ADVERTISEMENT

ಮನರಂಜನೆಯ ಪ್ರಯೋಗ!

ಪ್ರಜಾವಾಣಿ ವಿಶೇಷ
Published 24 ಡಿಸೆಂಬರ್ 2015, 19:52 IST
Last Updated 24 ಡಿಸೆಂಬರ್ 2015, 19:52 IST

ಚಿನಕುರಳಿಯಂಥ ಮಾತುಗಳನ್ನು ಬರೆಯುವುದರಲ್ಲಿ ಸಿದ್ಧಹಸ್ತರಾದ ಮಂಜು ಮಾಂಡವ್ಯ ‘ಮಾಸ್ಟರ್‌ ಪೀಸ್‌’ ಮೂಲಕ ನಿರ್ದೇಶಕರಾಗಿದ್ದಾರೆ. ‘ಚಂದನವನ’ಕ್ಕೆ ನೀಡಿದ ಸಂದರ್ಶನದಲ್ಲಿನ ಅವರ ಮಾತುಗಳಲ್ಲಿ, ‘ಮಾಸ್ಟರ್‌ ಪೀಸ್‌’ ಚಿತ್ರದಲ್ಲೂ ‘ಚಿನಕುರಳಿತನ’ ಇರುವ ಸೂಚನೆಗಳಿವೆ.

* ‘ಮಾಸ್ಟರ್ ಪೀಸ್’ ಚಿತ್ರೀಕರಣದ ಜರ್ನಿ ಹೇಗಿತ್ತು?
ಮುಂದೇನಾಗುತ್ತದೆ... ಮುಂದೇನಾಗುತ್ತದೆ ಎನ್ನುವಂತೆ ಚಿತ್ರಕಥೆ ಇದೆ. ಚಿತ್ರೀಕರಣದ ಜರ್ನಿ ಸೊಗಸಾಗಿತ್ತು.

* ಯಶ್‌ಗೆ ಕಥೆ ಒಪ್ಪಿಸುವುದು ಕಷ್ಟ ಎನ್ನುವ ಮಾತು ಗಾಂಧಿನಗರದಲ್ಲಿ ಚಾಲ್ತಿಯಲ್ಲಿದೆ. ಈ ಕಥೆ ಯಾವ ರೀತಿ ಅವರಿಗೆ ಇಷ್ಟವಾಯಿತು?
ನಿಮಗೊಂದು ಸಿನಿಮಾ ಮಾಡಬೇಕು ಎಂದು ‘ರಾಜಾಹುಲಿ’ ಚಿತ್ರದ ಸಮಯದಲ್ಲೇ ಯಶ್ ಅವರನ್ನು ಕೇಳಿದ್ದೆ. ‘ಆಕ್ಷನ್ ಕಥೆ ಬೇಕು. ಅಲ್ಲಿ ಮನರಂಜನೆಯೂ ಇರಬೇಕು. ಅಂಥ ಕಥೆ ಮಾಡಿಕೊಂಡು ಬನ್ನಿ’ ಎಂದಿದ್ದರು. ಮೂರು ಕಥೆ ಮಾಡಿದೆ. ಆ ಮೂರರಲ್ಲಿ ಈಗ ಮಾಡಿರುವ ಕಥೆ ಅವರಿಗೆ ಇಷ್ಟವಾಯಿತು. ಯಶ್ ಅವರನ್ನು ಇಲ್ಲಿಯವರೆಗೂ ಆಕ್ಷನ್ ಇಮೇಜಿನಲ್ಲಿ ನೋಡಿದ್ದರೂ ಇಲ್ಲಿ ಭಿನ್ನವಾಗಿ ಕಾಣುತ್ತಾರೆ. ‘ರಾಜಾಹುಲಿ’ಯಲ್ಲಿ ಆಕ್ಷನ್ ಇತ್ತು, ಅದು ನೈಜವಾಗಿತ್ತು. ‘ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ’ಯಲ್ಲಿ ಲವರ್ ಬಾಯ್ ವಿತ್ ಆಕ್ಷನ್ ಪಾತ್ರ ಯಶ್‌ ಅವರದಾಗಿತ್ತು. ಆದರೆ ‘ಮಾಸ್ಟರ್ ಪೀಸ್’ನಲ್ಲಿ ಪೂರ್ಣ ಪ್ರಮಾಣದ ಹೀರೊಯಿಸಂ ಇದೆ. ಅವರಿಗೆ ಈಗಾಗಲೇ ಒಂದು ಇಮೇಜ್ ಇದೆ ಮತ್ತು ದೊಡ್ಡ ಅಭಿಮಾನಿ ಬಳಗವಿದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಚಿತ್ರಕಥೆ ಮಾಡಿರುವೆ.

* ಯಶ್ ಅವರನ್ನು ನೆಗೆಟಿವ್ ಪಾತ್ರದಲ್ಲಿ ತೋರಿಸಿದ್ದೀರಂತೆ?
ಹೌದು. ಆ ಪಾತ್ರವೇ ಹಾಗಿದೆ. ಪಾತ್ರದ ಬಗ್ಗೆ ನಾನು ಮತ್ತು ಯಶ್ ಚರ್ಚಿಸಿದ್ದೇವೆ. ಆರಂಭದಲ್ಲಿ ಅಭಿಮಾನಿಗಳು ಹೇಗೆ ಸ್ವೀಕರಿಸುತ್ತಾರೆ ಎನಿಸಿತ್ತು. ಆದರೆ ಖಂಡಿತ ಎಂಜಾಯ್ ಮಾಡುತ್ತಾರೆ. ಆ ಪಾತ್ರ ನೆಗೆಟಿವ್ ಇರಬಹುದು. ಆದರೆ ನಾಯಕ ಹೇಳುವ ಮಾತುಗಳಲ್ಲಿ ಸತ್ಯ ಇರಬಹುದು ಎನ್ನುವ ಯೋಚನೆ ನೋಡುಗರಿಗೆ ಬರುತ್ತದೆ. ಸಂಭಾಷಣೆ ಸಮತೋಲನದಿಂದ ಕೂಡಿದೆ.

* ಕ್ರಾಂತಿಕಾರಿ ಭಗತ್ ಸಿಂಗ್ ಅವರ ಕಥೆ ಚಿತ್ರದಲ್ಲಿ ಯಾವ ಪ್ರಮಾಣದಲ್ಲಿದೆ?
ಭಗತ್ ಸಿಂಗ್ ಅವರ ಬದುಕಿನಲ್ಲಿ ನಡೆದ ಒಂದು ಘಟನೆ ಚಿತ್ರದಲ್ಲಿದೆ. ಆ ಘಟನೆ ಏನು– ಎಲ್ಲಿ ನಡೆಯಿತು ಎನ್ನುವುದನ್ನು ತೋರಿಸಿದ್ದೇವೆ. ಆ ನೈಜ ಘಟನೆಯನ್ನು ಸಿನಿಮ್ಯಾಟಿಕ್ ರೀತಿ ನಿರೂಪಿಸಿದ್ದೇನೆ. ರಾಜಗುರು, ಚಂದ್ರಶೇಖರ್ ಅಜಾದ್ ಪಾತ್ರಗಳು ಬರುತ್ತವೆ. ಇವೆಲ್ಲ ಸಿನಿಮಾದ ಒಂದು ಸಣ್ಣ ಭಾಗ ಅಷ್ಟೇ.

* ಮೊದಲ ನಿರ್ದೇಶನದ ಖುಷಿ ಹೇಗಿದೆ?
ನನಗೆ ವಿಶೇಷ ಖುಷಿ ಎಂದೇನೂ ಅನ್ನಿಸುತ್ತಿಲ್ಲ. ಈಗಾಲೇ 25ಕ್ಕೂ ಹೆಚ್ಚು ಸಿನಿಮಾಗಳಿಗೆ ಡೈಲಾಗ್ ಬರೆದಿದ್ದೇನೆ. ಸಿನಿಮಾರಂಗದಲ್ಲಿ ಹಲವು ವರ್ಷಗಳಿಂದ ಇರುವುದರಿಂದ ಮೊದಲ ಚಿತ್ರ ಎಂದು ಅನ್ನಿಸಿಲ್ಲ. ನಿರ್ದೇಶನದ ಮೊದಲ ಪ್ರಯತ್ನದಲ್ಲೇ ಒಬ್ಬ ಸ್ಟಾರ್‌ ಸಿನಿಮಾ ಮಾಡಿದ ಖುಷಿಯಂತೂ ಇದೆ.

* ಯಾವ ಕಾರಣಗಳನ್ನು ಕೊಟ್ಟು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುತ್ತಿದ್ದೀರಿ?
ಮನರಂಜನೆಯೇ ಮೊದಲ ಕಾರಣ. ಶೇ 100ರಷ್ಟು ಮನರಂಜನೆ ಸಿಕ್ಕೇ ಸಿಕ್ಕುತ್ತದೆ. ಬೋರ್ ಆಗುವುದಿಲ್ಲ ಎನ್ನುವ ಭರವಸೆ  ಕೊಡುವೆ. ಮನರಂಜನೆ ಬಿಟ್ಟು ಮತ್ತೇನು ತೋರಿಸಿದ್ದೇನೋ ಅದು ನನ್ನ ವೈಯಕ್ತಿಕ. ಅದನ್ನು ತೆಗೆದುಕೊಂಡರೆ ತೆಗೆದುಕೊಳ್ಳಬಹುದು, ಬಿಟ್ಟರೆ ಬಿಡಬಹುದು. ಉಳಿದಂತೆ ಪಂಚಿಗ್ ಡೈಲಾಗ್ ಇದ್ದೇ ಇರುತ್ತದೆ. ಪಕ್ಕಾ ಮಾಸ್ ಎಲಿಮೆಂಟ್.

* ‘ಮಾಸ್ಟರ್‌ ಪೀಸ್’ ನಿಮ್ಮ ವೃತ್ತಿ ಬದುಕಿಗೆ ಎಷ್ಟು ಮಹತ್ವದ್ದು?
‘ಮಾಸ್ಟರ್ ಪೀಸ್’ ಆಗಿಯೇ ನಿಲ್ಲುತ್ತದೆ. ಚಿತ್ರದ ಟೈಟಲ್‌ನಿಂದಲೇ ಒಂದು ಹವಾ ಸೃಷ್ಟಿಯಾಗಿದೆ. ರಾಮ್‌ಗೋಪಾಲ್ ವರ್ಮ, ಮಣಿರತ್ನಂ ಅವರಂಥ ಲೆಜೆಂಡ್ ನಿರ್ದೇಶಕರು ಟೈಟಲ್ ಮೆಚ್ಚಿ ಮಾತನಾಡಿದ್ದಾರೆ. ‘ಈ ಟೈಟಲ್ ನಮಗೆ ಹೊಳೆದಿಲ್ಲವಲ್ಲ’ ಎಂದು ವರ್ಮ ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು 250 ಚಿತ್ರಮಂದಿರಗಳಲ್ಲಿ ಮತ್ತು ಹೊರ ರಾಜ್ಯಗಳ 70–80 ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆ ಕಾಣುತ್ತಿದೆ. ಜನವರಿ ಎರಡನೇ ವಾರದಲ್ಲಿ ವಿದೇಶಗಳಲ್ಲೂ ತೆರೆಗೆ ಬರಲಿದೆ.

ಭಗತ್ ಸಿಂಗ್ ಸನ್ನಿವೇಶದ ಚಿತ್ರೀಕರಣ ನಡೆಯುತ್ತಿತ್ತು. ಕಾಕತಾಳೀಯ ಎನ್ನುವಂತೆ ಅಂದೇ ಭಗತ್ ಸಿಂಗ್ ಅವರ ಜನ್ಮ ದಿನ. ಸಹಾಯಕರೊಬ್ಬರು ಈ ಬಗ್ಗೆ ಹೇಳಿದರು. ರೋಮಾಂಚನವಾಯಿತು. ಸಿಖ್‌ ಜನರ ಪೇಟವನ್ನು ಕಟ್ಟಲು ಜಸ್ವೀರ್ ಸಿಂಗ್ ಎನ್ನುವವರನ್ನು ಕರೆಸಿಕೊಳ್ಳಲಾಗಿತ್ತು. ಅವರು ಅಮೃತಸರದಿಂದ ಕಡಗ ತರಿಸಿ ಯಶ್ ಅವರಿಗೆ ತೊಡಿಸಿದರು.

* ಪಕ್ಕಾ ಮಾಸ್ ಮನರಂಜನೆ ಎಂದಿರಿ. ಅಂದರೆ ಸಿದ್ಧ ಸೂತ್ರಗಳ ನೆರಳಿನಲ್ಲೇ ಕಥೆ ನಿರೂಪಿಸಿರುವಿರಾ?
ನಾನು ಬೇರೆಯದ್ದೇ ಆದ ರೀತಿ ಸಿನಿಮಾ ಮಾಡೋಣ ಎಂದುಕೊಂಡು ಚಿತ್ರರಂಗಕ್ಕೆ ಬಂದಿದ್ದು. ಮನರಂಜನೆಗೆ ಏನೆಲ್ಲ ಬೇಕೋ ಅದನ್ನು ಮಾಡಿದ್ದೇನೆ. ಸಾಮಾನ್ಯವಾಗಿ ಮೊದಲ ಬಾರಿ ನಿರ್ದೇಶನ ಮಾಡುವವರು ಆಯ್ಕೆ ಮಾಡಿಕೊಳ್ಳುವುದು ಪ್ರೇಮಕಥೆಗಳನ್ನು. ನಾನು ಆ ರೀತಿ ಮಾಡಿಲ್ಲ. ಪ್ರಯೋಗಾತ್ಮಕ ಅಂಶಗಳೂ ಚಿತ್ರದಲ್ಲಿವೆ. ನನ್ನ ವೃತ್ತಿ ಬದುಕಿಗೂ ಇದು ಪ್ರಯೋಗವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT