ADVERTISEMENT

ತಮಿಳಿನತ್ತ ಅಭಿಷೇಕ್ ಚಿತ್ತ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 19:30 IST
Last Updated 15 ಸೆಪ್ಟೆಂಬರ್ 2014, 19:30 IST

ಚೆನ್ನೈ ಜೊತೆಗಿನ ತಮ್ಮ ಬಾಂಧವ್ಯವನ್ನು ನೆನಪಿಸಿಕೊಂಡ ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ತಮಿಳು ಚಿತ್ರದಲ್ಲಿ ಅಭಿನಯಿಸಲು ತಮಗಿರುವ ಆಸಕ್ತಿಯ ಬಗ್ಗೆ ಮಾತನಾಡಿದ್ದಾರೆ. ಐಎಸ್ಎಲ್‌ (ಇಂಡಿಯನ್ ಸೂಪರ್ ಲೀಗ್)ನ ಚೆನ್ನೈ ತಂಡದ ಒಡೆಯರೂ ಆಗಿರುವ ನಟ ಅಭಿಷೇಕ್, ಇಲ್ಲಿ ಕೆಲವು ಅವಿಸ್ಮರಣೀಯ ಕ್ರೀಡಾ ದಿನಗಳನ್ನು ಕಳೆಯಲು ಎದುರು ನೋಡುತ್ತಿರುವುದಾಗಿಯೂ ತಿಳಿಸಿದ್ದಾರೆ.

ತಮಿಳು ನಿರ್ದೇಶಕರ ಅನೇಕ ಹಿಂದಿ ಚಿತ್ರಗಳಲ್ಲಿ ಈಗಾಗಲೇ ಕೆಲಸ ಮಾಡಿರುವ ಅಭಿಷೇಕ್ ಬಚ್ಚನ್, ‘ತಮಿಳು ಚಿತ್ರದಲ್ಲಿ ಕೆಲಸ ಮಾಡಲು ನಾನು ಅತ್ಯಂತ ಕಾತರದಿಂದ ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ. ರಜನಿಕಾಂತ್, ಕಮಲ ಹಾಸನ್ ಅವರಂತಹ ದಿಗ್ಗಜರಿರುವ ತಮಿಳು ಚಿತ್ರರಂಗವನ್ನು ಶ್ಲಾಘಿಸಿದ ಅಭಿಷೇಕ್, ವಿಕ್ರಂ ಅಭಿನಯದ ಬಗ್ಗೆ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಭಿಷೇಕ್ ಬಚ್ಚನ್ ಅಭಿನಯದ ‘ರಾವಣ್’ ಚಿತ್ರದ ತಮಿಳು ಅವತರಣಿಕೆಯಲ್ಲಿ ವಿಕ್ರಂ ಅಭಿನಯಿಸಿದ್ದರು.

80ರ ದಶಕದಲ್ಲಿ ತಂದೆ ಅಮಿತಾಭ್ ಬಚ್ಚನ್ ಜೊತೆಗೆ ಚೆನ್ನೈಗೆ ಆಗಮಿಸುತ್ತಿದ್ದ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಬಚ್ಚನ್, ‘ಚಿಕ್ಕ ವಯಸ್ಸಿನಿಂದಲೂ ಚೆನ್ನೈ ಜೊತೆ ಒಂದು ರೀತಿಯ ಬಾಂಧವ್ಯ ಬೆಳೆದು ಬಂದಿದೆ. ಎಷ್ಟೊ ಚಿತ್ರಗಳ ಶೂಟಿಂಗಿಗಾಗಿ ಅಪ್ಪ ಇಲ್ಲಿಗೆ ಬರುವುದಿತ್ತು. ಆಗ ನಾನು ಎಷ್ಟೊ ಬೇಸಿಗೆಯ ರಜೆಗಳನ್ನು ಇಲ್ಲಿಯೇ ಕಳೆದದ್ದೂ ಇದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.