ADVERTISEMENT

ಜಾನಿ ಜಾನಿ... ಹಾಡುಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 19:30 IST
Last Updated 15 ಮಾರ್ಚ್ 2018, 19:30 IST
ಜಾನಿ ಜಾನಿ... ಹಾಡುಗಳ ಬಿಡುಗಡೆ
ಜಾನಿ ಜಾನಿ... ಹಾಡುಗಳ ಬಿಡುಗಡೆ   

ದುನಿಯಾ ವಿಜಯ್ ನಿರ್ಮಾಣದ ಮೊದಲ ಸಿನಿಮಾ ‘ಜಾನಿ ಜಾನಿ ಯೆಸ್ ಪಾಪಾ’ದಲ್ಲಿ ನಟಿಸಿರುವ ರಚಿತಾ ರಾಂ ಅವರು ಡಬ್ಬಿಂಗ್‌ನಲ್ಲೂ ಭಾಗಿಯಾಗಿದ್ದು ಈಗ ಹಳೆಯ ಸುದ್ದಿ. ಸಿನಿಮಾ ತಂಡ ಚಿತ್ರೀಕರಣ ಪೂರ್ಣಗೊಳಿಸಿ, ಪೋಸ್ಟ್‌ ಪ್ರೊಡಕ್ಷನ್ ಹಂತದಲ್ಲಿ ಇರುವುದು ಹೊಸ ಸುದ್ದಿ.

ಚಿತ್ರತಂಡವು ಹಾಡುಗಳ ಬಿಡುಗಡೆ ಕಾರ್ಯಕ್ರಮವನ್ನು ಈಚೆಗೆ ಆಯೋಜಿಸಿತ್ತು. ವಿಜಯ್, ನಿರ್ದೇಶಕ ಪ್ರೀತಂ ಗುಬ್ಬಿ, ರಚಿತಾ ರಾಂ ಸೇರಿದಂತೆ ಚಿತ್ರತಂಡದ ಎಲ್ಲರೂ ಅಲ್ಲಿ ಸೇರಿದ್ದರು. ಹಾಡುಗಳ ಬಿಡುಗಡೆ ಕಾರ್ಯಕ್ರಮದ ಹೀರೊ, ಅಂದರೆ ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್‌ ಖುಷಿಯಿಂದ ಓಡಾಡಿಕೊಂಡಿದ್ದರು.

ಪ್ರೀತಂ ಅವರಿಗೆ ಇದು ವಿಜಯ್ ಜೊತೆಗಿನ ಎರಡನೆಯ ಸಿನಿಮಾ. ‘ಈ ಹಿಂದೆ ನಾನು ಮತ್ತು ವಿಜಯ್ ಸೇರಿ ಜಾನಿ ಮೇರಾ ನಾಮ್ ಎಂಬ ಸಿನಿಮಾ ಮಾಡಿದ್ದೆವು. ಜಾನಿ ಜಾನಿ ಯೆಸ್ ಪಾಪಾ ಸಿನಿಮಾ ನಿರ್ಮಾಣವನ್ನು ತಾವೇ ಮಾಡುವುದಾಗಿ ವಿಜಯ್ ಹೇಳಿದರು. ಈ ಮಾತುಗಳೆಲ್ಲ ಒಂದು ದೂರವಾಣಿ ಕರೆಯಲ್ಲೇ ಮುಗಿದುಹೋದವು’ ಎಂದರು ಪ್ರೀತಂ. ಈ ಸಿನಿಮಾದಲ್ಲಿ ವಿಜಯ್ ಮತ್ತು ರಚಿತಾ ಅವರ ಜೋಡಿ ಚೆನ್ನಾಗಿ ಕಾಣುತ್ತದೆ ಎನ್ನುವುದು ಪ್ರೀತಂ ಅವರ ಅಂಬೋಣ.

ADVERTISEMENT

ನಂತರ ಮಾತನಾಡಿದ ಅಜನೀಶ್, ‘ಈ ಸಿನಿಮಾ ಕೆಲಸದ ವೇಳೆ ನಾನು ಕಾಲೇಜು ವಿದ್ಯಾರ್ಥಿಗಳು ಖುಷಿಪಡುವ ರೀತಿಯಲ್ಲಿ ಖುಷಿಪಟ್ಟಿದ್ದೇನೆ. ನಿರ್ಮಾಪಕರಾದ ವಿಜಯ್ ನಮಗೆ ಸಾಕಷ್ಟು ಸ್ವಾತಂತ್ರ್ಯ ನೀಡಿದ್ದರು’ ಎಂದರು. ಈ ಕಾರ್ಯಕ್ರಮಕ್ಕೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರೂ ಬಂದಿದ್ದರು. ಸಿನಿಮಾದ ಒಂದೆರಡು ಹಾಡುಗಳನ್ನು ವೀಕ್ಷಿಸಿ ಖುಷಿಪಟ್ಟರು. ನಂತರ ಸಿನಿತಂಡಕ್ಕೆ ಶುಭ ಕೋರಿದರು.

ರಚಿತಾ ರಾಂ ಅವರು ವಿಜಯ್ ಜೊತೆ ಅಭಿನಯಿಸುತ್ತಿರುವುದು ಇದೇ ಮೊದಲು. ‘ಈ ಸಿನಿಮಾದ ಭಾಗ ಆಗಿರುವುದಕ್ಕೆ ನನಗೆ ಖುಷಿ ಇದೆ. ಬಹಳ ಮಜಾ ಮಾಡಿಕೊಂಡು ಕೆಲಸ ಮಾಡಿದ್ದೇನೆ. ಮಜಾ ಅಂತ ಅಂದ್ರೆ, ಶೂಟಿಂಗ್‌ ಚೆನ್ನಾಗಿತ್ತು ಅಂತ ಅರ್ಥ’ ಎಂದರು ರಚಿತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.