ADVERTISEMENT

‘ಲೊಡ್ಡೆ’ ಆಟ ಶುರು...

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

‘ನಿರ್ಮಾಪಕರು ಸಿನಿಮಾ ಮಾಡುವುದು ಬಹಳ ಸುಲಭ ಅಂದುಕೊಂಡಿದ್ದರು. ಆದರೆ ಬಿಡುಗಡೆಯ ಸಮಯದಲ್ಲಿನ ಕಷ್ಟಗಳನ್ನು ನೋಡಿ, ಇಷ್ಟೆಲ್ಲಾ ಕಷ್ಟ ಇದೆಯಾ? ಇಷ್ಟೊಂದು ಸಮಸ್ಯೆಗಳು ಇರುತ್ತದೆಯಾ ಎಂದರು’– ಹೀಗೆ ಗಾಂಧಿನಗರದಲ್ಲಿ ತಮ್ಮ ‘ಲೊಡ್ಡೆ’ ಚಿತ್ರದ ಬಿಡುಗಡೆಗೆ ಎದುರಾಗುತ್ತಿರುವ ಸಮಸ್ಯೆಗಳನ್ನು ಹೇಳಿಕೊಂಡರು ನಿರ್ದೇಶಕ ಎಸ್‌.ವಿ. ಸುರೇಶ್.

ಕೋಮಲ್ ಅಭಿನಯದ ‘ಲೊಡ್ಡೆ’ ಚಿತ್ರದ ಬಿಡುಗಡೆ ಚಿತ್ರಮಂದಿರದ ಸಮಸ್ಯೆಯ ಕಾರಣಕ್ಕೆ ಈ ಮೊದಲು ಮುಂದಕ್ಕೆ ಹೋಗುತ್ತಲೇ ಬಂದಿದೆ. ಈಗ ಎಲ್ಲ ತಡೆಗಳನ್ನು ನಿವಾರಿಸಿಕೊಂಡಿದೆ ಎನ್ನುವಂತೆ ಇಂದು (ಜುಲೈ 31) ಚಿತ್ರ ತೆರೆಗೆ ಬರುತ್ತಿದೆ.

‘ಲೊಡ್ಡೆ’ ಚಿತ್ರಕ್ಕೆ ತ್ರಿಭುವನ್ ಚಿತ್ರಮಂದಿರದ ಜತೆ ಒಡಂಬಡಿಕೆಯಾಗಿತ್ತು. ಈ ನಡುವೆ ‘ಕಪಾಲಿ’ಯಲ್ಲಿ ‘ಬುಲೆಟ್ ಬಸ್ಯಾ’ನಿಗೆ ಅವಕಾಶ ಮಾಡಿಕೊಡಲು ಅಲ್ಲಿದ್ದ ‘ರಂಗಿತರಂಗ’ವನ್ನು ತ್ರಿಭುವನ್‌ಗೆ ಶಿಫ್ಟ್‌ ಮಾಡಲಾಗಿದೆ. ಅಂದಹಾಗೆ, ‘ಬುಲೆಟ್ ಬಸ್ಯಾ’ ಮತ್ತು ‘ರಂಗಿತರಂಗ’ ಚಿತ್ರದ ಹಂಚಿಕೆದಾರ ಜಯಣ್ಣ.

‘ರಂಗಿತರಂಗ ಚೆನ್ನಾಗಿ ಓಡುತ್ತಿದೆ. ಆ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ನನಗೆ ತಮ್ಮನ ಸಮಾನ. ಅವರ ತಂದೆ ನನಗೆ ಆತ್ಮೀಯರಾಗಿದ್ದರು. ಈ ಚಿತ್ರ ತೆಗೆಯಿರಿ ಎಂದು ಹೇಳಲು ಮನಸ್ಸಾಗುತ್ತಿಲ್ಲ. ಆದರೆ ಅನಿವಾರ್ಯ. ಈಗ ಒಂದು ವಾರದ ಮಟ್ಟಿಗೆ ಎಂದು ತ್ರಿಭುವನ್‌ನಲ್ಲಿ ರಂಗಿತರಂಗವನ್ನು ಪ್ರದರ್ಶಿಸುತ್ತಿದ್ದಾರೆ. ನಾವು ನಮ್ಮ ಚಿತ್ರ ನಾರ್ಮಲ್ ಡಿಲವರಿ ಆಗುತ್ತದೆ ಎಂದುಕೊಂಡಿದ್ದೆವು. ಆದರೆ ಅದು ಸಿಜೇರಿಯನ್’ ಎಂದು ಹೇಳಿದ ನಿರ್ದೇಶಕರ ಮಾತುಗಳಲ್ಲಿ ಚಿತ್ರಮಂದಿರಕ್ಕಾಗಿ ಪಟ್ಟ ಪಡಿಪಾಟಲು ಇಣುಕುತ್ತಿತ್ತು.

‘ಕಳೆದ ವರ್ಷ ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರವೇಶ ಪಡೆದೆ. ಈಗ ಕನ್ನಡ ಚಿತ್ರರಂಗದ ಸರದಿ’ ಎಂದರು ನಾಯಕಿ ಆಕಾಂಕ್ಷ. ‘ಲೊಡ್ಡೆ’ ನನ್ನ ಮಹತ್ವಾಕಾಂಕ್ಷೆಯ ಸಿನಿಮಾ ಎಂದು ಆಕಾಂಕ್ಷಾ ಬಣ್ಣಿಸಿದರು. ಚಿತ್ರಮಂದಿರಗಳ ಸಮಸ್ಯೆಯ ಕುರಿತ ನಿರ್ದೇಶಕರ ಮಾತುಗಳನ್ನು ನಿರ್ಮಾಪಕ ಮಂಜುನಾಥ್ ಅನುಮೋದಿಸಿದರು. ಸಂಕಲನಕಾರ ಲಿಂಗರಾಜ್, ಛಾಯಾಗ್ರಹಕ ಪ್ರಕಾಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.