ADVERTISEMENT

ತಲೆಎತ್ತಿದ ಸೇಂದಿ ಅಕ್ರಮ ಮಾರಾಟ ಕೇಂದ್ರಗಳು!

ತೆಲಂಗಾಣದಿಂದ ರಾಜ್ಯದ ಗಡಿಗ್ರಾಮಗಳಿಗೆ ಅಕ್ರಮ ಸೇಂದಿ ಪೂರೈಕೆ

ಮಲ್ಲೇಶ್ ನಾಯಕನಹಟ್ಟಿ
Published 13 ಫೆಬ್ರುವರಿ 2017, 9:36 IST
Last Updated 13 ಫೆಬ್ರುವರಿ 2017, 9:36 IST
ಯಾದಗಿರಿ–ತೆಲಂಗಾಣ ಗಡಿಭಾಗದ ತೆಲಂಗಾಣದ ವಿಜಯಪಲ್ಲಿ ಬಸ್ ತಂಗುದಾಣದಲ್ಲಿ ಸೇಂದಿ ಮಾರಾಟ ಕೇಂದ್ರ
ಯಾದಗಿರಿ–ತೆಲಂಗಾಣ ಗಡಿಭಾಗದ ತೆಲಂಗಾಣದ ವಿಜಯಪಲ್ಲಿ ಬಸ್ ತಂಗುದಾಣದಲ್ಲಿ ಸೇಂದಿ ಮಾರಾಟ ಕೇಂದ್ರ   

ಯಾದಗಿರಿ: ತೆಲಂಗಾಣದಿಂದ ರಾಜ್ಯದ ಗಡಿಗ್ರಾಮಗಳಿಗೆ ಅಕ್ರಮ ಸೇಂದಿ ಪೂರೈಕೆಯಾಗುತ್ತಿದ್ದು, ಗಡಿಗ್ರಾಮಕ್ಕೊಂದು ಎಂಬಂತೆ ಸೇಂದಿ ಅಕ್ರಮ ಮಾರಾಟ ಕೇಂದ್ರಗಳು ತಲೆ ಎತ್ತಿವೆ ಎಂಬ ಆರೋಪ ವ್ಯಾಪಕವಾಗುತ್ತಿದೆ.

ತೆಲಂಗಾಣಕ್ಕೆ ಗಡಿ ಹಂಚಿಕೊಂಡಿರುವ ರಾಜ್ಯದ ಬೀದರ್‌, ಕಲಬುರ್ಗಿ, ರಾಯಚೂರು ಜಿಲ್ಲೆಗಳ ಗಡಿಭಾಗದಲ್ಲಿ ಅಕ್ರಮ ಸೇಂದಿ ಮತ್ತು ಕಳ್ಳಬಟ್ಟಿ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ರಾಜ್ಯದಲ್ಲಿ ಸೇಂದಿ, ಸಾರಾಯಿ, ಕಳ್ಳಬಟ್ಟಿ ಮಾರಾಟ ನಿಷೇಧಿಸಿದ್ದರೂ, ನೆರೆಯ ತೆಲಂಗಾಣದಿಂದ ಅಕ್ರಮವಾಗಿ ಪೂರೈಕೆಯಾಗುತ್ತಿದೆ.

ತೆಲಂಗಾಣದಲ್ಲಿ ಸೇಂದಿ ಮಾರಾಟ ನಿಷೇಧ ಇಲ್ಲ. ರಾಯಚೂರು ಜಿಲ್ಲೆ ಗಡಿ ಭಾಗದ ಕೃಷ್ಣಾದಲ್ಲಿ, ಕಲಬುರ್ಗಿ ಜಿಲ್ಲೆಯ ಚಿಂಚೋಳಿ, ಯಾದಗಿರಿ ಜಿಲ್ಲೆಯ ಕೊಂಕಲ್‌, ಅನಪುರ ಭಾಗದಲ್ಲಿ ಸೇಂದಿ ಅಕ್ರಮ ಪೂರೈಕೆ ದಂಧೆ ಎಗ್ಗಿಲ್ಲದೆ ನಡೆದಿದೆ ಎಂಬುದು ಮೂಲಗಳ ಮಾಹಿತಿ.

ತಾಂಡಾಗಳಲ್ಲಿ ನಿಲ್ಲದ ಕಳ್ಳಬಟ್ಟಿ: ‘ರಾಜ್ಯದ ಗಡಿಭಾಗದ ಲಂಬಾಣಿ ತಾಂಡಾಗಳಲ್ಲೂ  ಕಳ್ಳಬಟ್ಟಿ  ದಂಧೆ ನಿಯಂತ್ರಣಗೊಂಡಿಲ್ಲ. ಲಂಬಾಣಿ ತಾಂಡಾಗಳನ್ನೇ ವಿಶೇಷ ಗುರಿಯಾಗಿಸಿಕೊಂಡು ಅಬಕಾರಿ ಇಲಾಖೆಯವರು ದಾಳಿ ನಡೆಸಿದ್ದಾರೆ. ಆದರೂ ತಾಂಡಾಗಳಲ್ಲಿ ಕಳ್ಳಬಟ್ಟಿ ದಂಧೆಗೆ ತೆಲಂಗಾಣ ಪೂರಕವಾಗಿರುವುದರಿಂದ ನಿಯಂತ್ರಣ ಸಾಧ್ಯವಾಗಿಲ್ಲ’ ಎಂದು ಅಬಕಾರಿ ಡಿಸಿ ಶ್ಯಾಮ್ ಸಾವಳಗಿ ಹೇಳುತ್ತಾರೆ.

ರೈಲು ನಿಲ್ದಾಣಗಳಲ್ಲೂ ದಂಧೆ: ‘ತೆಲಂಗಾಣದ ಮಹಿಳೆಯರು ಸೇಂದಿಯನ್ನು ರಾಯಚೂರು, ಯಾದಗಿರಿ ರೈಲು ನಿಲ್ದಾಣಗಳಲ್ಲೂ ಅಕ್ರಮ ಮಾರಾಟ ನಡೆಸುತ್ತಾ ಬರುತ್ತಿದ್ದಾರೆ. ರೈಲು ಬರುವವರೆಗೂ ತಲೆಕೆಳಗೆ ದಿಂಬಿನಂತೆ ಬಾಟಲಿ ಇಟ್ಟುಕೊಂಡು ಮಲಗುವ ಈ ಮಹಿಳೆಯರು, ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಸೇಂದಿ ಮಾರಾಟ ನಡೆಸುತ್ತಾರೆ. ರಾಯಚೂರಿನಿಂದ ಯಾದಗಿರಿ ನಿಲ್ದಾಣದವರೆಗೆ ಬರುವ ಅವರು ಸೇಂದಿ ಮಾರಾಟವಾದ ಮೇಲೆ ಗುರುಮಠಕಲ್ ಬಸ್‌ ಹತ್ತಿ ತೆಲಂಗಾಣ ಸೇರಿಕೊಳ್ಳುತ್ತಾರೆ’ ಎನ್ನುವುದು ಅವರ ವಿವರಣೆ.

‘ಇಂಥ ಮಹಿಳೆಯರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದೇವೆ. ಆದರೆ, ಜಾಮೀನಿನ ಮೇಲೆ ಬಿಡುಗಡೆಯಾದ ಮೇಲೆ ಅವರು ಮತ್ತೆ ಅದೇ ದಂಧೆ ನಡೆಸುತ್ತಾರೆ. ಈ ವಿಷಯವಾಗಿ ತೆಲಂಗಾಣದ ಪೊಲೀಸರೊಂದಿಗೆ ಚರ್ಚಿಸಿದ್ದು, ಅಕ್ರಮ ಸೇಂದಿ ಮಾರಾಟ ದಂಧೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳುವ ಅವರು ನಂತರ ನಿರ್ಲಕ್ಷಿಸುವುದರಿಂದ ನಮ್ಮ  ಶ್ರಮ ವ್ಯರ್ಥವಾಗುತ್ತಿದೆ’ ಎಂದು ಶ್ಯಾಮ್‌ ಸಾವಳಗಿ ಹೇಳುತ್ತಾರೆ.

ಕಡಿಮೆ ದರ ಆಕರ್ಷಣೆ: ಸೇಂದಿ (ಕಳ್ಳು) ದರ ತುಂಬಾ ಕಡಿಮೆ. ₹10ಕ್ಕೆ ಅರ್ಧ ಲೀಟರ್‌ ಸಿಗುತ್ತದೆ. ₹ 20ಕ್ಕೆ ಬರೋಬ್ಬರಿ ಒಂದು ಲೀಟರ್‌ನಷ್ಟು ಸೇಂದಿ ದೊರಕುತ್ತದೆ. ಆದರೆ, ರಾಜ್ಯದಲ್ಲಿ ದುಬಾರಿ ದರ ತೆತ್ತು ಮದ್ಯ ಸೇವಿಸಬೇಕಾಗುತ್ತದೆ. ಇದರಿಂದ ಗಡಿಗ್ರಾಮದ ಜನರು ತೆಲಂಗಾಣದಲ್ಲಿ ಅತ್ಯಲ್ಪ ದರದಲ್ಲಿ ಸಿಗುವ ಸೇಂದಿಗೆ ದಾಸರಾಗುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.