ADVERTISEMENT

ಹೆದರಿಸೋಕೆ ಬರ್ತಿದ್ದಾಳೆ ಕಾಂಚನಾ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2014, 19:30 IST
Last Updated 27 ಆಗಸ್ಟ್ 2014, 19:30 IST

ಕನ್ನಡದ ಪ್ರೇಕ್ಷಕರನ್ನು ಹೆದರಿಸಲು ಬರ್ತಿದ್ದಾಳೆ ‘ಕಾಂಚನಾ’. ವಿಜಯ್ ಸುರಾನ ನಿರ್ದೇಶನವಿರುವ ‘ಕಾಂಚನಾ’ಗೆ ಕಾಂಚಾಣ ಹೊಂದಿಸಿದ್ದೂ ಅವರೇ. ಹೊಸ ಚಿತ್ರ ಸೆಟ್ಟೇರುವ ಖುಷಿ ಹಂಚಿಕೊಳ್ಳಲು ಚಿತ್ರತಂಡ ಮಾಧ್ಯಮದವರ ಎದುರಲ್ಲಿತ್ತು.
‘ಕಾಂಚನಾ ಹಾರರ್ ಥ್ರಿಲ್ಲರ್ ಚಿತ್ರವಾಗಿದ್ದು ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯಲು ಮತ್ತು ಅವರಲ್ಲಿ ಭಯ ಹುಟ್ಟಿಸುವಲ್ಲಿ ಸಫಲವಾಗುತ್ತದೆ’ ಎಂಬುದು ನಿರ್ದೇಶಕರ ಅನಿಸಿಕೆ.

ಚಿತ್ರೀಕರಣ ಆಗಸ್ಟ್ 30ರಿಂದ ಪ್ರಾರಂಭವಾಗಲಿದ್ದು, ಮಂಗಳೂರಿನ ಸಮೀಪವಿರುವ ನಿರ್ಜನ ದ್ವೀಪವೊಂದರಲ್ಲಿ ಚಿತ್ರದ ಪೂರ್ಣ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ. ಸುಮಾರು 25 ದಿನಗಳ ಚಿತ್ರೀಕರಣಕ್ಕೆ ಎರಡು ಹಂತಗಳಲ್ಲಿ ಪ್ಲಾನ್ ಮಾಡಿದ್ದಾರೆ ನಿರ್ದೇಶಕರು.
ನಾಯಕ ರಾಹುಲ್‌ಗೆ ಹಾರರ್ ಚಿತ್ರಗಳೆಂದರೆ ತುಂಬ ಇಷ್ಟ.

ಎರಡು ತುಳು ಚಿತ್ರಗಳಲ್ಲಿ ಬಣ್ಣ ಹಚ್ಚಿದ ಅನುಭವ ಮಂಗಳೂರಿನ ಈ ಹುಡುಗನಿಗೆ ಇದೆ. ಆಡಿಶನ್ ಮೂಲಕ ಆಯ್ಕೆಯಾದ ಮತ್ತೊಬ್ಬ ನಾಯಕ ಹೇಮಂತ್ ಒಂದೆರಡು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ‘ಚಿತ್ರದಲ್ಲಿ ತಮ್ಮದು ಪ್ರಮುಖ ಪಾತ್ರ’ ಎಂಬುದು ಅವರ ಅಂಬೋಣ. ನಾಯಕ ಮತ್ತು ನಾಯಕಿ ಪ್ರವಾಸಕ್ಕೆಂದು ನಿರ್ಜನವಾದ ದ್ವೀಪಕ್ಕೆ ತೆರಳುವಲ್ಲಿಂದ ಕಥೆ ಆರಂಭವಾಗುತ್ತದೆ.

ಇನ್ನು ಚಿತ್ರದ ನಾಯಕಿ ‘ಮಿಸ್ ಮಲ್ಲಿಗೆ’ ಖ್ಯಾತಿಯ ರೂಪಾ ನಟರಾಜ್. ‘ಮಿಸ್ ಮಲ್ಲಿಗೆಯಲ್ಲಿ ನಿರ್ವಹಿಸಿದಂತಹ ಸಾಕಷ್ಟು ಪಾತ್ರಗಳ ಆಫರ್ ಬಂದಿದ್ದರೂ ನಿರಾಕರಿಸಿದ್ದೇನೆ. ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಬಯಕೆ ಇರುವ ನಾನು ಒಂದು ಪಾತ್ರಕ್ಕೆ ಬ್ರಾಂಡ್ ಆಗುವವಳಲ್ಲ’ ಎನ್ನುವ ರೂಪಾಗೆ ಕಾಂಚನಾ ಚಿತ್ರದ ಪಾತ್ರ ಸವಾಲಿನಿಂದ ಕೂಡಿದೆ ಅನ್ನಿಸುತ್ತದೆ. ಸಾಕಷ್ಟು ಹಾರರ್ ಚಿತ್ರಗಳನ್ನು ನೋಡಿ ಖುಷಿಪಡುವ ಅವರಿಗೆ ಅಂತಹ ಚಿತ್ರದಲ್ಲಿ ಕಾಣಿಸಿಕೊಳ್ಳುವ ಆಸೆ ಕೂಡ ಇತ್ತು. ‘ಭಯ ಪಡ್ತೀನಿ, ಭಯ ಪಡಿಸ್ತೀನಿ’ ಎನ್ನುವ ರೂಪಾ ಕಾಂಚನಾ ಅಲ್ಲವಂತೆ.

‘6–5=2’ ಚಿತ್ರದ ನಂತರ ಮತ್ತೊಮ್ಮೆ ಹಾರರ್ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ವಿಜಯ್ ಚಂಡೂರ್, ‘ಕೇವಲ ಐದಾರು ಪಾತ್ರಗಳಲ್ಲಿ ಸಾಗುವ ಚಿತ್ರವು ಒಳ್ಳೆಯ ಎಂಟರ್‌ಟೇನ್‌ಮೆಂಟ್ ಪ್ಯಾಕೇಜ್. ಭಯ, ಹಾಸ್ಯ, ಮನರಂಜನೆ ಎಲ್ಲವೂ ಇವೆ’ ಎನ್ನುತ್ತಾರೆ. ಫೈಟ್ ಇಲ್ಲದಿದ್ದರೂ ಫೈಟ್ ಮಾಸ್ಟರ್ ಕೌರವ ವೆಂಕಟೇಶ್ ಚಿತ್ರಕ್ಕೆ ಸಾಕಷ್ಟು ಸಮಯ ನೀಡಲಿದ್ದಾರೆ. ನಿರ್ದೇಶಕರು ಸಸ್ಪೆನ್ಸ್ ದೃಶ್ಯಗಳ ಚಿತ್ರೀಕರಣದಲ್ಲಿ ಅವರ ಶ್ರಮ ಬಳಸಿಕೊಳ್ಳಲಿದ್ದಾರಂತೆ. ಡ್ಯಾನಿಯಲ್ ಅವರ ಸಂಗೀತ ಚಿತ್ರಕ್ಕಿರಲಿದೆ. ಓಂ ಶಾಂತಿ ಪ್ರೊಡಕ್ಷನ್‌ನ ಅಮರ್‌ಚಂದ್ ಜೈನ್ ಅವರು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.