ADVERTISEMENT

‘ಮಾಮ’ನ ಆಟ ಶುರು..!

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
‘ಮಾಮ’ನ ಆಟ ಶುರು..!
‘ಮಾಮ’ನ ಆಟ ಶುರು..!   

ಶಾಸ್ತ್ರೋಕ್ತಾಗಿ ಹೆಣ್ಣನ್ನು ಕೈಗೆ ಕೊಟ್ಟರೆ ಅವನು ಮಾವ; ಯಾವ ಶಾಸ್ತ್ರವೂ ಇಲ್ಲದೇ ಹೆಣ್ಣನ್ನು ಕೊಟ್ಟರೆ ಅವನು ಮಾಮ’

ಹೀಗೆ ಮಾವ ಮತ್ತು ಮಾಮ ಮಧ್ಯದ ವ್ಯತ್ಯಾಸ ಹೇಳುತ್ತಲೇ ತಮ್ಮ ಹೊಸ ಸಿನಿಮಾ ‘ಹಲೋ ಮಾಮ’ದ ಕಥೆಯ ಎಳೆಯನ್ನೂ ಹೇಳಿದರು ಎಸ್‌. ಮೋಹನ್‌. ‘ಮಾಮಾ’ ಎಂಬ ಶಬ್ದವನ್ನು ನಾವು ಪ್ರತಿದಿನವೂ ಹಲವು ಸಂದರ್ಭಗಳಲ್ಲಿ ಬಳಸುತ್ತಿರುತ್ತೇವೆ. ಆದರೆ ಆ ಶಬ್ದ ಎಲ್ಲಿಂದ ಬಂತು, ಅದರ ನಿಜವಾದ ಅರ್ಥ ಏನು ಎಂಬುದು ಯಾರಿಗೂ ಗೊತ್ತಿಲ್ಲ. ನಮ್ಮ ಸಿನಿಮಾದಲ್ಲಿ ಅದನ್ನು ತಿಳಿಸುವ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಅವರು ವಿವರಣೆ ನೀಡಿದರು.

ನಾಲ್ಕು ಜನ ಬ್ಯಾಚುಲರ್‌ ಹುಡುಗರ ಕಥೆಯನ್ನು ತಮಾಷೆಯಾಗಿ ಹೇಳಿಕೊಂಡು ಹೋಗುವ ಪ್ರಯತ್ನವನ್ನು ಅವರು ಮಾಡಿದ್ದಾರೆ. ಈ ಚಿತ್ರದ ಮೂಲಕ ಹತ್ತರಿಂದ ಹದಿನೈದು ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುವ ಉದ್ದೇಶವೂ ಅವರಿಗಿದೆ. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಎಲ್ಲವೂ ಅವರದೇ. ಜತೆಗೆ ಅವರೇ ಮಾಮನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ADVERTISEMENT

‘ಮೋಹನ್‌ ಮೇಲೆ ನನಗೆ ತುಂಬ ಅಭಿಮಾನ. ಒಳ್ಳೆಯ ಕೆಲಸಗಾರ ಎನ್ನುವುದೂ ಗೊತ್ತಿದೆ. ಸಂಪೂರ್ಣವಾಗಿ ಮೋಹನ್‌ ಮೇಲೆ ವಿಶ್ವಾಸ ಇಟ್ಟಿದ್ದೇನೆ’ ಎಂದರು ನಿರ್ಮಾಪಕ ಚಂದ್ರಶೇಖರ್‌.

ಸಾಮಾನ್ಯವಾಗಿ ಪೊಲೀಸ್‌ ಪಾತ್ರಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಅರವಿಂದ್‌, ಈ ಚಿತ್ರದಲ್ಲಿ ಹಾಸ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ‘ಇದೊಂದು ಕಾಮಿಡಿ ಜಾನರ್‌ ಚಿತ್ರ. ಹೆಚ್ಚಿನ ಸಿನಿಮಾಗಳಲ್ಲಿ ಪೊಲೀಸ್‌ ಪಾತ್ರವೇ ಬರುತ್ತಿತ್ತು. ಆದರೆ ಈ ಚಿತ್ರ ವೃತ್ತಿಜೀವನದಲ್ಲಿ ಬ್ರೇಕ್‌ ಕೊಡಬಹುದು. ಬೇರೆ ರೀತಿಯಲ್ಲಿ ನನ್ನ ಅಭಿನಯ ತೆಗೆಯುವ ಜಬಾಬ್ದಾರಿ ಮೋಹನ್‌ ಮೇಲಿದೆ’ ಎಂದರು ಅರವಿಂದ್‌.

ಅವರ ಹೆಂಡತಿಯಾಗಿ ಭೂಮಿಕಾ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಜತೆಗೆ ಸೌಜನ್ಯಾ, ಮೋಹನ್‌ ಹಿಂದೆ ಓಡುವ ಹುಡುಗಿಯಾಗಿ ಗ್ಲ್ಯಾಮರ್‌ ಕೊರತೆಯನ್ನು ತುಂಬಲಿದ್ದಾರೆ. ಗಾಯಕಿಯಾಗಿದ್ದ ಸಾಂಪ್ರತಾ ಭಾರ್ಗವ್‌ ಅವರೂ ಸಾಂಪ್ರದಾಯಿಕ ಹುಡುಗಿಯ ಪಾತ್ರದಲ್ಲಿಯೇ ಕಾಣಿಸಿಕೊಳ್ಳಲಿದ್ದಾರೆ.

‘ಈ ಸಿನಿಮಾ ಒಪ್ಪಿಕೊಂಡು ತಲೆತುಂಬ ಕೂದಲಿತ್ತು. ಒಂದೊಂದೇ ಹಾಡನ್ನು ಸಂಯೋಜಿಸುತ್ತಾ ಬಂದ ಹಾಗೆ ಕೂದಲುಗಳು ಉದುರುತ್ತ ಬಂದವು. ಇನ್ನೂ ಒಂದು ಹಾಡು ಬಾಕಿ ಇದೆ. ಅದು ಪೂರ್ತಿಯಾಗುವಷ್ಟರಲ್ಲಿ ಪೂರ್ತಿ ಬೋಳನಾಗುತ್ತೇನೇನೋ’ ಎಂದು ತಮಾಷೆ ಮಾಡಿ ನಕ್ಕರು ‘ಮಾಮ’ನಿಗೆ ಸಂಗೀತ ಹೊಸೆದಿರುವ ಧರಮ್‌ ದೀಪ್‌.

ಪ್ರಸಾದ್‌ ಬಾಬು ಈ ಚಿತ್ರಕ್ಕೆ ಛಾಯಾಗ್ರಾಹಕನಾಗಿ ಕೆಲಸ ಮಾಡುತ್ತಿದ್ದಾರೆ.ಇದೇ ವಾರ ಚಿತ್ರೀಕರಣ ಆರಂಭಿಸಿರುವ ತಂಡ ಒಂದೇ ಶೆಡ್ಯೂಲಿನಲ್ಲಿ ಚಿತ್ರೀಕರಣ ಮುಗಿಸಿ ಇನ್ನು ಮೂರು ತಿಂಗಳಿಗೆ ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.