವಾಣಿ’ ಬಳಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

‘ಎನ್‌ಇಕೆಆರ್‌ಟಿಸಿಯಲ್ಲಿ ಹುದ್ದೆಗಳು ಖಾಲಿಯಿವೆ. ಅರ್ಹರಿಗೆ ವರ್ಗಾವಣೆ ನೀಡದೆ, ಹೈದರಾಬಾದ್‌ ಕರ್ನಾಟಕ ಮೀಸಲಾತಿಯನ್ವಯ ಮುಂದಿನ ದಿನಗಳಲ್ಲಿ ನೇಮಕಾತಿ ಮಾಡಿಕೊಳ್ಳುವ ಯೋಚನೆ ನಿಗಮದ್ದಾಗಿದ್ದು,ಇದರಿಂದ ಈಶಾನ್ಯ ಕರ್ನಾಟಕ ಸಂಸ್ಥೆ ವ್ಯಾಪ್ತಿಗೆ ಬರುವ ವಿಜಯಪುರ ಜಿಲ್ಲೆಯ ನೌಕರರಿಗೆ ತುಂಬಾ ಅನ್ಯಾಯವಾಗಲಿದೆ’ ಎಂದು ಕೆಎಸ್‌ಆರ್‌ಟಿಸಿಯಲ್ಲಿ ನಿರ್ವಾಹಕರಾಗಿ ರುವ ವಿಜಯಪುರದ ಶ್ರೀಶೈಲ ರೋಡಗಿ, ಶ್ರೀಶೈಲ ತೋಡಕರ ಆರೋಪಿಸಿದರು.

ಈ ಮಾನದಂಡವನ್ನೇ ಅನ್ವಯಿಸುವುದಿ ದ್ದರೆ ವಿಜಯಪುರ ಜಿಲ್ಲೆಯನ್ನು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಗೆ ಸೇರಿಸಬೇಕು. ಇಲ್ಲದಿದ್ದರೆ ಈಶಾನ್ಯ ಸಾರಿಗೆ ಸಂಸ್ಥೆ ವ್ಯಾಪ್ತಿಯ ಎಲ್ಲ ಜಿಲ್ಲೆಗಳ ನೌಕರರಿಗೂ ಒಂದೇ ರೀತಿಯ ವರ್ಗಾವಣೆ ನೀತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

‘ಸಾರಿಗೆ ಇಲಾಖೆಯ ಈ ಅವೈಜ್ಞಾನಿಕ ನೀತಿಯಿಂದ ಅಮಾಯಕ ನೌಕರರು ಸಂಕಷ್ಟ ಅನುಭವಿಸು ವಂತಾಗಿದೆ. ಈಗಾಗಲೇ ಈ ಕುರಿತ ಆಕ್ಷೇಪಣೆಯನ್ನು ಇಲಾಖೆಗೆ ಸಲ್ಲಿಸಲಾಗಿದೆ’ ಎಂದು ಅವರು ತಿಳಿಸಿದರು.

ನೌಕರರಿಗೆ ಅನ್ಯಾಯ
‘ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಕೆಎಸ್‌ಆರ್‌ಟಿಸಿ ಯಲ್ಲಿ ಕೆಲಸದಲ್ಲಿದ್ದೇನೆ. ಒಂದು ಬಾರಿಯೂ ವರ್ಗಾವಣೆಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ವರ್ಗಾವಣೆ ಅವಕಾಶ ಸಿಕ್ಕರೂ ನಮ್ಮ ಭಾಗದವರಿಗೆ ಹೆಚ್ಚಿನ ಪ್ರಯೋಜನವಿಲ್ಲದಂತಾಗಿದೆ. ಬೆಂಗಳೂರಿನಲ್ಲಿ ದುಬಾರಿ ಜೀವನ ನಡೆಸಲು ಕಷ್ಟವಾಗುತ್ತಿದೆ. ಉಳಿದ ಜಿಲ್ಲೆಯ ನೌಕರರಂತೆಯೇ ನಮಗೂ ವರ್ಗಾವಣೆ ನೀಡಬೇಕಿತ್ತು. ಆದರೆ ನಮಗೆ ಅನ್ಯಾಯ ಎಸಗಲಾಗಿದೆ’ ಎಂದು ದೂರುತ್ತಾರೆ ಚಾಲಕ ಅಮೋಘ ಅಕ್ಕಣವರ.

* * 

ಹೈ–ಕ ಮೀಸಲಾತಿ ಅನ್ವಯ ವರ್ಗಾ ವಣೆ ನಡೆದಿದೆ. ಪ್ರತಿ ಯೊಂದು ಹಂತದಲ್ಲಿ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ನಿರ್ದೇಶನ ಪಾಲಿಸಿದ್ದೇವೆ
ಎಚ್‌.ಅಶೋಕ್‌ ಆನಂದ್
ವ್ಯವಸ್ಥಾಪಕ ನಿರ್ದೇಶಕ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.