ADVERTISEMENT

‘ಬದ್ಮಾಶ್’ ಗಾನ–ಗುಣಗಾನ

​ಪ್ರಜಾವಾಣಿ ವಾರ್ತೆ
Published 23 ಜೂನ್ 2016, 19:30 IST
Last Updated 23 ಜೂನ್ 2016, 19:30 IST
-ಧನಂಜಯ್, ಸಂಚಿತಾ
-ಧನಂಜಯ್, ಸಂಚಿತಾ   

ನಟ ಧನಂಜಯ್ ಸಿನಿಮಾ ಬದುಕು ಆರಂಭವಾಗಿದ್ದು ‘ಡೈರೆಕ್ಟರ್‍ಸ್ ಸ್ಪೆಷಲ್’ ಚಿತ್ರದಿಂದ. ಅವರ ಅಭಿನಯದ ‘ಬದ್ಮಾಶ್’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭವೂ ಒಂದರ್ಥದಲ್ಲಿ ‘ಡೈರೆಕ್ಟರ್‍ಸ್ ಸ್ಪೆಷಲ್’ ಆಗಿತ್ತು. ಪವನ್ ಒಡೆಯರ್, ಪವನ್ ಕುಮಾರ್, ಚೇತನ್, ಬಿ. ಸುರೇಶ್, ಅನೂಪ್ ಭಂಡಾರಿ, ಕೃಷ್ಣ, ಸಂತೋಷ್ ಆನಂದರಾಮ್ ಮುಂತಾದ ನಿರ್ದೇಶಕರು ಕಾರ್ಯಕ್ರಮಲ್ಲಿ ಹಾಜರಿದ್ದರು.

ನಿರ್ದೇಶಕ ಆಕಾಶ್ ಶ್ರೀವತ್ಸ ಹಾಡುಗಳ ಬಗ್ಗೆ ವಿವರಣೆ ನೀಡುತ್ತ ಒಂದೊಂದೇ ಹಾಡನ್ನು ಪ್ರದರ್ಶನ ಮಾಡಿದರು. ಜೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಚೇತನ್ ಕುಮಾರ್, ಆಕಾಶ್ ಶ್ರೀವತ್ಸ, ಜ್ಞಾನೇಂದ್ರ ಕೊಪ್ಪಳ್, ಜಯಂತ ಕಾಯ್ಕಿಣಿ, ಯೋಗರಾಜ್ ಭಟ್, ವಿನೋದ್ ಕುಮಾರ್ ಅವರುಗಳ ಸಾಹಿತ್ಯಕ್ಕೆ ಚಂದನ್ ಶೆಟ್ಟಿ, ಲಹರಿ ರಮೇಶ್, ಟೋನಿ ಥಾಮಸ್, ಸಾಯಿ ಪ್ರಕಾಶ್, ಟಿಪ್ಪು, ಶಶಾಂಕ್ ಶೇಷಗಿರಿ, ಕಾರ್ತಿಕ್, ಶ್ರೇಯಾ ಘೋಷಾಲ್, ವಿಜಯ್ ಪ್ರಕಾಶ್, ಅರ್ಜುನ್ ದನಿ ನೀಡಿರುವುದು ‘ಬದ್ಮಾಶ್’ ಗೀತೆಗಳ ವಿಶೇಷ.

ಶ್ರೀರಾಮನ ನೂರಾ ಎಂಟು ನಾಮಗಳಿರುವ ‘ಹರೇ ರಾಮ’ ಹಾಡನ್ನು ರಘು ದೀಕ್ಷಿತ್ ಹಾಡಿದ್ದಾರೆ. ‘ನನ್ನ ಬಳಿ ಬರುವವರೆಲ್ಲ ನನ್ನಿಂದ ಎತ್ತರದ ಸ್ಥಾಯಿಯ ಗಾಯನವನ್ನೇ ನಿರೀಕ್ಷಿಸುತ್ತಾರೆ. ಅದು ಹೆಚ್ಚಾಗಿ ನಂತರ ನನ್ನಿಂದ ಆಗದ ಹಂತಕ್ಕೆ ತಲುಪಿದ್ದೂ ಇದೆ. ಈ ಚಿತ್ರದ ಹಾಡೂ ಸ್ವಲ್ಪ ಕಷ್ಟವೇ ಆಯಿತು. ಆದರೆ ಅದು ಕಂಠದ ಸಮಸ್ಯೆ ಆಗಿರಲಿಲ್ಲ. ರಾಮನ ಹೆಸರನ್ನು ಹಾಡಿನ ರೂಪದಲ್ಲಿ ಹೇಳುವ ಸವಾಲಾಗಿತ್ತು’ ಎಂದರು.

ಸಭಾಂಗಣದ ತುಂಬೆಲ್ಲ ಕೇಳುತ್ತಿದ್ದ ಶಿಳ್ಳೆಗೆ ಪ್ರತಿಕ್ರಿಯಿಸಿದ ಧನಂಜಯ್, ‘ಈ ಶಿಳ್ಳೆಯನ್ನು ನಾನು ಹೇಳಿ ಹಾಕಿಸಿದ್ದಲ್ಲ’ ಎನ್ನುತ್ತಲೇ ಮಾತಿಗೆ ಶುರು ಮಾಡಿದರು. ‘ನಾವು ಸಿನಿಮಾಕ್ಕೆ ಬರಲು ನಿರ್ಧರಿಸಿದಾಗ ನಿರ್ದೇಶಕರ ಸಂಖ್ಯೆ ಕಡಿಮೆ ಇತ್ತು. ಈಗಿನವರಿಗೆ ಸಾಕಷ್ಟು ಉತ್ತಮ ನಿರ್ದೇಶಕರು ಲಭ್ಯವಿದ್ದಾರೆ’ ಎಂದು ಹಾಜರಿದ್ದ ನಿರ್ದೇಶಕರನ್ನು ಕೊಂಡಾಡಿದರು. ದೀರ್ಘ ಅಂತರದ ನಂತರ ಸಂಚಿತಾ ಶೆಟ್ಟಿ ಕನ್ನಡದಲ್ಲಿ ಕಾಣಿಸಿಕೊಂಡಿದ್ದಾರೆ. ರವಿಕಷ್ಯಪ್ ನಿರ್ಮಾಣದ ಚಿತ್ರ ಜುಲೈನಲ್ಲಿ ತೆರೆಕಾಣಲಿದೆ.

ಧನಂಜಯ್ ಸ್ಪಷ್ಟನೆ
‘ನಿರ್ದೇಶಕರಿಗೆ ಹೇಳಿ ತನಗೆ ಬೇಕಾದಂತೆ ಸಿನಿಮಾ ಮಾಡಿಸಿಕೊಳ್ಳಲು ಧನಂಜಯ್‌ಗೆ ಬರುವುದಿಲ್ಲ. ನಿರ್ದೇಶಕರು ಹೇಳಿದ್ದಷ್ಟನ್ನೇ ಮಾಡಿ ಹೊರಡುತ್ತಾರೆ’ ಎಂದು ಹಿಂದೆ ತಮ್ಮ ಮೇಲೆ ಕೇಳಿಬಂದಿದ್ದ ಆರೋಪಕ್ಕೆ ಕೊಂಚ ಬೇಸರಗೊಂಡಂತಿದ್ದ ಧನಂಜಯ್ ಈ ವೇದಿಕೆಯಲ್ಲಿ ಸ್ಪಷ್ಟನೆ ನೀಡಿದರು. ‘ನಾನು ಆರಂಭದಿಂದಲೂ ಒಂದೇ ರೀತಿಯ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇನೆ. ನಾನು ನಿರ್ದೇಶಕರಿಗೆ ಹೇಳಿ, ನನಗೆ ಬೇಕಾದಂತೆ ಸಿನಿಮಾ ಮಾಡಿಸಿಕೊಳ್ಳುವವನಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ನನಗೆ ಸಿಕ್ಕ ನಿರ್ದೇಶಕರೆಲ್ಲರೂ ಒಳ್ಳೆಯ ಕೆಲಸಗಾರರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.