ADVERTISEMENT

ದೂಧ್‌ ಪೇಡಾಗೆ ಗಡುಸು ಗುರಿ!

​ಪ್ರಜಾವಾಣಿ ವಾರ್ತೆ
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ಶಾರ್ಪ್ ಶೂಟರ್ ಆಗಮನಕ್ಕಾಗಿ ಎಲ್ಲರೂ ಕಾಯುತ್ತಿದ್ದರೆ ಆತ ಮಾತ್ರ ಸಾಕಷ್ಟು ತಡವಾಗಿ ದರ್ಶನ ನೀಡಿದ್ದ. ಇಲ್ಲಿ ಶಾರ್ಪ್ ಶೂಟರ್ ಅಂದ್ರೆ ನಟ ದಿಗಂತ್. ಕಾಯುತ್ತಿದ್ದವರು ಪತ್ರಕರ್ತರು. ಅದು ‘ಶಾರ್ಪ್ ಶೂಟರ್’ ಚಿತ್ರದ ಪ್ರೋಮೊ ಬಿಡುಗಡೆ ಪತ್ರಿಕಾಗೋಷ್ಠಿ. ಅಂತೂ ‘ಶಾರ್ಪ್ ಶೂಟರ್’ಗೆ ಟೈಮ್ ಮಿಸ್ ಆಗಿತ್ತು.

ಚಿತ್ರದ ಬಗೆಗಿನ ಮಾಹಿತಿ ಹಂಚಿಕೊಳ್ಳಲೆಂದು ಎಂಟು ತಿಂಗಳ ನಂತರ ತಮ್ಮ ತಂಡವನ್ನು ಕರೆತಂದಿದ್ದ ನಿರ್ದೇಶಕ ಗೌಸ್‌ ಪೀರ್, ನಾಯಕ ದಿಗಂತ್ ಅನುಪಸ್ಥಿತಿಯಲ್ಲೇ ಪತ್ರಿಕಾಗೋಷ್ಠಿ ಪೂರೈಸಿದ್ದರು. ಮಾತಿನ ಆರಂಭದಲ್ಲೇ, ‘ಒಂದು ಹಾಡು ಬರೆದ ನನ್ನನ್ನು ರಾತ್ರೋರಾತ್ರಿ ಜನಪ್ರಿಯಗೊಳಿಸಿದಿರಿ. ನನ್ನನ್ನು ಅರ್ಧ ಹಾಳುಮಾಡಿದ್ದು ನೀವೇ’ ಎಂದು ಮತ್ತೆ ಮಾಧ್ಯಮದವರನ್ನು ಕೆಣಕಿದರು.

‘ಶಾರ್ಪ್‌ ಶೂಟರ್‌ ಚಿತ್ರೀಕರಣ ಮುಗಿದಿದೆ. ಪ್ರಸ್ತುತ ಚಿತ್ರೀಕರಣೋತ್ತರ ಕೆಲಸಗಳು ನಡೆಯುತ್ತಿವೆ. ಆಗಸ್ಟ್ ತಿಂಗಳ ಕೊನೆಯಲ್ಲಿ ಚಿತ್ರವನ್ನು ತೆರೆಗೆ ತರುವ ಪ್ರಯತ್ನದಲ್ಲಿದ್ದೇವೆ’ ಎಂದು ಗೌಸ್‌ ಪೀರ್‌ ಹೇಳಿದರು.

‘ಆ್ಯಂಗ್ರಿ ಯಂಗ್ ಮ್ಯಾನ್’ ಎನ್ನುವಲ್ಲಿ ‘ಆ್ಯಂಗ್ರಿ’ ಹೊಡೆದು ಹಾಕಿ, ‘ಕೂಲ್ ಯಂಗ್ ಮ್ಯಾನ್’ ಎಂದು ಪೋಸ್ಟರ್‌ಗಳಲ್ಲಿ ಚಿತ್ರದ ನಾಯಕ ದಿಗಂತ್‌ರನ್ನು ಪರಿಚಯಿಸಿರುವ ನಿರ್ದೇಶಕರು, ‘ನಂಬಿ ಪ್ಲೀಸ್...’ ಎನ್ನುವ ಅಡಿಟಿಪ್ಪಣಿಯನ್ನೂ ನೀಡಿದ್ದಾರೆ. ಇದನ್ನು ಸಮರ್ಥಿಸಿಕೊಂಡ ಗೌಸ್‌ಪೀರ್– ‘ದಿಗಂತ್ ದೂಧ್ ಪೇಡಾ ಎಂದು ಹೆಸರಾದವರು. ಹಾಗಾಗಿ ಅವರು ಶಾರ್ಪ್ ಶೂಟರ್ ಎಂದರೆ ಬೇಗ ನಂಬಿಕೆ ಬರುವುದಿಲ್ಲ.
ಹಾಗಾಗಿ ಹೀಗೆ...’ ಎಂದರು. ಚಿತ್ರದ ಅರ್ಧದವರೆಗೂ ಸಾಮಾನ್ಯ ವ್ಯಕ್ತಿಯಾಗಿರುವ ದಿಗಂತ್, ನಂತರ ಯಾವುದೋ ಸಂದರ್ಭಕ್ಕೆ ಕಟ್ಟುಬಿದ್ದು ಶಾರ್ಪ್ ಶೂಟರ್ ಆಗುವುದು ಚಿತ್ರದ ಕಥೆ.

‘ಉಗ್ರಂ’ ಖ್ಯಾತಿಯ ನಟ ಶ್ರೀಮುರುಳಿ ಎರಡು ಪ್ರೋಮೊಗಳನ್ನು ಲಾಂಚ್ ಮಾಡಿ, ‘ಹೊಡೆದಾಟ, ಹಾಸ್ಯ, ಕೌತುಕ, ಪ್ರೀತಿ ಎಲ್ಲವನ್ನೂ ಒಳಗೊಂಡಿರುವ ಪ್ಯಾಕೇಜ್ ಈ ಚಿತ್ರ’ ಎಂದರು. ನಿರ್ಮಾಪಕರಾದ ಬಾಲಸುಬ್ರಹ್ಮಣ್ಯಂ ಮತ್ತು ಶ್ರೀನಿವಾಸ್ ಮಾತನಾಡಿದರು. ಚಿತ್ರದ ಸಂಗೀತ ನಿರ್ದೇಶಕ ಶಿವಸಂತೋಷ್ ಇತ್ತೀಚೆಗಷ್ಟೇ ತೀರಿಕೊಂಡಿದ್ದು ಚಿತ್ರತಂಡದ ಬೇಸರಕ್ಕೆ ಕಾರಣವಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.