ADVERTISEMENT

ಪ್ರಚಾರಕ್ಕೆ ಅಂತರ್ಧಾನ; ತೆರೆಯಲ್ಲಷ್ಟೇ ದರ್ಶನ!

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2014, 19:30 IST
Last Updated 17 ಏಪ್ರಿಲ್ 2014, 19:30 IST

ಸಿನಿಮಾದ ಬಿಡುಗಡೆ ಮುನ್ನ ಸುದ್ದಿಗೋಷ್ಠಿಯಲ್ಲಿ ಹಾಡು, ಕೆಲವು ದೃಶ್ಯ ತೋರಿಸುವುದು ಸಾಮಾನ್ಯ. ಆದರೆ ‘ಅಗ್ರಜ’ ಚಿತ್ರದ ಬಿಡುಗಡೆಗೆ ಮುನ್ನ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಆಗಿದ್ದೇ ಬೇರೆ. ‘ಈಗ ಹಾಡು, ದೃಶ್ಯ ತೋರಿಸ್ತೇವೆ. ಪ್ಲೀಸ್‌ ಯಾರೂ ವಿಡಿಯೋ ಮಾಡಿಕೊಳ್ಬೇಡಿ’ ಅಂತ ನಿರ್ಮಾಪಕ ಗೋವರ್ಧನ್ ಮನವಿ ಮಾಡಿದಾಗ ಎಲ್ಲರೂ ತಬ್ಬಿಬ್ಬು! ಅದಕ್ಕೆ ಕಾರಣ ದರ್ಶನ್‌ ಹಾಗೂ ನಿರ್ಮಾಪಕರ ಮಧ್ಯೆ ಮಾಡಿಕೊಂಡ ಕರಾರು.

ಐಎಎಸ್‌ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವ ದರ್ಶನ್‌, ಚಿತ್ರ ಬಿಡುಗಡೆಯಾಗಿ 25ದಿನಗಳವರೆಗೆ ತಮ್ಮ ಫೋಟೋ ಅಥವಾ ದೃಶ್ಯಗಳನ್ನು ಪ್ರಚಾರಕ್ಕೆ ಬಳಸುವಂತಿಲ್ಲ ಎಂಬ ಕರಾರು ಹಾಕಿದ್ದಾರಂತೆ. ಅದು ಯಾಕೆ ಎಂಬ ಸ್ಪಷ್ಟನೆ ನಿರ್ಮಾಪಕರಿಂದ ಬರಲಿಲ್ಲ. ಮಧ್ಯೆ ಪ್ರವೇಶಿಸಿದ ಜಗ್ಗೇಶ್, ‘ದರ್ಶನ್ ಪಾತ್ರ ಸಿನಿಮಾಕ್ಕೆ ಶಕ್ತಿ ತುಂಬುವಂತಿದೆ. ಆದರೆ ಅವರ ಚಿತ್ರ, ದೃಶ್ಯ ಪ್ರಚಾರಕ್ಕೆ ಬಳಸಿಕೊಂಡರೆ ಯಾವುದೋ ತಪ್ಪು ಸಂದೇಶ ರವಾನೆಯಾಗಬಹುದು ಎಂಬುದರ ಹಿನ್ನೆಲೆಯಲ್ಲಿ ಈ ಕರಾರು ಮಾಡಿಕೊಂಡಿರಬಹುದು. ಒಬ್ಬ ನಟನಾಗಿ ನಾನೂ ಅದಕ್ಕೆ ಸಹಮತ ವ್ಯಕ್ತಪಡಿಸುತ್ತೇನೆ’ ಎಂದರು. ಅಲ್ಲಿಗೆ ಎಲ್ಲ ಕ್ಯಾಮೆರಾಗಳು ಬಂದ್‌!

‘ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಸಿನಿಮಾ ಬಂದಿವೆ. ಆದರೆ ಅವೆಲ್ಲಕ್ಕಿಂತ ಹೆಚ್ಚು ಪರಿಣಾಮ ಬೀರುವ ಚಿತ್ರವಿದು. ಭ್ರಷ್ಟಾಚಾರ ನಡೆಸುವವರು ಈ ಸಿನಿಮಾ ನೋಡಿದರೆ ಪರಿವರ್ತನೆ ಆಗಬಹುದು’ ಎಂಬ ನಿರೀಕ್ಷೆಯೊಂದಿಗೆ ‘ಅಗ್ರಜ’ನನ್ನು ತೆರೆಗೆ ತರುತ್ತಿದ್ದಾರೆ ನಿರ್ಮಾಪಕ ಗೋವರ್ಧನ್‌. ಮೊದಲ ಬಾರಿಗೆ ಆ್ಯಕ್ಷನ್‌–ಕಟ್‌ ಹೇಳುತ್ತಿರುವ ಎಚ್‌.ಎಂ. ಶ್ರೀನಂದನ್‌, ಚಿತ್ರ ಬಿಡುಗಡೆ ಕುರಿತ ಆತಂಕದಲ್ಲಿದ್ದರು. ಎಲ್ಲರೂ ನೋಡಬಹುದಾದ ಚಿತ್ರವಿದು ಎಂದರು.

‘ಭ್ರಷ್ಟಾಚಾರ ಅಂದಮೇಲೆ ಲಂಚ ಹೊಡೆಯುವವನು ಇರಲೇಬೇಕಲ್ವೇ? ಹೆಂಡ್ತಿ ಒತ್ತಾಯಕ್ಕೆ ಮಣಿದು ಲಂಚ ತಗೊಳ್ಳೋ ಅಧಿಕಾರಿ ಪಾತ್ರ ನಂದು’ ಅಂತ ಪರಿಚಯಿಸಿಕೊಂಡರು ನಟ, ನಿರ್ದೇಶಕ ಓಂಪ್ರಕಾಶ್. ಜಗ್ಗೇಶ್‌ ಜತೆ ನಟಿಸಲು ಅವಕಾಶ ಸಿಕ್ಕಿದ್ದು ಅದೃಷ್ಟ ಎಂಬ ಖುಷಿ ಸಂಜನಾ ಅವರದು. ಇನ್ನೊಬ್ಬ ನಾಯಕಿ ಪೂರ್ಣಿಮಾ, ಜಗ್ಗೇಶ್‌ ಕಟ್ಟಾ ಅಭಿಮಾನಿ. ಅವರ ಜತೆ ಅಭಿನಯಿಸುವ ಅವಕಾಶ ಸಿಕ್ಕಿದ್ದಕ್ಕೆ ಪತ್ರಿಕಾಗೋಷ್ಠಿಯಲ್ಲೇ ಆನಂದಭಾಷ್ಪ ಹರಿಸಿದರು. ಈ ಶುಕ್ರವಾರ (ಏ. 18) ರಾಜ್ಯದ 140 ಚಿತ್ರಮಂದಿರಗಳಲ್ಲಿ ‘ಅಗ್ರಜ’ ಬಿಡುಗಡೆಯಾಗಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.