ADVERTISEMENT

‘ಕೃಷಿ ಯಂತ್ರೋಪಕರಣ ಬಾಡಿಗೆಗೆ

186 ಸೇವಾ ಕೇಂದ್ರ ಆರಂಭ’

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2014, 6:04 IST
Last Updated 28 ನವೆಂಬರ್ 2014, 6:04 IST

ವಿಜಯಪುರ: ‘ಕೃಷಿ ಕಾರ್ಮಿಕರ ಕೊರತೆ, ಅನಗತ್ಯ ವೆಚ್ಚ ತಗ್ಗಿಸಲು ಹೋಬಳಿ ಕೇಂದ್ರಗಳಲ್ಲಿ ರೈತರಿಗೆ ಕೃಷಿ ಯಂತ್ರೋಪಕರಣ ಬಾಡಿಗೆ ನೀಡಲು ಇಲಾ­ಖೆ­ಯಿಂದ ರಾಜ್ಯದಲ್ಲಿ 186 ಸೇವಾ ಕೇಂದ್ರ ಆರಂಭಿಸಲಾಗುವುದು’ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಯೋಜನೆಗೆ ₨ 70 ಕೋಟಿ ಖರ್ಚಾಗಲಿದೆ. ಹೋಬಳಿ ಮಟ್ಟದ ಪ್ರತಿ ಕೇಂದ್ರಕ್ಕೆ ₨ 75 ಲಕ್ಷ ವೆಚ್ಚದಲ್ಲಿ ಕೃಷಿಗೆ ಅಗತ್ಯವಿರುವ ಯಂತ್ರೋಪಕರಣ ಖರೀ­ದಿ­ಸ­ಲಾಗುತ್ತದೆ. ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಯಂತ್ರೋಪಕರಣ ಬಾಡಿಗೆ ನೀಡಲಾಗುವುದು ಎಂದು ಅವರು ಗುರುವಾರ ಬಸವನ ಬಾಗೇವಾಡಿ ತಾಲ್ಲೂಕಿನ ಅಂಗಡಗೇರಿ ಗ್ರಾಮದಲ್ಲಿ ಹೇಳಿದರು.

ಮಣ್ಣು ಆರೋಗ್ಯ ಕಾರ್ಡ್‌: ಸುಸ್ಥಿರ ಕೃಷಿಯಲ್ಲಿ ಮಣ್ಣಿನ ಆರೋಗ್ಯ ಮಹ­ತ್ವದ್ದು. ಜಮೀನಿನಲ್ಲಿ ಯಾವ ವಿಧದ ಮಣ್ಣಿದೆ. ಯಾವ ಬೆಳೆ ಅದಕ್ಕೆ ಸೂಕ್ತ, ಎಷ್ಟು ಪ್ರಮಾಣದಲ್ಲಿ ಬೀಜ, ಗೊಬ್ಬರ ಹಾಕಬೇಕು ಎಂಬ ಮಾಹಿತಿ ಒಳಗೊಂಡ ‘ಮಣ್ಣು ಆರೋಗ್ಯ ಕಾರ್ಡ್‌’ನ್ನು ಇಲಾಖೆಯಿಂದಲೇ ರೈತರಿಗೆ ನೀಡುವ ಯೋಜನೆ ಹಾಕಿಕೊಳ್ಳಲಾಗಿದೆ.

ರೈತರು ಮಣ್ಣು ಆರೋಗ್ಯದ ಮಹತ್ವ ಅರಿಯುತ್ತಿಲ್ಲ. ಬಹುತೇಕರು ಮಣ್ಣು ಪರೀಕ್ಷೆ ಮಾಡಿಸದೆ ಕೃಷಿ ಚಟುವಟಿಕೆ ಕೈಗೊಂಡು ಅನವಶ್ಯಕ ಖರ್ಚು ಮಾಡು­ತ್ತಾರೆ. ವೈಜ್ಞಾನಿಕ ಕ್ರಮ ಅನುಸರಿಸದ ಕಾರಣ ಇಳುವರಿಯೂ ಹೆಚ್ಚುತ್ತಿಲ್ಲ. ಇದನ್ನು ತಪ್ಪಿಸಲು ಇಲಾಖೆಯಿಂದಲೇ ಮಣ್ಣು ಪರೀಕ್ಷಿಸಿ ಮೂರು ವರ್ಷ­ದೊಳಗೆ ರಾಜ್ಯದ ಎಲ್ಲ ರೈತರಿಗೆ ಕಾರ್ಡ್‌ ನೀಡಲಾಗುತ್ತದೆ ಎಂದು ತಿಳಿಸಿದರು.

ಕೃಷಿ ವಿಸ್ತರಣೆ: ಕೃಷಿ ಇಲಾಖೆ ಬೀಜ, ಗೊಬ್ಬರ, ಔಷಧಿ ವಿತರಣೆಗೆ ಮಾತ್ರ ಸೀಮಿತವಾಗಿದೆ. ವರ್ಷದೊಳಗೆ ಇಲಾಖೆಯ ಕಾರ್ಯ ವೈಖರಿ ಬದಲಿಸಿ ಕೃಷಿ ವಿಸ್ತರಣೆಗೆ ಚಾಲನೆ ನೀಡಲಾಗು­ವುದು ಎಂದು ಕೃಷ್ಣ ಭೈರೇಗೌಡ ತಿಳಿಸಿದರು.

ರೈತರ ಹೊಲ, ಜಮೀನಿಗೆ ಕೃಷಿ ಇಲಾಖೆ ಸ್ಥಳಾಂತರ­ಗೊಳ್ಳಲಿದೆ. ರೈತರ ಸಮೀಪ ಇಲಾಖೆ ಕೊಂಡೊಯ್ಯುವ ನಿಟ್ಟಿನಲ್ಲಿ 2 ಸಾವಿರ ಸಿಬ್ಬಂದಿಯನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಶಾಶ್ವತ ಸಿಬ್ಬಂದಿ ನೇಮಕ ಪ್ರಕ್ರಿಯೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಇದೇ ಸಂದರ್ಭ ಹೇಳಿದರು.

ಸಹಾಯಧನದಡಿ ಕೃಷಿ ಇಲಾಖೆ­ಯಿಂದ ನೀಡುವ ಯಂತ್ರೋಪಕರಣಗಳ ಗುಣಮಟ್ಟ, ದರದ ಬಗ್ಗೆ ರೈತರಿಂದ ದೂರುಗಳು ಕೇಳಿ ಬಂದಿದ್ದವು. ಇದನ್ನು ತಪ್ಪಿಸಲು ಸರ್ಕಾರ ಸೂಚಿಸಿದ ಗುಣಮಟ್ಟದ ಕಂಪೆನಿಗಳ ಯಂತ್ರೋಪಕ­ರಣ­­ಗಳನ್ನು ರೈತರು ನೇರವಾಗಿ ಖರೀದಿಸುವ ಸ್ವಾತಂತ್ರ್ಯ ನೀಡಲಾಗು­ವುದು ಎಂದು ಕೃಷಿ ಸಚಿವರು ತಿಳಿಸಿದರು.

ಕೃಷಿ ಭಾಗ್ಯ: ಮಳೆ ಆಶ್ರಿತ ರೈತರ ನೆರವಿಗಾಗಿ ಕೃಷಿ ಭಾಗ್ಯ ಯೋಜನೆ ಆರಂಭಿಸಲಾಗಿದೆ. ರಾಜ್ಯದ ಎಲ್ಲೆಡೆಯ 1.80 ಲಕ್ಷ ರೈತರು ಅರ್ಜಿ ಸಲ್ಲಿಸಿದ್ದಾರೆ. ಪ್ರಸಕ್ತ ವರ್ಷ ಸೌಲಭ್ಯ ಸಿಗದ ರೈತರ ಅರ್ಜಿಗಳನ್ನು ಮುಂದಿನ ವರ್ಷ ಪರಿಗಣಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಪ್ರತಿ ಫಲಾನುಭವಿ ರೈತನಿಗೆ ಕೃಷಿ ಭಾಗ್ಯ ಯೋಜನೆಯಡಿ ₨ 2 ಲಕ್ಷ ಸಹಾಯಧನ ಒದಗಿಸಲಾಗುವುದು. ಈ ಅನುದಾನದಲ್ಲಿ ಕೃಷಿಹೊಂಡ, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳ­ಬಹುದು. ಸೂಕ್ತ ಬೆಳೆ ಪದ್ಧತಿ ಅಳವಡಿಸಿಕೊಂಡು ಇಳುವರಿ ಸುಧಾರಿಸಿ­ಕೊಳ್ಳಲು ಯೋಜನೆ ನೆರವು ನೀಡಲಿದೆ ಎಂದು ಹೇಳಿದರು. ಯೋಜನೆ ಯಶಸ್ವಿಯಾದರೆ ಮುಂದಿನ ವರ್ಷ ವ್ಯಾಪಕ ಪ್ರಮಾಣ­ದಲ್ಲಿ ಅನುಷ್ಠಾನಗೊ­ಳಿಸ­­ಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.