ADVERTISEMENT

ತಂದೆ,ತಾಯಿ ಸೇವೆ ಪುಣ್ಯದ ಕೆಲಸ: ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 5:31 IST
Last Updated 17 ಜುಲೈ 2017, 5:31 IST

ಶಹಾಪುರ: ‘ಎಲ್ಲರನ್ನೂ ಪ್ರೀತಿಸು. ಯಾರ ಬಗ್ಗೆಯೂ ದ್ವೇಷ ಬೇಡ. ಶರೀರವೆಂಬ ದೇಗುಲದಲ್ಲಿನ ಮನಸ್ಸು ಸ್ವಚ್ಛವಾಗಿರಬೇಕು. ಸಣ್ಣ ವಿಷಯಗಳಿಗೆ ಮನಸ್ತಾಪ ಮಾಡಿಕೊಂಡು ನೆಮ್ಮದಿ ಹಾಳು ಮಾಡಿಕೊಳ್ಳಬಾರದು’ಎಂದು ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.

ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಭಾನುವಾರ ಬಸನಗೌಡ ಮಾಲಿಪಾಟೀಲ ಉಕ್ಕಿನಾಳ ಜನ್ಮ ಶತಮಾನೋತ್ಸವ ಸಂಭ್ರಮಾಚರಣೆಯ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

‘ಸ್ವಾರ್ಥ ಸಾಧನೆಗೆ ಸ್ವಚ್ಛ ಪರಿಸರ ಹಾಳು ಮಾಡಿದ್ದೇವೆ. ನಗರ ಪ್ರದೇಶಗಳಲ್ಲಿ ಉತ್ತಮ ಗಾಳಿಗೂ ಬರ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿ ಇವತ್ತಿಗೂ ಉತ್ತಮ ಪರಿಸರವಿದೆ.  ಇನ್ನೂ ಹೆಚ್ಚಿನ ಮರಗಳನ್ನು ಬೆಳೆಸಿ, ನೆಮ್ಮದಿ ಕಾಣಬೇಕು’ ಎಂದು ಅವರು ತಿಳಿಸಿದರು.

ADVERTISEMENT

‘ತಂದೆ–ತಾಯಿಯ ಸೇವೆ ಎಂಬುವುದು ಪುಣ್ಯದ ಕೆಲಸ. ಬಸನಗೌಡರ ಜನ್ಮ ಶತಮಾನೋತ್ಸವವನ್ನು ಡಾ.ಶೇಖರ ಪಾಟೀಲ ಹಾಗೂ ಕುಟುಂಬ ವರ್ಗ  ಅತ್ಯಂತ ಸಂಭ್ರಮದಿಂದ ಆಚರಿಸುತ್ತಿರುವುದು ಉತ್ತಮ ನಾಗರಿಕ ಸಮಾಜಕ್ಕೆ ಹೊಸ ಸಂದೇಶ ನೀಡಿದಂತಾಗಿದೆ. ನಡೆ ಹಾಗೂ ನುಡಿಯಲ್ಲಿ ಹಿಡಿತವಿರಬೇಕು. ಸಮೃದ್ಧಿ ಜೀವನ ಕಂಡುಕೊಳ್ಳಬೇಕು’ ಎಂದರು.

ಜಾನಪದ ಸಾಹಿತಿ ಶಂಭು ಬಳಿಗಾರ ಮಾತನಾಡಿ, ‘ಆಧುನಿಕತೆಯ ಭರಾಟೆಯ ಹೊಸ್ತಿಲಲ್ಲಿ ನಾವಿದ್ದೇವೆ. ತಂದೆ–ತಾಯಂದಿರನ್ನು ಪೂಜಿಸುವ ಕಾಲ ದೂರವಾಗುತ್ತಿವೆ’ ಎಂದರು. ‘ವೃದ್ದಾಶ್ರಮಗಳು ಬಾಗಿಲು ತೆರೆದುಕೊಳ್ಳುತ್ತಿರುವದನ್ನು ನೋಡಿದರೆ ದಿಗಿಲು ಆಗುತ್ತಿದೆ. ಇಂತಹ ಬೆಳವಣಿಗೆ ನಿಜಕ್ಕೂ ಆತಂಕ ಮತ್ತು ಕಳವಳಕಾರಿ’ ಎಂದರು.
‘ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸುವದನ್ನು ಮರೆತ ಕಾರಣ ಇಂತಹ ದುಸ್ಥಿತಿಗೆ ಸಮಾಜಕ್ಕೆ ಬಂದಿದೆ. ಉತ್ತಮ ಸಮಾಜ ನಿರ್ಮಾಣ ವಾಗಬೇಕು’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಆಸ್ತಿ ಅಂತಸ್ತು ಗಳಿಸುವುದಕ್ಕಿಂತ ಮಕ್ಕಳಿಗೆ ಉತ್ತಮ ನಡೆ, ನುಡಿ ಹಾಗೂ ನೈತಿಕ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ತಿಳಿ ಹೇಳಬೇಕು. ಉತ್ತಮ ವಿಚಾರಗಳನ್ನು ತಿಳಿಪಡಿಸುವ ಮುಖಾಂತರ ಅವರನ್ನು ಒಳ್ಳೆಯ ನಾಗರಿಕರನ್ನಾಗಿಸಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು’ ಎಂದು ಅವರು ತಿಳಿಸಿದರು.

ಫಕೀರೇಶ್ವರ ಮಠದ ಗುರುಪಾದೇಶ್ವರ ಸ್ವಾಮೀಜಿ, ಗುಂಬಳಾಪುರಮಠದ ಸಿದ್ದೇಶ್ವರ ಸ್ವಾಮೀಜಿ, ವೇದಮೂರ್ತಿ ಬಸವಯ್ಯ ಶರಣರು, ಚೆನ್ನಮಲ್ಲ ದೇವರು, ಸೋಪಾನಾಥ ಸ್ವಾಮೀಜಿ,  ಶಾಂತ ಮಲ್ಲಿಕಾರ್ಜುನ ಶಿವಾಚಾರ್ಯರು ಅವರು ಸಾನ್ನಿಧ್ಯ ವಹಿಸಿದ್ದರು.

ಶಾಸಕ ಗುರು ಪಾಟೀಲ ಶಿರವಾಳ, ಕೃಷಿ ಕಾಲೇಜಿನ ಡೀನ್ ಡಾ.ಸುರೇಶ ಪಾಟೀಲ, ಡಾ.ಮಲ್ಲಣ್ಣಗೌಡ ಉಕ್ಕಿನಾಳ, ಡಾ.ಎಸ್.ಶೇಖರ ಪಾಟೀಲ, ಡಾ.ಭೀಮರಡ್ಡಿ ಪಾಟೀಲ ಮರಕಲ್, ರಾಜುಗೌಡ ಉಕ್ಕಿನಾಳ, ಪರ್ವತರಡ್ಡಿ ಬೆಂಡಬೆಂಬಳಿ, ಚಂದ್ರಶೇಖರ ಲಿಂಗದಳ್ಳಿ, ಆರ್.ಎಂ.ಹೊನ್ನಾರಡ್ಡಿ, ಭೀಮಯ್ಯಗೌಡ ಕಟ್ಟಿಮನಿ, ಅಡಿವೆಪ್ಪ ಜಾಕಾ  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉಚಿತ ಕ್ಯಾನ್ಸರ್ ತಪಾಸಣೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.