ADVERTISEMENT

‘ರಾಜರು’ ಹಾಡುತ್ತಿದ್ದಾರೆ...

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2017, 19:30 IST
Last Updated 27 ಏಪ್ರಿಲ್ 2017, 19:30 IST
‘ರಾಜರು’ ಹಾಡುತ್ತಿದ್ದಾರೆ...
‘ರಾಜರು’ ಹಾಡುತ್ತಿದ್ದಾರೆ...   
ಆ ಸಂಜೆಯ ಕಾರ್ಯಕ್ರಮಕ್ಕೆ ನಟ ಸುದೀಪ್‌ ಮೊಹರಿತ್ತು. ಶ್ರೀಧರ್‌ ಸಂಭ್ರಮ್ ಹಾಡುಗಳ ಗುಂಗಿತ್ತು. ವೇದಿಕೆ ಮೇಲೆ ‘ರಾಜರು’ ಎಂಬ ಹೆಸರಿತ್ತು. ಒಂದಿಷ್ಟು ಹೊಸ ಹುಡುಗರ ಹುರುಪೂ ಇತ್ತು.
 
ಈ ಪ್ರಜಾಪ್ರಭುತ್ವ ಕಾಲದಲ್ಲಿ ಯಾರು ರಾಜರು? ಈ ಪ್ರಶ್ನೆಗೆ ‘ತೆರೆಯ ಮೇಲೆ ನೋಡಿ. ನಿಮಗೇ ತಿಳಿಯತ್ತದೆ’ ಎಂಬ ಸಾರ್ವತ್ರಿಕ ಉತ್ತರದೊಂದಿಗೇ ಮಾತಿಗೆ ತೊಡಗಿದರು ನಿರ್ದೇಶಕ ಗಿರೀಶ್‌ ಮೂಲಿಮನಿ. 
 
ಅದು ‘ರಾಜರು’ ಸಿನಿಮಾದ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ. ಗಿರೀಶ್‌ ಈ ಸಿನಿಮಾ ನಿರ್ದೇಶನಕ್ಕೆ ಧೈರ್ಯ ಮಾಡಿದ್ದೇ ಸುದೀಪ್‌ ಅವರ ಬೆಂಬಲದಿಂದ. ‘ಕೆಂಪೇಗೌಡ’ ಸಿನಿಮಾದಲ್ಲಿ ಕೆಲಸ ಮಾಡಿದ್ದ ಅವರಿಗೆ ‘ನೀವೇ ಒಂದು ಸಿನಿಮಾ ನಿರ್ದೇಶಿಸಿ’ ಎಂದು ಸಲಹೆ ನೀಡಿದ್ದೂ ಸುದೀಪ್‌. 
 
ಒಂದು ಹಾಡಿನ ಜತೆಗೆ ಸಿನಿಮಾದ ಸ್ಟಿಲ್‌ ಫೋಟೊಗಳನ್ನು ಪ್ರದರ್ಶಿಸಲಾಯಿತು. ಧ್ವನಿಮುದ್ರಿಕೆ ಬಿಡುಗಡೆ ಮಾಡಿದ ಸುದೀಪ್‌, ‘ಈ ಹಾಡನ್ನು ಫೋಟೊಗಳನ್ನೇ ಇಟ್ಟುಕೊಂಡು ರೂಪಿಸಲಾಗಿದೆಯೇ?’ ಎಂಬ ಪ್ರಶ್ನೆಯೊಂದಿಗೇ ಮಾತಿಗಿಳಿದರು.
 
‘ಒಂದಿಷ್ಟು ಫೋಟೊ ತೆಗೆದು ಅವುಗಳನ್ನು ಹಾಡುಗಳ ಜೊತೆ ಪ್ರದರ್ಶಿಸುವ ಹೊಸ ಪದ್ಧತಿಯೇನಾದರೂ ಆರಂಭವಾಗಿದೆಯಾ ಎಂದು ಭಯವಾಯ್ತು’ ಎಂದು ಚಟಾಕಿಯನ್ನೂ ಹಾರಿಸಿದರು. ಹೊಸ ಹುಡುಗರ ಶ್ರಮ ಮತ್ತು ಚೈತನ್ಯವನ್ನು ಮೆಚ್ಚಿಕೊಂಡ ಅವರು, ‘ಕೆಂಪೇಗೌಡ ಚಿತ್ರದ ತಾಂತ್ರಿಕ ತಂಡವೇ ಈ ಚಿತ್ರವನ್ನು ಮಾಡಿರುರುವುದು ಖುಷಿಯ ಸಂಗತಿ’ ಎಂದರು. 
 
ಪ್ರಮುಖ ಪಾತ್ರದಲ್ಲಿ ನಟಿಸಿರುವ ನಿರಂಜನ್‌ ಶೆಟ್ಟಿ ಅವರಿಗಿದು ನಾಯಕನಾಗಿ ಐದನೇ ಸಿನಿಮಾ. ‘ಈ ಸಿನಿಮಾದ ಕಥೆಯೇ ನನ್ನನ್ನು ತುಂಬ ಆಕರ್ಷಿಸಿದ್ದು. ಕ್ಲೈಮ್ಯಾಕ್ಸ್‌ ಅಂತೂ ತುಂ ಚೆನ್ನಾಗಿದೆ. ಅದೇ ಸಿನಿಮಾದ ಧನಾತ್ಮಕ ಅಂಶ’ ಎಂದರು. ನಾಯಕಿ ಶಾಲಿನಿ ಅವರಿಗೆ ಈ ಸಿನಿಮಾದ ಚಿತ್ರೀಕರಣದಲ್ಲಿ ಒಂದು ವರ್ಷ ಕಳೆದು ಹೋಗಿದ್ದೇ ತಿಳಿಯಲಿಲ್ಲವಂತೆ.
 
ಎರಡು ತುಳು ಸಿನಿಮಾದಲ್ಲಿ ನಟಿಸಿದ್ದ ನಾಗರಾಜ್‌ ಅವರಿಗಿದು ಕನ್ನಡದಲ್ಲಿ ಮೊದಲನೇ ಸಿನಿಮಾ. ಅವರಿಗೆ ಸುದೀಪ್‌ ಅವರೇ ರೋಲ್‌ ಮಾಡೆಲ್‌ ಅಂತೆ. ಶರಣ್‌ ಈ ಚಿತ್ರದಲ್ಲಿ ಲೋಕಲ್‌ ಹುಡುಗನ ಪಾತ್ರದಲ್ಲಿ ನಟಿಸಿದ್ದಾರೆ.
 
ಮುನಿರಾಜು ಮತ್ತು ಗಾಯಕಿ ಶ್ವೇತಾ, ಸಂಗೀತ ಸಂಯೋಜಕ ಶ್ರೀಧರ್‌ ಸಹ ಕಾರ್ಯಕ್ರಮದಲ್ಲಿ ಹಾಜರಿದ್ದರು. ತನ್ನ ಹಾಡುಗಳೇ ಮಾತನಾಡುತ್ತವೆ ಎಂಬ ಉದ್ದೇಶದಿಂದಲೋ ಏನೋ ಶ್ರೀಧರ್‌ ಸಂಭ್ರಮ್‌ ಹೆಚ್ಚು ಮಾತನಾಡಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.