ADVERTISEMENT

‘ಮೇಲೊಬ್ಬ ಮಾಯಾವಿ’ಯ ನಿಗೂಢ ಕಥೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಚಂದ್ರಚೂಡ್ ಮತ್ತು ಪವಿತ್ರಾ
ಚಂದ್ರಚೂಡ್ ಮತ್ತು ಪವಿತ್ರಾ   

ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡಿರುವ ನವೀನ್‌ಕೃಷ್ಣ ಅವರು ಈಗ ಕ್ಯಾಮೆರಾವನ್ನು ಹೆಗಲಿಗೇರಿಸಿಕೊಂಡಿದ್ದಾರೆ. ಅಂದರೆ ಅವರು ಸಿನಿಮಾ ನಿರ್ದೇಶಕ ಆಗಿದ್ದಾರೆ. ಪುತ್ತೂರು ಭರತ್ ನಿರ್ಮಾಣದ ‘ಮೇಲೊಬ್ಬ ಮಾಯಾವಿ’ ಸಿನಿಮಾ ನಿರ್ದೇಶನದ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಲು ನವೀನ್‌ ಮತ್ತು ಭರತ್ ಸುದ್ದಿಗೋಷ್ಠಿ ಕರೆದಿದ್ದರು. ಈ ಸಿನಿಮಾದಲ್ಲಿ ಅಭಿನಯಿಸಿರುವ ಸಂಚಾರಿ ವಿಜಯ್, ಕೃಷ್ಣಮೂರ್ತಿ ಕವತ್ತಾರ್ ಮತ್ತು ಚಕ್ರವರ್ತಿ ಚಂದ್ರಚೂಡ್ ಸೇರಿದಂತೆ ಹಲವರು ಅಲ್ಲಿದ್ದರು.

‘ಈ ಸಿನಿಮಾದ ಕಥಾವಸ್ತುವಿನ ಬಗ್ಗೆ ನವೀನ್ ನನ್ನ ಜೊತೆ ವಿಚಾರ ಹಂಚಿಕೊಳ್ಳುತ್ತಿದ್ದ. ಚಂದ್ರಚೂಡ್ ಮತ್ತು ವಿಜಯ್ ನಮ್ಮ ಜೊತೆ ಇದ್ದಾರೆ, ಭರತ್ ನಮ್ಮನ್ನು ಮುನ್ನಡೆಸುತ್ತಿದ್ದಾರೆ. ಹಾಗಾಗಿ ಈ ಸಿನಿಮಾ ಚೆನ್ನಾಗಿ ಮೂಡಿಬರುತ್ತದೆ ಎಂಬ ನಂಬಿಕೆ ಇದೆ’ ಎಂದರು ಕೃಷ್ಣಮೂರ್ತಿ. ನವೀನ್ ಕೃಷ್ಣ ಅವರು ಅಂತರರಾಷ್ಟ್ರೀಯ ಮಟ್ಟದ ಸಮಸ್ಯೆಯೊಂದನ್ನು ಈ ಚಿತ್ರದ ಕಥಾವಸ್ತುವನ್ನಾಗಿ ಇಟ್ಟುಕೊಂಡಿದ್ದಾರಂತೆ. ಆದರೆ, ಅವರು ಆ ಸಮಸ್ಯೆ ಏನು ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ.

‘ದಕ್ಷಿಣ ಕನ್ನಡದಲ್ಲಿ 25 ವರ್ಷಗಳಿಂದ ನಡೆಯುತ್ತಿರುವ ದಂಧೆಯೊಂದರ ಬಗ್ಗೆ ನಿರ್ದೇಶಕರು ಒಂದೂವರೆ ವರ್ಷಗಳ ಹಿಂದೆ ಹೇಳಿದ್ದರು. ಹೀಗೆ ಒಂದು ದಂಧೆ ನಡೆಯಲು ಸಾಧ್ಯವೇ ಎಂದು ನನಗೆ ಅನಿಸಿತ್ತು’ ಎಂದರು ವಿಜಯ್. ಅವರದ್ದು ಈ ಸಿನಿಮಾದಲ್ಲಿ ಒಂದು ಇರುವೆಯ ಪಾತ್ರವಂತೆ! ಇರುವೆಯ ಪಾತ್ರದಲ್ಲಿ ವಿಜಯ್ ಏನು ಮಾಡುತ್ತಾರೆ ಎಂಬ ಪ್ರಶ್ನೆ ಎದುರಾದಾಗ, ‘ನಿರಂತರ ಹೋರಾಟವನ್ನು ಸೂಚಿಸುತ್ತದೆ ಈ ಪಾತ್ರ’ ಎಂದು ತುಸು ಒಗಟಾಗಿಯೇ ಉತ್ತರಿಸಿದರು.

ADVERTISEMENT

ಅನನ್ಯಾ ಶೆಟ್ಟಿ ಅವರಿಗೆ ಇದು ಮೊದಲ ಚಿತ್ರ. ‘ಹಿರಿಯರ ಜೊತೆಯಲ್ಲಿ ನಾನು ಸಣ್ಣವಳಾಗಿ ಕುಳಿತಿದ್ದೇನೆ. ಮೊದಲ ಸಿನಿಮಾದಲ್ಲಿಯೇ ನನಗೆ ವಿಜಯ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ’ ಎಂದು ಖುಷಿಯಿಂದ ಹೇಳಿಕೊಂಡರು ಅನನ್ಯಾ.

ಕಿರುತೆರೆಯಲ್ಲಿ ನಟಿಸಿರುವ ಅನುಭವ ಇರುವ ಪವಿತ್ರಾ ಜಯರಾಮ್ ಅವರೂ ಈ ಚಿತ್ರದಲ್ಲಿ ಒಂದು ಪಾತ್ರ ನಿಭಾಯಿಸಿದ್ದಾರೆ. 'ಉತ್ತಮ ಕಥೆ ಇರುವ ಚಿತ್ರದಲ್ಲಿ ಪಾತ್ರ ಮಾಡುತ್ತಿದ್ದೇನೆ. ಇಲ್ಲಿ ಎಲ್ಲರೂ ರಂಗಭೂಮಿ ಹಿನ್ನೆಲೆ ಇರುವವರು.‌ ನಾನು ಮಾತ್ರ ಕಿರುತೆರೆ ಹಿನ್ನೆಲೆಯವಳು‌. ಬೊಳ್ಳಿ ಎನ್ನುವ ಪಾತ್ರ ನನ್ನದು' ಎಂದರು ಪವಿತ್ರಾ.

‘ಸುಳ್ಯ ಪುತ್ತೂರು ಕಡೆ ಒಂದು ಸಮಸ್ಯೆ ಕಂಡಿದ್ದೇನೆ. ಜನ ಅಲ್ಲಿ ಸುಮ್ಮನೆ ಸಾಯುತ್ತಿದ್ದರು. ಅದಕ್ಕೆ ಕಾರಣ ಇರುತ್ತಿರಲಿಲ್ಲ’ ಎಂದರು ನವೀನ್ ಕೃಷ್ಣ. ಚಂದ್ರಚೂಡ್ ಈ ಸಿನಿಮಾದಲ್ಲಿ ಒಂದು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ನೀಡಿದರು. ಆದರೆ ತಮ್ಮ ಸಿನಿಮಾ ಮಾತನಾಡುವುದು ಯಾವ ಸಮಸ್ಯೆಯ ಬಗ್ಗೆ ಎಂಬುದನ್ನು ಗುಟ್ಟಾಗಿಯೇ ಉಳಿಸಿಕೊಂಡರು.

‘ಕನ್ನಡದಲ್ಲಿ ಹುಟ್ಟದಿರಲಿ': ಖ್ಯಾತ ಗಾಯಕ ಎಲ್.ಎನ್. ಶಾಸ್ತ್ರಿ ಅವರ ಪತ್ನಿ ಸುಮಾ ಶಾಸ್ತ್ರಿ ಅವರು ಸಿನಿಮಾ ಪತ್ರಿಕಾಗೋಷ್ಠಿಗೆ ಬಂದಿದ್ದರು. 'ಶಾಸ್ತ್ರಿ ಅವರಂಥ ಕಲಾವಿದ ಮತ್ತೆ ಕನ್ನಡದಲ್ಲಿ ಹುಟ್ಟುವುದು ಬೇಡ. ಇಲ್ಲಿ ಸ್ಥಳೀಯರನ್ನು ಅವಮಾನಿಸುತ್ತಾರೆ. ಸ್ಥಳೀಯ ಗಾಯಕರಿಗೆ ಇಲ್ಲಿ ಅವಕಾಶ ಕೊಡುವುದಿಲ್ಲ. ಆದರೆ, ಹೊರಗಿನವರಿಗೆ ಇಲ್ಲಿ ಬಹಳ ಚೆನ್ನಾಗಿ ಸಂಭಾವನೆ ನೀಡಲಾಗುತ್ತದೆ' ಎಂದು ಬೇಸರ ವ್ಯಕ್ತಪಡಿಸಿದರು ಸುಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.