ADVERTISEMENT

ಸೂರಿ ಗರಡಿಯಲ್ಲಿ ಶಿವಣ್ಣನ ‘ಟಗರು’

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2016, 19:30 IST
Last Updated 25 ಆಗಸ್ಟ್ 2016, 19:30 IST
ಟಗರು ಶಿವರಾಜಕುಮಾರ್
ಟಗರು ಶಿವರಾಜಕುಮಾರ್   

ಒಂದೇ ವಾರದಲ್ಲಿ ಶಿವರಾಜಕುಮಾರ್ ಅವರ ಎರಡು ಚಿತ್ರಗಳು ಮುಹೂರ್ತ ಆಚರಿಸಿಕೊಂಡಿವೆ. ‘ಲೀಡರ್’ ಮುಹೂರ್ತವಾದ ಮೂರೇ ದಿನದ ಅಂತರದಲ್ಲಿ ‘ಟಗರು’ ಸಿನಿಮಾ ಸೆಟ್ಟೇರಿದೆ. ರವಿಚಂದ್ರನ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದರು. ಯಶ್, ಪುನೀತ್, ಯೋಗರಾಜ್ ಭಟ್, ಗೀತಾ ಶಿವರಾಜಕುಮಾರ್ ಪೂಜೆ ವೇಳೆ ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.

‘ಕಡ್ಡಿಪುಡಿ’ ನಂತರ ಶಿವರಾಜಕುಮಾರ್ ಮತ್ತು ಸೂರಿ ಈ ಚಿತ್ರದಲ್ಲಿ ಮತ್ತೆ ಒಂದಾಗುತ್ತಿದ್ದಾರೆ. ಸೂರಿ ನಿರ್ದೇಶನದ ‘ಕೆಂಡಸಂಪಿಗೆ’ಯಲ್ಲಿ ಮೊದಲ ಬಾರಿ ನಟಿಸಿದ್ದ ಮಾನ್ವಿತಾ ಹರೀಶ್ ‘ಟಗರು’ ಚಿತ್ರದಲ್ಲಿ ಶಿವರಾಜ್‌ಗೆ ನಾಯಕಿ. ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದ ಧನಂಜಯ್ ಈ ಚಿತ್ರದಲ್ಲಿ ಖಳನಾಗಿ ಅದೃಷ್ಟ ಪರೀಕ್ಷಿಸಲಿದ್ದಾರೆ. ವಸಿಷ್ಠ ಸಿಂಹ ಕೂಡ ಚಿತ್ರದಲ್ಲಿದ್ದಾರೆ.

‘ಮೈಯೆಲ್ಲ ಪೊಗರು’ ಎಂಬುದು ‘ಟಗರು’ ಶೀರ್ಷಿಕೆಯ ವಿವರಣೆ. ಸೆಪ್ಟೆಂಬರ್ 23ಕ್ಕೆ ಟ್ರೈಲರ್ ಬಿಡುಗಡೆ ಮಾಡುವುದಾಗಿ ಮುಹೂರ್ತದ ದಿನವೇ ನಿರ್ದೇಶಕರು ಘೋಷಿಸಿದ್ದಾರೆ. ‘ದೊಡ್ಮನೆ ಹುಡ್ಗ’ ಚಿತ್ರೀಕರಣದ ಸಂದರ್ಭದಲ್ಲಿ ‘ಟಗರು’ ಕಥೆ ಸೂರಿ ಅವರಿಗೆ ಹೊಳೆದಿದೆ. ರೌಡಿಸಂ ಕಥೆಯ ಈ ಚಿತ್ರಕ್ಕೆ ಶಿವಣ್ಣ ಅವರೇ ಸೂಕ್ತ ಎಂಬ ವಿಶ್ವಾಸ ಅವರದು. ಈ ಚಿತ್ರಕ್ಕಾಗಿ ‘ಕಾಗೆ ಬಂಗಾರ’ವನ್ನು ಅವರು ಮುಂದೂಡಿದ್ದಾರೆ.

ಅತ್ಯುತ್ತಮ ತಂಡ ಸಿಕ್ಕ ಕಾರಣಕ್ಕೆ ಧನಂಜಯ್ ಖಳನ ಪಾತ್ರ ನಿರ್ವಹಿಸಲು ಒಪ್ಪಿದ್ದಾರೆ. ಶಿವರಾಜಕುಮಾರ್ ಜತೆ ನಟಿಸುವ ಅವಕಾಶಕ್ಕೆ ಮಾನ್ವಿತಾ ಖುಷಿ ಪಟ್ಟಿರುವಷ್ಟೇ ಆತಂಕಕ್ಕೂ ಒಳಗಾಗಿದ್ದಾರೆ. ಕೆ.ಪಿ. ಶ್ರೀಕಾಂತ್ ಚಿತ್ರದ ನಿರ್ಮಾಪಕರು. ಚರಣ್ ರಾಜ್ ಸಂಗೀತ ಮತ್ತು ಮಹೇಂದ್ರ ಸಿಂಹ ಛಾಯಾಗ್ರಹಣ ಇದೆ. ಬೆಂಗಳೂರು, ಹೈದರಾಬಾದ್, ಬೆಳಗಾವಿ, ಮೈಸೂರಿನಲ್ಲಿ ಅಕ್ಟೋಬರ್ 5ರಿಂದ ತೊಂಬತ್ತು ದಿನಗಳ ಚಿತ್ರೀಕರಣ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.