ADVERTISEMENT

ಯೋಗಿ ಮತ್ತವರ ಕನಸು!

ಡಿ.ಎಂ.ಕುರ್ಕೆ ಪ್ರಶಾಂತ
Published 3 ಸೆಪ್ಟೆಂಬರ್ 2015, 19:32 IST
Last Updated 3 ಸೆಪ್ಟೆಂಬರ್ 2015, 19:32 IST

‘ಲೂಸ್‌ ಮಾದ’ ಖ್ಯಾತಿಯ ಯೋಗಿ ಈಗ ಮಾಗಿದಂತೆ ಕಾಣಿಸುತ್ತಾರೆ. ವಿಭಿನ್ನ ಕಥೆಗಳಲ್ಲಿ ನಟಿಸುತ್ತಿರುವ ಅವರು ಪ್ರಯೋಗಶೀಲ ಸಿನಿಮಾಗಳ ಬಗ್ಗೆಯೂ ಆಸಕ್ತರು. 

‘ಹಸು ಹೊಡೆದುಕೊಂಡು ಹೋಗುತ್ತಿರುತ್ತೇವೆ. ಎಷ್ಟು ಹೊಡೆದರೂ ಅದು ನಮ್ಮ ದಾರಿಗೆ ಬರುವುದಿಲ್ಲ. ಕೊನೆಗೆ ಅದು ಹೋಗುವ ದಾರಿಯಲ್ಲೇ ನಾವೂ ಹೋಗುತ್ತೇವೆ. ಅಂತಿಮವಾಗಿ ಆ ಹಸು ಕರೆದುಕೊಂಡು ಹೋಗುವುದು ಮನೆಗೇ’– ಹೀಗೆ ತಮ್ಮ ಚಿತ್ರ ಬದುಕಿನ–ಸೋಲು ಗೆಲುವುಗಳನ್ನು ನಟ ಯೋಗೀಶ್ ವಿಶ್ಲೇಷಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಅವರ ಚಿತ್ರಗಳು ಸದ್ದು ಮಾಡದಿದ್ದರೂ ಅವಕಾಶಗಳಿಗೇನೂ ಕೊರತೆಯಿಲ್ಲ. ‘ಕಾಲಭೈರವ’, ‘ಪ್ರಚಂಡ’, ‘ಸ್ನೇಕ್ ನಾಗ’, ‘ಬಜಾರ್’ ಮತ್ತಿತರ ಚಿತ್ರಗಳು ಅವರ ಕೈಯಲ್ಲಿವೆ.

ಚಿತ್ರೀಕರಣ ಪೂರ್ಣಗೊಳಿಸಿರುವ ‘ಕೋಲಾರ’ ಸಿನಿಮಾ ಬಗ್ಗೆ ಯೋಗಿ ಅವರಿಗೆ ಹೆಚ್ಚು ಭರವಸೆ. ‘ಇದು ನನ್ನ ವೃತ್ತಿ ಬದುಕಿನ ಮಹತ್ವಪೂರ್ಣ ಮತ್ತು ಹೆಚ್ಚು ನಿರೀಕ್ಷೆ ಇಟ್ಟುಕೊಂಡಿರುವ ಸಿನಿಮಾ. ಕಥೆ ಚೆನ್ನಾಗಿದೆ. ಈ ಸಿನಿಮಾ ಇನ್ನೆರಡು ತಿಂಗಳಲ್ಲಿ ತೆರೆಗೆ ಬರಬಹುದು’ ಎನ್ನುತ್ತಾರೆ. ಅಂದಹಾಗೆ, ರೌಡಿ ತಂಗಂ ಬದುಕು ಆಧರಿಸಿದ ಚಿತ್ರ ‘ಕೋಲಾರ’.

ವಿರಾಮ ಮತ್ತು ಎಚ್ಚರ
ತಮ್ಮ ಸಿನಿಮಾ ಬದುಕು ಸರಿಯಾದ ಹಾದಿಯಲ್ಲಿ ಸಾಗುತ್ತಿಲ್ಲ ಎಂದು ಅನ್ನಿಸಿದಾಕ್ಷಣ ಯೋಗಿ ಜಾಗರೂಕರಾಗಿದ್ದಾರೆ. ‘‘ನಾನು ಒಂದು ವರ್ಷ ಪೂರ್ತಿ ಸಿನಿಮಾದಲ್ಲಿ ತೊಡಗಿರಲೇ ಇಲ್ಲ.

ಕಿರುತೆರೆಯ ‘ಲೈಫು ಸೂಪರ್ ಗುರು’, ‘ಡಾನ್ಸಿಂಗ್ ಸ್ಟಾರ್’ ರಿಯಾಲಿಟಿ ಷೋಗಳನ್ನು ಮಾಡಿದೆ. ಆ ಅವಧಿಯಲ್ಲಿ ಎರಡು ಮೂರು ಚಿತ್ರಗಳು ಸೋತವು. ಆಗ ‘ಇವನ ಕಥೆ ಅಷ್ಟೆ ಬಿಡು’ ಎನ್ನುವ ಮಾತುಗಳನ್ನೂ ಕೇಳಿದೆ. ಅಲ್ಲಿಂದ ವೃತ್ತಿ ಬದುಕನ್ನು ಮತ್ತೊಂದು ರೀತಿಯಲ್ಲಿ ನೋಡಲು ತೊಡಗಿದೆ. ಒಂದು ಸಿನಿಮಾ ಸೋತರೆ ನಾಯಕನನ್ನು ಕೆಳಕ್ಕೆ ಎಸೆಯುವರು, ಚಿತ್ರ ಗೆದ್ದರೆ ಮೇಲಕ್ಕೆ ಎತ್ತುತ್ತಾರೆ ಎನ್ನುವುದು ನನ್ನ ಅನುಭಕ್ಕೆ ಬಂದಿದೆ. ಒಂದುದ ಸಿನಿಮಾ ಸೋಲು–ಗೆಲುವಿನಲ್ಲಿ ನಟನಿಗಿಂತ ನಿರ್ದೇಶಕ ಮುಖ್ಯ ಪಾತ್ರವಹಿಸುತ್ತಾನೆ ಎನ್ನುವುದು ನನ್ನ ನಂಬಿಕೆ.

ನನ್ನ ಚಿತ್ರಕ್ಕೆ ಒಳ್ಳೆಯ ಪ್ರಶಂಸೆ ದೊರೆತಾಗ ನಾನು ಎಂದೂ ಮೆರೆದಿಲ್ಲ, ಅಹಂಕಾರಪಟ್ಟಿಲ್ಲ. ಆದ್ದರಿಂದ ಸೋಲನ್ನು ವಿನಯದಿಂದ ಒಪ್ಪಿಕೊಳ್ಳುವುದು ಸಾಧ್ಯವಾಯಿತು. ಬದುಕು ಹೀಗೆ ಆಗಬಾರದಿತ್ತು ಎಂದು ಕುಳಿತರೆ ನಕಾರಾತ್ಮಕ ಆಲೋಚನೆಗಳು ತಲೆಯಲ್ಲಿ ತುಂಬುತ್ತವೆ’ ಎನ್ನುವ ಯೋಗಿ ಮಾತುಗಳಲ್ಲಿ ಸೋಲು–ಗೆಲುವನ್ನು ಸಮಾನಾಂತರವಾಗಿ ಕಾಣುವ ನೋಟವಿದೆ. 

‘ನನಗೆ ನನ್ನ ಶಕ್ತಿಯ ಅರಿವಿದೆ’ ಎಂದು ಸ್ಪಷ್ಟವಾಗಿ ಹೇಳುವ ಅವರು, ಕಥೆಗಳ ಆಯ್ಕೆಯಲ್ಲಿ ನಾನು ಎಡವುತ್ತಿಲ್ಲ ಎನ್ನುವುದನ್ನು ಒತ್ತಿ ಹೇಳುತ್ತಾರೆ. ತಮಿಳು ನಿರ್ದೇಶಕ ಸಮುದ್ರಖಣಿ ಮತ್ತು ಯೋಗಿ ಕಾಂಬಿನೇಷನ್ನಿನ ಸಿನಿಮಾಕ್ಕೆ ಸದ್ಯದಲ್ಲೇ ಚಾಲನೆ ದೊರೆಯಲಿದೆಯಂತೆ. ಈ ಚಿತ್ರ ನಾಲ್ಕೈದು ತಿಂಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ತೆರೆಗೆ ಬರಲಿದೆ.

ಅಸಹಜ–ಅತಿರೇಕ
‘ಕಥೆ ಹೇಳುವಾಗ ಎಲ್ಲರೂ ತುಂಬಾ ಚೆನ್ನಾಗಿ ಹೇಳುತ್ತಾರೆ. ನಾವು ಪ್ರಭಾವಿತರಾಗುತ್ತೇವೆ. ಆದರೆ ಮೇಕಿಂಗ್‌ ಹಾಗೂ ನಿರೂಪಣೆಯಲ್ಲಿ ಸಿಕ್ಕಾಪಟ್ಟೆ ಒದೆ ತಿನ್ನುತ್ತಾರೆ. ಉದಾಹರಣೆಗೆ ‘ಕಾಲಾಯಾ ತಸ್ಮೈನಮಃ’ ಚಿತ್ರ. ಪ್ರೀತಿಯನ್ನು ಎಲ್ಲರ ಕೈಯಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದು ಸಿನಿಮಾದ ಕಥೆ. ಮಾಡಿದ್ದು. ಸಿನಿಮಾದಲ್ಲಿ ಒಂದು ನಿಮಿಷದ ದೃಶ್ಯಗಳನ್ನು ಎರಡು ಮೂರು ನಿಮಿಷಗಳಿಗೆ ವಿಸ್ತರಿಸಲಾಯಿತು. ನನ್ನ ಪಾತ್ರಕ್ಕೆ ಓವರ್ ಬಿಲ್ಡಫ್‌ಗಳನ್ನು ಆರೋಪಿಸಲಾಯಿತು.

ನನಗೆ ನನ್ನ ಪರ್ಸನಾಲಿಟಿ ಏನು ಎಂದು ಗೊತ್ತು. ಸಿನಿಮಾದಲ್ಲಿ ಮೂರು ನಾಲ್ಕು ಜನರಿಗೆ ಹೊಡೆಯಬಹುದು. ಆದರೆ, 25–30 ಜನರಿಗೆ ಹೊಡೆಯುತ್ತೇನೆ ಎಂದರೆ ಜನ ನಂಬುವುದಿಲ್ಲ. ನಾನೇ ಸುಮಾರು ಸಲ ಇದನ್ನು ಹೇಳಿದ್ದೇನೆ. ದೊಣ್ಣೆಯಲ್ಲಿ ಇಲ್ಲವೇ ಮತ್ತೊಂದರಲ್ಲಿ ತಲೆಯ ಮೇಲೆ ಕಾಲಿಗೆ ಹೊಡೆದರೆ ಜನರಿಗೆ ನಂಬಿಕೆ ಬರುತ್ತದೆ. ಬಾಗಿಲು–ಕಿಟಕಿಗಳು ಕಿತ್ತುಕೊಂಡು ಹೋಗುವಂತೆ ಹೊಡೆಯಲು ನನ್ನ ಪರ್ಸನಾಲಿಟಿಗೆ ಸಾಧ್ಯವೇ?’’ ಎಂದು ಯೋಗಿ ತಮ್ಮನ್ನು, ತಮ್ಮ ಸಿನಿಮಾಗಳನ್ನು ವಿಶ್ಲೇಷಿಸುತ್ತಾರೆ.

ಪ್ರಯೋಗಗಳಿಗೆ ಒಲವು
‘ದುನಿಯಾ’, ‘ನಂದ ಲವ್ಸ್ ನಂದಿತಾ’, ‘ಕಾಲಾಯಾ ತಸ್ಮೈ ನಮಃ’ ಚಿತ್ರಗಳಲ್ಲಿ ರೌಡಿ ಪಾತ್ರಗಳಲ್ಲಿ ನಟಿಸಿದವರು ಯೋಗಿ. ಈ ನಡುವೆಯೇ ‘ಮತ್ತೆ ಸತ್ಯಾಗ್ರಹ’, ‘ಕರಿಯ ಕಣ್‌ ಬಿಟ್ಟ’ ಸಿನಿಮಾಗಳಲ್ಲೂ ನಟಿಸುವ ಮೂಲಕ ಮತ್ತೊಂದು ರೀತಿಯ ಪಾತ್ರಗಳಿಗೂ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಭಿನ್ನ ಮತ್ತು ಪ್ರಯೋಗಶೀಲ ಚಿತ್ರಗಳ ಬಗ್ಗೆ ಅವರಿಗೆ ಮನಸ್ಸಿದೆ.

ಈ ಹಾದಿಯಲ್ಲಿ ಸದ್ಯ ‘ಸ್ನೇಕ್ ನಾಗ’ ಅವರ ಆಯ್ಕೆ. ಒಬ್ಬ ಹಾವಾಡಿಗ ಒಂದು ಅಪಾರ್ಟ್‌ಮೆಂಟ್‌ಗೆ ಬಂದಾಗ, ಅವನನ್ನು ಅಪಾರ್ಟ್‌ಮೆಂಟ್ ನಿವಾಸಿಗಳು ಆಚೆ ಹಾಕುವುದಕ್ಕೆ ಹೇಗೆಲ್ಲ ಪ್ರಯತ್ನಿಸುತ್ತಾರೆ, ಅದಕ್ಕೆ ಕಾರಣವೇನು ಎನ್ನುವುದು ‘ಸ್ನೇಕ್‌ ನಾಗ’ ಚಿತ್ರದ ಕಥೆ. ಈ ಚಿತ್ರದಲ್ಲಿ ಗಂಭೀರವಾದ ವಿಷಯಗಳ ಜೊತೆಗೆ ಕಾಮಿಡಿ ಸಾಕಷ್ಟು ಇದೆಯಂತೆ.

ಜಾಗತಿಕ ಮತ್ತು ಭಾರತೀಯ ಸಿನಿಮಾ– ಎರಡನ್ನೂ ಯೋಗಿ ನೋಡುತ್ತಾರಂತೆ. ಜಾಗತಿಕ ಶೈಲಿಯ ಸಿನಿಮಾಗಳನ್ನು ಮಾಡಲು ನಾವು ಯಾಕೆ ಪ್ರಯತ್ನಿಸಬಾರದು ಎಂದು ಅವರಿಗನ್ನಿಸಿದೆಯಂತೆ. ‘ಕನ್ನಡಿಗರು ಹೊಸ ರೀತಿಯ ಚಿತ್ರಗಳನ್ನು ತಪ್ಪದೆ ಬೆಂಬಲಿಸುತ್ತಾರೆ’ ಎನ್ನುವ ನಂಬಿಕೆ ಅವರಿಗಿದೆ. ಮಾಸ್‌ ನಟನಾಗಿ ಗುರ್ತಿಸಿಕೊಂಡಿರುವ ಯೋಗಿ ಅವರಿಗೆ ಕೌಟುಂಬಿಕ ಪ್ರಧಾನ ಚಿತ್ರವೊಂದರಲ್ಲಿ ನಟಿಸುವ ಮಹದಾಸೆಯೂ ಇದೆ. ‘ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಕಥೆಯನ್ನು ಇಟ್ಟುಕೊಂಡು ಒಂದು ನೀಟಾದ ಸಿನಿಮಾ ಮಾಡಬೇಕು’ ಎನ್ನುವುದು ಅವರ ಆಸೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.