ADVERTISEMENT

75ನೇ ಚಿತ್ರದ ಪುಳಕದಲ್ಲಿ ಮಂಜುನಾಥ್‌

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2016, 19:30 IST
Last Updated 8 ಸೆಪ್ಟೆಂಬರ್ 2016, 19:30 IST
ಬಾಲನಟ ಮಂಜುನಾಥ
ಬಾಲನಟ ಮಂಜುನಾಥ   

ಕೈಗೆ ರಿಮೋಟ್ ಸಿಕ್ಕಾಗೆಲ್ಲ ಟಿ.ವಿ ಮುಂದೆ ಕುಳಿತು ಕೇವಲ ಹಾಸ್ಯದ ಚಾನೆಲ್‌ಗಳನ್ನು ನೋಡುತ್ತಿದ್ದ ಬಾಲಕ, ಮುಂದೊಂದು ದಿನ ಆ ಟಿ.ವಿ.ಯಲ್ಲಿ ತನ್ನನ್ನು ತಾನೇ ನೋಡಿಕೊಳ್ಳುತ್ತೇನೆ ಎಂದು ಕನಸು ಮನಸಲ್ಲೂ ಯೋಚಿಸಿರಲಿಲ್ಲ. ಮಗನಿಗೆ ಮೆಟ್ಟಿಕೊಂಡಿದ್ದ ಟಿ.ವಿ ಹುಚ್ಚು ಬಿಡಿಸಲು ಪರದಾಡುತ್ತಿದ್ದ ತಂದೆ–ತಾಯಿ, ಈಗ ಮಗ ಟಿ.ವಿ.ಯಲ್ಲಿ ಬಂದರೆ  ಅಭಿಮಾನಪಡುತ್ತಾರೆ.

ಇದು ಬಾಲನಟ ಮಂಜುನಾಥನ ಯಶೋಗಾಥೆ. ಟಿ.ವಿ ನೋಡುತ್ತಲೇ ನಟನೆಯನ್ನು ಕರಗತ ಮಾಡಿಕೊಂಡ ಹುಡುಗನೀತ. ಕನ್ನಡದಲ್ಲಿ ಬೇಡಿಕೆ ಇರುವ ಕೆಲವೇ ಬಾಲನಟರ ಪೈಕಿ ಮಂಜು ಕೂಡ ಒಬ್ಬ. ಅಂದಹಾಗೆ ಚಂದನವನದಲ್ಲಿ ‘ಗುಂಡಣ್ಣ’ ಎಂದೇ ಈತ ಪರಿಚಿತ.

‘ಟಿ.ವಿ ನೋಡುತ್ತಲೇ ನಟಿಸಬೇಕೆಂಬ ಆಸೆ ಚಿಗುರೊಡೆಯಿತು. ಆರಂಭದಲ್ಲಿ ನನಗೇ ಏಟಿನ ರುಚಿ ತೋರಿಸಿ, ಟಿ.ವಿ ಬಿಟ್ಟು ಓದಿನ ಕಡೆ ಗಮನ ಕೊಡು ಎಂದು ಹೇಳುತ್ತಿದ್ದ ಅಪ್ಪ–ಅಮ್ಮ ಕಡೆಗೆ ನನ್ನಾಸೆಗೆ ನೀರೆರೆದರು. ಚಿತ್ರರಂಗದಲ್ಲಿ ನನಗೆ ಯಾವುದೇ ಹಿನ್ನೆಲೆ ಇಲ್ಲ. ಬಿಡುವಾದಾಗ ಗಾಂಧಿನಗರದಲ್ಲಿರುವ ಪ್ರೊಡಕ್ಷನ್‌ ಹೌಸ್‌ಗಳಿಗೆ ಅಪ್ಪ ಆಟೊದಲ್ಲಿ ಕರೆದುಕೊಂಡು ಹೋಗಿ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸಲು ಯತ್ನಿಸುತ್ತಿದ್ದರು’ ಎಂದು ಮಂಜು ನೆನಪಿಸಿಕೊಳ್ಳುತ್ತಾನೆ.

‘ಹನಿಮೂನ್ ಎಕ್ಸ್‌ಪ್ರೆಸ್‌’ ಚಿತ್ರಕ್ಕೆ ಬಾಲನಟರ ಅಗತ್ಯವಿದ್ದು, ಅದಕ್ಕಾಗಿ ಆಡಿಷನ್ ನಡೆಯುತ್ತಿದೆ ಎಂದು ಗೊತ್ತಾಯಿತು. ಅಪ್ಪ–ಅಮ್ಮನೊಂದಿಗೆ ಹೋದೆ. ನನ್ನನ್ನು ಕಂಡ ನಿರ್ದೇಶಕರು, ತಂದೆ ಬಳಿ ಮೊಬೈಲ್ ಸಂಖ್ಯೆ ಪಡೆದುಕೊಂಡು ಚಿತ್ರೀಕರಣ ಇದ್ದಾಗ ಹೇಳುತ್ತೇನೆ ಮಗನನ್ನು ಕರೆದುಕೊಂಡು
ಬನ್ನಿ ಎಂದರು. ಆ ಚಿತ್ರದಲ್ಲಿ ಉಮಾಶ್ರೀ ಅವರ ಪುತ್ರನಾಗಿ ನಾನು ಕಾಣಿಸಿಕೊಂಡಿದ್ದೆ. ಅಲ್ಲದೆ, ಮೊದಲ ಸಲ ಕ್ಯಾಮೆರಾದ ಎದುರಿಸಿದಾಗ ತೆಗೆದುಕೊಂಡಿದ್ದು ಒಂದೇ ಟೇಕ್’ ಎಂದು ತನ್ನ ಸಿನಿಪಯಣವನ್ನು ಬಿಚ್ಚಿಡುತ್ತಾನೆ.

ಹೀಗೆ ಬಾಲನಟನಾಗಿ  ಕಾಣಿಸಿಕೊಳ್ಳುತ್ತಿದ್ದ ಮಂಜುವಿಗೆ, ಗಣೇಶ್– ರಮ್ಯ ಅಭಿನಯದ ‘ಬೊಂಬಾಟ್’ ಸಿನಿಮಾ ಮತ್ತಷ್ಟು ಹೆಸರು ತಂದುಕೊಟ್ಟಿತು. ನಂತರ ನಟಿಸಿದ ‘ಚಾರುಲತಾ’, ‘ಕೃಷ್ಣನ್ ಲವ್ ಸ್ಟೋರಿ’, ಕೃಷ್ಣಲೀಲಾ’, ‘ಲವ್ ಇನ್ ಮಂಡ್ಯ’, ‘ಉಗ್ರಂ’, ಮಾಣಿಕ್ಯ’, ‘ಜೈ ಮಾರುತಿ 800’ ಚಿತ್ರಗಳಲ್ಲಿ ಎದ್ದು ಕಾಣುವಂತಹ ಪಾತ್ರಗಳು ಸಿಕ್ಕವು. ಜತೆಗೆ, ಕಿರುತೆರೆಯಲ್ಲೂ ಅವಕಾಶಗಳು ಸಿಕ್ಕವು. ‘ರೋಬೊ ಫ್ಯಾಮಿಲಿ’, ‘ಪುಣ್ಯಕೋಟಿ’, ‘ಹೆಳವನಕಟ್ಟೆ ಗಿರಿಯಮ್ಮ’ ಸೇರಿ 20 ಧಾರಾವಾಹಿಗಳಲ್ಲಿ ಆತ ನಟಿಸಿದ್ದಾನೆ.

ತಿರುವು ನೀಡುವ ‘ಗೋಲಿಸೋಡ’
‘ಗೋಲಿಸೋಡ’ ತನ್ನ ಸಿನಿ ಬದುಕಿಗೆ ತಿರುವು ನೀಡುವ ಚಿತ್ರ ಎನ್ನುವ ಮಂಜು, ‘ಜುಬ್ಬ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ‘ಮಾರುಕಟ್ಟೆಯನ್ನೇ ಮನೆ ಮಾಡಿಕೊಂಡಿರುವ ಅನಾಥ ಹುಡುಗರು, ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವ ಕಥೆ ಗೋಲಿಸೋಡದ್ದು. ಮುಗ್ಧ ಮತ್ತು ಕೋಪಿಷ್ಠನನ್ನಾಗಿ ತೋರಿಸುವ ನಿರ್ದೇಶಕರು ನನ್ನ ಕೈಲಿ ಆ್ಯಕ್ಷನ್ ಕೂಡ ಮಾಡಿಸಿದ್ದಾರೆ. ಈ ಚಿತ್ರ ನನ್ನ ಬದುಕಿನ ಒಂದು ಮೈಲಿಗಲ್ಲಾಗುತ್ತದೆ’ ಎಂದು ಮಂಜು ವಿಶ್ವಾಸ ವ್ಯಕ್ತಪಡಿಸುತ್ತಾನೆ.

‘ಚಿತ್ರದಲ್ಲಿ ತಾರಾ ಅಮ್ಮ ಅವರು ಕೂಡ ಮುಖ್ಯ ಪಾತ್ರದಲ್ಲಿದ್ದು, ಅವರು ನನ್ನ ನಟನೆಯನ್ನು ತಿದ್ದಿದ್ದಾರೆ. ನನ್ನ ಪ್ರತಿ ದೃಶ್ಯವೂ ಸ್ವಾಭಾವಿಕವಾಗಿರುವಂತೆ ನಿರ್ದೇಶಕರು, ನನ್ನನ್ನು ಪಾಲಿಶ್ ಮಾಡಿದ್ದಾರೆ’ ಎಂದು ನಿರ್ದೇಶಕ ರಘುಜಯ ಅವರಿಗೆ ಕೃತಜ್ಞತೆ ಸಲ್ಲಿಸುತ್ತಾನೆ.

ಮಂಜು ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾನೆ. ಕನ್ನಡವಷ್ಟೆ ಅಲ್ಲದೆ, ತಮಿಳು ಮತ್ತು ತೆಲುಗಿನಲ್ಲೂ ನಟಿಸಿದ್ದಾನೆ. ತಮಿಳಿನಲ್ಲೂ ಬಿಡುಗಡೆಯಾಗಿದ್ದ ‘ಚಾರುಲತಾ’ ಚಿತ್ರಕ್ಕೆ ಸ್ವತಃ ಮಂಜು ಡಬ್ಬಿಂಗ್ ಮಾಡಿದ್ದ. ಅಲ್ಲದೆ, ತೆಲುಗಿನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಜತೆ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾಣೆ. ತಮಿಳಿನ ಧಾರಾವಾಹಿಯೊಂದಕ್ಕೂ ಬಣ್ಣ ಹಚ್ಚಿದ್ದಾನೆ.

‘ಹಾಸ್ಯನಟರನ್ನು ನೋಡಿ ಕಲಿತವನು ಹಾಗೂ ಕಲಿಯುತ್ತಿರುವವನು ನಾನು. ಹಾಸ್ಯವೆಂದರೆ ನನಗಿಷ್ಟ. ಅಂತೆಯೇ ಆ ಪಾತ್ರಗಳು ಸಹ’ ಎನ್ನುವ ಆತ, ಪಿಯುಸಿ ವಿದ್ಯಾರ್ಥಿ. ಓದಿನ ಜತೆಗೆ, ನಟನೆಯನ್ನೂ ತೂಗಿಸಿಕೊಂಡು ಹೋಗುತ್ತಿರುವ ಮಂಜು, ತಿಂಗಳಲ್ಲಿ ಎಂಟತ್ತು ದಿನ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವುದಾಗಿ ಹೇಳುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.