ADVERTISEMENT

ಬಾಹುಬಲಿ ಅಬ್ಬರ: 'ರಾಗ' ಸಿನಿಮಾಕ್ಕೆ ಅಗತ್ಯವಿದೆ ಕನ್ನಡಿಗರ ಬೆಂಬಲ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2017, 8:03 IST
Last Updated 28 ಏಪ್ರಿಲ್ 2017, 8:03 IST
ಬಾಹುಬಲಿ ಅಬ್ಬರ: 'ರಾಗ' ಸಿನಿಮಾಕ್ಕೆ ಅಗತ್ಯವಿದೆ ಕನ್ನಡಿಗರ ಬೆಂಬಲ
ಬಾಹುಬಲಿ ಅಬ್ಬರ: 'ರಾಗ' ಸಿನಿಮಾಕ್ಕೆ ಅಗತ್ಯವಿದೆ ಕನ್ನಡಿಗರ ಬೆಂಬಲ   

ಬೆಂಗಳೂರು: ಬಾಹುಬಲಿ-2 ಚಿತ್ರದ ಪ್ರದರ್ಶನಕ್ಕಾಗಿ ಸಾಕಷ್ಟು ಚಿತ್ರ ಮಂದಿರಗಳಿಂದ 'ರಾಗ' ಚಿತ್ರವನ್ನು ಕಿತ್ತು ಹಾಕಲಾಗಿದೆ. ರಾಗ ಚಿತ್ರ ಎತ್ತಂಗಡಿಯಿಂದಾಗಿ ಬೇಸರಗೊಂಡ ನಟ -ನಿರ್ಮಾಪಕ ಮಿತ್ರ ಅವರು ನಿನ್ನೆ ಫೇಸ್‍ಬುಕ್ ಲೈವ್ ಮೂಲಕ ತಮ್ಮ ಚಿತ್ರಕ್ಕೆ ಬೆಂಬಲ ನೀಡುವಂತೆ ಒತ್ತಾಯಿಸಿದ್ದಾರೆ.

ಜೀವನದಲ್ಲಿ ಕಷ್ಟ ಬಿದ್ದು ಮಾಡಿರುವ ಪ್ರಯತ್ನ ಇದು. ಹಾಗಾಗಿ ರಿಕ್ವೆಸ್ಟ್ ಮಾಡ್ತಾ ಇದ್ದೀನಿ, ಆ ಸಿನಿಮಾದ ಮುಂದೆ ರಾಗ ಕಳೆದು ಹೋಗಬಾರದು.ಅಣ್ಣಾವ್ರ ಶಕ್ತಿ ಮುಂದೆ ಬೇರೆ ಯಾವ ಶಕ್ತಿಯೂ ಇಲ್ಲ, ನೇತ್ರದಾನ ಮಾಡುವ ಮೂಲಕ ಅವರು ಮಾದರಿಯಾದವರು. ಕನ್ನಡದ ಕಲಾವಿದ ಗೆಲ್ಬೇಕಾಗಿದೆ. ಸಿನಿಮಾವನ್ನು ಗೆಲ್ಲಿಸುವ ಜವಾಬ್ದಾರಿ ನಮಗಿದೆ ಎಂದಿದ್ದಾರೆ.

ದೊಡ್ಡ ಬಜೆಟ್‌ನ ಪರಭಾಷಾ ಚಿತ್ರ ಬಿಡುಗಡೆಯಾಗುತ್ತಿರುವ ಕಾರಣಕ್ಕೆ ‘ರಾಗ’ದಂತಹ ಉತ್ತಮ ಕನ್ನಡ ಚಿತ್ರಕ್ಕೆ ನೆಲೆ ಇಲ್ಲದಂತಾಗಿದೆ’ ಎಂದು ರಾಗ ಸಿನಿಮಾದ ನಿರ್ದೇಶಕ ಪಿ.ಸಿ.ಶೇಖರ್‌ ಕೂಡಾ ವಿಡಿಯೊ ಸಂದೇಶ ಮೂಲಕ ನೋವು ತೋಡಿಕೊಂಡಿದ್ದರು.

ADVERTISEMENT

'ರಾಗ’ ಕನ್ನಡದ ಅತ್ಯುತ್ತಮ ಸಿನಿಮಾ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಬಹುದಾದ ಸಿನಿಮಾ. ಬಾಹುಬಲಿಯಂತಹ ದೊಡ್ಡ ಸಿನಿಮಾ ಬರುತ್ತಿರುವುದರಿಂದ ನಿಮ್ಮ ಸಣ್ಣ ಸಿನಿಮಾಗೆ ಥೀಯೆಟರ್‌ ನೀಡಲು ಸಾಧ್ಯವಿಲ್ಲ ಎಂದು ಚಿತ್ರಮಂದಿರಗಳ ಮಾಲೀಕರು ಹೇಳುತ್ತಿದ್ದಾರೆ. ‘ರಾಗ’ ನಾವು ಹಣಕ್ಕಾಗಿ ಮಾಡಿದ ಸಿನಿಮಾವಲ್ಲ. ಇದು ಜನರಿಗಾಗಿ ಮಾಡಿದ ಸಿನಿಮಾ.  ಇಲ್ಲಿಯವರೆಗೆ ಸಿನಿಮಾ ನೋಡಿ ಪ್ರೋತ್ಸಾಹಿಸಿರುವವರಿಗೆ ಧನ್ಯವಾದ. ಜನ ನಮ್ಮ ಸಿನಿಮಾ ಮೆಚ್ಚಿಕೊಂಡ ಬಗ್ಗೆ ಖುಷಿ ಇದೆ. ಆದರೆ, ಚಿತ್ರಮಂದಿರಗಳ ಮಾಲೀಕರ ಧೋರಣೆಯ ಬಗ್ಗೆ ನೋವಿದೆ. ಶುಕ್ರವಾರದಿಂದ ‘ರಾಗ’ ಸಿನಿಮಾ ಚಿತ್ರಮಂದಿರಗಳಲ್ಲಿ ಇರುವುದಿಲ್ಲ ಎಂದು ಹೇಳಿದ್ದರು.

[related]

ಆದರೆ ಜನರ ಒತ್ತಾಯ ಹಾಗೂ ಸಿನಿಮಾರಂಗದ ಪ್ರಮುಖರ ಮಧ್ಯಪ್ರವೇಶದಿಂದಾಗಿ 'ರಾಗ' ಸಿನಿಮಾ ಪ್ರಮುಖ ಚಿತ್ರಮಂದಿರಗಳಲ್ಲಿ ಎರಡು ಶೋಗಳನ್ನು ಮುಂದುವರಿಸಿದೆ.

ರಾಗ ಬೆಂಬಲಕ್ಕೆ ನಿಂತ ನೆಟಿಜನ್‍ಗಳು


ಬಾಹುಬಲಿ ಅಬ್ಬರದಲ್ಲಿ ರಾಗ ಚಿತ್ರ ಕಳೆದು ಹೋಗಬಾರದು. ಕನ್ನಡಿಗರು ಈ ಸಿನಿಮಾವನ್ನು ಉಳಿಸಿಕೊಳ್ಳಲೇ ಬೇಕು. ಚಿತ್ರ ಮಂದಿರಗಳಲ್ಲಿ ರಾಗ ಸಿನಿಮಾವನ್ನು ನೋಡಿ. ರಾಗ ಸಿನಿಮಾ ನೋಡಿದವರು, ನೋಡುತ್ತಿರುವವರು ಚಿತ್ರಮಂದಿರದ ಅಥವಾ ಟಿಕೆಟ್‍ನ ಚಿತ್ರ ಹಾಕಿ #SupportRaaga ಎಂಬ ಹ್ಯಾಶ್ ಟ್ಯಾಗ್‍ನೊಂದಿಗೆ ಪೋಸ್ಟ್ ಹಾಕುವಂತೆ ಕರೆ ನೀಡಲಾಗಿದೆ.

ಬಾಹುಬಲಿ ಮುಂದೆ ನಿಂತು ಗೆದ್ದಿತ್ತು ರಂಗಿತರಂಗ


ಕಳೆದ ವರ್ಷ ಬಾಹುಬಲಿ ಚಿತ್ರ ಬಿಡುಗಡೆಯಾದಾಗ ಸಿನಿಮಾ ಮಂದಿರಗಳಲ್ಲಿದ್ದದ್ದು 'ರಂಗಿತರಂಗ' ಚಿತ್ರ. ಬಾಹುಬಲಿಗೆ ಜಾಗ ನೀಡುವುದಕ್ಕಾಗಿ ರಂಗಿ ತರಂಗ ಬಲಿಯಾಗುವ ಸಾಧ್ಯತೆ ಇತ್ತು. ಆದರೆ ಬಾಹುಬಲಿ ಅಬ್ಬರದ ನಡುವೆ ಗಟ್ಟಿ ಕಥಾವಸ್ತುವಿರುವ ರಂಗಿತರಂಗ ತಮ್ಮ ವೀಕ್ಷಕರನ್ನು ಉಳಿಸಿಕೊಂಡಿತು.
ಇದೀಗ ಬಾಹುಬಲಿ-2ಗೆ ರಾಗ ಚಿತ್ರ ಬಲಿಯಾಗುತ್ತಿದೆ. ಪರಭಾಷಾ ಚಿತ್ರಗಳ ನಡುವೆ ಕನ್ನಡ ಚಿತ್ರವೊಂದು ಚಿತ್ರಮಂದಿರದಲ್ಲಿ ಉಳಿಯಬೇಕಾದರೆ ಜನರ ಬೆಂಬಲ ಅಗತ್ಯವಿದೆ.

ಕನ್ನಡ ಚಿತ್ರವನ್ನು ನೋಡಿ, ಗೆಲ್ಲಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.