ADVERTISEMENT

ಗಟ್ಟಿ ಘಟನೆಯ ಪೇಲವ ನಿರೂಪಣೆ

‘ಸರಬ್ಜೀತ್’

​ಪ್ರಜಾವಾಣಿ ವಾರ್ತೆ
Published 20 ಮೇ 2016, 10:29 IST
Last Updated 20 ಮೇ 2016, 10:29 IST
ಗಟ್ಟಿ ಘಟನೆಯ ಪೇಲವ ನಿರೂಪಣೆ
ಗಟ್ಟಿ ಘಟನೆಯ ಪೇಲವ ನಿರೂಪಣೆ   

ಚಿತ್ರ – ‘ಸರಬ್ಜೀತ್’
ನಿರ್ಮಾಣ: ವಶು ಭಾಗ್ನಾನಿ, ಭೂಷಣ್‌ ಕುಮಾರ್‌, ಸಂದೀಪ್‌ ಸಿಂಗ್‌, ಒಮಂಗ್‌ ಕುಮಾರ್‌
ನಿರ್ದೇಶನ: ಒಮಂಗ್‌ ಕುಮಾರ್‌
ತಾರಾಗಣ: ಐಶ್ವರ್ಯಾ ರೈ, ರಣದೀಪ್‌ ಹುಡಾ, ರಿಚಾ ಚಡ್ಡಾ, ದರ್ಶನ್‌ ಕುಮಾರ್‌

ಕಳೆದ ಐದು ವರ್ಷದ ಅವಧಿಯಲ್ಲಿ ಐಶ್ವರ್ಯಾ ನಟಿಸಿರುವ ಎರಡನೇ ಸಿನಿಮಾ ಎಂಬ ಕಾರಣಕ್ಕೆ ಮುಖ್ಯವಾದುದು ‘ಸರಬ್ಜೀತ್‌’. ಭಾರತ–ಪಾಕ್‌ ಗಡಿಗೆ ಹೊಂದಿಕೊಂಡಂತೆ ಇರುವ ಪಂಜಾಬ್‌ನ ಭಿಖಿವಿಂದ್‌ ಎಂಬ ಹಳ್ಳಿಯ ರೈತನ ದುರಂತ ಕಥಾನಕದ ಸಿನಿಮಾ ಇದು.

ಹೆಂಡ ಕುಡಿದ ಅಮಲಿನಲ್ಲಿ ಗಡಿ ದಾಟುವ ಅವನನ್ನು ಭಯೋತ್ಪಾದಕ ಎಂದು ಪಾಕಿಸ್ತಾನೀಯರು ವಶಕ್ಕೆ ಪಡೆದು, ದಾರುಣವಾಗಿ ಹಿಂಸೆ ನೀಡುವ ಪರಿ ಹಾಗೂ ಅವನ ಬಿಡುಗಡೆಗಾಗಿ ಅಕ್ಕ ಹೋರಾಡುವುದು ಸಿನಿಮಾದ ಸಾರಾಂಶ.

ಉತ್ಕರ್ಷಿಣಿ ವಸಿಷ್ಠ ಹಾಗೂ ರಾಜೇಶ್‌ ಬೇರಿ ಬರೆದಿರುವ ಚಿತ್ರಕಥೆಯಲ್ಲಿ ಐಶ್ವರ್ಯಾ ರೈ ಅವರಿಗೆ ಹೆಚ್ಚು ಅವಕಾಶ ಕಲ್ಪಿಸುವ ಭಿತ್ತಿ ಇದೆ. ಅದಕ್ಕೆ ತಕ್ಕಂತೆ ಅವರು ಬರೆದಿಟ್ಟ ದೃಶ್ಯಗಳನ್ನು ಕಿರಣ್‌ ದೇವಹಂಸ್‌ ಕ್ಯಾಮೆರಾ ಸಿನಿಮಾ ಆಗಿಸಿದೆ.

ನಿರ್ದೇಶಕರ ಕ್ರಿಯಾಶೀಲತೆಗೆ ಕಡಿಮೆ ಉದಾಹರಣೆಗಳನ್ನು ಕಾಣಿಸುವ ಈ ಸಿನಿಮಾದಲ್ಲಿ ಕಿರಣ್‌ ‘ಸೌಂದರ್ಯ ಪ್ರಜ್ಞೆ’ಯೇ ಮುಂದಾಗಿದೆ. ಆಕಸ್ಮಿಕ, ತಲ್ಲಣ, ಕ್ರೌರ್ಯ, ದುಃಖ, ಸಲ್ಲಾಪ ಎಲ್ಲಾ ಕ್ಷಣಗಳನ್ನು ಏಕರೀತಿಯಲ್ಲಿ ಕಾಣಿಸುವಂತೆ ಮಾಡಿರುವ ಲೈಟಿಂಗ್‌ ಅವರ ಈ ಪ್ರಜ್ಞೆಗೆ ಪುಷ್ಟಿ ಒದಗಿಸುವಂತಿದೆ. ಹೊರಾಂಗಣವನ್ನೇ ಅವರು ಹೆಚ್ಚಾಗಿ ನೆಚ್ಚಿಕೊಂಡಿರುವುದೂ ಇದೇ ಅನುಕೂಲಕ್ಕೆ.

ಹಾಗೆ ನೋಡಿದರೆ, ಈ ಸಿನಿಮಾದ ಕೇಂದ್ರ ಪಾತ್ರ ಸರಬ್ಜೀತ್‌ ಸಿಂಗ್‌ ಅತ್ವಾಲ್‌ ಆಗಬೇಕಿತ್ತು. ಮಾಡದ ತಪ್ಪಿಗೆ ಭಯೋತ್ಪಾದಕನ ಹಣೆಪಟ್ಟಿ ಕಟ್ಟಿಕೊಂಡು 23 ವರ್ಷ ನರಳಿ ನರಳಿ, ಜೈಲಿನಲ್ಲೇ ಪಾಕಿಸ್ತಾನೀಯರಿಂದ ಹತನಾಗುವ ಆ ರೈತನ ನಿಜ ಕಥಾನಕಕ್ಕೆ ಅನೇಕ ಮಾನವೀಯ ಸೂಕ್ಷ್ಮಗಳಿವೆ.

ಜೊತೆಗೆ ಭಾರತ–ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧದ ರಾಜಕೀಯದ ಆಯಾಮವೂ ಇದೆ. ಇವನ್ನು ಅತಿ ತೆಳುವಾಗಿ ತೋರಿಸುವ ಸಿನಿಮಾ, ಐಶ್ವರ್ಯಾ ರೈ ಬಚ್ಚನ್‌ ಅವರನ್ನು ಹೋರಾಟಗಾರ್ತಿಯನ್ನಾಗಿ ಬಿಂಬಿಸಿದೆ.

ತಮ್ಮನಿಗಾಗಿ ಇಡೀ ಜೀವವನ್ನೇ ತೇಯುವ ಪಾತ್ರದ ಆ ಮುಖದಲ್ಲಿ ಹೈರಾಣಾದ ಕಳೆಯೇ ಕಾಣದಿರುವುದು ದೊಡ್ಡ ಲೋಪ. ಫ್ಯಾನ್ಸಿ ಡ್ರೆಸ್‌ ಹಾಕಿಕೊಂಡು, ಸಂಭಾಷಣೆ ಒಪ್ಪಿಸುವ ಮಟ್ಟಕ್ಕೆ ಈ ಅನುಭವಿ ನಟಿಯ ಅಭಿನಯ ಸೀಮಿತಗೊಂಡಿದೆ.

ಅಕಸ್ಮಾತ್ತಾಗಿ ಪಾಕಿಸ್ತಾನದ ಗಡಿ ದಾಟಿ, ವರ್ಷಗಟ್ಟಲೆ ‘ಬ್ಲಾಕ್‌ ಹೋಲ್‌’ನಲ್ಲಿ  ನರಕಯಾತನೆ ಪಡುವ ಕುಂದಾಪುರದ ಮೀನುಗಾರನ ನಿಜ ಘಟನೆಯನ್ನು ಆಧರಿಸಿ ಕನ್ನಡದಲ್ಲಿ ನಿರ್ದೇಶಕ ದ್ವಾರ್ಕಿ ರಾಘವ ‘ಮತ್ತೆ ಮುಂಗಾರು’ ಸಿನಿಮಾ ಮಾಡಿದ್ದರು. ಅದರಲ್ಲಿ ಇದ್ದ ಭಾವಸೂಕ್ಷ್ಮಗಳು ಈ ಹಿಂದಿ ಸಿನಿಮಾದಲ್ಲಿ ಇಲ್ಲ.

ಸಿಕ್ಕಿರುವ ಅವಕಾಶವನ್ನು ನಟ ರಣದೀಪ್‌ ಹುಡಾ ಚೆನ್ನಾಗಿ ಬಳಸಿಕೊಂಡಿದ್ದಾರೆ. ಅಭಿನಯದಲ್ಲಿ ಅವರು ಐಶ್ವರ್ಯಾ ಅವರನ್ನು ಹಿಂದಿಕ್ಕುತ್ತಾರೆ. ಆದರೆ, ಅಷ್ಟು ವರ್ಷ ಚಿತ್ರಹಿಂಸೆ ಅನುಭವಿಸಿದರೂ ಅವರ ದೇಹಾಕಾರ ಪಾತ್ರ ಸಹಜತೆ ಬಯಸುವಷ್ಟು ಕೃಶವಾಗಿಲ್ಲ.

ಅನುಕ್ರಮಣಿಕೆಗೆ ಹೊರತಾದ ನಿರೂಪಣೆಯೂ ಸಿನಿಮಾದ ಗತಿ ಹಾಗೂ ಲಯಕ್ಕೆ ಅಡ್ಡಿಯೊಡ್ಡಿದೆ. ಸಮಾಜೋ ರಾಜಕೀಯ ಸಮಸ್ಯೆಯೊಂದನ್ನು ಸಿನಿಮಾ ಆಗಿಸುವ ಕಷ್ಟಗಳಿಗೂ ಈ ಚಿತ್ರ ಉದಾಹರಣೆಯಂತೆ ಉಳಿಯಬಲ್ಲುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.