ADVERTISEMENT

ಚಿತ್ರರಂಗ ನನ್ನ ಪ್ರತಿಭೆ ಅರ್ಥ ಮಾಡಿಕೊಳ್ಳಲಿಲ್ಲ...

ಪ್ರಜಾವಾಣಿ ವಿಶೇಷ
Published 16 ಅಕ್ಟೋಬರ್ 2014, 19:30 IST
Last Updated 16 ಅಕ್ಟೋಬರ್ 2014, 19:30 IST

* ಆರಂಭದ ದಿನಗಳನ್ನು ನೆನಪಿಸಿಕೊಳ್ಳಿ.
ಚಿಕ್ಕಂದಿನಿಂದಲೂ ನಾಟಕಗಳ ನಂಟು ಇಟ್ಟುಕೊಂಡೇ ಬೆಳೆದವನು ನಾನು. ‘ಮಿತ್ರ ಮಂಡಳಿ’, ‘ಗುಬ್ಬಿ ಕಂಪೆನಿ’, ‘ಕನ್ನಡ ಥಿಯೇಟರ್ಸ್‌’ ಹೀಗೆ ನಾಲ್ಕೈದು ಕಂಪೆನಿಗಳಲ್ಲಿ ಅಭಿನಯಿಸುತ್ತಿದ್ದೆ. ‘ಮಕ್ಕಳ ರಾಜ್ಯ’ ಸಿನಿಮಾಕ್ಕೆ ನಟರನ್ನು ಆಯ್ಕೆ ಮಾಡುವ ಕೆಲಸ ಪುಟ್ಟಣ್ಣ ಕಣಗಾಲ ಅವರದಾಗಿತ್ತು. ಅವರು ನನ್ನನ್ನು ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು. ನಾನು ತೆಳ್ಳಗಿದ್ದೆ. ಮದ್ರಾಸಿಗೆ ಕರೆದೊಯ್ದು ಒಂದು ತಿಂಗಳು ಸರಿಯಾಗಿ ತಿನ್ನಿಸಿ, ತರಬೇತಿ ನೀಡಿ ತಯಾರು ಮಾಡಿದರು. ಹೀಗೆ ಚಿತ್ರರಂಗಕ್ಕೆ ನನ್ನ ಎಂಟ್ರಿ ಆಯಿತು. ಮೊದಲ ಸಿನಿಮಾಕ್ಕೆ ನನ್ನ ಸಂಭಾವನೆ 1500 ರೂಪಾಯಿ. ಆವರೆಗೆ ಅಷ್ಟು ಹಣ ಕಂಡಿದ್ದೇ ಇಲ್ಲ. ‘ಮಕ್ಕಳ ರಾಜ್ಯ’ ಮತ್ತು ‘ಕಥಾಸಂಗಮ’ ನಡುವಿನ 16 ವರ್ಷ ನಾಟಕ ಕಂಪೆನಿಗಳಲ್ಲೇ ಕಳೆದೆ. ಹಾರ್ಮೋನಿಯಂ ನುಡಿಸುವುದು, ನಟನೆ ಹೀಗೆ ಸಾಕಷ್ಟು ಕಷ್ಟದ ದಿನಗಳನ್ನು ಕಂಡಿದ್ದೇನೆ. ‘ಕಥಾಸಂಗಮ’ ನಂತರ ನಾಟಕಗಳಲ್ಲಿ ಅತಿಥಿ ಕಲಾವಿದನಾಗಿ ಅಭಿನಯಿಸತೊಡಗಿದೆ.

* ‘ಚಿತ್ರರಂಗ’ ಎಂದ ತಕ್ಷಣ ಈಗಲೂ ನೆನಪಾಗುವುದೇನು?
ಸಹಾಯಕ ನಿರ್ದೇಶಕರಾಗಿದ್ದ ಪುಟ್ಟಣ್ಣ ಅವರು ನಿರ್ದೇಶಕರಾದಾಗ ‘ಕಥಾಸಂಗಮ’ ಚಿತ್ರಕ್ಕೆ ನನ್ನನ್ನು ಕರೆದು ತಿಮ್ಮರಾಯಿ ಪಾತ್ರ ನೀಡಿದರು. ಚಿತ್ರ ತುಂಬಾ ಚೆನ್ನಾಗಿ ಮೂಡಿಬಂತು. 1975–76ರಲ್ಲಿ ಅದಕ್ಕೆ ‘ಉತ್ತಮ ಪೋಷಕ ನಟ’ ಪ್ರಶಸ್ತಿಯೂ ಬಂತು. ಆ ನಂತರ ಚಿಕ್ಕಪುಟ್ಟ ಪಾತ್ರಗಳಲ್ಲೇ ಇದ್ದೆ. ಮತ್ತೆ ಟರ್ನಿಂಗ್ ಪಾಯಿಂಟ್ ಆಗಿದ್ದು ರಾಜಕುಮಾರ್ ಅವರ ‘ಹಾವಿನ ಹೆಡೆ’. ಅದರಲ್ಲಿನ ನನ್ನ ಪಾತ್ರ ನೋಡಿ ರಾಜಕುಮಾರ್ ಮೆಚ್ಚಿಕೊಂಡರು. ನಂತರ ಅವರ ಪ್ರತಿ ಚಿತ್ರಗಳಲ್ಲೂ ನನಗೊಂದು ಪಾತ್ರ ಇರುತ್ತಿತ್ತು. ಮತ್ತೆ ಹೆಚ್ಚು ಖುಷಿ ನೀಡಿದ್ದು ‘ಗೋಲ್‌ಮಾಲ್ ರಾಧಾಕೃಷ್ಣ’.

* ‘ಉಮೇಶ್‌ಗೆ ಸಿಂಪತಿ ಬೇಡ, ಅವಕಾಶ ಬೇಕು’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಿರಿ. ನೀವು ಚಿತ್ರರಂಗಕ್ಕೆ ಬಂದು 54 ವರ್ಷಗಳ ನಂತರವೂ ಈ ಪರಿಸ್ಥಿತಿ ಎದುರಾಗಲು ಕಾರಣವೇನು?
ಹೌದು. ಅದು ನನಗೆ ತುಂಬಾ ನೋವಿನ ಸಂಗತಿ. ಆದರೆ ಇದಕ್ಕೆ ಮತ್ತೊಬ್ಬರನ್ನು ದೂಷಿಸುವುದೂ ಸರಿ ಅಲ್ಲ ಅನ್ನಿಸುತ್ತದೆ. ಎಲ್ಲರಿಗೂ ಒಂದೊಂದು ‘ಟೈಮ್’ ಅನ್ನೋದು ಇರುತ್ತದಲ್ಲ. ನನಗೂ ಹೀಗೆ ಒಂದಷ್ಟು ದಿನ ‘ಟೈಮ್’ ಚೆನ್ನಾಗಿರಲಿಲ್ಲ ಅಂತ ನನ್ನ ನಂಬಿಕೆ. ಆದರೂ ನನಗೆ ಇಷ್ಟು ವರ್ಷಗಳ ಅನುಭವವಿದೆ. ನಮ್ಮನ್ನು ಹಳಬರು ಎಂದು ಕಡೆಗಣಿಸಿ ಬಿಟ್ಟರೆ ಹೇಗೆ! ಒಮ್ಮೆಲೇ ಅವಕಾಶಗಳು ಕಡಿಮೆಯಾಗಿಬಿಟ್ಟವು. ಇತ್ತೀಚೆಗೆ ‘ಪಂಗನಾಮ’, ‘ಚಾರ್ಲಿ’, ‘ಯುವ ಸಾಮ್ರಾಟ್’, ‘ಒಂದ್ ಚಾನ್ಸ್ ಕೊಡಿ’ ಚಿತ್ರಗಳಲ್ಲೆಲ್ಲ ಒಳ್ಳೊಳ್ಳೆಯ ಪಾತ್ರಗಳು ಸಿಗುತ್ತಿವೆ. ನನಗೆ ನಟನೆ ಬಿಟ್ಟು ಬೇರೇನೂ ಗೊತ್ತಿಲ್ಲ. ಇನ್ನೂ ಕೆಲಸ ಮಾಡುವ ಆಸಕ್ತಿ, ಉತ್ಸಾಹ ಇದೆ.               

* ‘ವೆಂಕಟ ಇನ್ ಸಂಕಟ’ದಲ್ಲಿ ಅಜ್ಜಿಯಾಗಿದ್ದಿರಿ?
ಅದಂತೂ ತೀರಾ ವಿಭಿನ್ನ ಅನುಭವ. ಇತ್ತೀಚಿನ ದಿನಗಳಲ್ಲಿ ನನಗೆ ತುಂಬಾ ಹೆಸರು ತಂದಿತ್ತ ಪಾತ್ರವದು. ಸಂಪೂರ್ಣವಾಗಿ ‘ಉಮೇಶ್ ಛಾಯೆ’ಯನ್ನು ಬದಿಗಿಟ್ಟು ಮೂಡಿಬಂದ ಪಾತ್ರ. ಜನ ತುಂಬಾನೇ ಮೆಚ್ಚಿದರು. ಅದು, ನಾನು ಯಾವ ರೀತಿಯ ಪಾತ್ರವನ್ನಾದರೂ ಚೆನ್ನಾಗಿ ನಿಭಾಯಿಸುತ್ತೀನಿ ಎಂಬುದಕ್ಕೆ ನಿದರ್ಶನ. ಆದರೆ ಚಿತ್ರರಂಗ ಅದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ ಎಂದು ನನಗನ್ನಿಸುತ್ತದೆ. ಯಾವಾಗಲೂ ಒಂದೇ ರೀತಿಯ ಪಾತ್ರ ಮಾಡಿಸಿ ಮಾಡಿಸಿ ಬ್ರ್ಯಾಂಡ್ ಮಾಡಿಟ್ಟುಬಿಡುತ್ತಾರೆ. ಈ ಹಿಂದೆ ಕಾಮಿಡಿ ವಿಲನ್ ಪಾತ್ರಗಳನ್ನೂ ಚೆನ್ನಾಗಿಯೇ ನಿರ್ವಹಿಸಿದ್ದೆ.

ADVERTISEMENT

* ಇನ್ನೂ ಮಾಡದೇ ಇರುವಂಥ ಪಾತ್ರ ಯಾವುದಾದರೂ ಇದೆಯಾ?
ಪಾತ್ರಗಳ ವಿಚಾರದಲ್ಲಿ ನಾನಿನ್ನೂ ಅತೃಪ್ತ. ಎಲ್ಲ ಕಲಾವಿದರಿಗೆ ಇರುವಂತೆ ನನಗೂ ಇನ್ನೂ ವಿಶೇಷವಾದ ಪಾತ್ರ ಮಾಡುವ ಹಂಬಲ ಇದೆ. ಉಮೇಶನ ಹಾಸ್ಯದ ನೆರಳಿಲ್ಲದೇ ಇರುವ ಖಳನ ಪಾತ್ರ ಮಾಡುವ ಆಸೆ ಇದೆ. ರಾಜಕುಮಾರ್, ಶಿವರಾಜ್‌ಕುಮಾರ್ ಮತ್ತು ಈಗ ಸಿದ್ದಾರ್ಥ್ ರಾಜಕುಮಾರ್ ಜೊತೆಗೂ ಕೆಲಸ ಮಾಡಿದ್ದೇನೆ. ರಂಗಭೂಮಿಯಲ್ಲಿ ಕೂಡ ಗುಬ್ಬಿ ವೀರಣ್ಣ, ಅವರ ಮಕ್ಕಳು–ಮೊಮ್ಮಕ್ಕಳ ಜೊತೆ ಹಾಗೂ ಕೆ. ಹಿರಣ್ಣಯ್ಯ, ಮಾಸ್ಟರ್ ಹಿರಣ್ಣಯ್ಯ, ಅವರ ಮಕ್ಕಳ ಜೊತೆ ಪಾತ್ರ ಮಾಡಿದ್ದೇನೆ. ಅದೇ ನನಗೆ ಹೆಮ್ಮೆ.

* ಬೇರೆ ಭಾಷೆಗಳತ್ತ ಹೋಗಲೇ ಇಲ್ಲವಲ್ಲ?
‘ಕಥಾಸಂಗಮ’ ಚಿತ್ರದಿಂದಾಗಿ ತಮಿಳಿನಲ್ಲಿ ಅವಕಾಶ ಸಿಕ್ಕಿತು. ಒಂದೆರಡು ಚಿತ್ರಗಳಲ್ಲಷ್ಟೇ ಅಭಿನಯಿಸಿ ಬಂದೆ. ಕನ್ನಡಿಗರ ಪ್ರೀತಿ ನನ್ನನ್ನು ಇಲ್ಲೇ ಇಟ್ಟುಕೊಂಡಿತು. ಆದರೀಗ ಬೇರೆ ಕಡೆ ಸಕ್ರಿಯನಾಗದಿರುವುದಕ್ಕೆ ಪಶ್ಚಾತ್ತಾಪ ಪಡುತ್ತಿದ್ದೀನಿ. ಆಗ ಸ್ವಲ್ಪ ಸ್ವಾಭಿಮಾನ ಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು ಎಂದು ಈಗ ಅನ್ನಿಸುತ್ತದೆ.

* ನಿಮ್ಮ ಉತ್ತುಂಗದ ಕಾಲ ಮತ್ತು ಸದ್ಯದ ಸಿನಿಮಾ ಉದ್ಯಮ; ಎರಡನ್ನೂ ಹೇಗೆ ವಿಶ್ಲೇಷಿಸುವಿರಿ?
ಆ ಕಾಲದಲ್ಲಿ ತಾಂತ್ರಿಕವಾಗಿ ಇಷ್ಟೊಂದು ಮುಂದುವರೆದಿರಲಿಲ್ಲ. ಅತ್ಯುತ್ತಮ ಚಿತ್ರೀಕರಣ ಸಾಧ್ಯವಾಗುತ್ತಿರಲಿಲ್ಲ. ಈಗ ಹಾಗಿಲ್ಲ. ಈ ಕಾಲದ ಯುವ ನಿರ್ದೇಶಕರು ತುಂಬಾ ಚಿಂತನೆ ಮಾಡುತ್ತಾರೆ. ವಿಭಿನ್ನ ಕಥೆಗಳು ಬರುತ್ತಿವೆ. ಆಗ ಚಿತ್ರೋದ್ಯಮ ತುಂಬ ಪ್ರಾಮಾಣಿಕವಾಗಿತ್ತು. ಈಗ ವ್ಯಾವಹಾರಿಕವಾಗಿದೆ. ಆದರೂ ಈ ತಲೆಮಾರಿನವರ ಜೊತೆ ತೆರೆ ಹಂಚಿಕೊಳ್ಳುವ ಭಾಗ್ಯ ಸಿಕ್ಕಿದೆ ಎಂಬುದೂ ಖುಷಿಯೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.