ADVERTISEMENT

ಹೊಸಮನಿ ನಿಷ್ಠೆಗೆ ದೊರೆತ ಮನ್ನಣೆ

ಪ್ರಕಾಶ ಮಸಬಿನಾಳ
Published 4 ಸೆಪ್ಟೆಂಬರ್ 2017, 5:00 IST
Last Updated 4 ಸೆಪ್ಟೆಂಬರ್ 2017, 5:00 IST

ಬಸವನಬಾಗೇವಾಡಿ: ಪ್ರಾಚಾರ್ಯರಾಗಿ ಮೂವತ್ತು ವರ್ಷ ಸಲ್ಲಿಸಿದ ನಿಷ್ಠೆಯ ಸೇವೆಗೆ ನಿಡಗುಂದಿಯ ಗ್ರಾಮೀಣ ವಿದ್ಯಾವರ್ಧಕ ಸಂಘದ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಹೊಸಮನಿ ಅವರಿಗೆ ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡುವ ರಾಜ್ಯ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಗೆ ಭಾಜನರಾದ ಇಬ್ಬರಲ್ಲಿ ಇವರು ಒಬ್ಬರು ಎಂಬುವುದು ಹೆಮ್ಮೆಯ ವಿಷಯ.

1987ರಿಂದ ಪ್ರಾಚಾರ್ಯರಾಗಿ ಸೇವೆ ಆರಂಭಿಸಿದ ಹೊಸಮನಿ, ತಮ್ಮ ನಡವಳಿಕೆಯಿಂದ ವಿದ್ಯಾರ್ಥಿ ಸಮೂಹ, ಉಪನ್ಯಾಸಕ ಮಿತ್ರರು, ಸಿಬ್ಬಂದಿ, ಪಾಲಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಎಲ್ಲರ ಮೆಚ್ಚಿನ ಪ್ರಾಚಾ ರ್ಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕಾಲೇಜು ಆರಂಭಕ್ಕೂ ಮುಂಚೆಯೇ ಹಾಜರಾಗಿ ಸ್ವಚ್ಛತೆಯತ್ತ ಗಮನ ನೀಡುತ್ತಾರೆ. ಆವರಣದ ಯಾವ  ಮೂಲೆಯಲ್ಲಾದರೂ ಕಾಗದದ ತುಂಡು ಸಿಕ್ಕರೂ, ಎತ್ತಿ ಕಸದ ಡಬ್ಬಿಗೆ ಹಾಕುವುದು ಇವರ ಅಭ್ಯಾಸ. ಬೋಧನೆಯಲ್ಲಿ ನಿರತ ಉಪನ್ಯಾಸಕರ ಮಾತುಗಳನ್ನು ಬಿಟ್ಟರೆ, ಇಡೀ ಆವರಣದಲ್ಲಿ ಮೌನ.

ADVERTISEMENT

ಹೊಸಮನಿ ಭಾನುವಾರ ಸೇರಿದಂತೆ ರಜಾ ದಿನಗಳಲ್ಲಿಯೂ ಕಾಲೇಜಿನ ಕೆಲಸಗಳಲ್ಲಿ ತಲ್ಲೀನ. ತುರ್ತು ಕೆಲಸಕ್ಕಷ್ಟೇ ರಜೆ. ವರ್ಷದಲ್ಲಿ 8 ದಿನ ರಜೆ ತೆಗೆದು ಕೊಂಡರೇ ಹೆಚ್ಚು. ರಜೆ ಬಾಕಿ ಉಳಿ ಯುತ್ತವೆ. ಏಕೆ ತೆಗೆದುಕೊಳ್ಳಬಾರದು ಎಂದು ಮನೆಯವರು ಪ್ರಶ್ನಿಸಿದರೆ, ನನಗೆ ಕರ್ತವ್ಯ ಮುಖ್ಯ ಎಂಬ ಉತ್ತರ ಇವರದ್ದಾಗಿರುತ್ತದೆ.

‘ಕಾಲೇಜಿನ ಫಲಿತಾಂಶ ಉತ್ತಮವಾ ಗಿದೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯುವ ಮೂಲಕ ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ಈ ಕಾಲೇಜಿನ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ. 1998ರಲ್ಲಿ ವಿಜಯಾ ಹತ್ತರಕಿಹಾಳ ದ್ವಿತೀಯ ಪಿಯುಸಿ ಪರೀಕ್ಷೆ (ಕಲಾ ವಿಭಾಗದಲ್ಲಿ)ಯಲ್ಲಿ ರಾಜ್ಯಕ್ಕೆ 8ನೇ ರ್‌್ಯಾಂಕ್ ಪಡೆದುಕೊಳ್ಳುವ ಮೂಲಕ ನಮ್ಮ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದು, ನಮಗೆಲ್ಲಾ ಹೆಮ್ಮೆ’ ಎನ್ನುತ್ತಾರೆ ಪ್ರಶಸ್ತಿಗೆ ಭಾಜನರಾದ ಪ್ರಾಚಾರ್ಯ ಹೊಸಮನಿ.

ಮೆಚ್ಚಿನ ಉಪನ್ಯಾಸಕ: ‘ಪ್ರಾಚಾರ್ಯರಾ ಗಿಯೇ ಸೇವೆ ಆರಂಭಿಸಿದ ಹೊಸಮನಿ ಆಡಳಿತ ವಿಷಯಕ್ಕಷ್ಟೇ ಹೆಚ್ಚಿನ ಗಮನ ಹರಿಸಿದವರಲ್ಲ. ಸಮಯಕ್ಕನುಗುಣವಾಗಿ ತಮ್ಮ ಅವಧಿ ತೆಗೆದುಕೊಳ್ಳುವುದು ಸೇರಿದಂತೆ ವಿದ್ಯಾರ್ಥಿಗಳಲ್ಲಿ ಪಠ್ಯ ಸೇರಿದಂತೆ ಪಠ್ಯೇತರ ಚಟುವಟಿಕೆಯಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸುವ ಮೂಲಕ ವಿದ್ಯಾರ್ಥಿ ಸಮೂಹದ ಮೆಚ್ಚಿನ ಉಪನ್ಯಾಸಕ’ ಎನಿಸಿಕೊಂಡಿದ್ದಾರೆ.

‘ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಆಡಳಿತ ಮಂಡಳಿ ಸಹಕಾರದೊಂದಿಗೆ ಮೂಲ ಸೌಲಭ್ಯ ಒದಗಿಸುವುದರೊಂದಿಗೆ. ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಒದಗಿಸುತ್ತಾರೆ. ಇವರ ಸಮಯಪ್ರಜ್ಞೆ, ಕಾರ್ಯಕ್ಷಮತೆ, ಇತರರೊಂದಿಗಿನ ಬಾಂಧವ್ಯ ವೃದ್ಧಿಯಿಂದಾಗಿ ಉತ್ತಮ ಪ್ರಾಚಾರ್ಯ ಎನಿಸಿಕೊಂಡಿದ್ದಾರೆ’ ಎಂದು ಸಂಸ್ಥೆ ಅಧ್ಯಕ್ಷ ಸಿದ್ದಣ್ಣ ನಾಗಠಾಣ, ಕಾರ್ಯದರ್ಶಿ ಬಸವರಾಜ ಮುಚ್ಚಂಡಿ ಸಂತಸ ವ್ಯಕ್ತಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.