ADVERTISEMENT

ನೀರಾವರಿ ಸೌಲಭ್ಯದಿಂದ 12 ಗ್ರಾಮ ವಂಚಿತ: ಜೆಡಿಎಸ್ ಆರೋಪ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2017, 6:52 IST
Last Updated 16 ಡಿಸೆಂಬರ್ 2017, 6:52 IST

ಕೆಂಭಾವಿ: ‘ನೀರಾವರಿ ಸಚಿವರು ಸುರಪುರ ತಾಲ್ಲೂಕಿನ 12 ಗ್ರಾಮಗಳಿಗೆ ನೀರಾವರಿ ಸೌಲಭ್ಯದಿಂದ ವಂಚಿತರಾಗುವಂತೆ ಮಾಡಿದ್ದಾರೆ. ಅವರು ರಾಜ್ಯದ ಸಚಿವರೊ ಅಥವಾ ವಿಜಯಪುರ ಜಿಲ್ಲೆಗೆ ನೀರಾವರಿ ಸಚಿವರೋ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಜೆಡಿಎಸ್ ಯುವ ಮುಖಂಡ ಅಮೀನರೆಡ್ಡಿ ಮಾಲಿಪಾಟೀಲ ಯಾಳಗಿ ಆರೋಪಿಸಿದರು.

ಬೂದಿಹಾಳ ಪೀರಾಪುರ ಏತ ನೀರಾವರಿ ಯೋಜನೆಯಲ್ಲಿ ಸುರಪುರ ತಾಲ್ಲೂಕಿನ 12 ಹಳ್ಳಿಗಳನ್ನು ಕೈಬಿಟ್ಟಿದ್ದನ್ನು ಖಂಡಿಸಿ ಆಲಮಟ್ಟಿ ಕೆಬಿಜೆಎನ್ಎಲ್ ಕಚೇರಿಯ ಮುಂದೆ ಮೂರು ದಿನಗಳಿಂದ ಕರ್ನಾಟಕ ಪ್ರಾಂತ ರೈತ ಸಂಘ ಕೆಂಭಾವಿ ಹೋಬಳಿ ಸಮಿತಿ ವತಿಯಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಶುಕ್ರವಾರ ಪಾಲ್ಗೊಂಡು, ನಂತರ ಕೆಂಭಾವಿ ಯಲ್ಲಿ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.

‘ಈ ಹಿಂದೆ ಯೋಜನೆ ರೂಪಿಸುವಾಗ 12 ಗ್ರಾಮಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ, ಯೋಜನೆಗೆ ಚಾಲನೆ ದೊರಕುವಾಗ ಈ ಗ್ರಾಮಗಳನ್ನು ಕೈಬಿಟ್ಟಿರುವುದು ರಾಜಕೀಯ ಕುತಂತ್ರವಾಗಿದೆ. ಶಹಾಪುರದ ಹಾಲಿ ಮತ್ತು ಮಾಜಿ ಶಾಸಕರ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಈ 12 ಗ್ರಾಮಗಳು ನೀರಾವರಿಯಿಂದ ವಂಚಿತವಾಗಿವೆ. ಚುನಾವಣೆ ಸಂದರ್ಭದಲ್ಲಿ ಇಬ್ಬರೂ ನಾಯಕರು ಇದನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ರೈತರ ಮೇಲೆ ನಿಜವಾದ ಪ್ರೀತಿ ಯಿದ್ದರೆ ಈ ಮೊದಲೇ ಈ ಗ್ರಾಮಗಳನ್ನು ಕೈಬಿಡುತ್ತಿರುವಾಗಲೇ ಹೋರಾಡಬೇಕಾಗಿತ್ತು’ ಎಂದು ಟೀಕಿಸಿದರು.

ADVERTISEMENT

‘ಶೀಘ್ರದಲ್ಲಿ ಯೋಜನೆಯಡಿ ಸುರಪುರ ತಾಲ್ಲೂಕಿನ 12 ಗ್ರಾಮಗಳನ್ನು ಸೇರಿಸದಿದ್ದರೆ ಸಾವಿರಾರು ರೈತರ ಜೊತೆಗೆ ನೀರಾವರಿ ಸಚಿವರ ಮನೆಯ ಮುಂದೆ ಹೋರಾಟ ನಡೆಸಲಾಗುವುದು’ ಎಂದು ಹೇಳಿದರು. ಕೆಂಭಾವಿ ಬ್ಲಾಕ್ ಜೆಡಿಎಸ್ ಅಧ್ಯಕ್ಷ ಅಕ್ಬರ್ ನಾಲತವಾಡ್, ಸಾಯಬಣ್ಣ ದೊಡ್ಡಮನಿ, ಶರಣಗೌಡ ಮಾಲಹಳ್ಳಿ, ಹಣಮಂತ್ರಾಯ ಮಾಣಸುಣಗಿ, ಭಾಗೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.