ADVERTISEMENT

ಮಾತು ‘ಪಟಾಕಿ’; ಕೈಯಲ್ಲಿ ತುಪಾಕಿ!

​ಪ್ರಜಾವಾಣಿ ವಾರ್ತೆ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ಪಟಾಕಿ ರನ್ಯಾ, ಗಣೇಶ್‌
ಪಟಾಕಿ ರನ್ಯಾ, ಗಣೇಶ್‌   

* ‘ಪಟಾಕಿ’ ಪೊಲೀಸ್ ವಿಶೇಷ ಏನು?

ಹಾಸ್ಯ, ಸೆಂಟಿಮೆಂಟ್, ಆ್ಯಕ್ಷನ್, ಲವ್, ರೊಮಾನ್ಸ್ ಹಾಗೂ ಥ್ರಿಲ್ – ಇವೆಲ್ಲದರ ಹದ ‘ಪಟಾಕಿ’ಯಲ್ಲಿ ಬೆರೆತಿದೆ. ಸಂದರ್ಭಗಳೇ ಆ್ಯಕ್ಷನ್ ಬೇಡುವಂತಹ ದೃಶ್ಯಗಳು ಕಥೆಯಲ್ಲಿ ಅಡಕವಾಗಿವೆ. ಚಿತ್ರದಲ್ಲಿ ಖಡಕ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ, ನನಗಿರುವ ಇಮೇಜ್‌ನಿಂದ ತೀರಾ ಹೊರತಾದ ಪಾತ್ರ ಇದೇನಲ್ಲ. ನನ್ನ ಹಳೆಯ ಗೆಟಪ್ ಬಯಸುವವರಿಗೆ ಮತ್ತು ಹೊಸ ಗೆಟಪ್‌ನಲ್ಲಿ ನೋಡಲು ಇಚ್ಛಿಸುವವರನ್ನು ಚಿತ್ರ ನಿರಾಶೆ ಮಾಡುವುದಿಲ್ಲ. ತೀರಾ ಬೋಲ್ಡ್ ಅಲ್ಲದ ಹಾಗೂ ಪ್ರೇಕ್ಷಕರಿಗೆ ‘ಅಬ್ಬಾ! ಸಾಕಪ್ಪ’ ಎನಿಸದಂತಹ ಪಾತ್ರ ನನ್ನದು. ಒಂದು ಸಿನಿಮಾ ನೋಡಿ ಜನ ನಗುತ್ತಾರೆ, ಅಳುತ್ತಾರೆ, ಕೂಗುತ್ತಾರೆ ಅಂದರೆ ಸಿನಿಮಾದೊಳಗೆ ಹೋಗಿದ್ದಾರೆ ಎಂದರ್ಥ. ಪ್ರೇಕ್ಷಕರನ್ನು ಅಂತಹ ಎಮೋಷನ್‌ಗೆ ಕರೆದೊಯ್ಯುವ ಎಲ್ಲಾ ಅಂಶಗಳು ‘ಪಟಾಕಿ’ಯಲ್ಲಿವೆ.

* ಲವರ್ ಬಾಯ್ ಆಗಿದ್ದವರು ಪೊಲೀಸ್ ಆಗಿದ್ದೀರಿ. ಪಾತ್ರಕ್ಕಾಗಿ ಹೇಗೆ ತಯಾರಿ ನಡೆಸಿದ್ದಿರಿ?

ADVERTISEMENT

ಪೊಲೀಸ್ ಪಾತ್ರ ಎಂದ ತಕ್ಷಣ ಕಣ್ಣ ಮುಂದೆ ಹಲವು ನಟರ ಚಿತ್ರಗಳು ಬರುತ್ತವೆ. ಅಂತಹವರ ಸಿನಿಮಾ ನೋಡಿಕೊಂಡೇ ಬೆಳೆದವನು ನಾನು. ಯಾರೊಬ್ಬರ ಅನುಕರಣೆ ಮಾಡಿದರೂ ನಮ್ಮ ಬುದ್ಧಿವಂತ ಪ್ರೇಕ್ಷಕರು ತಕ್ಷಣ ಅದನ್ನು ಪತ್ತೆ ಹಚ್ಚುತ್ತಾರೆ. ನಾನು ನನ್ನದೇ ಆದ ಮ್ಯಾನರಿಸಂನಲ್ಲಿ ಕಾಣಿಸಿಕೊಳ್ಳಲು ನೆರವಾಗಿದ್ದು, ಪೊಲೀಸ್ ಸ್ನೇಹಿತರ ಒಡನಾಟ. ನಮ್ಮ ಗುಂಪಿನಲ್ಲಿದ್ದ ಒಬ್ಬರು, ಪೊಲೀಸ್ ಡ್ರೆಸ್‌ನಲ್ಲಿದ್ದಾಗ ನಮ್ಮನ್ನು ನೋಡುತ್ತಿದ್ದ ರೀತಿ, ಮಾತನಾಡಿಸುತ್ತಿದ್ದ ಬಗೆ ಬೇರೆಯದೇ ಇರುತ್ತಿತ್ತು. ಅದೇ ಸಿವಿಲ್‌ನಲ್ಲಿದ್ದಾಗ ಎಲ್ಲರಂತೆ ಇರುತ್ತಿದ್ದರು. ಅದನ್ನು ತುಂಬಾ ಗಮನಿಸುತ್ತಿದ್ದ ನಾನು, ಆ ಕುರಿತು ಕಿಚಾಯಿಸಿದ್ದೂ ಇದೆ. ಆತನ ಆ ಬದಲಾವಣೆಗೆ ಡ್ರೆಸ್‌ ಮಹಿಮೆ ಕಾರಣವಾಗಿತ್ತು. ಈ ಸಿನಿಮಾ ಆರಂಭವಾದಾಗ, ಮನಸ್ಸಿಗೆ ಮೊದಲು ಬಂದದ್ದು ಆ ನನ್ನ ಸ್ನೇಹಿತ. ಪಾತ್ರಕ್ಕೆ ಬೇಕಿದ್ದ ಪೊಲೀಸ್ ಮ್ಯಾನರಿಸಂ ಹಾಗೂ ಮಾತಿನಲ್ಲಿರಬೇಕಾದ ಗತ್ತನ್ನು ಆತನಿಂದ ನೋಡಿ ಅಳವಡಿಸಿಕೊಂಡೆ. ಹೀಗೆ, ರಿಯಲ್ ಪೊಲೀಸರ ನಡವಳಿಕೆಯನ್ನು ಗ್ರಹಿಸಿ ಅದಕ್ಕೆ ಗಣೇಶತನವನ್ನು ಬೆರೆಸಿ ನಟಿಸಿದ್ದೇನೆ.

* ‘ಡೈಲಾಗ್‌ ಕಿಂಗ್’ಗೆ ಜೋರಾಗಿಯೇ ಪಂಚಿಂಗ್ ಡೈಲಾಗ್ ಹೊಡೆದಿದ್ದೀರಿ?

ಸಾಯಿಕುಮಾರ್ ಪೊಲೀಸ್ ಪಾತ್ರಗಳ ಮೂಲಕವೇ ಹೆಸರು ಮಾಡಿದವರು. ಕಾಲೇಜಿನಲ್ಲಿದ್ದಾಗಿಂದಲೂ ಅವರ ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದೇನೆ. ಅವರ ಡೈಲಾಗ್‌ಗಳು ಚಿತ್ರರಂಗದಲ್ಲಿ ಹೊಸದೊಂದು ಟ್ರೆಂಡ್ ಹುಟ್ಟುಹಾಕಿದವು. ಅಂತಹವರ ಜೊತೆ, ಮೊದಲ ಸಲ ಖಾಕಿ ತೊಟ್ಟು ನಟಿಸುತ್ತಿರುವುದು ಖುಷಿಯ ವಿಚಾರ. ಮೂಲ ಚಿತ್ರ ತೆಲುಗಿನ ‘ಪಟಾಸ್‌’ನಲ್ಲೂ ನಟಿಸಿದ್ದ ಅವರು, ನಮ್ಮ ಚಿತ್ರದಲ್ಲೂ ಅದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಅಗ್ನಿ ಐಪಿಎಸ್’ ಎದುರಿಗೆ, ಎಸಿಪಿ ಸೂರ್ಯನಾಗಿ ಹೇಳಿದ ಪಂಚಿಂಗ್ ಡೈಲಾಗ್‌ಗಳನ್ನು ಅವರು ಮೆಚ್ಚಿಕೊಂಡಿದ್ದಾರೆ.

* ರಿಮೇಕ್ ಸಿನಿಮಾಗಳನ್ನು ಒಪ್ಪಿಕೊಳ್ಳಲು ಅನುಸರಿಸುವ ಮಾನದಂಡ ಏನು?

ಇದುವರೆಗಿನ ನನ್ನ ಮೂವತ್ತು ಸಿನಿಮಾಗಳ ಪೈಕಿ ಐದಾರು ಮಾತ್ರ ರಿಮೇಕ್‌ ಚಿತ್ರಗಳು. ‘ಮುಂಗಾರುಮಳೆ’ ಯಶಸ್ಸಿನ ನಂತರ, ನನಗೆ ಲವರ್ ಬಾಯ್ ಇಮೇಜ್ ಸಿಕ್ಕಿತು. ‘ಚೆಲುವಿನ ಚಿತ್ತಾರ’ ಮಾಡಿದಾಗ, ‘ಏನಿದು ಗಣೇಶ್ ಗ್ಯಾರೇಜ್ ಹುಡುಗನಾಗಿ ಮಾಡುತ್ತಿದ್ದಾರೆ’ ಎಂದು ಎಲ್ಲರೂ ನೋಡುತ್ತಿದ್ದರು. ಅಲ್ಲಿ ನಾನು ಗ್ಯಾರೇಜ್ ಹುಡುಗನಾಗಿದ್ದರೂ, ಲವ್ವರ್ ಬಾಯ್ ಎಂಬ ಇಮೇಜ್‌ನಿಂದ ಹೊರತಾಗಿರಲಿಲ್ಲ. ‘ಶೈಲೂ’ ಕೂಡ ಅದೇ ತರಹದ್ದು.

ರಿಮೇಕ್ ಚಿತ್ರದ ಪಾತ್ರವೊಂದು ನನ್ನ ಇಮೇಜ್‌ಗೆ ವಿಭಿನ್ನ ಟಚ್ ಕೊಡುತ್ತದೆ ಎಂದಾಗ ಮಾತ್ರ ನಾನು ನಟಿಸಲು ಒಪ್ಪುತ್ತೇನೆ. ‘ಪಟಾಕಿ’ ಅಂತಹದ್ದೊಂದು ವಿಭಿನ್ನ ಟಚ್ ಕೊಡುವ ಸಾಲಿಗೆ ಸೇರುವ ಸಿನಿಮಾ. ಉಳಿದಂತೆ ನನ್ನ ಒಲವು ಯಾವಾಗಲೂ ಸ್ವಮೇಕ್‌ನತ್ತಲೇ. ಯಾಕೆಂದರೆ, ಕುತೂಹಲವೇ ಸಿನಿಮಾ. ರೀಮೇಕ್‌ನಲ್ಲಿ ನಿಗದಿತ ಬೌಂಡರಿ ಲೈನ್‌ನಲ್ಲಷ್ಟೇ ಆಡಬೇಕು. ಸ್ವಮೇಕ್‌ನಲ್ಲಿ ಹಾಗಲ್ಲ. ನಮಗೆ ಬೇಕಾದ ಹಾಗೆ ಬೌಂಡರಿ ಲೇನ್ ಹಾಕಿಕೊಂಡು, ಹೇಗೆ ಬೇಕಾದರೂ ಆಟವಾಡಬಹುದು.

* ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತೀದ್ದೀರಿ. ಸಮಯದ ಹೊಂದಾಣಿಕೆ ಕಷ್ಟ ಎನಿಸುವುದಿಲ್ಲವೆ?

ನಾನು ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದವನು. ಅದರ ಜೊತೆ ನನಗೊಂದು ಅಟ್ಯಾಚ್‌ಮೆಂಟ್ ಇದೆ. ನನ್ನ ‘ಸೂಪರ್ ಮಿನಿಟ್’ ಟಿ.ವಿ ಷೋಗೆ ಒಳ್ಳೆಯ ಪ್ರತಿಕ್ರಿಯೆ ಇದೆ. ತೆರೆಯ ಮೇಲೆ ಆರಂಭವಾದ ನನ್ನ ಜರ್ನಿಗೆ ಒಂದು ರೀತಿಯ ಬೆಸುಗೆ ಈ ಕಾರ್ಯಕ್ರಮ. ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದನ್ನು ಎಂದಿಗೂ ಹಿಂಬಡ್ತಿ ಎಂದು ನಾನು ಭಾವಿಸಿಲ್ಲ. ಆ ಕಾಲ ಹೋಗಿದೆ. ಮನರಂಜನೆಗೆ ದೊಡ್ಡ ಪರದೆ ಅಥವಾ ಸಣ್ಣ ಪರದೆ ಎಂಬ ಹಂಗಿಲ್ಲ. ಕಲಾವಿದರ ಗುರಿ ಜನರನ್ನು ರಂಜಿಸುವುದು. ಹಾಗಾಗಿ, ಸಾಲು ಸಾಲು ಚಿತ್ರಗಳಿದ್ದರೂ ಕಿರುತೆರೆಗಾಗಿ ಸಮಯ ಹೊಂದಿಸಿಕೊಳ್ಳುತ್ತೇನೆ. ಇದು ಎರಡೂ ತೆರೆಗಳ ಜನರ ಜೊತೆಗಿನ ಒಡನಾಟಕ್ಕೂ ಸಹಕಾರಿಯಾಗಿದೆ.

* ಹದಿನೇಳು ವರ್ಷಗಳ ಸಿನಿಮಾ ಪಯಣ ಹೇಗಿದೆ?

ಅದ್ಭುತವಾಗಿದೆ. ಕಳೆದುಕೊಂಡಿದ್ದಕ್ಕಿಂತ ಪಡೆದುಕೊಂಡಿದ್ದೇ ಹೆಚ್ಚು. 2002ರಲ್ಲಿ ತೆರೆಕಂಡ ‘ಟಪೋರಿ’ ಚಿತ್ರದಿಂದ ಆರಂಭಗೊಂಡು ಇದುವರೆಗೆ 43 ಸಿನಿಮಾಗಳಲ್ಲಿ ನಟಿಸಿದ್ದೇನೆ. ನಾಯಕ ನಟನಾಗಿ 30  ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. ರಂಗಭೂಮಿಯಲ್ಲಿ ಮೊದಲಿಗೆ ನಟನೆ ಆರಂಭಿಸಿದಾಗ ನನ್ನ ತಲೆಯಲ್ಲಿದ್ದದ್ದು, ‘ಜನ ನನ್ನನ್ನು ಗುರುತು ಹಿಡಿಯುವಂತಹ ಉತ್ತಮ ನಟನಾಗಬೇಕು’ ಎಂಬುದಷ್ಟೆ. ಒಂದು ಹಂತಕ್ಕೆ ಅದನ್ನು ತಲುಪಿದ್ದೇನೆ ಅನಿಸುತ್ತದೆ. ಸಾಗಬೇಕಾದ ಹಾದಿ ಇನ್ನೂ ಇದೆ. 

* ಮುಂದಿನ ಪ್ರಾಜೆಕ್ಟ್‌ಗಳು?

ಯೋಗರಾಜ್ ಭಟ್ಟರ ಜತೆಗಿನ ‘ಮುಗುಳು ನಗೆ’ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಸಿಂಪಲ್ ಸುನಿ ನಿರ್ದೇಶನದ ‘ಚಮಕ್’ ಶೂಟಿಂಗ್ ಹಂತದಲ್ಲಿದೆ. ‘ಆರೆಂಜ್’ ಚಿತ್ರದ ಸ್ಕ್ರಿಫ್ಟ್ ಕೆಲಸ ಪ್ರಗತಿಯಲ್ಲಿದೆ. ಮೂರು ಚಿತ್ರಗಳೂ ಪ್ರೀತಿಯ ವಿಭಿನ್ನ ಕಥಾಹಂದರ ಇರುವಂತಹವೇ. ಈ ಪೈಕಿ ‘ಚಮಕ್‌’ನಲ್ಲಿ ಆ್ಯಕ್ಷನ್ ಮತ್ತು ಹಾಸ್ಯ ಬೆರೆತಿದೆ. ಮೊದಲ ಸಲ ಡಾಕ್ಟರ್‌ ಪಾತ್ರ ಮಾಡುತ್ತಿದ್ದೇನೆ. ಅದರಲ್ಲೂ ಗೈನಾಕಾಲಜಿಸ್ಟ್ ಪಾತ್ರ. ‘ಆರೆಂಜ್’ ಕಮರ್ಷಿಯಲ್ ಮತ್ತು ರೊಮ್ಯಾಂಟಿಕ್ ಸಿನಿಮಾ. ಈ ಮೂರರ ಜತೆಗೆ, ಇನ್ನೂ ಮೂರು ಹೊಸ ಪ್ರಾಜೆಕ್ಟ್‌ಗಳ ಮಾತುಕತೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.