ADVERTISEMENT

ಸಿನಿಮಾದೊಳಗೊಂದು ಸಿನಿಮಾ

​ಪ್ರಜಾವಾಣಿ ವಾರ್ತೆ
Published 18 ಮೇ 2017, 19:30 IST
Last Updated 18 ಮೇ 2017, 19:30 IST
ಪೂರ್ಣಚಂದ್ರ ಮೈಸೂರು
ಪೂರ್ಣಚಂದ್ರ ಮೈಸೂರು   
‘ರಂಗಿತರಂಗ’, ‘ಯೂ ಟರ್ನ್‌’ ರೀತಿಯ ದೆವ್ವದ ಸಿನಿಮಾಗಳ ಗುಂಗಿನಿಂದ ಕೊಂಚ ಹೊರಗೆ ಕಾಲು ಚಾಚಿರುವ ರಾಧಿಕಾ ಚೇತನ್‌ ಕ್ರೈಂ, ಥ್ರಿಲ್ಲರ್‌, ಸಸ್ಪೆನ್ಸ್‌ ಎಲ್ಲವೂ ಮಿಶ್ರಿತಗೊಂಡಿರುವ ‘ಬಿಬಿ5’ ಮೂಲಕ  ತಮ್ಮ ನಟನಾ ಪ್ರತಿಭೆಯ ಇನ್ನೊಂದು ಆಯಾಮ ತೋರಿಸುವ ಉತ್ಸಾಹದಲ್ಲಿದ್ದಾರೆ. 
 
ಸಿನಿಮಾದ ಶೀರ್ಷಿಕೆಯಂತೆ ಇದರಲ್ಲಿ ರಾಧಿಕಾ ಅವರ ಪಾತ್ರವೂ ವಿಶಿಷ್ಟವಾಗಿಯೇ ಇರಲಿದೆಯಂತೆ. ಇತ್ತೀಚೆಗೆ ಚಿತ್ರತಂಡದವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಸಂಗತಿಯನ್ನು ಖುಷಿಯಿಂದ ಹೇಳಿಕೊಂಡರು.
 
 
‘ಯೂ ಟರ್ನ್‌, ರಂಗಿತರಂಗ ಸಿನಿಮಾಗಳಲ್ಲಿ ನನ್ನದು ಗಂಭೀರ ಪಾತ್ರವಾಗಿತ್ತು. ಆದರೆ ಈ ಚಿತ್ರದಲ್ಲಿ ಮಾತಿನಮಲ್ಲಿ, ಲವ್ಲೀ, ತುಂಟ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ ಅಷ್ಟೇ ನಿಗೂಢವೂ ಆಗಿದೆ’ ಎಂದು ಕುತೂಹಲದ ಎಳೆಯನ್ನಷ್ಟೇ ತೋರಿ ಸುಮ್ಮನಾದರು ರಾಧಿಕಾ. ಪತ್ರಿಕಾಗೋಷ್ಠಿಯಲ್ಲಿ ತಂಡದ ಉಳಿದ ಸದಸ್ಯರು ಮಾಡಿದ್ದೂ ಅದನ್ನೇ. 
 
ದಶಕಗಳ ಕಾಲ ಸಾಫ್ಟ್‌ವೇರ್‌ ಉದ್ಯೋಗದಲ್ಲಿದ್ದ ಜನಾರ್ದನ್‌ ಎನ್‌. ಈ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ‘ಬಿಬಿ5 ಒಬ್ಬ ನಿರ್ದೇಶಕ ಮತ್ತು ಕಥೆಗಾರನ ನಡುವಿನ ಸಂಘರ್ಷದ ಕಥೆ.
 
ಬಿಬಿ5 ಎಂದು ಹೆಸರಿಡಲು ಮುಖ್ಯ ಕಾರಣವಿದೆ. ಅದೊಂದು ಕೋಡ್‌. ಅದರ ಅರ್ಥ ಏನು ಎಂಬುದನ್ನು ಸಿನಿಮಾದಲ್ಲಿಯೇ ನೋಡಿ’ ಎಂದು ಮನಸಲ್ಲಿ ಮೂಡಿದ್ದ ಕುತೂಹಲಕ್ಕೆ ಒಗ್ಗರಣೆ ಹಾಕಿದರು ಜನಾರ್ದನ್‌. ಜತೆಗೆ ‘ಬೆಂಗಳೂರಿನಲ್ಲಿ ನಡೆಯುವ ಒಂದು ಜೋಡಿ ಕೊಲೆಯ ಸುತ್ತ ನಡೆಯುವ ಕಥೆ’ ಎಂದು ಸಿನಿಮಾದಲ್ಲಿನ ಕ್ರೈಂ ಎಳೆಯನ್ನೂ ಬಿಡಿಸಿಟ್ಟರು. 
 
 
ಇದು ಸಿನಿಮಾದೊಳಗೊಂದು ಸಿನಿಮಾ ಇರುವ ಕಥೆ ಎನ್ನುವುದು ನಿರ್ದೇಶಕರ ಮಾತಿನಿಂದಲೇ ತಿಳಿಯಿತು. ಇದನ್ನು ದೃಢೀಕರಿಸಿದರು ಪೂರ್ಣಚಂದ್ರ ಮೈಸೂರು. ರಂಗಭೂಮಿ ಮತ್ತು ಕಿರುಚಿತ್ರಗಳ ನಟನೆಯಲ್ಲಿ ತೊಡಗಿಕೊಂಡಿದ್ದ ಅವರು ಈ ಚಿತ್ರದ ಮೂಲಕ ನಾಯಕನಟನ ಪಟ್ಟ ಗಿಟ್ಟಿಸಿಕೊಳ್ಳುತ್ತಿದ್ದಾರೆ.
 
‘ನಾನು ಈ ಚಿತ್ರದಲ್ಲಿ ಬರಹಗಾರನ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಹಿರಿಯ ನಿರ್ದೇಶಕನೊಬ್ಬನ ಬಳಿ ಕೆಲಸ ಕೇಳಿಕೊಂಡು ಹೋಗುವ ಬರಹಗಾರ ಎದುರಿಸುವ ಸಂಗತಿಗಳು ಕುತೂಹಲಕಾರಿಯಾಗಿವೆ’ ಎಂದರು.
 
ನಟ ರಾಜೇಶ್‌ ನಟರಂಗ ಈ ಸಿನಿಮಾದಲ್ಲಿ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ತಮ್ಮ ವೃತ್ತಿ ಬದುಕಿನಲ್ಲಿ ಇದೊಂದು ವಿಶಿಷ್ಟ ಪಾತ್ರ. ಇಡೀ ಜಗತ್ತಿನ ಚಿತ್ರರಂಗವೇ ಕನ್ನಡದತ್ತ ಹೊರಳಿ ನೋಡುವಂತಾಗಬೇಕು ಎಂಬ ಮಹತ್ವಾಕಾಂಕ್ಷೆ ಇರುವ ನಿರ್ದೇಶಕ. ಈ ಹೊಸಬರ ತಂಡದೊಂದಿಗೆ ಕೆಲಸ ಮಾಡಿದ್ದು ಖುಷಿ ನೀಡಿದೆ’ ಎಂದರು ರಾಜೇಶ್‌.
 
ಇದುವರೆಗೆ ಕಿರುತೆರೆಯಲ್ಲಿ ನಟಿಸುತ್ತಿದ್ದ ರಶ್ಮಿ ಪ್ರಭಾಕರ್‌ ’ಬಿಬಿ5’ ಮೂಲಕ ಹಿರಿತೆರೆಗೆ ಜಿಗಿಯುತ್ತಿದ್ದಾರೆ. ಈ ಚಿತ್ರದಲ್ಲಿ ಅವರದು ಕಾಲೇಜು ಹುಡುಗಿಯ ಪಾತ್ರ. ‘ನಾಯಕನ ಗೆಳತಿಯಾಗಿ ನಟಿಸಿದ್ದೇನೆ.
 
ಕಥೆ ಸಾಗಿದಂತೆಲ್ಲ ನನ್ನ ಪಾತ್ರಕ್ಕೆ ನೆಗೆಟೀವ್‌ ಶೇಡ್‌ ಬರುತ್ತ ಹೋಗುತ್ತದೆ’ ಎಂದ ಅವರಿಗೆ, ಈ ಚಿತ್ರದ ಪಾತ್ರ ತಮಗೆ ಇನ್ನಷ್ಟು ಅವಕಾಶಗಳನ್ನು ತಂದುಕೊಡುತ್ತದೆ ಎಂಬ ವಿಶ್ವಾಸವೂ ಇದೆ. ಇನ್ನೊಬ್ಬ ನಟಿ ಅಂಕಿತಾ ಕೂಡ ಈ ಚಿತ್ರದ ಮೂಲಕ ಸಿನಿ ಬದುಕನ್ನು ಆರಂಭಿಸಲಿದ್ದಾರೆ.
 
ಸೌಮ್ಯಾ ಬಿ.ಜಿ. ಅವರು ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಚೇತನ್‌ ಕುಮಾರ್‌ ಶಾಸ್ತ್ರಿ ಸಂಗೀತ, ವಿಕ್ರಮ್‌ ಮತ್ತು ಚೇತನ್‌ ರಾಯ್‌ ಛಾಯಾಗ್ರಹಣ ‘ಬಿಬಿ5’ಗಿದೆ. ಇದೇ ತಿಂಗಳ 26ರಂದು ಚಿತ್ರ ಬಿಡುಗಡೆ ಮಾಡಲು ತಂಡ ಸಿದ್ಧತೆ ನಡೆಸಿಕೊಂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.