ADVERTISEMENT

ನೆತ್ತರ ‘ಕಲೆ’

‘ಜಸ್ಟ್ ಆಕಸ್ಮಿಕ’

ಆನಂದತೀರ್ಥ ಪ್ಯಾಟಿ
Published 16 ಸೆಪ್ಟೆಂಬರ್ 2016, 11:10 IST
Last Updated 16 ಸೆಪ್ಟೆಂಬರ್ 2016, 11:10 IST
ನೆತ್ತರ ‘ಕಲೆ’
ನೆತ್ತರ ‘ಕಲೆ’   

‘ಜಸ್ಟ್ ಆಕಸ್ಮಿಕ’
ನಿರ್ಮಾಪಕ, ನಿರ್ದೇಶಕ: ಹಿಮಾಯತ್ ಖಾನ್
ತಾರಾಗಣ: ವಿನೋದ್ ಪಾಟೀಲ, ಸಂಜನಾ, ತಿಲಕ್, ಚಂದ್ರು, ರಮೇಶ ಭಟ್

ಬಣ್ಣಗಳನ್ನು ಬಳಸಿ ಕ್ಯಾನ್ವಾಸಿನ ಮೇಲೆ ಕಲಾವಿದ ಚಿತ್ರ ರಚಿಸುತ್ತಾನೆ. ಆದರೆ ಈ ಸಚಿನ್ ಎಂಬ ಅಂತರರಾಷ್ಟ್ರೀಯ ಮಟ್ಟದ ಕಲಾವಿದ ಬಣ್ಣಕ್ಕೆಂದು ಬಳಸುವುದು ಮನುಷ್ಯರ ರಕ್ತವನ್ನು! ಅದೂ ಅವರನ್ನು ಸೆರೆಹಿಡಿದು ಕಟ್ಟಿ ಹಾಕಿ, ರಕ್ತ ತೆಗೆದು ಅದರಿಂದ ಚಿತ್ರ ಬಿಡಿಸುವುದು ಈತನ ವಿಧಾನ. ಅವನ ಜಾಲವನ್ನು ಭೇದಿಸುವ ಥ್ರಿಲ್ಲರ್ ‘ಜಸ್ಟ್ ಆಕಸ್ಮಿಕ.’

ಹೆಚ್ಚೇನೂ ಪಾತ್ರಗಳಿಲ್ಲದ ‘...ಆಕಸ್ಮಿಕ’ ಸಿನಿಮಾದಲ್ಲಿ ಸಶಕ್ತ ಚಿತ್ರಕಥೆಯೇ ಇಲ್ಲ. ಎರಡು ಸಮಾನಾಂತರ ದಾರಿಗಳನ್ನು ತೋರಿಸುತ್ತ, ಒಮ್ಮೆಲೇ ಅವೆರಡನ್ನೂ ಜೋಡಿಸಲು ಯತ್ನಿಸಿರುವ ನಿರ್ದೇಶಕ ಹಿಮಾಯತ್ ಖಾನ್, ಕೊನೆಕೊನೆಗೆ ತಾವೇ ಗೊಂದಲಕ್ಕೆ ಬಿದ್ದಂತಿದೆ. ಪ್ರೇಕ್ಷಕರನ್ನು ಕುತೂಹಲದಿಂದ ಹಿಡಿದಿಡುವ ಯಾವುದೇ ಗುಣವಂತೂ ಖಂಡಿತ ಇಲ್ಲಿಲ್ಲ.

ಅನಾಥಾಶ್ರಮದಲ್ಲಿ ಬೆಳೆಯುವ ಶಂಕರ್(ವಿನೋದ್ ಪಾಟೀಲ), ಹದಿನೆಂಟು ವರ್ಷಗಳ ಬಳಿಕ ಪಾಲಕರ ಮಡಿಲಿಗೆ ಬೀಳುವ ಭಾವನಾತ್ಮಕ ಸನ್ನಿವೇಶದಿಂದ ಕಥೆ ಶುರುವಾಗುತ್ತದೆ. ತನ್ನ ಮೂಲ ಮನೆಗೆ ಬರುವ ಆತನಿಗೆ, ಪಕ್ಕದ ಮನೆಯಲ್ಲಿರುವ ಕಲಾವಿದ ಸಚಿನ್‌ (ತಿಲಕ್) ಬಗ್ಗೆ ಶಂಕೆ. ಆಗಾಗ್ಗೆ ಸಚಿನ್ ರಕ್ತಸಿಕ್ತ ಮೂಟೆಯನ್ನು ಎಳೆದೊಯ್ಯುವುದು ಕಾಣುತ್ತದೆ. ಆದರೆ ಹೋಗಿ ನೋಡಿದಾಗ ಅಲ್ಲೇನೂ ಇರುವುದೇ ಇಲ್ಲ! ಪದೇ ಪದೇ ಈ ದೃಶ್ಯ ಕಾಣಸಿಕ್ಕಾಗ, ಸಾಕ್ಷಿ ಸಮೇತ ಅವನನ್ನು ಹಿಡಿಯಲು ಶಂಕರ್ ನಿರ್ಧರಿಸುತ್ತಾನೆ. ಆತನಿಗೆ ಪ್ರೇಯಸಿ ಆರೋಹಿ (ಸಂಜನಾ) ಸಾಥ್ ನೀಡುತ್ತಾಳೆ.

ಆ ಬಿಕ್ಕಟ್ಟಿನಲ್ಲಿ ಸಚಿನ್ ಬಂಧಿಯಾಗುವುದು ಪೊಲೀಸರಿಂದ. ಅವರ ಕಾರ್ಯತಂತ್ರ ಹೇಗಿತ್ತು ಎಂಬುದಕ್ಕೆ ಯಾವ ಗಟ್ಟಿ ಅಂಶಗಳೂ ಕಾಣುವುದಿಲ್ಲ.
ಚಿತ್ರಗಳ ಬಣ್ಣಕ್ಕೆ ಬೆಚ್ಚಿ ಬೀಳಿಸುವ ವಿಧಾನ ಆಯ್ದುಕೊಂಡ ಕಲಾವಿದನ ಕಥೆಯೂ ಆತನ ಕರಾಳ ಕೃತ್ಯ ಬಯಲಿಗೆಳೆಯುವ ದಾರಿಯೂ ಮೇಲ್ನೋಟಕ್ಕೆ ರೋಚಕವಾಗಿ ಕಾಣಿಸುತ್ತದೆ. ಆದರೆ ಥ್ರಿಲ್ಲರ್‌ನ ಲಕ್ಷಣಗಳಾದ ಕುತೂಹಲಕರ ಸನ್ನಿವೇಶಗಳು ಇಲ್ಲಿ ತೀರಾ ಸಪ್ಪೆಯಾಗಿವೆ.

ಕೊನೆಯ ಇಪ್ಪತ್ತು ನಿಮಿಷಗಳ ಕಾಲ ಕತ್ತಲಲ್ಲಿ ನಡೆಯುವ ದೃಶ್ಯಗಳು ಏನನ್ನು ಹೇಳುತ್ತವೋ ಗೊತ್ತಾಗುವುದಿಲ್ಲ. ಮೊದಲಾರ್ಧ ಭಾವನೆಗಳ ಮೇಲೆ ಸವಾರಿ ಮಾಡುವ ಕಥೆ, ಒಮ್ಮೆಲೇ ಪತ್ತೇದಾರಿ ಹಾದಿಗೆ ಹೊರಳಿ ದಿಢೀರೆಂದು ಮುಕ್ತಾಯವಾಗುತ್ತದೆ. ನೀರಸವಾಗಿರುವ ಕ್ಲೈಮ್ಯಾಕ್ಸ್‌ನ ದೃಶ್ಯಗಳ ಮಧ್ಯೆ ಬೆಚ್ಚಿ ಬೀಳುವ ಸದ್ದುಗಳನ್ನು ಸಂಯೋಜಿಸಿದ ಕಸರತ್ತು ವ್ಯರ್ಥವಾಗಿದೆ. ಇಂಥ ಕಡೆಯೆಲ್ಲ ಪ್ರೇಕ್ಷಕ ಹೆದರುವುದೇ ಇಲ್ಲ; ಬದಲಾಗಿ ಪಾತ್ರಗಳೇ ಪದೇ ಪದೇ ಹೆದರುತ್ತವೆ!

ಇನ್ನು ತಾಂತ್ರಿಕವಾಗಿ ಕೂಡ ‘...ಆಕಸ್ಮಿಕ’ ಒಂದಷ್ಟು ಹಿಂದೆಯೇ ಉಳಿಯುತ್ತದೆ. ಮೊಹಮದ್ ಹಸೀನ್ ತಮ್ಮ ಕ್ಯಾಮೆರಾಕ್ಕೆ ಇನ್ನಷ್ಟು ಕೆಲಸ ಕೊಡಬಹುದಿತ್ತು. ಶಿವು ಜಮಖಂಡಿ ಅವರ ಸಂಗೀತ ಸಂಯೋಜನೆಯ ಹಾಡುಗಳು ಕೇಳುವಂತಿವೆ. ತಣ್ಣನೆಯ ಕ್ರೌರ್ಯ ತುಂಬಿದ ಕಲಾವಿದನಾಗಿ ತಿಲಕ್ ಅಭಿನಯ ಬಿಟ್ಟರೆ ಉಳಿದವರ ಬಗ್ಗೆ ಹೇಳದೇ ಇರುವುದೇ ಒಳಿತು.

ಅತ್ತ ಭಾವನೆಗಳನ್ನು ಪೋಷಿಸುವ ಸಿನಿಮಾ ಅಲ್ಲ; ಇತ್ತ ರೋಮಾಂಚನ ಮೂಡಿಸುವ ಥ್ರಿಲ್ಲರ್ ಕೂಡ ಅಲ್ಲ. ಎರಡರ ಮಧ್ಯೆ ತ್ರಿಶಂಕು ಸ್ಥಿತಿಯಲ್ಲಿ ನಿಲ್ಲುವ ‘ಜಸ್ಟ್ ಆಕಸ್ಮಿಕ’ದಲ್ಲಿ ಗಮನ ಸೆಳೆಯುವುದು ಏನೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT