ADVERTISEMENT

ಸಂಘ ನೋಂದಣಿ ವಿಳಂಬ: ಘೇರಾವ್

ಯರಗೋಳ: ಮೀನುಗಾರಿಕೆ ಇಲಾಖೆಗೆ ಅರ್ಜಿ ಸಲ್ಲಿಸಿ ಐದು ವರ್ಷ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 6:50 IST
Last Updated 13 ಜುಲೈ 2017, 6:50 IST

ಯಾದಗಿರಿ: ಮೀನುಗಾರರ ಸಹಕಾರ ಸಂಘ ನೋಂದಣಿ ಮಾಡುವಲ್ಲಿ ಅಧಿಕಾರಿಗಳು ವಿಳಂಬ ಧೋರಣೆ ಅನುಸರಿತ್ತಿರುವುದನ್ನು ಖಂಡಿಸಿ ಬುಧವಾರ ತಾಲ್ಲೂಕಿನ ಯರಗೋಳ ಗ್ರಾಮದ ಮೀನುಗಾರರು ನೂತನ ಜಿಲ್ಲಾಡಳಿತ ಭವನದಲ್ಲಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

‘ಯರಗೋಳದ ಗಂಗಾಪರಮೇಶ್ವರಿ ಮೀನುಗಾರಿಕೆ ಸಹಕಾರ ಸಂಘವನ್ನು ನೋಂದಣಿ ಮಾಡುವಂತೆ ಮೀನುಗಾರರು ಇಲಾಖೆಗೆ ಅರ್ಜಿ ಸಲ್ಲಿಸಿ ಐದು ವರ್ಷಗಳು ಕಳೆದರೂ ಸಹಾಯಕ ನಿರ್ದೇಶಕ ಮಹೇಶ್‌ ಅವರು ಸಂಘ ನೋಂದಣಿಗೆ ಪೂರಕ ಕೆಲಸ ಮಾಡಿಲ್ಲ. ಲಂಚ ಪಡೆದು ಈಗ ಬೇರೆ ಸಂಘವನ್ನು ನೋಂದಣಿ ಮಾಡಿಸಿದ್ದಾರೆ.

ನೋಂದಣಿ ಆಗಿರುವ ಸಂಘದ ಸದಸ್ಯರಿಗೆ ಮೀನುಗಾರಿಕೆ ಗೊತ್ತಿಲ್ಲ. ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ನೈಜ ಫಲಾನುಭವಿಗಳನ್ನು ಬಿಟ್ಟು ಅಧಿಕಾರಿಗಳು ಲಂಚದ ಆಮಿಷಕ್ಕೆ ಬಲಿಯಾಗಿ ನಮಗೆ ಅನ್ಯಾಯ ಮಾಡಿದ್ದಾರೆ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ADVERTISEMENT

ಕಚೇರಿಯಲ್ಲೇ ಅಧಿಕಾರಿಯನ್ನು ಘೇರಾವ್ ಹಾಕಿದ ಮೀನುಗಾರರು ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾಕಾರರ ಪ್ರಶ್ನೆಗೆ ಮೀನುಗಾರಿಕೆ ಸಹಾಯಕ ನಿರ್ದೇಶಕ ಮಹೇಶ್ ತಡಬಡಾಯಿಸಿದರು.

‘ಸಂಘ ನೋಂದಣಿ ಮಾಡುವಲ್ಲಿ ಆಗಿರುವ ವಿಳಂಬದ್ಲಲಿ ನನ್ನ ಪಾತ್ರ ಇಲ್ಲ. ಈಗಾಗಲೇ ಅಸ್ತಿತ್ವದಲ್ಲಿದ್ದ ಸಂಘದಲ್ಲಿ ನಿಮ್ಮ ಸದಸ್ಯತ್ವ ಇದೆ. ಆ ಸಂಘವನ್ನು ರದ್ದುಪಡಿಸದ ಹೊರತು ನೂತನ ಸಂಘ ನೋಂದಣಿ ಸಾಧ್ಯವಿಲ್ಲ. ಈ ಕುರಿತು ಇಲಾಖೆಯಲ್ಲಿ ವಿಚಾರಿಸಿ ವರದಿ ಪಡೆಯುತ್ತೇನೆ.

ನಂತರ ಸಂಘ ನೋಂದಣಿ ಮಾಡಲು ಶಿಫಾರಸು ಮಾಡಲಾಗುವುದು’ ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕ ಮಹೇಶ್ ತಿಳಿಸಿದರು. ಯರಗೋಳ ಗ್ರಾಮದ ಶರಣಪ್ಪ, ಚಂದಪ್ಪ, ಕಾಂತಪ್ಪ, ಬಿಡ್ಡಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.