ADVERTISEMENT

ನೆಲಕಚ್ಚಿದ ಅಕ್ಕಿ ಗಿರಣಿ ಉದ್ಯಮ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 10:04 IST
Last Updated 9 ನವೆಂಬರ್ 2017, 10:04 IST

ಯಾದಗಿರಿ: ₹ 500, 1000 ಮುಖಬೆಲೆಯ ನೋಟು ರದ್ದತಿ ಕ್ರಮದ ಪರಿಣಾಮದಿಂದ ಜಿಲ್ಲೆಯಲ್ಲಿ ಚಿಲ್ಲರೆ ವ್ಯಾಪಾರ ಉದ್ಯಮ ಚೇತರಿಸಿಕೊಂಡಿಲ್ಲ. ಶೇ 60ರಷ್ಟು ಚಿಲ್ಲರೆ ವ್ಯಾಪಾರ ಉದ್ಯಮ ಕುಸಿತ ಕಂಡಿದೆ. ಅಕ್ಕಿ ಗಿರಣಿ ಉದ್ಯಮವೂ ಕುಸಿತ ಕಂಡಿದ್ದರಿಂದ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ನಗರಕ್ಕೆ ಬಂದವರು, ಮತ್ತೆ ಹಳ್ಳಿಗಳಿಗೆ ಹಿಂದಿರುಗಿದ್ದಾರೆ. ಅಲ್ಲಿಯೂ ಉದ್ಯೋಗ ಸಿಗದೆ ತೊಂದರೆ ಅನುಭವಿಸುವ ಸ್ಥಿತಿಗೆ ತಲುಪಿದ್ದಾರೆ ಎಂಬುದಾಗಿ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ ಗೌರವ ಅಧ್ಯಕ್ಷ ಮೌಲಾಲಿ ಅನಪೂರ ಹೇಳುತ್ತಾರೆ.

‘ಜಿಲ್ಲೆಯಲ್ಲಿ 25 ಅಕ್ಕಿ ಗಿರಣಿಗಳಿವೆ. ಅವುಗಳಲ್ಲಿ 18 ಅಕ್ಕಿ ಗಿರಣಿಗಳು ನಗರ ವ್ಯಾಪ್ತಿಯಲ್ಲಿವೆ. ಎಲ್ಲ ಅಕ್ಕಿ ಗಿರಣಿಗಳಲ್ಲಿ ಕನಿಷ್ಠ ಎರಡು ಸಾವಿರಕ್ಕೂ ಹೆಚ್ಚು ಕೂಲಿ ಕಾರ್ಮಿಕರು ದಿನಗೂಲಿ ಅವಲಂಬಿಸಿದ್ದಾರೆ. ಆದರೆ, ಅವರಿಗೆ ದಿನಗೂಲಿ ನೀಡಲು ಬೃಹತ್‌ ಮೊತ್ತ ಬೇಕಾಗುತ್ತದೆ.

ಆದರೆ, ₹2 ಲಕ್ಷಕ್ಕೂ ಹೆಚ್ಚಿನ ಮೊತ್ತ ಪಡೆಯಲು ದಾಖಲಾತಿ ಸಲ್ಲಿಸಿ ಪಡೆಯಬೇಕು ಎಂಬ ಷರತ್ತು ವಿಧಿಸಿರುವುದರಿಂದ ಅಕ್ಕಿ ಗಿರಣಿಗಳು ಮುಚ್ಚುವ ಹಂತ ತಲುಪಿವೆ. ಬಡ ಕಾರ್ಮಿಕರಿಗೂ ಇದರಿಂದ ಉದ್ಯೋಗ ಖೋತಾ ಆಗಿದೆ. ಕೇವಲ 50 ದಿನಗಳಲ್ಲಿ ಸಮಸ್ಯೆ ಪರಿಹರಿಸುವುದಾಗಿ ಹೇಳಿದ ಕೇಂದ್ರ ವರ್ಷ ಕಳೆದರೂ ಸಮಸ್ಯೆಯನ್ನು ಪರಿಹರಿಸಿಲ್ಲ’ ಎಂಬುದಾಗಿ ಅಕ್ಕಿ ಗಿರಣಿಗಳ ಮಾಲೀಕರ ಸಂಘದ ಜಿಲ್ಲಾ ಅಧ್ಯಕ್ಷ ಲಾಯಲ್ ಬಾದಲ್‌ ಹುಸೇನ್ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಜಿಲ್ಲೆಯಲ್ಲಿ ಅಂಬೆಗಾಲಿಡುತ್ತಿದ್ದ ರಿಯಲ್‌ ಎಸ್ಟೇಟ್ ಉದ್ಯಮ ಸಂಪೂರ್ಣ ಕುಸಿದಿದೆ. ಪ್ರತಿವರ್ಷ ಹೊಸದಾಗಿ 5ರಿಂದ10ಮಂದಿ ಕ್ರೆಡೈಗೆ ನೋಂದಣಿ ಮಾಡಿಸುತ್ತಿದ್ದರು. ಈ ಒಂದು ವರ್ಷದಲ್ಲಿ ಒಬ್ಬರೂ ನೋಂದಣಿ ಮಾಡಿಸಿಲ್ಲ. ಮೂರು ವರ್ಷಗಳಲ್ಲಿ ಒಟ್ಟು 14 ಹೊಸ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ, ಕಳೆದ ವರ್ಷ ಯಾವ ಪ್ರಾಜೆಕ್ಟ್ ಕೂಡ ಆರಂಭಗೊಂಡಿಲ್ಲ’ ಎಂದು ಎಂ.ಎನ್‌.ಕೆ ಡೆವಲಪರ್ಸ್‌ ಸಂಸ್ಥೆಯ ದೇವೀಂದ್ರನಾಥ ಹೇಳುತ್ತಾರೆ.

‘ನೋಟು ರದ್ದತಿ ನಂತರ ಜಿ.ಎಸ್.ಟಿ ಯಿಂದ ಇನ್ನೂ ತೊಂದರೆಯಾಯಿತು. ನಗದು ವ್ಯವಹಾರವನ್ನೇ ಅವಲಂಬಿಸಿದ್ದ ಈ ಉದ್ಯಮ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಂಕಷ್ಟಕ್ಕೆ ಈಡಾಗುವ ಪರಿಸ್ಥಿತಿ ಬಂದಿದೆ’ ಎಂದು ಹೇಳಿದರು.

‘ಮೊದಲು ಆಸ್ತಿಯ ನೋಂದಣಿ ಮೌಲ್ಯಕ್ಕೂ, ಮಾರಾಟ ಮೌಲ್ಯಕ್ಕೂ ಬಹಳ ವ್ಯತ್ಯಾಸವಿತ್ತು. ಈಗ, ಭೂಮಿಯ ಮೌಲ್ಯ ಪರಿಗಣನೆಗೆ ತೆಗೆದುಕೊಂಡು ತೆರಿಗೆ ನಿರ್ಧರಿಸ ಲಾಗುತ್ತದೆ. ಆಗ, ಸಹಜವಾಗಿ ಭೂಮಿ ಮೌಲ್ಯ ಹೆಚ್ಚುತ್ತದೆ. ಕೊನೆಗೆ, ಗ್ರಾಹಕರ ಮೇಲೆ ಹೊರೆ ಬೀಳುತ್ತದೆ’ ಎನ್ನುತ್ತಾರೆ ಅವರು.

ಬೇನಾಮಿಗೆ ಹೊಡೆತ: ಈಗ ಪ್ರತಿಯೊಂದಕ್ಕೂ ದಾಖಲೆ ನೀಡಬೇಕಾಗುತ್ತದೆ. ಬೇನಾಮಿ ಆಸ್ತಿ ಖರೀದಿಸಿದವರು ಸಿಕ್ಕಿಬೀಳುವ ಸ್ಥಿತಿ ಇದೆ. ಇದರಿಂದ ಬೇನಾಮಿ ಆಸ್ತಿ ಖರೀದಿಗೆ ಹೊಡೆತ ಬಿದ್ದಿದೆ. ನೋಟು ರದ್ದತಿಯಿಂದಾದ ಏಕೈಕ ಲಾಭವಿದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.