ADVERTISEMENT

ಹ್ಯಾಟ್ರಿಕ್‌ ಗೆಲುವೋ? ಅಚ್ಚರಿ ಫಲಿತಾಂಶವೋ?

ಪ್ರವೀಣ ಕುಮಾರ್ ಪಿ.ವಿ.
Published 27 ಮಾರ್ಚ್ 2018, 20:18 IST
Last Updated 27 ಮಾರ್ಚ್ 2018, 20:18 IST
ಹ್ಯಾಟ್ರಿಕ್‌ ಗೆಲುವೋ? ಅಚ್ಚರಿ ಫಲಿತಾಂಶವೋ?
ಹ್ಯಾಟ್ರಿಕ್‌ ಗೆಲುವೋ? ಅಚ್ಚರಿ ಫಲಿತಾಂಶವೋ?   

ಬೆಂಗಳೂರು: ರಾಜಧಾನಿಯ ಹೃದಯಭಾಗದಲ್ಲೇ ಇರುವ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ವಿದ್ಯಾವಂತ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರತಿ ಚುನಾವಣೆಯಲ್ಲೂ ಜಾಣ್ಮೆಯ ಆಯ್ಕೆ ಮೂಲಕ ಗಮನ ಸೆಳೆದಿರುವ ಇಲ್ಲಿನ ಮತದಾರರು ಅಂತಹ ಇನ್ನೊಂದು ಜಾಣತನದ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

ಬಿಜೆಪಿಯ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಇಲ್ಲಿನ ಶಾಸಕ. 2004ರಲ್ಲಿ ಕಾಂಗ್ರೆಸ್‌ನ ಎಂ.ಆರ್‌.ಸೀತಾರಾಂ ವಿರುದ್ಧ ಸೋತಿದ್ದ ಅವರು ಪುನರ್ವಿಂಗಡಣೆ ಬಳಿಕದ ಎರಡೂ ಚುನಾವಣೆಗಳಲ್ಲೂ (2008 ಹಾಗೂ 2013ರಲ್ಲಿ) ಗೆಲುವಿನ ನಗೆ ಬೀರಿದ್ದರು. ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಅವರಿಗೆ ಈ ಬಾರಿಯೂ ಬಿಜೆಪಿಯಿಂದ ಟಿಕೆಟ್‌ ಸಿಗುವ ಸಾಧ್ಯತೆ ಹೆಚ್ಚು.

2013ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ 21,066 ಮತಗಳ ಅಂತರದಿಂದ ಸೋಲು ಕಂಡಿದ್ದ ನಿವೃತ್ತ ಪೊಲೀಸ್‌ ಅಧಿಕಾರಿ ಬಿ.ಕೆ.ಶಿವರಾಂ ಈ ಬಾರಿಯೂ ಇಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ. ಸೋತ ಬಳಿಕವೂ ಸ್ಥಳೀಯರ ಸಂಪರ್ಕ ಕಡಿದುಕೊಳ್ಳದೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಕಾಡುಮಲ್ಲೇಶ್ವರ ಗೆಳೆಯರ ಬಳಗವನ್ನು ಕಟ್ಟಿಕೊಂಡು ‘ಹುಣ್ಣಿಮೆ ಹಾಡು’ ವಿನಂತಹ ಯಶಸ್ವಿ ಕಾರ್ಯಕ್ರಮಗಳನ್ನುಸಂಘಟಿಸುತ್ತಿರುವ ಅವರು ಕ್ಷೇತ್ರದ ಜನರಿಗೂ ಚಿರಪರಿಚಿತರು. ಕಳೆದ ವರ್ಷ ಈ ಸರಣಿಯ ನೂರನೇ ಕಾರ್ಯಕ್ರಮವನ್ನೂ ವಿನೂತನ ರೀತಿಯಲ್ಲಿ ಆಚರಿಸುವ ಮೂಲಕ ಗಮನ ಸೆಳೆದಿದ್ದರು.

ADVERTISEMENT

1957ರಿಂದ 1999ರವರೆಗೆ ಇಲ್ಲಿ ಒಮ್ಮೆಯೂ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದಿರಲಿಲ್ಲ. 1999ರಲ್ಲಿ ಮೊದಲ ಬಾರಿ ಎಂ.ಆರ್‌.ಸೀತಾರಾಂ ಗೆದ್ದಿದ್ದರು. ಸತತ ಎರಡು ಬಾರಿ ಇಲ್ಲಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಅವರು 2008ರಲ್ಲಿ ಅಶ್ವತ್ಥನಾರಾಯಣ್‌ ವಿರುದ್ಧ ಸೋಲು ಕಂಡಿದ್ದರು. ‘ನಾನು ಈ ಬಾರಿ ಇಲ್ಲಿನ ಟಿಕೆಟ್‌ ಆಕಾಂಕ್ಷಿ ಅಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕೆಂಗಲ್‌ ಶ್ರೀಪಾದ ರೇಣು ಅವರೂ ಇಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ. ಅವರೂ ಮತದಾರರನ್ನು ಒಲಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಚಿತ್ರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಕೂಡಾ ಇಲ್ಲಿ ಕಣಕ್ಕಿಳಿಸುವ ಬಯಕೆ ಹೊಂದಿದ್ದಾರೆ.

ಇಲ್ಲಿ 1973ರವರೆಗೂ ಕಮ್ಯುನಿಸ್ಟ್‌ ಪಕ್ಷಗಳ ಅಭ್ಯರ್ಥಿಗಳು ಗೆದ್ದಿದ್ದರು. ತದನಂತರ ಜನತಾ ಪಕ್ಷ ಹಾಗೂ ಜನತಾದಳದ ಪ್ರಾಬಲ್ಯವಿತ್ತು. ಜನತಾದಳ ಇಬ್ಭಾಗವಾದ ಬಳಿಕ ಪಕ್ಷವು ಇಲ್ಲಿ ಮೂಲೆಗುಂಪಾಯಿತು. ಜೆಡಿಎಸ್‌  ಕ್ಷೇತ್ರ ಘಟಕದ ಅಧ್ಯಕ್ಷ ಅಶೋಕ್‌ ಕುಮಾರ್‌, ಬೆಂಗಳೂರು ನಗರ ಜೆಡಿಎಸ್‌ ಕಾರ್ಯದರ್ಶಿ ವೆಂಕಟೇಶ್‌ ಗೌಡ ಹಾಗೂ ನಗರ ಜಿಲ್ಲಾ ವಕ್ತಾರ ಕೃಷ್ಣ ಕುಮಾರ್‌ ಇಲ್ಲಿ ಪಕ್ಷದ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಇಲ್ಲಿ ಒಕ್ಕಲಿಗ ಹಾಗೂ ಬ್ರಾಹ್ಮಣ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಕ್ಕಲಿಗರಾಗಿರುವ ಅಶೋಕ್‌ ಕುಮಾರ್‌ ಅಥವಾ ವೆಂಕಟೇಶ ಗೌಡ ಅವರಿಗೆ ಜೆಡಿಎಸ್‌ ಟಿಕೆಟ್‌ ನೀಡಿದರೆ, ಅವರು ಅಶ್ವತ್ಥನಾರಾಯಣ್‌ ಅವರ ಮತ ಬುಟ್ಟಿಯಿಂದ ಒಂದಷ್ಟು ಮತಗಳನ್ನು ಕಿತ್ತುಕೊಳ್ಳುವ ಸಾಧ್ಯತೆ ಇದೆ.

ಮಲ್ಲೇಶ್ವರ ವಿಪ್ರ ಸಂಘದ ಅಧ್ಯಕ್ಷ ಪ್ರಕಾಶ್‌ ಅಯ್ಯಂಗಾರ್‌ ಕೂಡಾ ಬಿಜೆಪಿಯಿಂದ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ. ಬ್ರಾಹ್ಮಣರಿಗೆ ಟಿಕೆಟ್‌ ನೀಡುವಂತೆ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರದ ಮೊರೆ ಹೋಗಿದ್ದಾರೆ. ಬಿಜೆಪಿ ಬ್ರಾಹ್ಮಣರಿಗೆ ಟಿಕೆಟ್‌ ನಿರಾಕರಿಸಿದರೆ ಅದರ ಲಾಭ ಪಡೆಯುವ ಅವಕಾಶಗಳ ಬಗ್ಗೆ ಕಾಂಗ್ರೆಸ್‌ ವರಿಷ್ಠರು ಲೆಕ್ಕಾಚಾರ ಹಾಕುತ್ತಿದ್ದಾರೆ.

ವ್ಯವಸ್ಥಿತವಾಗಿ ಅಭಿವೃದ್ಧಿ ಹೊಂದಿದ ಬಡಾವಣೆಗಳನ್ನು ಒಳಗೊಂಡ ಇಲ್ಲಿನ ವಾರ್ಡ್‌ಗಳು ಈ ಹಿಂದೆಯೇ ಸಾಕಷ್ಟು ಅಭಿವೃದ್ಧಿ ಕಂಡಿದ್ದವು. ಕುಡಿಯುವ ನೀರು ಪೂರೈಕೆ ವ್ಯವಸ್ಥೆಯ ಸೋರಿಕೆ ತಡೆಯುವಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸ ರಾಶಿ ಹಾಕುವ ಪರಿಪಾಠ ಕೈಬಿಡುವ ವಿಚಾರದಲ್ಲಿ ಈ ಕ್ಷೇತ್ರವು ಮುಂಚೂಣಿಯಲ್ಲಿದೆ.

ಇಲ್ಲಿನ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಟ್ಯೂಷನ್‌ ಒದಗಿಸುವ ಮೂಲಕ ಫಲಿತಾಂಶ ಸುಧಾರಣೆಗೆ ಕ್ರಮ ವಹಿಸಲಾಗುತ್ತಿದೆ. ಬೇರೆ ಕ್ಷೇತ್ರಗಳಿಗೆ ಹೋಲಿಸಿದರೆ ಇಲ್ಲಿ ಕ್ರೀಡಾ ಮೂಲಸೌಕರ್ಯವೂ ಉತ್ತಮವಾಗಿದೆ. ಸುಸಜ್ಜಿತ ಬ್ಯಾಸ್ಕೆಟ್‌ ಬಾಲ್‌ ಒಳಾಂಗಣ ಕ್ರೀಡಾಂಗಣ ಹಾಗೂ ವಾಲಿಬಾಲ್‌ ಒಳಾಂಗಣ ಕ್ರೀಡಾಂಗಣಗಳು ಇತ್ತೀಚೆಗಷ್ಟೇ ಲೋಕಾರ್ಪಣೆಗೊಂಡಿದೆ.

ಇವುಗಳ ಹಿಂದೆ ಶಾಸಕರ ಪರಿಶ್ರಮವೂ ಅಡಗಿದೆ.ಪ್ರತಿವರ್ಷ ಉದ್ಯೋಗಾವಕಾಶಗಳ ಮಾಹಿತಿ ಒದಗಿಸುವ ‘ಯೂತ್‌ ಎಡ್ಜ್‌’ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಅಶ್ವತ್ಥನಾರಾಯಣ್‌ ಅವರು ಯುವಮನಸುಗಳಿಗೂ ಹತ್ತಿರವಾಗಲು ಪ್ರಯತ್ನಿಸುತ್ತಿದ್ದಾರೆ. ಎಳೆಯರಿಗಾಗಿ ಬೇಸಿಗೆ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಸ್ಥಳೀಯರ ಅಹವಾಲುಗಳನ್ನು ಆಲಿಸಲು ‘ಮಲ್ಲೇಶ್ವರ ಸಹಾಯ’ ಎಂಬ ಆ್ಯಪ್‌ ಬಳಸುತ್ತಿದ್ದಾರೆ.

ಇಲ್ಲಿನ ಕೆಲವು ವಾರ್ಡ್‌ಗಳಲ್ಲಿ ಕೋತಿಗಳ ಹಾಗೂ ಬೀದಿನಾಯಿಗಳ ಹಾವಳಿ ಇದೆ. ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚುತ್ತಿರುವ ಬಗ್ಗೆ ಇಲ್ಲಿನ ನಿವಾಸಿಗಳಿಗೆ ತಲೆನೋವು ತಂದೊಡ್ಡಿದೆ. ಬೀದಿಬದಿ ವ್ಯಾಪಾರಿಗಳು, ಅಂಗಡಿ ಮಾಲೀಕರು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದೂ ಸ್ಥಳೀಯರು ದೂರುತ್ತಾರೆ. ಕಿರಿದಾದ ರಸ್ತೆಗಳಲ್ಲಿ ವಾಹನ ದಟ್ಟಣೆ ಸಮಸ್ಯೆ ಪದೇ ಪದೇ ಕಾಣಿಸಿಕೊಳ್ಳುತ್ತಿದೆ.

ನಿರ್ದಿಷ್ಟ ಪಕ್ಷಕ್ಕೆ ಜೋತುಬೀಳದೇ ಅಭ್ಯರ್ಥಿಯ ಆಯ್ಕೆಯಲ್ಲಿ ಜಾಣ್ಮೆಯನ್ನು ಪ್ರದರ್ಶಿಸುತ್ತಾ ಬಂದಿರುವ ಇಲ್ಲಿನ ಮತದಾರರು ಯಾವುದೇ ಅಭ್ಯರ್ಥಿಯನ್ನು ಸತತ ಮೂರನೇ ಸಲ ಗೆಲ್ಲಿಸಿದ ಉದಾಹರಣೆ ಇಲ್ಲ.ಈ ಬಾರಿ ಇದೇ ಪ್ರವೃತ್ತಿ ಮುಂದುವರಿಯುತ್ತದೋ ಅಥವಾ ಅಶ್ವತ್ಥನಾರಾಯಣ್‌ ಅವರು ಈ ಪರಂಪರೆಯನ್ನು ಮುರಿದು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುತ್ತಾರೋ ಎಂಬುದನ್ನು ಕಾದುನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.