ADVERTISEMENT

ಜೆಡಿಎಸ್‌ ಅಧಿಕಾರಕ್ಕೆ: ಪ್ರಜ್ವಲ್‌ ರೇವಣ್ಣ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2017, 6:21 IST
Last Updated 5 ಡಿಸೆಂಬರ್ 2017, 6:21 IST

ಸುರಪುರ: ‘ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ದುರಾಡಳಿತವನ್ನು ನೋಡಿರುವ ರಾಜ್ಯದ ಮತದಾರರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಮತ ನೀಡಲಿದ್ದಾರೆ. ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್‌ ಸರ್ಕಾರ ರಚಿಸುವುದು ಖಚಿತ’ ಎಂದು ಜೆಡಿಎಸ್‌ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಜ್ವಲ್‌ ರೇವಣ್ಣ ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಸಂಘಟನೆಗಾಗಿ ಪ್ರವಾಸ ಕೈಗೊಂಡಿರುವ ಅವರು ಸೋಮವಾರ ನಗರದ ಅರಮನೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಈ ಬಾರಿ ಹೈದರಾಬಾದ್‌ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ ಇತರ ಪಕ್ಷಗಳಿಗಿಂತ ಹೆಚ್ಚು ಸ್ಥಾನ ಗೆಲ್ಲಲಿದೆ. ರೈತರ, ಯುವಕರ, ಮಹಿಳೆಯರ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತದೆ’ ಎಂದರು.

ADVERTISEMENT

‘ಮಾಜಿ ಸಚಿವ ರಾಜೂಗೌಡ ಅವರಿಗೆ ಕಳೆದ ಬಾರಿ ಪಕ್ಷದ ಟಿಕೆಟ್‌ ನೀಡಲಾಗಿತ್ತು. ಕುಮಾರಸ್ವಾಮಿ ಅವರ ಆಡಳಿತಾವಧಿಯಲ್ಲಿ ಅವರಿಗೆ ವಿಫುಲ ಅವಕಾಶಗಳನ್ನು ನೀಡಲಾಗಿತ್ತು. ಅವರ ಕಷ್ಟಕಾಲದಲ್ಲಿ ಪಕ್ಷ ಕೈಹಿಡಿದಿತ್ತು. ನಂತರ ಅವರು ಬಿಜೆಪಿಗೆ ಸೇರಿ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ’ ಎಂದು ಹರಿಹಾಯ್ದರು.

‘ಇಲ್ಲಿನ ಅರಸು ಮನೆತನದ ರಾಜಾ ಕೃಷ್ಣಪ್ಪನಾಯಕ ಉತ್ಸಾಹಿ ಯುವಕರಿದ್ದಾರೆ. ಅವರು ಪಕ್ಷದ ಸಂಘಟನೆಗೆ ಒತ್ತು ನೀಡಲಿ. ಸುರಪುರದಲ್ಲಿ ಸಮಾವೇಶ ನಡೆಸಲು ಅವಕಾಶ ಮಾಡಿಕೊಡಲಾಗುವುದು. ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು’ ಎಂದು ಭರವಸೆ ನೀಡಿದರು.

ರಾಜಾ ಕೃಷ್ಣಪ್ಪನಾಯಕ, ಜೆಡಿಎಸ್‌ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಉಸ್ತಾದ ವಜಾಹತ್‌ ಹುಸೇನ್, ತಾಲ್ಲೂಕು ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಭಕ್ರಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.