ADVERTISEMENT

ಯಶಸ್ಸು ಕಂಡ ಕಬಡ್ಡಿ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 9:55 IST
Last Updated 15 ಏಪ್ರಿಲ್ 2017, 9:55 IST

ಸುರಪುರ:  ಮುದ ನೀಡಿದ ಹೊನಲು–ಬೆಳಕು, ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಕರತಾಡನ, ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ ಆಟಗಾರರು, ಯಾವುದೇ ರಾಷ್ಟ್ರಮಟ್ಟದ ಆಟಗಾರರಿಗೆ ಕಮ್ಮಿ ಇಲ್ಲದಂತೆ ಆಟವಾಡಿದ ಕ್ರೀಡಾಪಟು ಗಳು, ಬೆಳಗಿನ ಜಾವದ ವರೆಗೂ ನಡೆದ ಪಂದ್ಯ, ಅಂತಿಮ ಪಂದ್ಯ ಮುಗಿಯುವ ವರೆಗೂ ಇದ್ದ ಪ್ರೇಕ್ಷಕರು..
ಬುಧವಾರ ರಾತ್ರಿ ನಗರದ ಪ್ರಭು ಕಾಲೇಜು ಮೈದಾನದಲ್ಲಿ ಸಗರನಾಡು ಗೆಳೆಯರ ಬಳಗ ಏರ್ಪಡಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಕಂಡು ಬಂದ ದೃಶ್ಯಗಳು.

ಸಾಮಾನ್ಯವಾಗಿ ಕ್ರಿಕೆಟ್‌ ವೀಕ್ಷಿಸಲು ಹೆಚ್ಚಿನ ಜನ ಸೇರುತ್ತಾರೆ. ಆದರೆ, ಇದಕ್ಕೆ ಅಪವಾದ ಎಂಬಂತೆ ಈ ಪಂದ್ಯಾವಳಿ ನೋಡಲು ದಾಖಲೆ ಸಂಖ್ಯೆಯಲ್ಲಿ ಜನ ಸೇರಿದ್ದರು. ಹೀಗಾಗಿ ಮೊದಲ ಪಂದ್ಯಾ ವಳಿ ಯಶಸ್ಸು ಕಂಡಿತು.ಪಂದ್ಯಾವಳಿ ಉದ್ಘಾಟಿಸಿ ಮಾತ ನಾಡಿದ ಕಾಂಗ್ರೆಸ್ ಯುವ ಮುಖಂಡ ರಾಜಾ ರೂಪಕುಮಾರ ನಾಯಕ, ‘ಗ್ರಾಮೀಣ ಕ್ರೀಡೆಯಾದ ಕಬಡ್ಡಿ ದೇಶಿಯ ಕ್ರೀಡೆಯಾಗಿದೆ. ಕ್ರಿಕೆಟ್ ಆಟಕ್ಕೆ ನೀಡುವಷ್ಟು ಪ್ರೋತ್ಸಾಹ ಕಬಡ್ಡಿಗೂ ನೀಡುವುದು ಅಗತ್ಯ’ ಎಂದು ಹೇಳಿದರು.

‘ಕಬಡ್ಡಿ ಯುವಕರ ನೆಚ್ಚಿನ ಆಟ. ಇತ್ತೀಚೆಗೆ ದೇಶದಲ್ಲಿ ಕಬಡ್ಡಿ ಕ್ರಿಕೆಟ್‌ನಷ್ಟೆ ಜನಪ್ರಿಯತೆ ಗಳಿಸುತ್ತಿದೆ.. ನಾನೊಬ್ಬ ದೇಸಿ ಕ್ರೀಡೆಯ ಅಭಿಮಾನಿ. ಹೀಗಾಗಿ ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡ ಬೇಕು. ನಮ್ಮ ಭಾಗದ ಕಬಡ್ಡಿ ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸು ತ್ತಿದ್ದೇನೆ. ಮುಂದಿನ ವರ್ಷದಿಂದ ಆರ್‌ಕೆಎನ್‌ ಕ್ಲಬ್‌ ವತಿಯಿಂದ ರಾಜ್ಯ ಮಟ್ಟದ ಕಬಡ್ಡಿ ಆಯೋಜಿಸಲಲಾಗುವುದು’ ಎಂದರು.

ADVERTISEMENT

‘ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿ ದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಕಬಡ್ಡಿ ಕ್ರೀಡಾಪಟುಗಳು ಬಂದಿರುವುದು ಸಂತಸ ತಂದಿದೆ. ಆಟಗಾರರು ಘರ್ಷ ಣೆಗೆ ಆಸ್ಪದ ನೀಡದೆ ಕ್ರೀಡಾ ಸ್ಫೂರ್ತಿ ಮೆರೆಯಬೇಕು.  ನಿರ್ಣಾಯಕರು ಪಾರ ದರ್ಶಕ ನಿರ್ಣಯ ನೀಡುವ ಮೂಲಕ ಆಟಗಾರರನ್ನು ಪ್ರೋತ್ಸಾಹಿಸಬೇಕು’ ಎಂದರು.

ನಗರಸಭೆ ಸದಸ್ಯ ಶಿವುಕುಮಾರ ಸಾಹು ಹಳ್ಳದ, ರಾಜಾ ವಿಜಯವರ್ದನ ನಾಯಕ, ರಾಜಾಕುಮಾರ ನಾಯಕ, ರಾಜಾ ಸುಶಾಂತ ನಾಯಕ, ಪಂದ್ಯಾವಳಿ ಸಂಚಾಲಕ ಪ್ರವೀಣ ಡೊಣ್ಣೆಗೇರಾ ಮಾತನಾಡಿದರು.ಮುಂಬೈ, ಗದ್ವಾಲ, ಬೈಲಹೊಂಗಲ. ಮಹಾಲಿಂಗಪುರ, ಹಂದಿಗುಂದ, ಬಾಗಲಕೋಟೆ, ಸಿಂದಗಿ, ರಾಯಚೂರ, ಮರೆಮ್ಮನಹಳ್ಳಿ, ಕೊಳ್ಳೂರ, ಚಿತ್ತಾಪುರ, ಆನೆಹೊಸೂರ ಸೇರಿದಂತೆ ಒಟ್ಟು 16 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.

ಗುರುವಾರ ಬೆಳಗಿನ ವರೆಗೂ ಪಂದ್ಯಗಳು ನಡೆದವು. ದೈಹಿಕ ಶಿಕ್ಷಣ ನಿರ್ದೇಶಕರಾದ ನಿಂಗಣ್ಣ ಪೂಜಾರಿ ದೇವಿಕೆರಿ, ದೇವಿಂದ್ರ ನಾಯಕ, ಮರೆಪ್ಪ ಗೊಂದಳೆ, ಸುಭಾಸ, ರಮೇಶ ಶಹಾಪುರ ಕರ, ಹೊನ್ನಪ್ಪ ತಳವಾರ ನಿರ್ಣಾಯ ಕರಾಗಿ ಕರ್ತವ್ಯ ನಿರ್ವಹಿಸಿದರು

ರೋಚಕತೆ: ಪ್ರತಿ ಪಂದ್ಯಗಳು ಹೋರಾ ಟದಿಂದ ಕೂಡಿದ್ದವು. ಅದರಲ್ಲೂ ಆಂತಿಮ ಪಂದ್ಯ ಪ್ರೇಕ್ಷಕರನ್ನು ತುದಿ ಗಾಲಲ್ಲಿ ನಿಲ್ಲಿಸಿತು. ವಿಜಯಮಾಲೆ ಪ್ರತಿಕ್ಷ ಣಕ್ಕೂ ಅತ್ತಿಂದ ಇತ್ತ ಇತ್ತಿಂದ ಅತ್ತ ಹೊರಳುತ್ತಿತ್ತು. ಮಹಾಲಿಂಗಪುರ ಮತ್ತು ಹಂದಿಗುಂದ ತಂಡಗಳ ನಡುವೆ ನಡೆದ ಅಂತಿಮ ಪಂದ್ಯ ಬಹುದಿನಗಳ ವರೆಗೆ ನೆನಪಲ್ಲಿ ಉಳಿಯುವಂತಿತ್ತು.

ಅಂತಿಮವಾಗಿ ಹಂದಿಗುಂದ ತಂಡ ಮಹಾಲಿಂಗಪುರ ತಂಡವನ್ನು ಕೇವಲ 2 ಅಂಕಗಳಿಂದ ಸೋಲಿಸಿ ಗೆಲುವಿನ ನಗೆ ಬೀರಿತು. ತಾಲ್ಲೂಕಿನ ಕಕ್ಕೇರಾ ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ತಂಡಗಳು ಟ್ರೋಫಿ ಮತ್ತು ನಗದು ಬಹುಮಾನ ಪಡೆದವು.ಮಹಾಲಿಂಗಪುರ ತಂಡದ ಮಲ್ಲಿ ಕಾರ್ಜುನ ಉತ್ತಮ ದಾಳಿಕಾರ ಪ್ರಶಸ್ತಿ, ಹಂದಿಗುಂದ ತಂಡದ ಹಾಲಪ್ಪ ಉತ್ತಮ ಹಿಡಿತಗಾರ ಪ್ರಶಸ್ತಿ ಪಡೆದು ಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.