ADVERTISEMENT

ಗಾಢ ವಿಷಾದದ ಪ್ರೇಮಕಾವ್ಯ

ಚಿತ್ರ: ಅತಿ ಅಪರೂಪ

ಆನಂದತೀರ್ಥ ಪ್ಯಾಟಿ
Published 11 ಏಪ್ರಿಲ್ 2014, 19:30 IST
Last Updated 11 ಏಪ್ರಿಲ್ 2014, 19:30 IST
ಗಾಢ ವಿಷಾದದ ಪ್ರೇಮಕಾವ್ಯ
ಗಾಢ ವಿಷಾದದ ಪ್ರೇಮಕಾವ್ಯ   

ಸಾವಿನ ಅಂಚಿನಲ್ಲಿರುವ ತುಂಟ ಹುಡುಗಿಗೆ ಜೀವನದ ಪ್ರತಿ ಕ್ಷಣವನ್ನೂ ಉತ್ಕಟವಾಗಿ ಸವಿಯುವ ಬಯಕೆ. ಆ ಕೊನೆದಿನಗಳನ್ನು ಸಹನೀಯ­ಗೊಳಿಸಲು ಸಿದ್ಧನಾಗುವ ಹುಡುಗ. ಈ ಮಧ್ಯೆ ಆತನ ಕುಟುಂಬದಲ್ಲಿ ನಡೆಯುವ ಹಲವು ಘಟನೆಗಳನ್ನು ಭಾವುಕತೆಯ ಸ್ಪರ್ಶದೊಂದಿಗೆ ಪೋಣಿಸಿದ್ದಾರೆ ನಿರ್ದೇಶಕ ದಿನೇಶ ಬಾಬು.

ವಾಸಿಯಾಗದ ಕಾಯಿಲೆ­ಯಿಂದ ಬಳಲುವ ನಾಯಕಿಯೂ, ಜೀವಕ್ಕಿಂತ ಹೆಚ್ಚಾಗಿ ಆಕೆಯನ್ನು ಪ್ರೀತಿಸುವ ನಾಯಕನೂ ಇರುವ ಹತ್ತಾರು ಸಿನಿಮಾಗಳ ಸಾಲಿನಲ್ಲಿ ‘ಅತಿ ಅಪರೂಪ’ ಚಿತ್ರ ಸೇರುತ್ತದಾದರೂ, ಅದನ್ನು ಉದ್ವೇಗ, ಅವಸರಗಳಿಲ್ಲದೇ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ.

ದುರಂತ ಕಥೆಯ ಚೌಕಟ್ಟಿನೊಳಗೆ ಕೂರಿಸಬಹು­ದಾದ ಕಥೆಯನ್ನು ಲವಲವಿಕೆಯಿಂದ ನಿರೂಪಿಸಿರುವ ನಿರ್ದೇಶಕರು, ಮೊದಲಾರ್ಧವನ್ನು ಹಾಸ್ಯ, ಮನರಂಜನೆಗೆ ಮೀಸಲಿಟ್ಟಿದ್ದಾರೆ. ದ್ವಿತೀಯಾರ್ಧದಲ್ಲಿ ಹೆಚ್ಚಾಗಿ ಭಾವನೆಗಳದೇ ತಾಕಲಾಟ. ಗಾಢ ವಿಷಾದದ ಪ್ರೇಮ ಕಾವ್ಯ ಇದು.

ಅಪ್ಪ ವಿಶ್ವನಾಥನ (ಅನಂತನಾಗ್‌) ಎರಡನೇ ಮದುವೆ ಸಹಿಸದ ಮಗ ಭರತ್‌ (ಪ್ರೇಮ್‌) ಮನೆ ತೊರೆದು ಹೋಗುವಾಗ, ಅಪರ್ಣ (ಐಂದ್ರಿತಾ ರೇ) ಜತೆಯಾಗುತ್ತಾಳೆ. ಜಗಳಗಂಟಿ ಸ್ವಭಾವದ ಆಕೆಯ ವಿವರವೆಲ್ಲ ಗೊತ್ತಾಗುವುದು ಪತ್ರಿಕೆಯಲ್ಲಿನ ಜಾಹೀರಾತಿನಿಂದ. ಶ್ರೀಮಂತ ಕುಟುಂಬದ ಆ ಹುಡುಗಿ, ಮದುವೆಯಾಗ ಬಯಸದೇ ಮನೆ ಬಿಟ್ಟು ಓಡಿ ಬಂದಿರುತ್ತಾಳೆ. ‘ಅತಿ ಅಪರೂಪ’ದ ಕಾಯಿಲೆಯಿಂದ ಬಳಲುತ್ತಿರುವ ಆಕೆ ಇನ್ನು ಮೂರ್ನಾಲ್ಕು ತಿಂಗಳಷ್ಟೇ  ಬದುಕುವ ವಿಷಯ ಗೊತ್ತಾಗಿ ಭರತ್‌ ಅಘಾತ ಅನುಭವಿಸುತ್ತಾನೆ. ತನಗೆ ಆ ಕಾಯಿಲೆ ಇದೆ ಎಂಬುದು ಗೊತ್ತಿರುವುದರಿಂದಲೇ ಉಳಿದ ಸಮಯವನ್ನು ಸಂತಸದಿಂದ ಕಳೆಯಲು ಆಕೆ ಬಯಸಿರುತ್ತಾಳೆ. ಆ ಕೊನೆಯ ದಿನಗಳನ್ನು ಸಹನೀಯಗೊಳಿಸಲು ಭರತ್‌ ಮದುವೆಯಾಗುತ್ತಾನೆ.

‘ಸಾವು ದೂರವಿದ್ದಾಗ ಅದು ಯಾವತ್ತು ಬರುತ್ತದೋ ಎಂಬ ಭಯ ಕಾಡುತ್ತದೆ. ಆದರೆ ಹತ್ತಿರ ಬಂದಂತೆಲ್ಲ ಅದು ಸ್ನೇಹಿತನಂತೆ ಕಾಣಿಸುತ್ತದೆ’ ಎನ್ನುವ ಐಂದ್ರಿತಾ ರೇ ಪಾತ್ರ ಎರಡು ಛಾಯೆಗಳಲ್ಲಿದೆ. ಭರತ್‌ನನ್ನು ಗೋಳು ಹೊಯ್ದುಕೊಳ್ಳುವ ತುಂಟಿಯಾಗಿ ಆರಂಭದಲ್ಲಿ ಕಾಣಿಸಿಕೊಳ್ಳುವ ಐಂದ್ರಿತಾ, ಅಷ್ಟೇ ನಿರುಮ್ಮಳತೆಯಿಂದ ಸಾವನ್ನು ಎದುರು ನೋಡುವ ಬಗೆಯಲ್ಲೂ ಗಮನ ಸೆಳೆಯುತ್ತಾರೆ. ಇದಕ್ಕೆ ಸರಿಸಮನಾಗಿ ಪ್ರೇಮ್‌ ಅಭಿನಯಿಸಿದ್ದರೂ, ಭಾವನೆ ವ್ಯಕ್ತಪಡಿಸುವ ದೃಶ್ಯಗಳಲ್ಲಿ ತುಸು ಹಿಂದೆ ಬಿದ್ದಂತೆ ಭಾಸವಾಗುತ್ತದೆ.

ನಾಯಕಿಯ ಸಾವಿನ ಬದಲಿಗೆ ಆಕೆಯ ಮದುವೆಯೊಂದಿಗೆ ಚಿತ್ರ ಅಂತ್ಯಗೊಳಿಸುವ ನಿರ್ದೇಶಕ ಬಾಬು ಶೈಲಿ ಪ್ರೇಕ್ಷಕರಿಗೆ ‘ಹಿತಾನುಭವ’ ಕೊಡುತ್ತದೆ. ಬಾಲ್ಯದಲ್ಲೇ ಅಪ್ಪ–ಅಮ್ಮನನ್ನು ಕಳೆದುಕೊಂಡರೂ, ಅವರೊಂದಿಗಿನ ಸಂತಸದ ಕ್ಷಣಗಳ ವಿಡಿಯೊ ತೋರಿಸುವ ಅಪರ್ಣ ‘ನನ್ನಲ್ಲಿ ನಿನಗೆ ಕಾಣಿಕೆಯಾಗಿ ಕೊಡಲು ನಾಳೆಗಳಿಲ್ಲ. ಅದಕ್ಕೇ ನಿನ್ನೆಗಳನ್ನು ಕೊಡುತ್ತಿರುವೆ’ ಎನ್ನುವ ಮಾತು ನೋಡುಗರನ್ನು ಮೂಕವಾಗಿಸುತ್ತದೆ.

ಗಂಭೀರ ಸ್ವಭಾವದ ಎಸ್ಟೇಟ್‌ ಮಾಲೀಕನಾಗಿ ಅನಂತನಾಗ್‌ ಅಭಿನಯಕ್ಕೆ ಸಾಟಿ ಇಲ್ಲ. ಶರಣ್‌ ಸಂಭಾಷಣೆ, ಆಂಗಿಕ ಅಭಿನಯ ನಗೆಯುಕ್ಕಿಸುತ್ತದೆ. ಕಾಫಿ ಎಸ್ಟೇಟ್‌, ಕಾಡು, ಜಲಪಾತ, ಬೆಟ್ಟ– ಗುಡ್ಡಗಳ ಸೌಂದರ್ಯವನ್ನು ಮುದ ನೀಡುವಂತೆ ಬಾಬು ಸೆರೆ ಹಿಡಿದಿದ್ದಾರೆ. ಮನೋಮೂರ್ತಿ ಸಂಯೋಜನೆಯ ಸಂಗೀತದಲ್ಲಿನ ಹಾಡುಗಳ ಪೈಕಿ ‘ಅಮ್ಮ ನಿನ್ನ ತೋಳಿನಲ್ಲಿ’ ಹಾಗೂ ‘ಮಳೆಯ ಹನಿಯಲಿ’ ಗುನುಗುನಿಸುವಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT