ADVERTISEMENT

ರ್‍ಯಾಂಕ್ ರಾಜುವಿನ ಕಾಮಿಡಿ ಟೈಮ್

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2017, 19:30 IST
Last Updated 9 ಫೆಬ್ರುವರಿ 2017, 19:30 IST
ರ್‍ಯಾಂಕ್ ರಾಜುವಿನ ಕಾಮಿಡಿ ಟೈಮ್
ರ್‍ಯಾಂಕ್ ರಾಜುವಿನ ಕಾಮಿಡಿ ಟೈಮ್   

‘ಫಸ್ಟ್ ರ್‍ಯಾಂಕ್ ರಾಜು’ ಖ್ಯಾತಿಯ ಗುರುನಂದನ್ ಅಭಿನಯದ ‘ಸ್ಮೈಲ್ ಪ್ಲೀಸ್’ ಚಿತ್ರ ಇಂದು (ಫೆ. 10) ತೆರೆಗೆ ಬರುತ್ತಿದೆ. ಚಿತ್ರದ ನಿರ್ಮಾಪಕ ಕೆ. ಮಂಜು ಅವರ ಹುಟ್ಟುಹಬ್ಬವೂ ಇಂದೇ ಎಂಬುದು ಚಿತ್ರತಂಡಕ್ಕೆ ಮತ್ತೊಂದು ವಿಶೇಷ.

‘ಇಡೀ ರಾಜ್ಯದಲ್ಲಿ ಹೊಸಬರ ಚಿತ್ರಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕುತ್ತಿದೆ. ಈ ಚಿತ್ರದ ನಿರ್ದೇಶಕ ರಘು ಸಮರ್ಥ್ ಕೂಡ ಹೊಸ ನಿರ್ದೇಶಕ. ಪ್ರೇಕ್ಷಕ ಅವರನ್ನೂ ಗೆಲ್ಲಿಸುತ್ತಾನೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು ಕೆ. ಮಂಜು. ಕಥೆ ಕೇಳಿದ ನಂತರ ನಿರ್ಮಾಣಕ್ಕೆ ಹಣ ಹೊಂದಿಸಿದ್ದಷ್ಟೇ ಅವರ ಕೆಲಸ. ಉಳಿದೆಲ್ಲ ಜವಾಬ್ದಾರಿಯನ್ನು ನಿರ್ದೇಶಕ ರಘು ಸಮರ್ಥ್ ಯಶಸ್ವಿಯಾಗಿ ನಿರ್ವಹಿಸಿದ್ದಾರಂತೆ.

ತಮ್ಮ ಮೊದಲ ಸಿನಿಮಾ ಖಂಡಿತ ಯಶಸ್ವಿಯಾಗುತ್ತದೆ ಎಂಬ ನಂಬಿಕೆ ನಿರ್ದೇಶಕ ರಘು ಸಮರ್ಥ್ ಅವರದ್ದು. ‘ಚಿತ್ರೀಕರಣ ಸಂದರ್ಭದಲ್ಲಿ ಕಲಾವಿದರು ನಕ್ಕರೆ ಚಿತ್ರಮಂದಿರದಲ್ಲಿ ಪ್ರೇಕ್ಷಕರೂ ನಗುತ್ತಾರೆ ಎಂದುಕೊಂಡಿದ್ದೆ. ಕಲಾವಿದರಂತೂ ನಗುತ್ತಲೇ ಕೆಲಸ ಮಾಡಿದ್ದಾರೆ’ ಎಂದು ನಿರ್ದೇಶಕರು ಹೇಳಿದರು. ಕಟು ಸಂಪ್ರದಾಯವಾದಿ ಕುಟುಂಬದಲ್ಲಿ ಒಬ್ಬ ಹುಡುಗನ ಪ್ರವೇಶವಾದ ನಂತರ ಹೇಗೆಲ್ಲ ಬದಲಾವಣೆ ಆಗುತ್ತದೆ ಎಂಬುದು ಕಥೆ.

‘ನಾಯಕಿಗಿಂತ ಹೆಚ್ಚಾಗಿ ರಂಗಾಯಣ ರಘು ಅವರೊಂದಿಗೇ ಹೆಚ್ಚು ತೆರೆ ಹಂಚಿಕೊಂಡಂತಿದೆ’ ಎಂದು ನಾಯಕ ಗುರುನಂದನ್ ಹೇಳಿದರು. ‘ಫಸ್ಟ್ ರ್‍‍ಯಾಂಕ್ ರಾಜು’ಗೂ ಈ ಸಿನಿಮಾಕ್ಕೂ ಯಾವ ಸಾಮ್ಯವೂ ಇಲ್ಲ ಎಂದು ಅವರು ಹೇಳಿಕೊಂಡರು. ‘ನನ್ನ ಪಾತ್ರಕ್ಕೆ ಆರಂಭದಿಂದ ಕೊನೆಯವರೆಗೂ ಪ್ರಾಮುಖ್ಯ ಇದೆ. ಇಂಥ ಪಾತ್ರ ಎಲ್ಲಾ ಸಿನಿಮಾಗಳಲ್ಲೂ ಸಿಕ್ಕುವುದಿಲ್ಲ’ ಎಂದು ನಾಯಕಿ ಕಾವ್ಯಾ ಶೆಟ್ಟಿ ತಮ್ಮ ಪಾತ್ರದ ಮಹತ್ವವನ್ನು ವಿವರಿಸಿದರು.
ರಂಗಾಯಣ ರಘು, ಶ್ರೀನಿವಾಸ ಪ್ರಭು, ರವಿ ಭಟ್, ನೇಹಾ ಶೆಟ್ಟಿ ತಾರಾಗಣದಲ್ಲಿದ್ದಾರೆ. ಜಗದೀಶ್ ವಾಲಿ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ, ಜೋ.ನಿ. ಹರ್ಷ ಸಂಕಲನ ಇದೆ. 140ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.