ADVERTISEMENT

ರಸಪ್ರಶ್ನೆಯಲ್ಲಿದೆ ಅರಿವಿನ ಹರಿವು

​ಪ್ರಜಾವಾಣಿ ವಾರ್ತೆ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST
ರಸಪ್ರಶ್ನೆಯಲ್ಲಿದೆ ಅರಿವಿನ ಹರಿವು
ರಸಪ್ರಶ್ನೆಯಲ್ಲಿದೆ ಅರಿವಿನ ಹರಿವು   

ಕಳೆದ ವರ್ಷ ಹತ್ತು ಕಡೆಗಳಲ್ಲಿ ಪ್ರಜಾವಾಣಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿತ್ತು. ರಾಜ್ಯದ ವಿವಿಧ ಕಡೆಗಳಿಂದ ಸುಮಾರು ಹತ್ತು ಸಾವಿರ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ವರ್ಷ ವರ್ಷಕ್ಕೂ ಮಕ್ಕಳಲ್ಲಿ ಪೈಪೋಟಿ ಜಾಸ್ತಿಯಾಗುತ್ತಿದೆ. ಆಸಕ್ತಿ ಇರುವ ಕಾರಣಕ್ಕೆ ಹೆಚ್ಚೆಚ್ಚು ಮಂದಿ ಭಾಗವಹಿಸುತ್ತಾರೆ. ಪ್ರತಿ ವಿಷಯವನ್ನೂ ಗ್ರಹಿಸಿರುತ್ತಾರೆ. ಸಮಯಕ್ಕೆ ತಕ್ಕಂತೆ ಸ್ಪಂದಿಸುತ್ತಾರೆ. ಮಕ್ಕಳಲ್ಲಿನ ಈ ವಿಶ್ಲೇಷಣಾತ್ಮಕ ಕೌಶಲವನ್ನು ಒರೆಗೆ ಹಚ್ಚುವ ಕೆಲಸ ‘ಪ್ರಜಾವಾಣಿ’ಯಿಂದ ನಡೆಯುತ್ತಿದೆ. ಮಕ್ಕಳ ಪಾಲ್ಗೊಳ್ಳುವಿಕೆ ಪ್ರತಿವರ್ಷವೂ ಹೆಚ್ಚುತ್ತಿರುವುದು ಈ ಸ್ಪರ್ಧೆ ಜನಪ್ರಿಯವಾಗುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಇಂದಿನ ಮಕ್ಕಳು ಅಂತರ್ಜಾಲ ಮತ್ತು ತಂತ್ರಜ್ಞಾನದ ಬಳಕೆಯಲ್ಲಿ ಒಂದು ಕೈ ಮುಂದಿದ್ದಾರೆ. ದೃಶ್ಯ ಮತ್ತು ಶ್ರಾವ್ಯ ಮಾಧ್ಯಮಗಳಿಂದ ಅವರ ಗ್ರಹಿಕೆಯ ಶಕ್ತಿ ಹೆಚ್ಚಿದೆ. ಆದರೆ ಸಕಾಲಕ್ಕೆ ಅವು ಅಭಿವ್ಯಕ್ತಿಯಾಗುತ್ತಿದೆಯೇ? ಸಕಾಲಕ್ಕೆ ಆ ಮಾಹಿತಿ ಅವರ ನೆನಪಿನ ಕೋಶದಿಂದ ಆಚೆ ಬರುತ್ತದೆಯೇ ಎನ್ನುವುದನ್ನು ಪರಿಶೀಲಿಸುವ ಮಾರ್ಗವೇ ರಸಪ್ರಶ್ನೆಯಾಗಿದೆ. ಇದಕ್ಕಾಗಿ ಹಲವಾರು ಆ್ಯಪ್‌ಗಳು ಲಭ್ಯ ಇವೆ. ಪ್ರಜಾವಾಣಿಯೂ ತನ್ನ ವೆಬ್‌ಸೈಟಿನಲ್ಲಿ ರಸಪ್ರಶ್ನೆಯನ್ನು ನೀಡುತ್ತಿದೆ. ಓದು, ಗ್ರಹಿಕೆ ಮತ್ತು ಸಕಾಲಿಕ ಸ್ಪಂದನೆ ಇವು ಮಕ್ಕಳಲ್ಲಿ ಪ್ರತಿಸಲವೂ ಹೆಚ್ಚುತ್ತಿದೆ.

ಪ್ರಜಾವಾಣಿಯ ಓದುಗರು, ಓದುವ ಮಕ್ಕಳು ಬಲುಬೇಗನೆ ನಮ್ಮಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಬಲ್ಲರು. ದೇಶ ಸುತ್ತಬೇಕು. ಕೋಶ ಓದಬೇಕು – ಎನ್ನುವಂತೆ ಎರಡನ್ನೂ ಮಾಡಿಸುವಂತೆ ರಸಪ್ರಶ್ನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ಸಲವೂ ಸ್ಥಳೀಯ ಮಾಹಿತಿ ಇದ್ದಲ್ಲಿ  ಅಂಕಗಳಿಕೆ ಹೆಚ್ಚಾಗುತ್ತದೆ. ನಿಮ್ಮ ಸುತ್ತಲಿನ ಪ್ರಪಂಚ, ನಿಮ್ಮೂರು, ನಿಮ್ಮ ಜಿಲ್ಲೆಯ ಬಗೆಗಿನ ಮಾಹಿತಿ ಎಷ್ಟರ ಮಟ್ಟಿಗೆ ನಿಮ್ಮಲ್ಲಿದೆ ಎನ್ನುವುದನ್ನು ಅರಿಯಲು ಈ ಸುತ್ತನ್ನು ಆಯೋಜಿಸಲಾಗಿದೆ. ಸರಳ ಪ್ರಶ್ನೆಗಳಿಂದ ಮಕ್ಕಳ ಆತ್ಮವಿಶ್ವಾಸವೂ ಹೆಚ್ಚುತ್ತದೆ. ಈ ಸುತ್ತಿನಲ್ಲಿ ಆ ಜಿಲ್ಲೆಯಲ್ಲಿರುವ ಪ್ರವಾಸಿ ತಾಣ, ಪ್ರಸಿದ್ಧ ಸ್ಥಳ, ಸಾಧಕರು, ಕವಿಗಳು, ಲೇಖಕರು ಇವರಿಗೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ.

ADVERTISEMENT

ಕಳೆದ ಬಾರಿ ರಾಯಚೂರಿನ ಸರ್ಕಾರಿ ಶಾಲೆಯ ಮಕ್ಕಳು 3ನೇ ಸ್ಥಾನ ಪಡೆದಿದ್ದರು. ಅದು ನಿಜಕ್ಕೂ ಖುಷಿ ನೀಡಿತ್ತು. ನಮ್ಮ ಸಂಸ್ಥೆಯ ವತಿಯಿಂದ ‘ಕ್ವಿಜ್ ಶಾಲಾ’ ಎಂಬ ಕಾರ್ಯಕ್ರಮವನ್ನು ನಡೆಸುತ್ತೇವೆ. ಅದರಲ್ಲಿ ಎಷ್ಟೋ ಬಾರಿ ಸರ್ಕಾರಿ ಶಾಲೆಯ ಮಕ್ಕಳೇ ಹೆಚ್ಚು ಹೆಚ್ಚು ಭಾಗವಹಿಸುವ ಆಸಕ್ತಿ ತೋರುತ್ತಾರೆ. ಅವರಲ್ಲಿ ಕುತೂಹಲವಿದೆ. ತಿಳಿದುಕೊಳ್ಳಬೇಕು ಎನ್ನುವ ಹಂಬಲವಿದೆ. ಆದರೆ ಅವರಿಗೆ ಸರಿಯಾದ ವೇದಿಕೆ ಸಿಗಬೇಕು ಎನ್ನುವುದು ನನ್ನ ಭಾವನೆ. ಇದು ಸ್ಫರ್ಧಾತ್ಮಕ ಜಗತ್ತು. ಸರ್ಕಾರಿ ಶಾಲೆ, ಖಾಸಗಿ ಶಾಲೆ ಎಂಬುದು ಗಣನೆಗೆ ಬರುವುದಿಲ್ಲ. ಅವರು ಹೇಗೆ ತಯಾರಿ ನಡೆಸುತ್ತಾರೆ ಎಂಬುದಷ್ಟೇ ಇಲ್ಲಿ ಮುಖ್ಯವಾಗುತ್ತದೆ.

ಎಷ್ಟೋ ಜಿಲ್ಲೆಗಳಲ್ಲಿ ಮಕ್ಕಳು 3ರಿಂದ 4 ಗಂಟೆ ಬಸ್ಸಿನಲ್ಲಿ ಪ್ರಯಾಣ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಲು ಬರುತ್ತಾರೆ. ಅವರಲ್ಲಿ ಭಾಗವಹಿಸುವ ಖುಷಿ, ಉತ್ಸಾಹ ನಿಜಕ್ಕೂ ಹೆಮ್ಮೆ ಎನ್ನಿಸುತ್ತದೆ. ಅಂತಹ ಮಕ್ಕಳಲ್ಲಿ ನಮಗೆ ತಿಳಿಯದ ಇನ್ನೂ ಎಷ್ಟೋ ವಿಷಯಗಳಿವೆ, ಅದನ್ನು ನಾನು ತಿಳಿದುಕೊಳ್ಳಬೇಕು ಎನ್ನುವ ಆಸೆ ಅವರ ಕಂಗಳಲ್ಲಿ ಕಾಣಿಸುತ್ತದೆ. ಅದು ನನಗೆ ಹೆಚ್ಚು ಖುಷಿ ಕೊಡುತ್ತದೆ.
***

‘ವಾಲ್‌ನಟ್‌ ನಾಲೆಜ್‌ ಸಲ್ಯೂಷನ್’ ಸಂಸ್ಥೆ ಕಳೆದ ಎರಡು ತಿಂಗಳಿಂದ ಈ ಬಾರಿಯ ರಸಪ್ರಶ್ನೆ ಸ್ಪರ್ಧೆಗೆ ತಯಾರಿ ನಡೆಸುತ್ತಿದೆ. ಸಾಹಿತ್ಯ, ಕ್ರೀಡೆ, ಸಿನೆಮಾ, ತಂತ್ರಜ್ಞಾನ, ರಾಜಕೀಯ, ಇತಿಹಾಸ – ಹೀಗೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕಲೆಹಾಕಿದೆ. ಗೆಲುವಿನ ನಿರೀಕ್ಷೆ ನಿಮ್ಮದಾಗಿದ್ದಲ್ಲಿ ನಿಮ್ಮ ಸುತ್ತಲಿನ ಆಗುಹೋಗುಗಳನ್ನು ಗಮನಿಸಿ. ಸದಾ ಎಚ್ಚರವಾಗಿರಿ, ಕೂಡಲೇ ಸ್ಪಂದಿಸಿ... ಉತ್ತರಗಳು ಬೇಗ ಹೊಳೆದಷ್ಟೂ ಗೆಲುವು ನಿಮ್ಮ ಕಣ್ಣಲ್ಲಿ ಮಿಂಚುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.