ADVERTISEMENT

ಮರೆಯಾಗುತ್ತಿದೆ ‘ಗಂಗಿರೆದ್ದು’ ಸಂಭ್ರಮ

ಕೋಲೆಬಸವನನ್ನು ಆಡಿಸುವ ಸಮುದಾಯಕ್ಕೆ ಸಿಗದ ಸೌಲಭ್ಯಗಳು

​ಪ್ರಜಾವಾಣಿ ವಾರ್ತೆ
Published 14 ಜನವರಿ 2017, 9:30 IST
Last Updated 14 ಜನವರಿ 2017, 9:30 IST
ಗುರುಮಠಕಲ್: ಸಂಕ್ರಾಂತಿ ಹಬ್ಬ ವೆಂದರೆ ಮನೆಯ ಮುಂದೆ ರಂಗು ರಂಗಿನ ರಂಗೋಲಿ, ಅದರ ಮೇಲೆ ಚಿತ್ತಾರದ ಎಲೆಗಳನ್ನು ಪೋಣಿಸಿ, ಸಗ ಣಿಯ ಗೊಬ್ಬೆಮ್ಮನನ್ನು ಇಟ್ಟು ಅಲಂಕ ರಿಸುವುದು, ಎತ್ತುಗಳ ಮೆರವಣಿಗೆ, ಗಾಳಿಪಟಗಳನ್ನು ಹಾರಿಸುವುದು ಜತೆಗೆ ಸಿಹಿಯೂಟ. ಹೀಗೆ ಬೇರೆ ಬೇರೆ ಪ್ರದೇಶಗಳಲ್ಲಿ ಒಂದೊಂದು ರೀತಿ ಹಬ್ಬವನ್ನು ಆಚರಿಸಲಾಗುತ್ತದೆ.
 
ತೆಲಂಗಾಣ ಗಡಿಗೆ ಹೊಂದಿ ಕೊಂಡಿರುವ ಗ್ರಾಮಗಳಲ್ಲಿ ಹಿಂದೆ ಸಂಕ್ರಾಂತಿ ಹಬ್ಬ ಬಂತೆಂದರೆ ‘ಗಂಗಿರೆದ್ದು’ ಬರುತ್ತದೆಂಬ ಸಂಭ್ರಮ ಮಕ್ಕಳಲ್ಲಿ ಮಾಡುತಿತ್ತು. ತೆಲುಗು ಭಾಷೆ ಯಲ್ಲಿ ಕೋಲೆ ಬಸವನನ್ನು ಗಂಗಿರೆದ್ದು ಎನ್ನಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಆ ಸಂಭ್ರಮ ಮರೆಯಾಗಿದೆ.
 
ಕೋಲೆ ಬಸವನನ್ನು ಆಡಿಸುವವರು ಈಗಲೂ ಬರುತ್ತಾರಾದರೂ, ಟಿ.ವಿ, ಮೊಬೈಲ್‌ಗಳ ಹಾವಳಿಯಿಂದ ಅದನ್ನು ನೋಡುವವರ ಸಂಖ್ಯೆ ಕಡಿಮೆ ಯಾಗುತ್ತಿರುವುದರಿಂದ ಆ ಸಂಪ್ರ ದಾಯ ಕ್ರಮೇಣವಾಗಿ ನಶಿಸುತ್ತಿದೆ.
 
ಸ್ಫುರದ್ರೂಪಿ ಹೋರಿಯೊಂದನ್ನು ಚೆನ್ನಾಗಿ ಸಿಂಗರಿಸಿ ಮನೆ ಮನೆಗಳಿಗೆ ತೆರಳುವ ಕೋಲೆ ಬಸವನನ್ನು ಆಡಿಸುವ ತಂಡ ಮನೆಯ ಬಾಗಿಲಿಗೆ ಬರುತ್ತಲೆ ‘ಯಜಮಾನರ ಹೊಲ, ಮನಿ, ಮಕ್ಕಳು ಆರಾಮಾಗಿ ಇರ್ಲಿ ಅಂತ ಹೇಳೋ ಬಸವ’ ಎನ್ನುತ್ತಿದ್ದಂತೆ ಹೋರಿಯು ತಲೆಯಾಡಿಸುತ್ತಾ ಆಶೀರ್ವದಿಸುತ್ತದೆ. ಇದಕ್ಕೆ ಹೋರಿಯನ್ನು ಸರಿಯಾಗಿ ಪಳಗಿ ಸಲಾಗುತ್ತದೆ. ಪಕ್ಕದಲ್ಲೊಬ್ಬ ಶಹನಾಯಿ ನುಡಿಸಿದರೆ, ಇನ್ನೊಬ್ಬ ಹಾಡುಗಳನ್ನು ಹಾಡಿ ತಾವು ನಿಂತಿರುವ ಮನೆಯ ಪೂರ್ವಜರನ್ನು ಹೊಗಳುತ್ತಾನೆ.
 
ಪ್ರತಿ ಮನೆಯಮುಂದೆ ಸುಮಾರು 15 ರಿಂದ 20 ನಿಮಿಷಗಳವರೆಗೆ ಕೋಲೆ ಬಸವನನ್ನು ಆಡಿಸಲಾಗುತ್ತದೆ. ಮನೆಯವರು ದಾನವನ್ನು ನೀಡಿದ ನಂತರ ಮುಂದಿನ ಮನೆಗೆ ಹೋಗು ತ್ತಾರೆ. 
 
ಹೋರಿಯು ಕೆಲವೊಮ್ಮೆ ಮಾಲೀಕನ ಆಣತಿಯಂತೆ ದಾನವನ್ನು ತಿರಸ್ಕರಿಸುವಂತೆ ಮಾಡಿ ಇನ್ನೂ ಸ್ವಲ್ಪ ಜಾಸ್ತಿ ಬೇಕೇನು ಎಂದು ಕೇಳಿದಾಗ ಹೌದು ಎನ್ನುವಂತೆ ತಲೆಯಾಡಿಸುವ ಮೂಲಕ ಮೇವು ಪಡೆಯುತ್ತದೆ.
 
ಈಚೆಗೆ ಇಲ್ಲಿಗೆ ಸಮೀಪದ ಗ್ರಾಮ ವೊಂದರಲ್ಲಿ ಕೋಲೆ ಬಸವನನ್ನು ಆಡಿಸುವ ತಂಡವೊಂದು ಸಿಕ್ಕಿತು. ಅವ ರನ್ನು ಮಾತಿಗೆಳೆದಾಗ, ‘ನಮ್ಮ ಮೂಲ ಆಂಧ್ರಪ್ರದೇಶದ ಯಾವುದೋ ಒಂದು ಗ್ರಾಮವೆಂದು ನಮ್ಮ ಹಿರಿಯರು ಹೇಳುತಿದ್ದರು. ನಮ್ಮ ಮೂಲ ಗ್ರಾಮ ಯಾವುದೆಂದು ನಮಗೆ ಗೊತ್ತಿಲ್ಲ. ಮಳೆಗಾಲವನ್ನು ಬಿಟ್ಟರೆ ಉಳಿದ ಎಲ್ಲಾ ದಿನಗಳಲ್ಲಿ ಊರೂರು ತಿರುಗುತ್ತೇವೆ. ಕೋಲೆಬಸವನನ್ನು ಆಡಿಸುವುದರಿಂದ ಧಾನ್ಯ, ಸ್ವಲ್ಪ ಹಣ, ಹಳೆಯ ಬಟ್ಟೆಗಳು ಹಾಗೂ ಒಂದಿಷ್ಟು ಹಳೆಯ ಪಾತ್ರೆಗಳು ಸಿಗುತ್ತವೆ. ಅದರಿಂದ ನಮ್ಮ ಜೀವನ ನಡೆಯುತ್ತದೆ’ ಎಂದು ಅಲೆಮಾರಿ ಕುಟುಂಬದ ರಾಮುಲಯ್ಯ ಅವರು ವಿವರಿಸಿದರು.
ಮಲ್ಲಿಕಾರ್ಜುನ ಪಾಟೀಲ್ ಚಪೆಟ್ಲಾ.
 
**
ಸಿಗದ ‘ಸರ್ಕಾರಿ ಭಾಗ್ಯಗಳು’
ಗುರುಮಠಕಲ್‌: ಅಲೆಮಾರಿ  ಸಮು ದಾಯದವರೇ ಹೆಚ್ಚಾಗಿ ಕೋಲೆ ಬಸವನನ್ನು ಆಡಿಸುತ್ತಾರೆ. ಬೇರೆ ಸಮುದಾಯದವರೂ ಈ ಕಾಯ ಕದಲ್ಲಿ ತೊಡಗಿ ದ್ದಾರಾ ದರೂ, ಈ ಕಸುಬನ್ನೇ ಜೀವ ನಾ ಧಾರವಾಗಿ  ಪೆದದಾಸ, ಕೊಡ್ಯಲ್ ಅಲೆಮಾರಿ ಸಮು ದಾ ಯದವರು ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ಇವರಿಗೆ ಸರ್ಕಾರದ ಯಾವುದೇ ‘ಭಾಗ್ಯ’ಗಳು ಸಿಗುತ್ತಿಲ್ಲ. ಈ ಸಮುದಾಯದ ಕುರಿತು ವ್ಯವ ಸ್ಥಿತವಾಗಿ ಅಧ್ಯ ಯನಗಳಾಗದಿರುವುದು, ಇವರು ಒಂದು ಸ್ಥಳದಲ್ಲಿ ನಿಲ್ಲದಿ ರುವುದು ಹಾಗೂ ಮತದಾನದ ಹಕ್ಕನ್ನು ಪಡೆಯದೆ ಇದ್ದುದ್ದರಿಂದಾಗಿ ಸರ್ಕಾರ ಗಳು ಬಡ ಜನರ ಅಭಿವೃದ್ಧಿಗಾಗಿ ಜಾರಿ ಮಾಡಿದ ಯಾವುದೇ ಸೌಲಭ್ಯಗಳು ಇವ ರನ್ನು ತಲುಪುತಿಲ್ಲ ಎನ್ನುತ್ತಾರೆ ಅಲೆ ಮಾರಿ ಜನಾಂಗದ ಕುರಿತು ಅಧ್ಯ ಯನದಲ್ಲಿ ತೊಡಗಿರುವ ಉಪನ್ಯಾಸಕ ಅಶೋಕ್ ವಾಟ್ಕರ್.
 
**
ವಂಶಪಾರಂಪರ್ಯವಾಗಿ ನಾವು ಕೋಲೆ ಬಸವನನ್ನು ಆಡಿಸಿಕೊಂಡು ಊರೂರಿಗೆ ತೆರಳಿ ಧಾನ್ಯ, ಹಣ ಸಂಗ್ರಹಿಸುತ್ತೇವೆ. ಮಳೆ ಗಾಲದಲ್ಲಿ ಮಾತ್ರ  ಒಂದೆಡೆ ವಾಸಿಸುತ್ತೇವೆ
–ಅಂಜನೇಯುಲು, 
ಕೋಲೆ ಬಸವನ ಆಡುಸುವಾತ
 
**
ಈ ಸಮುದಾಯದವರು ಊರೂರಿಗೆ ಅಲೆ ದಾಡುವುದರಿಂದ ಮತದಾನದ ಹಕ್ಕು ಸಿಕ್ಕಿಲ್ಲ. ಇದು ಇವರು ಸೌಲಭ್ಯಗಳಿಂದ ವಂಚಿತರಾಗುವುದಕ್ಕೆ ಪ್ರಮುಖ ಕಾರಣವಾಗಿದೆ
–ಅಶೋಕ ವಾಟ್ಕರ್
ಉಪನ್ಯಾಸಕ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.