ADVERTISEMENT

ತುಟಿಬಣ್ಣವೆಂಬ ರೂಪಕವು!

ಲಿಪ್‌ಸ್ಟಿಕ್‌ ಅಂಡರ್ ಮೈ ಬುರ್ಖಾ

ವಿಶಾಖ ಎನ್.
Published 22 ಜುಲೈ 2017, 13:57 IST
Last Updated 22 ಜುಲೈ 2017, 13:57 IST
ತುಟಿಬಣ್ಣವೆಂಬ ರೂಪಕವು!
ತುಟಿಬಣ್ಣವೆಂಬ ರೂಪಕವು!   

ಚಿತ್ರ: ಲಿಪ್‌ಸ್ಟಿಕ್‌ ಅಂಡರ್ ಮೈ ಬುರ್ಖಾ (ಹಿಂದಿ)
ನಿರ್ಮಾಣ: ಪ್ರಕಾಶ್ ಝಾ
ನಿರ್ದೇಶನ: ಅಲಂಕೃತಾ ಶ್ರೀವಾಸ್ತವ್

ತಾರಾಗಣ: ಕೊಂಕಣಾ ಸೆನ್ ಶರ್ಮ, ರತ್ನಾ ಪಾಠಕ್, ಆಹನಾ,  ಪಬ್ಲಿತಾ, ಸುಶಾಂತ್ ಸಿಂಗ್

*

'ಕನಸು ಕಾಣುತ್ತಿದ್ದೇವಲ್ಲ, ಅದೇ ನಾವು ಮಾಡುತ್ತಿರುವ ತಪ್ಪು'- ಹೀಗೆನ್ನುವ ಹೆಣ್ಣುಮಗಳ ಎದುರು ಕಣ್ಣೀರಿಡುವ ಮತ್ತೊಬ್ಬ ಗೃಹಿಣಿ. ಅವಳ ಬಾಜೂ ಮನೆಯ ಕಾಲೇಜು ಹುಡುಗಿಯ ಹೊಯ್ದಾಟವೂ ಅದೇ. ನರೆತ ಕೂದಲಿನ, ಇಳಿ ವಯಸ್ಸಿನ ವಿಧವಾ ಮಹಿಳೆ ಧಾರ್ಮಿಕ ಪುಸ್ತಕದ ಮಧ್ಯೆ ಕಾಮಕಥನದ ಹೊತ್ತಗೆ ಇಟ್ಟುಕೊಂಡು ಓದುತ್ತಾಳೆ.
ಎಲ್ಲರೂ ಅವರವರ ಕನಸುಗಳ ನೇವರಿಸುತ್ತಾರೆ, ಪುರುಷ ಜಗತ್ತು ಹಾಕಿದ ಚೌಕಟ್ಟಿನೊಳಗೆ.

'ಲಿಪ್‌ಸ್ಟಿಕ್‌ ಅಂಡರ್ ಮೈ ಬುರ್ಖಾ' ಹಿಂದಿ ಚಿತ್ರ ಸಾವಧಾನದ ವಾಚಾಳಿ ಚಿತ್ರ. ಆಧುನಿಕ ಪರಿಭಾಷೆಯಲ್ಲಿ 'ಬೋಲ್ಡ್' ಎನ್ನಬಹುದು. ಮಾತು ನೇರ. ಡಬ್ಬಲ್ ಮೀನಿಂಗ್ ಕೂಡ ಅಲ್ಲ. ಸಂಕೋಲೆಗಳ ನಡುವೆಯೂ ತಮಗೆ ಅನ್ನಿಸಿದ್ದನ್ನೇ ಮಾಡುವ ಮಹಿಳೆಯರ ಮನೋವ್ಯಾಪಾರದ ಚಿತ್ರವಿದು. ಲಿಪ್ ಸ್ಟಿಕ್ ಕನಸಿನ ರೂಪಕವಾದರೆ, ಬುರ್ಖಾ ಸಂಪ್ರದಾಯದ ಸಂಕೇತ. ಹಾಗೆಂದು ಇದನ್ನು ಮಹಿಳಾವಾದದ ಸಿನಿಮಾ ಎಂದು ಸೀಮಿತಗೊಳಿಸಲಾಗದು.

ಭೋಪಾಲದ ಒಂದೇ ಕಟ್ಟಡದಲ್ಲಿ ವಾಸ ಮಾಡುವ ನಾಲ್ಕು ಮಹಿಳೆಯರನ್ನು ಒಂದು ಬಿಂದುವಿಗೆ ತರಲು ಹೊರಟಿದ್ದಾರೆ ನಿರ್ದೇಶಕಿ ಅಲಂಕೃತಾ ಶ್ರೀವಾಸ್ತವ್ . ಅದಕ್ಕೆ ಅಗತ್ಯವಿರುವ ಕಸುಬುದಾರಿಕೆ ಚಿತ್ರಕಥೆಯಲ್ಲಿ ಎದ್ದುಕಾಣುವಂತೆ ಕೆಲವು ಪೂರ್ವಗ್ರಹಗಳೂ ಅಡಕವಾಗಿವೆ. ಅವರು ಪುರುಷ ಪಾತ್ರಗಳನ್ನು ಅನುಕೂಲಕ್ಕೆಂದೇ ತಾತ್ಸಾರ ಧೋರಣೆಯಿಂದ ನೋಡಿದ್ದಾರೆ. ಆದರೆ, ಸಣ್ಣ ಪಟ್ಟಣವೊಂದರ ನಾಡಿಮಿಡಿತವನ್ನು ಸೂಕ್ಷ್ಮವಾಗಿ ಹಿಡಿದಿರುವ ಅವರ ಹೆಣ್ಣುಗಣ್ಣು ಬೆರಗು ಮೂಡಿಸುವಂಥದು. ಕೊಂಕಣಾ ಸೇನ್ ಹಾಗೂ ರತ್ನಾ ಪಾಠಕ್ ಪಾತ್ರಗಳು ಹೆಚ್ಚೇ ತೂಕದವು.

ಈ ಸಿನಿಮಾ ಮೇಲುನೋಟಕ್ಕೆ 'ಬ್ಲ್ಯಾಕ್ ಕಾಮಿಡಿ'ಯಂತೆ ಕಾಣುತ್ತದೆ. ಒಳಾರ್ಥವೇ ಬೇರೆ. ವ್ಯಂಗ್ಯಭರಿತ ಚರ್ಚೆಯ ಧಾಟಿಯ ಹೊರತಾಗಿಯೂ ಚಿತ್ರ ಬೇರೇನನ್ನೋ ದಾಟಿಸುತ್ತಿದೆ ಎಂದು ಭಾಸವಾಗುತ್ತದೆ. ಅದು ಚಿತ್ರದ ಶಿಲ್ಪಶಕ್ತಿ.

ಸಿನಿಮಾ ಉದ್ದೇಶಕ್ಕೆ ಪೂರಕವಾಗಿ ಹಿನ್ನೆಲೆ ಸಂಗೀತ ಹಾಗೂ ತಾಂತ್ರಿಕ ಚಳಕ ಒದಗಿಬಂದಿದೆ. ಅಭಿನಯದಲ್ಲಿ ಎಲ್ಲರೂ ಪೈಪೋಟಿಗೆ ಬಿದ್ದಿದ್ದಾರೆ. ಕೊಂಕಣಾ ನೋವ ನುಂಗುವ ಪರಿ, ರತ್ನಾ ಒಳತೋಟಿ ಅನಾವರಣಗೊಳಿಸುವ ರೀತಿ, ಮುದ್ದು ಮುಖದ ಆಹನಾ ಬುರ್ಖಾ ಕಿತ್ತಿಟ್ಟು ಪಾಪ್ ಸಂಗೀತದ ಹಂಗನ್ನು ತೋರುವ ವೈಖರಿ ಎಲ್ಲದರಲ್ಲೂ ಭಾವತೀವ್ರತೆ ಇದೆ.

ಸೆನ್ಸಾರ್ ಮಂಡಳಿ ಈ ಚಿತ್ರದ ಕುರಿತು ಯಾಕೆ ಅಷ್ಟೆಲ್ಲ ಆಕ್ಷೇಪ ತೆಗೆಯಿತು ಎಂಬ ಪ್ರಶ್ನೆಯೂ ಮೂಡುತ್ತದೆ. ಇದೇ ವಸ್ತುವನ್ನು ಇಷ್ಟೇ ಹಸಿಯಾಗಿ ತೋರದೆಯೂ ಗಟ್ಟಿಗೊಳಿಸುವ ಸಾಧ್ಯತೆಯೊಂದು ಇತ್ತು. ಆಗ ಇನ್ನಷ್ಟು ಜನ ಈ ಚಿತ್ರ ನೋಡುವ ಅವಕಾಶ ಸೃಷ್ಟಿಯಾಗುತ್ತಿತ್ತೇನೋ?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.