ADVERTISEMENT

ಹಾಸ್ಟೆಲ್‌ನಲ್ಲಿ ಲೈಂಗಿಕ ದೌರ್ಜನ್ಯ: ಕಠಿಣ ಶಿಕ್ಷೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2014, 5:49 IST
Last Updated 22 ಆಗಸ್ಟ್ 2014, 5:49 IST

ವಿಜಾಪುರ: ಜಿಲ್ಲೆಯ ಆಲಮೇಲ ಪಟ್ಟಣದ ವಸತಿ ಶಾಲೆಯಲ್ಲಿ ನಡೆದಿರುವ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಜಿಲ್ಲಾಡಳಿತ, ಸರ್ಕಾರ ಗಂಭೀರ­ವಾಗಿ ಪರಿಗಣಿಸಿ ಆರೋಪಿಗೆ ಉಗ್ರ ಶಿಕ್ಷೆ ವಿಧಿಸ­ಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಆರೋಪಿ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿ­ದ್ದಾನೆ. ಬಹಿರಂಗ ಪಡಿಸಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ತನ್ನ ಪ್ರಭಾವ ಬಳಸಿ ಪ್ರಕರಣದಿಂದ ಪಾರಾಗಲು ತೀವ್ರ ಯತ್ನ ನಡೆಸಿದ್ದಾನೆ. ಈತನ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ವೇದಿಕೆ ಪದಾಧಿಕಾರಿಗಳು ಒತ್ತಾಯಿಸಿದರು.

ವೇದಿಕೆಯ ಜಿಲ್ಲಾ ಅಧ್ಯಕ್ಷ  ಮುತ್ತುರಾಜ ಕೊಂಡ­ಗೂಳಿ, ಜಿಲ್ಲಾ ಗೌರವಾಧ್ಯಕ್ಷ ಎಸ್.ಎಂ.­ಗಣಾಚಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ ಬಿಜಾಪೂರ, ನಗರಾಧ್ಯಕ್ಷ ಸಂಜೀವ ಕರ್ಪೂ­ರ­ಮಠ, ಜಿಲ್ಲಾ ಸಂಚಾಲಕ ಶ್ರೀಶೈಲ ಮುಳಜಿ, ತಾಲ್ಲೂಕು ಅಧ್ಯಕ್ಷ ಬಸವರಾಜ ತಾಳಿಕೋಟಿ, ನಗರ ಉಪಾಧ್ಯಕ್ಷ ಸಿದ್ದುಗೌಡ ತೊರವಿ, ಕ್ರೀಡಾಧ್ಯಕ್ಷ ವಿಜಯ ರಾಠೋಡ, ವಿದ್ಯಾರ್ಥಿ ನಗರಾಧ್ಯಕ್ಷ ಸಾಗರ ರಾಠೋಡ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಿಂದಗಿ ವರದಿ: ತಾಲ್ಲೂಕಿನ ಆಲಮೇಲದ ವಸತಿ ಶಾಲೆಯಲ್ಲಿ ನಡೆದ ಅತ್ಯಾಚಾರ ಪ್ರಕರಣದ ಆರೋಪಿ ವಿಜಯ­ಕುಮಾರ ಎಂಟಮಾನನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮಹಿಳಾ ಮೋರ್ಚಾ ಘಟಕದ ಕಾರ್ಯಕರ್ತೆಯರು ನಗರದ ಮಿನಿವಿಧಾ­ನ­ಸೌಧ ಎದುರು ಪ್ರತಿಭಟನೆ ನಡೆಸಿದರು.

ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಪದ್ಮಾವತಿ ಗುಡಿ, ರಾಜ್ಯ ಪರಿಷತ್ ಸದಸ್ಯೆ ಶಿಲ್ಪಾ ಕುದರಗೊಂಡ ಮಾತನಾಡಿ, ‘ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇಂಥ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆಯಂಥ ಕಠಿಣ ಶಿಕ್ಷೆ ವಿಧಿಸಬೇಕು. ಅಂದಾಗಲೇ ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರಗಳನ್ನು ನಿಯಂತ್ರಣ­ದಲ್ಲಿ ತರಲು ಸಾಧ್ಯ. ಅಲ್ಲದೇ ಈ ಕುರಿತು ರಾಜ್ಯ ಸರ್ಕಾರ ಮೃದುಧೋರಣೆ ಅನುಸರಿಸುತ್ತಿರುವುದು ಅತ್ಯಂತ ಖಂಡನೀಯ’ ಎಂದು ಟೀಕಿಸಿದರು.

ಬಿಜೆಪಿ ಮಹಿಳಾ ಮೋರ್ಚಾ ತಾಲ್ಲೂಕು ಘಟ­ಕದ ಅಧ್ಯಕ್ಷೆ ಅನುಸೂಯಾ ಪರಗೊಂಡ ಮನವಿ ಪತ್ರ ವಾಚಿಸಿ ಉಪತಹಶೀಲ್ದಾರ್‌ ಎಸ್.ಎ.­ಆಲೂರಕರ ಅವರಿಗೆ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವವನ್ನು ಅಕ್ಕಮಹಾದೇವಿ ಪಡೇಕನೂರ, ಗೌಸಿಯಾ ಶೇಖ್‌, ಗೀತಾ ಹಿಪ್ಪರಗಿ, ಶಾರದಾ ಮಂಗಳೂರ, ಭಾರತಿ ಹೊಸಮನಿ, ಮೀನಾಕ್ಷಿ, ಯಮುನಾ ಮಡ್ನಳ್ಳಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.