ADVERTISEMENT

ನೋಟು ರದ್ದತಿಯಿಂದ ಸಂಕಷ್ಟ

‘ಜನ ವೇದನೆ’ ಸಮಾವೇಶದಲ್ಲಿ ಗೌತಮ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2017, 9:08 IST
Last Updated 3 ಮಾರ್ಚ್ 2017, 9:08 IST
ಸುರಪುರದ ಕಾಂಗ್ರೆಸ್ ಕಚೇರಿ ವಸಂತ ಮಹಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ‘ಜನ ವೇದನೆ’ ಸಮಾವೇಶದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ವಿ.ಗೌತಮ್‌ ಮಾತನಾಡಿದರು
ಸುರಪುರದ ಕಾಂಗ್ರೆಸ್ ಕಚೇರಿ ವಸಂತ ಮಹಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ‘ಜನ ವೇದನೆ’ ಸಮಾವೇಶದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ವಿ.ಗೌತಮ್‌ ಮಾತನಾಡಿದರು   

ಸುರಪುರ:  ‘ಗರಿಷ್ಠ ಮುಖಬೆಲೆಯ ನೋಟು ರದ್ದತಿಯಿಂದ ಅನೇಕ ಸಂಕಷ್ಟಗಳು ಎದುರಾಗಿವೆ. ಬಡವರು, ದಲಿತರು, ಹಿಂದುಳಿದವರು ಸೇರಿದಂತೆ ಅನೇಕರು ಹಣಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ವಿ.ಗೌತಮ್‌ ಹೇಳಿದರು.

ನಗರದ ಕಾಂಗ್ರೆಸ್ ಕಚೇರಿ ವಸಂತ ಮಹಲ್‌ನಲ್ಲಿ ಗುರುವಾರ ಜರುಗಿದ ‘ಜನ ವೇದನೆ’ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಕಪ್ಪು ಹಣ ಹೊರತರುತ್ತೇನೆ ಎಂದು ಬೀಗಿದ್ದ ಮೋದಿ ಮಾಡಿದ್ದೇನು ಎಂದು ಪ್ರಶ್ನಿಸಿದ ಅವರು ಬಡವರಿಗೆ ಕಷ್ಟ ನೀಡಿದ್ದೆ ಮೋದಿ ಸಾಧನೆ. ಪ್ರಚಾರ ಪ್ರಿಯರಾದ ಮೋದಿ ಬಡವರ ನೆರವಿಗೆ ಬಾರದೆ ಉಳ್ಳವರ ಪರ ಆಡಳಿತ ನಡೆಸುತ್ತಿದ್ದಾರೆ’ ಎಂದು ದೂರಿದರು.

‘ಕಾಂಗ್ರೆಸ್‌ ಸಚಿವರು ಮತ್ತು ಮುಖಂಡರು ಹೈಕಮಾಂಡ್‌ಗೆ ಕಪ್ಪ ಕಾಣಿಕೆ ನೀಡಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರುವಾದದ್ದು. ಡೈರಿ ಹಗರಣ ಬಿಜೆಪಿ ಸೃಷ್ಟಿಸಿದ ಕುತಂತ್ರ. ಕಾಂಗ್ರೆಸ್‌ ಬಗ್ಗೆ ಅಪಪ್ರಚಾರ ಮಾಡಲು ಬಿಜೆಪಿ ಮುಖಂಡರು ಡೈರಿಯನ್ನು ತಾವೇ ಸೃಷ್ಟಿಸಿದ್ದಾರೆ. ಈ ಬಗ್ಗೆ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ’ ಎಂದು ತಿಳಿಸಿದರು.

‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಜನಪರ ಯೋಜನೆ ಗಳ ಮೂಲಕ ಸ್ವಚ್ಛ ಆಡಳಿತ ನಡೆ ಸುತ್ತಿದೆ. ಜೈಲಿಗೆ ಹೋಗಿ ಬಂದವರಿಂದ ಕಾಂಗ್ರೆಸ್ ಪಕ್ಷ ಆಡಳಿತದ ಬಗ್ಗೆ ಪಾಠ ಕಲಿಯುವ ಅಗತ್ಯವಿಲ್ಲ. ಕಾಂಗ್ರೆಸ್ ಯಾವುದೇ ಹಗರಣಗಳನ್ನು ನಡೆಸಿಲ್ಲ’ ಎಂದರು.

ಶಾಸಕ ರಾಜಾ ವೆಂಕಟಪ್ಪನಾಯಕ ಮಾತನಾಡಿ, ‘ಪ್ರಧಾನಿ ಮೋದಿ ಮಾಧ್ಯಮ ಗಳನ್ನು ಬಳಸಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ. ದೇಶದ ಜನತೆ ಬಿಜೆಪಿ ಮೇಲೆ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಮೋದಿ ಅಧಿಕಾರ ದುರುಪಯೋಗ ಪಡಿಸಿ ಕೊಳ್ಳುತ್ತಿದ್ದಾರೆ’ ಎಂದು ದೂರಿದರು.

‘ಅಧಿಕಾರದ ನೀಡಿದ ಜನತೆಗೆ ನೋಟು ಅಮಾನ್ಯಗೊಳಿಸುವುದರ ಮೂಲಕ ದ್ರೋಹ ಮಾಡಿದ್ದಾರೆ. ಮೋದಿ ಮಾತಿಗೆ ಮರುಳಾಗಬೇಡಿ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನಪರ ಯೋಜನೆ ಗಳನ್ನು ನೀಡಿದ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುವಂತೆ’ ಮನವಿ ಮಾಡಿದರು
 ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮರಿಗೌಡ ಹುಲಕಲ್, ಯುವ ಘಟಕದ ಜಿಲ್ಲಾಧ್ಯಕ್ಷ ರಾಘವೇಂದ್ರ ಮಾನಸಗಲ್, ಅಹ್ಮದ್ ಪಠಾಣ ಮಾತನಾಡಿದರು.

ಮಾಜಿ ಸಂಸದ ರಾಜಾ ರಂಗ ಪ್ಪನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲದಾಸ ಲಡ್ಡಾ, ಪ್ರಮುಖರಾದ ರಾಜಶೇಖರಗೌಡ ಪಾಟೀಲ, ಸೂಲಪ್ಪ ಕಮತಗಿ, ನಾಗಣ್ಣ ದಂಡಿನ್, ವೆಂಕೋಬ ಮಂಗಳೂರು, ನಿಂಗಣ್ಣ ಚಿಂಚೋಡಿ, ಕೆ. ಅರವಿಂದ, ಮಲ್ಲಣ್ಣ ಸಾಹು, ಸೋಮ ನಾಥ ಡೊಣ್ಣಿಗೇರೆ, ಪ್ರಭುಗೌಡ ಬೆನಕ ನಹಳ್ಳಿ, ರಮೇಶಚಂದ ಜೈನ್, ಅಬ್ದುಲ್ ಗಫಾರ್ ನಗನೂರಿ ಇದ್ದರು.

*
ಕಾಂಗ್ರೆಸ್‌ ಮಾತ್ರ ಸ್ವಚ್ಛ ಮತ್ತು ಸಮರ್ಥ ಆಡಳಿತ ನೀಡಬಲ್ಲದು. ಕಾಂಗ್ರೆಸ್‌ ಹೆಸರಿಗೆ ಮಸಿ ಬಳಿಯಲು ಬಿಜೆಪಿ ಇಲ್ಲದ ಕುತಂತ್ರ ನಡೆಸಿದೆ.
-ಕೆ.ವಿ. ಗೌತಮ್‌, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT