ADVERTISEMENT

ಕಥೆಯೇ ಬಂಡವಾಳ ಎನ್ನುವ ‘ಅರಣ್ಯಕಾಂಡ’

​ಪ್ರಜಾವಾಣಿ ವಾರ್ತೆ
Published 24 ಮೇ 2018, 19:30 IST
Last Updated 24 ಮೇ 2018, 19:30 IST
ಅರ್ಚನಾ, ಅಮರ್
ಅರ್ಚನಾ, ಅಮರ್   

‘ನಿಧಿ ಹುಡುಕುವ ಕಥೆ ಇರುವ ಸಿನಿಮಾ ಕನ್ನಡದ ಹಿರಿತೆರೆಯ ಮೇಲೆ ಕಾಣಿಸಿಕೊಂಡು ಸರಿಸುಮಾರು ಒಂಬತ್ತು ವರ್ಷಗಳೇ ಆಗಿಹೋಗಿವೆ. ಹಾಗಾಗಿ, ಈಗ ಆ ಕಥಾವಸ್ತು ಇರುವ ಒಂದು ಸಿನಿಮಾ ಮಾಡಿದರೆ ವೀಕ್ಷಕರಿಗೆ ಇಷ್ಟವಾಗಬಹುದು...’

ಇದು ನಿರ್ದೇಶಕ ಎಸ್. ರಘುನಂದನ್ ಅವರ ಮನಸ್ಸಿನಲ್ಲಿ ಇದ್ದ ಆಲೋಚನೆ. ಈ ಆಲೋಚನೆಯನ್ನು ಅವರು ನಿರ್ಮಾಪಕ ಅನಿಲ್ ಬ್ರಹ್ಮಾವರ್ ಬಳಿ ಹಂಚಿಕೊಂಡು, ‘ಅರಣ್ಯಕಾಂಡ’ ಎನ್ನುವ ಸಿನಿಮಾ ಮಾಡಿದ್ದಾರೆ. ಸಿನಿಮಾದ ಹಾಡುಗಳ ಸಿ.ಡಿ. ಬಿಡುಗಡೆ ಮಾಡಿ, ಚಿತ್ರದ ಬಗ್ಗೆ ಕೆಲವು ಮಾಹಿತಿ ನೀಡಲು ರಘುನಂದನ್ ಅವರು ಸುದ್ದಿಗಾರರನ್ನು ಆಹ್ವಾನಿಸಿದ್ದರು.

‘ಈ ಚಿತ್ರದಲ್ಲಿ ಮೂರು ಹಾಡುಗಳು ಇವೆ. ಪುರಂದರ ದಾಸರು ರಚಿಸಿದ ದಾರಿ ಯಾವುದಯ್ಯ ವೈಕುಂಠಕೆ ಹಾಡನ್ನು ರಾಕ್ ಫ್ಯೂಷನ್ ರೂಪದಲ್ಲಿ ಪ್ರಸ್ತುತಪಡಿಸಿದ್ದೇವೆ. ಹಾಗೆಯೇ ಇದೇ ಹಾಡನ್ನು ಇನ್ಸ್ಟ್ರುಮೆಂಟಲ್‌ ರೂಪದಲ್ಲಿ ಕೂಡ ಪ್ರಸ್ತುತಪಡಿಸಿದ್ದೇವೆ’ ಎನ್ನುತ್ತ ಮಾತು ಆರಂಭಿಸಿದರು ರಘುನಂದನ್.

ADVERTISEMENT

ಸಿನಿಮಾದ ಕಥೆ ಇರುವುದು ಒಂದು ನಿಧಿಯ ಹುಡುಕಾಟದಲ್ಲಿ. ಚಿತ್ರದ ಕಥಾನಾಯಕ ಒಬ್ಬ ಸಾಮಾನ್ಯ ಕಳ್ಳ. ಅವನಿಗೆ ಕಾಡಿನಲ್ಲಿ ನಿಧಿ ಇರುವ ಬಗ್ಗೆ ಮಾಹಿತಿ ಸಿಗುತ್ತದೆ. ಚಿತ್ರದ ನಾಯಕಿ ಪತ್ರಕರ್ತೆ. ಆಕೆ ನಾಯಕನಿಗೆ ನಿಧಿ ಹುಡುಕಲು ಸಹಾಯ ಮಾಡುತ್ತಾಳೆ. ಈ ಕೆಲಸದಲ್ಲಿ ಒಬ್ಬ ಪೊಲೀಸ್ ಕೂಡ ನೆರವಾಗುತ್ತಾನೆ. ಕೊನೆಯಲ್ಲಿ ನಿಧಿ ಸಿಗುತ್ತದೆಯೇ ಎಂಬುದು ಚಿತ್ರದ ಕಥೆ ಎಂದರು ರಘುನಂದನ್.

ಈ ಚಿತ್ರಕ್ಕಾಗಿ ಉಡುಪಿ ಜಿಲ್ಲೆಯ ಹೆಬ್ರಿ, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ಚಿತ್ರೀಕರಣ ನಡೆದಿದೆ. ಅರಣ್ಯದಲ್ಲಿ ನಡೆಯುವ ‘ಸ್ಕ್ಯಾಂಡಲ್‌’ನ (ಕಾಂಡ) ಕಥೆ ಇದಾಗಿರುವ ಕಾರಣ ನಿರ್ದೇಶಕರು ಇದಕ್ಕೆ ‘ಅರಣ್ಯಕಾಂಡ’ ಎನ್ನುವ ಹೆಸರು ಇಟ್ಟಿದ್ದಾರೆ.

‘ಹೇಮಂತ್ ಜೋಯಿಸ್ ಸಂಗೀತ ಈ ಚಿತ್ರಕ್ಕಿದೆ. ಹಾಡುಗಳು ಚೆನ್ನಾಗಿ ಮೂಡಿಬಂದಿವೆ’ ಎಂದು ಮೆಚ್ಚುಗೆ ಸೂಚಿಸಿದರು ಲಹರಿ ವೇಲು.

ನಿರ್ಮಾಪಕ ಅನಿಲ್ ಬ್ರಹ್ಮಾವರ್ ಅವರು ಚಿತ್ರದ ಕಥೆ ಕೇಳಿ ಥ್ರಿಲ್ ಆಗಿದ್ದರಂತೆ. ‘ನಾನು ಈ ಚಿತ್ರ ನಿರ್ಮಾಣ ಮಾಡಬೇಕು ಅಂದುಕೊಂಡಿರಲಿಲ್ಲ. ಆದರೆ ನನ್ನ ಹೆಂಡತಿ, ಈ ಚಿತ್ರದ ನಿರ್ಮಾಣ ನಾನೇ ಮಾಡಬೇಕು ಎಂದು ಒತ್ತಾಯಿಸಿದಳು. ಚಿತ್ರ ನಿರ್ಮಾಣಕ್ಕೆ ಅವಳೇ ಪ್ರೇರಣೆ’ ಎಂದರು ಅನಿಲ್. ಅವರ ಪತ್ನಿ ಲಕ್ಷ್ಮಿ ಅವರಿಗೆ ನಟಿ ಆಗುವ ಆಸೆ ಇತ್ತಂತೆ. ಆದರೆ ಅದು ಈಡೇರಲಿಲ್ಲ. ಹಾಗಾಗಿ, ಪತಿ ಸಿನಿಮಾ ನಿರ್ಮಾಣ ಮಾಡಲಿ ಎಂದು ಒತ್ತಾಯಿಸಿದರಂತೆ.

ಚಿತ್ರದ ನಾಯಕಿಯ ಹೆಸರು ಅರ್ಚನಾ ಎಂ. ಕೊಟ್ಟಿಗೆ. ‘ನನಗೆ ಈ ಚಿತ್ರದ ನಾಯಕಿಯ ಪಾತ್ರ ಕೊಡುತ್ತಾರಂತೆ ಎಂದು ಕೇಳಿದಾಗ ನಾನು ಶಾಕ್‌ ಆಗಿದ್ದೆ. ಆಗ ನಾನು ತುಂಬ ದಪ್ಪ ಇದ್ದೆ. ಈ ಸಿನಿಮಾಕ್ಕಾಗಿಯೇ ನಾನು ಎಂಟು ಕೆ.ಜಿ. ತೂಕ ಇಳಿಸಿಕೊಂಡಿದ್ದೇನೆ’ ಎಂದರು ಅರ್ಚನಾ.

ನಾಯಕ ನಟ ಅಮರ್ ಹವ್ಯಾಸಿ ರಂಗಭೂಮಿ ಕಲಾವಿದ. ಪ್ರಶಾಂತ್ ಸಿದ್ದಿ ಅವರ ತಂಡದ ಜೊತೆ ಕೆಲಸ ಮಾಡಿದ್ದಾರೆ. ‘ಸಿನಿಮಾಗಳಲ್ಲಿ ಕಥೆಯೇ ಇರುವುದಿಲ್ಲ ಎಂಬ ಮಾತುಗಳನ್ನು ನಾನು ಸಾಕಷ್ಟು ಬಾರಿ ಕೇಳಿದ್ದೆ. ಹಾಗಾಗಿ ಕಥೆಯನ್ನೇ ಇಟ್ಟುಕೊಂಡು ಸಿನಿಮಾ ಮಾಡಲು ಹೊರಟಿದ್ದೇನೆ’ ಎಂದು ಕೊನೆಯಲ್ಲಿ ಒಂದು ಮಾತು ಸೇರಿಸಿದರು ರಘುನಂದನ್. ಜೂನ್‌ ಕೊನೆಯ ವಾರದಲ್ಲಿ ಅಥವಾ ಜುಲೈ ಮೊದಲ ವಾರದಲ್ಲಿ ಚಿತ್ರ ಬಿಡುಗಡೆ ಮಾಡಬೇಕು ಎಂಬುದು ತಂಡದ ಆಲೋಚನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.