ADVERTISEMENT

ಪಾರಿವಾಳದ ಬೆನ್ನು ಹತ್ತಿ...

ಡಿ.ಎಂ.ಕುರ್ಕೆ ಪ್ರಶಾಂತ
Published 11 ಫೆಬ್ರುವರಿ 2016, 19:30 IST
Last Updated 11 ಫೆಬ್ರುವರಿ 2016, 19:30 IST
ಪಿ. ವಾಸು
ಪಿ. ವಾಸು   

ಶಿವರಾಜ್ ನಟನೆಯ ‘ಶಿವಲಿಂಗ’ ಇಂದು (ಫೆ.12) ತೆರೆ ಕಾಣುತ್ತಿದೆ. ‘ಶಿವಲಿಂಗ’ ಸಿನಿಮಾದ ವಿಶೇಷಗಳ ಬಗ್ಗೆ ನಿರ್ದೇಶಕ ಪಿ. ವಾಸು ‘ಚಂದನವನ’ದ ಜೊತೆ ಮಾತನಾಡಿದ್ದಾರೆ.

ಬಹುಭಾಷಾ ನಿರ್ದೇಶಕ ಪಿ. ವಾಸು ಮತ್ತು ಶಿವರಾಜಕುಮಾರ್ ಸ್ನೇಹ ‘ರಥಸಪ್ತಮಿ’ಯಿಂದ ಆರಂಭ. ಈ ಚಿತ್ರಕ್ಕೆ ವಾಸು ಚಿತ್ರಕಥೆ ಬರೆದಿದ್ದರು. ಹಲವು ವರ್ಷಗಳ ನಂತರ ಈ ಜೋಡಿ ಕೂಡಿರುವ ‘ಶಿವಲಿಂಗ’ ಚಿತ್ರ ಇಂದು (ಫೆ.12) ತೆರೆಗೆ ಬರುತ್ತಿದೆ. ‘ಶಿವಲಿಂಗ’, ಶಿವರಾಜ್‌ರ ಪಾಲಿಗೆ ವಿಶೇಷವಾಗಿ ಕಾಣಲು ಪ್ರಮುಖ ಕಾರಣ ಇದು ಹಾರರ್ ಚಿತ್ರ ಎನ್ನುವುದು. ‘ಸಂಯುಕ್ತ’ ನಂತರ ಅವರು ಹಾರರ್ ಚಿತ್ರದಲ್ಲಿ ಅಭಿನಯಿಸಿರಲಿಲ್ಲ.

‘ಶಿವಲಿಂಗ’ದ ವಿಶೇಷಗಳೇನು? ಎನ್ನುವ ಪ್ರಶ್ನೆಗೆ– ‘ಇದು ಕ್ರೈಂ ತನಿಖೆಯ ಸುತ್ತಲಿನ ಕಥೆ. ಕೌಟುಂಬಿಕ ಡ್ರಾಮಾ ಇದೆ. ಸಂಗೀತ ಪ್ರಧಾನ ಚಿತ್ರ. ಇದನ್ನು ಹಾರರ್ ಸಿನಿಮಾ ಎಂದು ವರ್ಗೀಕರಿಸಿ ಹೇಳುವುದಿಲ್ಲ. ಆ್ಯಕ್ಷನ್, ಸೆಂಟಿಮೆಂಟ್ ಇದೆ. ಇಲ್ಲಿ ಹೇಳುತ್ತಿರುವುದು ಹೊಸ ವಿಷಯ. ಬಹುತೇಕ ಚಿತ್ರಗಳಲ್ಲಿ ನಾಯಕ ಇಲ್ಲವೆ ಅಮಾಯಕನ ಕೊಲೆಯಾಗುತ್ತದೆ. ಅದು ಗಂಡಸು ಇಲ್ಲವೇ ಹೆಂಗಸು ಇರಬಹುದು. ಆ ಕೊಲೆಯನ್ನು ಮಾಡಿದ್ದು ಯಾರು ಎಂದು ಕೊಲೆಯಾದ ವ್ಯಕ್ತಿಗೆ ಗೊತ್ತಿರುತ್ತದೆ. ಆ ಆತ್ಮ ಸೇಡು ತೀರಿಸಿಕೊಳ್ಳುತ್ತದೆ. ‘ಶಿವಲಿಂಗ’ದಲ್ಲಿ ಕೊಲೆಯಾಗುವುದು ಅಮಾಯಕ ಪಾತ್ರವೇ.

ಆದರೆ ಕೊಲೆ ಮಾಡಿದ್ದು ಯಾರು ಎನ್ನುವುದು ಕೊಲೆಯಾದ ವ್ಯಕ್ತಿಗೇ ಗೊತ್ತಿರುವುದಿಲ್ಲ. ಈ ಕೊಲೆಗೆ ಪ್ರಮುಖ ಸಾಕ್ಷಿ ಪಾರಿವಾಳ. ಸಿಐಡಿ ಅಧಿಕಾರಿ ಯಾವ ರೀತಿ ತನಿಖೆ ನಡೆಸುತ್ತಾನೆ, ಆ ಆತ್ಮ ಏನು ಹೇಳುತ್ತದೆ ಎನ್ನುವುದು ಕಥೆಯಲ್ಲಿನ ಕೌತುಕ’ ಎಂದು ಚಿತ್ರಕಥೆಯ ಸಣ್ಣ ಎಳೆಯನ್ನು ವಾಸು ಬಿಟ್ಟುಕೊಡುತ್ತಾರೆ.

ಪ್ರೀತಿಯ ಪಾರಿವಾಳ 
‘ಶಿವಲಿಂಗ’ ಚಿತ್ರದಲ್ಲಿ ಪಾರಿವಾಳ ‘ಸಾಕ್ಷಿ’ ರೂಪದಲ್ಲಿ ಬಳಕೆಯಾಗಿದೆ. ನಿರ್ದೇಶಕರು ಈ ಪಾರಿವಾಳದ ತಲಾಶ್‌ಗಾಗಿ ಮಹಾನಗರಗಳನ್ನೇ ಸುತ್ತಿದ್ದಾರಂತೆ. ಅಂತಿಮವಾಗಿ ಸಿಕ್ಕಿದ್ದು ಚಿನ್ನದ ಪದಕ ತೊಟ್ಟ ಪಾರಿವಾಳ. ಇದಕ್ಕೆ ಕೆಲವು ದಿನ ತರಬೇತಿ ನೀಡಿ ‘ಶಿವಲಿಂಗ’ದ ಭಾಗವಾಗಿಸಿದ್ದಾರೆ. ಈ ಪಾರಿವಾಳ ಯಾವಾಗ ಬರುತ್ತದೆ, ಏನು ಮಾಡುತ್ತದೆ ಎನ್ನುವುದು ವಿಶೇಷ ಕುತೂಹಲ ಎನ್ನುವುದು ನಿರ್ದೇಶಕರ ನುಡಿ.

‘ಚಿತ್ರದಲ್ಲಿ ಕಾಣುವುದು ಸಾಮಾನ್ಯ ಪಾರಿವಾಳ ಅಲ್ಲ. ಅದು ಚೆನ್ನೈನಿಂದ ದೆಹಲಿಗೆ 28 ದಿನಗಳಲ್ಲಿ ಹಾರಾಟ ನಡೆಸಿತ್ತು. ಚಿನ್ನದ ಪದಕ ಪಡೆದಿತ್ತು. ಪಾರಿವಾಳಗಳ ರೇಸ್‌ ಕೊಯಮತ್ತೂರು, ಮೈಸೂರು, ಚೆನ್ನೈ, ದೆಹಲಿ ಇತ್ಯಾದಿ ಕಡೆಗಳಲ್ಲಿ ನಡೆಯುತ್ತದೆ. ಸಾವಿರಾರು ಪಾರಿವಾಳಗಳನ್ನು ಏಕಕಾಲದಲ್ಲಿ ರೇಸ್‌ಗೆ ಬಿಡಲಾಗುತ್ತದೆ. ಪಾರಿವಾಳಗಳ ರೇಸ್ ನಡೆಯುವ ಒಂದು ಸ್ಥಳದಲ್ಲೇ ಈ ವಿಶೇಷ ಪಾರಿವಾಳ ಸಿಕ್ಕಿತು. ಅದರ ಪಯಣದ ಬಗ್ಗೆಯೇ ಚಿತ್ರದಲ್ಲಿ ಒಂದು ಹಾಡಿದೆ’ ಎನ್ನುತ್ತಾರೆ ವಾಸು. ಅಂದಹಾಗೆ, ಆ ಪಾರಿವಾಳದ ಹೆಸರು ‘ಸಾರಾ’.

‘ಹಿನ್ನೆಲೆ ಸಂಗೀತ ಚಿತ್ರದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ. 40ರಿಂದ 45ದಿನಗಳ ಕಾಲ ಸೌಂಡ್ ಬಗ್ಗೆ ಕೆಲಸ ಮಾಡಿದ್ದೇವೆ.  ಏಕಿಷ್ಟು ಪ್ರಾಮುಖ್ಯ ಎನ್ನುವುದು ಸಿನಿಮಾದಲ್ಲಿ ಗೊತ್ತಾಗಲಿದೆ. ‘ಶಿವಲಿಂಗ’ದ ಬಹುದೊಡ್ಡ ಭಾಗ ಎಂದರೆ ಟ್ರೈನ್ ಎಪಿಸೋಡ್. ಒಂದೂವರೆ ತಿಂಗಳು ರೈಲ್ವೆ ಇಲಾಖೆಯಿಂದ ಅನುಮತಿಗಾಗಿ ಕಾಯಬೇಕಾಯಿತು. 20 ದಿನಗಳ ಕಾಲ ಹೈದರಾಬಾದ್‌ನಲ್ಲಿ ಈ ಭಾಗ ಚಿತ್ರೀಕರಿಸಲಾಗಿದೆ’ ಎಂದು ವಾಸು ತಮ್ಮ ಚಿತ್ರದ ವಿಶೇಷಗಳನ್ನು ಪಟ್ಟಿಮಾಡಿದರು.

ನಟನೆಯ ಸವಿನೆನಪು 
ವಾಸು ಉತ್ತಮ ನಟರೂ ಹೌದು. ತಮಿಳು ಮತ್ತು ಮಲಯಾಳಂನ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಆದರೆ, ಕನ್ನಡ ಸಿನಿಮಾಗಳಲ್ಲಿ ಮಾತ್ರ ಈವರೆಗೆ ನಟಿಸಿಲ್ಲ. ‘ನಾನು ಸ್ನೇಹಕ್ಕಾಗಿ ನಟಿಸುವೆ. ಕೋಮಲ್ ಚಿತ್ರದಲ್ಲಿ ನಿರ್ದೇಶಕನ ಪಾತ್ರ ಮಾಡಬೇಕಿತ್ತು. ಸಾಧುಕೋಕಿಲಾ ಪಾತ್ರ ಮಾಡುವಂತೆ ಆಹ್ವಾನಿಸಲು ಚೆನ್ನೈಗೆ ಬಂದಿದ್ದರು. ಆ ಸಮಯದಲ್ಲಿ ಅಮೆರಿಕಕ್ಕೆ ಹೋಗಬೇಕಾದ್ದರಿಂದ ಸಾಧ್ಯವಾಗಲಿಲ್ಲ’ ಎಂದು ಕನ್ನಡ ಚಿತ್ರಗಳಲ್ಲಿನ ನಟನೆಯ ಅವಕಾಶ ತಪ್ಪಿಸಿಕೊಂಡಿದ್ದರೆ ಕಾಣಗಳನ್ನು ಹೇಳುತ್ತಾರೆ.

ತೆಲುಗಿನ ‘ಸೀನು’ ಚಿತ್ರದಲ್ಲಿ ನಟಿಸಿದ ಸಂದರ್ಭವನ್ನು ವಾಸು ನೆನಪಿಸಿಕೊಂಡರು. ‘‘ಆ ಸಂದರ್ಭದಲ್ಲಿ ರಾಜ್‌ಕುಮಾರ್ ಅವರ ಮನೆಗೆ ಹೋಗಿದ್ದೆ. ಪಾರ್ವತಮ್ಮನವರು– ‘ಸೀನು’ ಚಿತ್ರ ನೋಡಿದೆ. ಎಷ್ಟು ಚೆನ್ನಾಗಿ ನಟಿಸಿದ್ದೀರಿ ಎಂದರು. ಪಕ್ಕದಲ್ಲಿದ್ದ ಅಣ್ಣಾವ್ರು– ‘ವಾಸು ಒಳ್ಳೆಯ ನಟ, ಒಳ್ಳೆಯ ನಟ’ ಒತ್ತಿ ಹೇಳಿದರು. ವಾಸೂ ವಾಸೂ...ಎಂದು ರಾಗವಾಗಿ ಕರೆಯುತ್ತಿದ್ದರು’’ ಎಂದು ವಾಸು ಸವಿನೆನಪೊಂದನ್ನು ಮೆಲುಕು ಹಾಕಿದರು.

ಶಿವರಾಜ್‌ ಕುಮಾರ್ ಅವರಿಗೆ ಮತ್ತೊಂದು ಚಿತ್ರ ನಿರ್ದೇಶಿಸಲು ವಾಸು ಚಿತ್ರಕಥೆ ಸಿದ್ದಮಾಡಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ‘ಐಫಾ’ ಉತ್ಸವದ ವೇಳೆ ಇಬ್ಬರ ನಡುವೆ ಮಾತುಕತೆ ನಡೆದು, ಶಿವಣ್ಣನ ಕಡೆಯಿಂದ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ. 

ಕನ್ನಡದ ನಂಟು
‘ಗುರಿ’ ಚಿತ್ರದೊಂದಿಗೆ ಕನ್ನಡ ಚಿತ್ರ ನಿರ್ದೇಶನಕ್ಕೆ ಮುನ್ನುಡಿ ಬರೆದವರು ವಾಸು. 1978ರಲ್ಲಿ ಅವರ ತಂದೆ ಉದಯ್ ಕುಮಾರ್, ಅಂಬರೀಷ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಕೆ.ಎಸ್.ಎಲ್. ಸ್ವಾಮಿ ನಿರ್ದೇಶಿಸಿದ್ದ ‘ಬನಶಂಕರಿ’ ಚಿತ್ರವನ್ನು ತಮ್ಮ ತಂದೆ ನಿರ್ಮಿಸಿ, ವಿತರಣೆ ಮಾಡಿದ್ದನ್ನು ವಾಸು ನೆನಪು ಮಾಡಿಕೊಂಡರು. 

‘‘ನನ್ನ ಪತ್ನಿಯ ಅಣ್ಣ ಮತ್ತು ಶಿವಣ್ಣ ಶಾಲಾದಿನಗಳ ಸ್ನೇಹಿತರು. ನಾನು ಸಹ ನಿರ್ದೇಶಕನಾಗಿದ್ದಾಗ ಮೊದಲ ಬಾರಿಗೆ ಚಿತ್ರಕಥೆ ಬರೆಸಲು ಚೆನ್ನೈನಿಂದ ಎನ್. ವೀರಸ್ವಾಮಿ ಅವರು ಕರೆಸಿದರು. ಅದು ‘ಶಿಕಾರಿ’ ಚಿತ್ರ. ‘ನೀನು ಮುಂದೆ ದೊಡ್ಡ ನಿರ್ದೇಶಕನಾಗುವೆ’ ಎಂದು ವೀರಸ್ವಾಮಿ ಅವರು ಹರಸಿದ್ದರು’’ ಎಂದು ಕನ್ನಡ ಚಿತ್ರದೊಂದಿಗಿನ ತಮ್ಮ ನಂಟನ್ನು ವಾಸು ನೆನಪಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT