ADVERTISEMENT

ಕನ್ನಡ ಚಿತ್ರರಂಗದ ಹಿತಾಸಕ್ತಿ ಕಾಪಾಡಲು ಬದ್ಧ

ಎಚ್‌.ಡಿ. ಕುಮಾರಸ್ವಾಮಿ ಭರವಸೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 10:30 IST
Last Updated 24 ಅಕ್ಟೋಬರ್ 2016, 10:30 IST
ಕನ್ನಡ ಚಿತ್ರರಂಗದ ಹಿತಾಸಕ್ತಿ ಕಾಪಾಡಲು ಬದ್ಧ
ಕನ್ನಡ ಚಿತ್ರರಂಗದ ಹಿತಾಸಕ್ತಿ ಕಾಪಾಡಲು ಬದ್ಧ   

ಬೆಂಗಳೂರು: ‘ಕನ್ನಡ ಚಿತ್ರರಂಗದಲ್ಲಿನ ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ಹೋರಾಟದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಬೆಂಬಲಕ್ಕೆ ನಿಲ್ಲುತ್ತೇನೆ. ಕನ್ನಡ ಚಿತ್ರರಂಗದ ಹಿತಾಸಕ್ತಿಗೆ ನಾನು ಬದ್ಧನಾಗಿದ್ದೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಸೋಮವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಕನ್ನಡ ಚಲನಚಿತ್ರರಂಗದ ಸಮಸ್ಯೆಗಳು’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.
‘ಕರ್ನಾಟಕದಲ್ಲಿ ಬೇರೆ ಭಾಷಾ ಚಿತ್ರಗಳು ಪ್ರದರ್ಶನಗೊಳ್ಳಲು ಯಾವುದೇ ನಿರ್ಬಂಧ ಇಲ್ಲ. ಆತಿಥ್ಯದ ವಿಷಯದಲ್ಲಿ ಕನ್ನಡಿಗರು ವಿಶಾಲ ಹೃದಯದವರು. ಆದರೆ ಬೇರೆ ಕಡೆಗಳಲ್ಲಿ ನಮ್ಮ ಚಿತ್ರಗಳಿಗೆ ಇದೇ ರೀತಿ ಆತಿಥ್ಯ ದೊರೆಯುವುದಿಲ್ಲ. ಆದ್ದರಿಂದ ಪರಭಾಷಾ ಚಿತ್ರಗಳ ಪ್ರದರ್ಶನವನ್ನು ಮಿತಗೊಳಿಸಲೇಬೇಕು’ ಎಂದು ಅವರು ಆಗ್ರಹಿಸಿದರು.

ನಿರ್ಮಾಪಕರ ಸಮಸ್ಯೆಗಳು, ಪ್ರದರ್ಶಕರ ಸಮಸ್ಯೆಗಳ ಕುರಿತೂ ಮಾತನಾಡಿದ ಕುಮಾರಸ್ವಾಮಿ, ‘ಕೆಲವು ಥಿಯೇಟರ್‌ಗಳಲ್ಲಿ ನಿರಾತಂಕವಾಗಿ ಪರಭಾಷಾ ಚಿತ್ರಗಳನ್ನೇ ಪ್ರದರ್ಶಿಸಲಾಗುತ್ತಿದೆ. ಇನ್ನು ಕೆಲವು ಕಡೆಗಳಲ್ಲಿ ಚಿತ್ರಮಂದಿರಗಳ ಮಾಲೀಕರು ವಿಪರೀತ ಬಾಡಿಗೆ ಕೇಳುತ್ತಾರೆ. ಇವೆಲ್ಲ ಮಾಫಿಯಾಗಳನ್ನು ಕೊನೆಗೊಳಿಸಬೇಕಿದೆ. ಇದಕ್ಕಾಗಿ ಯಾವುದೇ ರೀತಿಯ ಕಾನೂನಿನ ಹೋರಾಟಕ್ಕೆ ಸಿದ್ಧ. ಇದರಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿಯೂ ಇದೆ. ಆದ್ದರಿಂದ ವಿಧಾನ ಸಭೆಯಲ್ಲಿಯೂ ಈ ವಿಷಯದ ಬಗ್ಗೆ ಗಮನ ಸೆಳೆಯುತ್ತೇನೆ’ ಎಂದು ಹೇಳಿದರು. ‘ಸದ್ಯದಲ್ಲಿಯೇ ಈ ಎಲ್ಲ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ಸುದೀರ್ಘ ಪತ್ರವನ್ನೂ ಬರೆಯಲಾಗುವುದು’ ಎಂದರು.

ಇದೇ ಸಂದರ್ಭದಲ್ಲಿ ಅವರು ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಪ್ರಾಧಾನ್ಯ ಕೊಡದಿರುವುದರ ಬಗ್ಗೆಯೂ ಅಸಮಧಾನ ವ್ಯಕ್ತಪಡಿಸಿದರು. ‘ಮಲ್ಟಿಪ್ಲೆಕ್ಸ್‌ಗಳಲ್ಲಿ ಕನ್ನಡ ಚಿತ್ರಗಳಿಗೆ ಕೊನೆಯ ಸ್ಥಾನ ನೀಡಲಾಗುತ್ತಿದೆ. ಹಿಂದಿ, ತೆಲುಗು, ಇಂಗ್ಲಿಷ್‌ ಸಿನಿಮಾಗಳಿಗೆ ಆದ್ಯತೆ ನೀಡಲಾಗುತ್ತಿದೆ. ನಮ್ಮದೇ ನೆಲದಲ್ಲಿ, ನಮ್ಮದೇ ಮೂಲಭೂತ ಸಂಪನ್ಮೂಲಗಳನ್ನು ಬಳಸಿಕೊಂಡು ಕನ್ನಡ ಸಿನಿಮಾಗಳನ್ನೇ ಕಡೆಗಣಿಸುವುದು ಅಕ್ಷಮ್ಯ. ಈ ನಿಟ್ಟಿನಲ್ಲಿ ಕನ್ನಡ ಚಿತ್ರಗಳನ್ನು ಉಳಿಸಲು ಒಂದು ಸಮಗ್ರ ನೀತಿಯನ್ನು ರೂಪಿಸುವ ಅನಿವಾರ್ಯತೆ ಇದೆ’ ಎಂದ ಅವರು, ತಮಿಳುನಾಡು, ಮಹಾರಾಷ್ಟ್ರಗಳಲ್ಲಿ ಈ ಕುರಿತು ಪ್ರತ್ಯೇಕ ನೀತಿ ರೂಪಿಸಿರುವುದನ್ನು ನೆನಪಿಸಿಕೊಂಡರು.

‘ನಮ್ಮ ಸಮಸ್ಯೆಗಳನ್ನು ನಾವೇ ಪರಸ್ಪರ ಮಾತುಕತೆ ಮೂಲಕ  ಬಗೆಹರಿಸಿಕೊಳ್ಳಬೇಕು. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಈ ನಿಟ್ಟಿನಲ್ಲಿ ಏನು ಮಾಡುತ್ತಿದೆ’ ಎಂದು ಪ್ರಶ್ನಿಸಿದ ಅವರು ‘ಈಗ ಇರುವ ಸಮಸ್ಯೆಗಳನ್ನು ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಅದು ಸಾಧ್ಯವಾಗದಿದ್ದರೆ ಬೀದಿಗಿಳಿದು ಹೋರಾಡಲೂ ಸಿದ್ಧ’ ಎಂದರು. ಇದೇ ಸಂದರ್ಭದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ. ಗೋವಿಂದ್‌ ಮತ್ತು ಸದಸ್ಯರು ಹಾಜರಿದ್ದರು.

ರಿಯಾಲಿಟಿ ಷೋದಲ್ಲಿ ನಟರು ಪಾಲ್ಗೊಳ್ಳುವುದು ಸರಿಯಲ್ಲ
ಸಿನಿಮಾ ನಟರು ಕಿರುತೆರೆ ರಿಯಾಲಿಟಿ ಷೋಗಳಲ್ಲಿ ಭಾಗವಹಿಸುವುದರ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ, ‘ಈ ಹೋರಾಟದಲ್ಲಿ ನಾನು ನಿರ್ಮಾಪಕರನ್ನು ಬೆಂಬಲಿಸುತ್ತೇನೆ’ ಎಂದರು.

ಈ ವಿಷಯದಲ್ಲಿ ನಟ ಜಗ್ಗೇಶ್‌ ಅವರ ನಿಲುವಿನ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ‘ಒಂದು ಹೊತ್ತಿನ ಊಟಕ್ಕೂ ಗತಿಯಿರದಷ್ಟು ಬಡ ಕಲಾವಿದರು ಇದ್ದಾರೆ ಎಂದು ಜಗ್ಗೇಶ್‌ ಹೇಳಿದ್ದಾರೆ. ಅಂಥವರನ್ನೇ ಬಳಸಿಕೊಂಡು ರಿಯಾಲಿಟಿ ಷೋ ಮಾಡಿದರೆ ನನ್ನದೇನೂ ತಕರಾರಿಲ್ಲ. ಆದರೆ ಆರ್ಥಿಕವಾಗಿ ಒಳ್ಳೆ ಪರಿಸ್ಥಿತಿಯಲ್ಲಿರುವ, ಸಿನಿಮಾರಂಗದಲ್ಲಿ ಉತ್ತಮಸ್ಥಿತಿಯಲ್ಲಿರುವ ನಟರು ರಿಯಾಲಿಟಿ ಷೋ ಮಾಡತೊಡಗಿದರೆ ಚಿತ್ರಮಂದಿರಗಳಿಗೆ ಯಾರು ಬರುತ್ತಾರೆ?’ ಎಂದು ಪ್ರಶ್ನಿಸಿದರು. ‘ನಿರ್ಮಾಪಕರಿಗೆ ತೊಂದರೆ ಆಗುತ್ತದೆ ಎನ್ನುವುದಾದರೆ ನನ್ನ ಕಸ್ತೂರಿ ವಾಹಿನಿಯೂ ಸೇರಿದಂತೆ ಯಾವುದೇ ವಾಹಿನಿಯಲ್ಲಿ ರಿಯಾಲಿಟಿ ಷೋ ನಡೆಸಬಾರದು ಎಂದೇ ಹೇಳುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT