ADVERTISEMENT

ದಲಿತ ಮಾರ್ಗದಲ್ಲಿ ಧಾವಂತದ ಓಟ

ಇಂಗಳೆ ಮಾರ್ಗ

ಆನಂದತೀರ್ಥ ಪ್ಯಾಟಿ
Published 5 ಸೆಪ್ಟೆಂಬರ್ 2014, 19:30 IST
Last Updated 5 ಸೆಪ್ಟೆಂಬರ್ 2014, 19:30 IST

ನಿರ್ಮಾಪಕ: ಘನಶ್ಯಾಮ ಭಾಂಗಡೆ
ನಿರ್ದೇಶನ: ವಿಶಾಲ್‌ ರಾಜ್‌, ತಾರಾಗಣ: ಸುಚೇಂದ್ರ ಪ್ರಸಾದ್‌, ಶಿವಾನಿ, ರೂಪಿಕಾ, ಶಂಕರ್‌ ಅಶ್ವತ್ಥ, ಸುಭಾಷ


ನಾಲ್ಕು ರಸ್ತೆಗಳು ಕೂಡುವಲ್ಲಿ ಚಮ್ಮಾರ ಕೆಲಸ ಮಾಡುತ್ತಿರುತ್ತಾನೆ. ಅಲ್ಲಿಗೆ ಬರುವ ಪೇಂಟರ್, ಆತನ ಸಲಕರಣೆ- ಚೀಲ ಎತ್ತೆಸೆದು ಅಲ್ಲಿರುವ ಫಲಕಕ್ಕೆ ‘ದಿ. ದೇವರಾಯ ಇಂಗಳೆ ಮಾರ್ಗ’ ಎಂದು ಬರೆಯುತ್ತಾನೆ. ಅಷ್ಟೊತ್ತಿಗೆ ಮಳೆ ಸುರಿಯುತ್ತದೆ. ಶಾಲಾ ಬಾಲಕನೊಬ್ಬ ತನ್ನ ಕೊಡೆಯನ್ನು ಚಮ್ಮಾರನಿಗೆ ಕೊಟ್ಟು ಓಡುತ್ತಾನೆ. ಆ ಬಾಲಕನ ಹೆಸರು ಕೂಡ ದೇವರಾಯ! ಮೆಲ್ಲಗೆ ಏಳುವ ಚಮ್ಮಾರ, ಫಲಕದ ಮೇಲಿರುವ ‘ದಿ.’ ಅಕ್ಷರ ಅಳಿಸಿ, ಮುಗುಳ್ನಗುತ್ತಾನೆ.

ಚಿತ್ರದ ಆರಂಭ ಹಾಗೂ ಅಂತ್ಯ ಜೋಡಿಸುವ ಇಂಥ ಅರ್ಥಪೂರ್ಣ ದೃಶ್ಯಗಳ ಮಧ್ಯೆ ಅಪೂರ್ವ ಕಥಾನಕವೊಂದು ಕಾಣೆಯಾಗಿರುವುದು ‘ಇಂಗಳೆ ಮಾರ್ಗ’ ಚಿತ್ರದುದ್ದಕ್ಕೂ ಕಾಡುವ ನಿರಾಶೆ. ದೇವರಾಯನ ಹೋರಾಟಗಳನ್ನು ಉತ್ಸಾಹ­ದೊಂದಿಗೆ ಚಿತ್ರಿಸಿದ ವಿಶಾಲ್ ರಾಜ್, ಚಿತ್ರವನ್ನು ಸಂವೇದ­ನಾತ್ಮಕ ಕೃತಿಯನ್ನಾಗಿಸುವಲ್ಲಿ ಹಿಂದೆ ಬಿದ್ದಿದ್ದಾರೆ. ಹಾಗಿದ್ದರೂ, ಕಮರ್ಷಿಯಲ್ ಚಿತ್ರಗಳ ಭರಾಟೆ ಮಧ್ಯೆ ದಲಿತರ ಏಳಿಗೆ ಕುರಿತ ವಿಷಯವೊಂದನ್ನು ದೃಶ್ಯರೂಪಕವಾಗಿ ಚಿತ್ರಿಸಲು ಮುಂದಾದ ನಿರ್ಮಾಪಕ ಘನಶ್ಯಾಮ ಭಾಂಡಗೆ ಪ್ರಯತ್ನವನ್ನಂತೂ ಶ್ಲಾಘಿಸಲೇಬೇಕು.

ಸರಜೂ ಕಾಟ್ಕರ್ ಅವರ ಕಾದಂಬರಿ ‘ದೇವರಾಯ’ ಆಧರಿಸಿದ ‘ಇಂಗಳೆ ಮಾರ್ಗ’ ಹೋರಾಟಗಳ ಸಂಗಮದ ಚಿತ್ರ. ಚಿಕ್ಕೋಡಿ ತಾಲ್ಲೂಕಿನ ಇಂಗಳೆ ಗ್ರಾಮದ ಶಾಲಾ ಶಿಕ್ಷಕ ದೇವರಾಯ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿ. ತನ್ನ ಸಮುದಾಯದ ಜನರು ಅನುಭವಿಸುವ ಶೋಷಣೆಯನ್ನು ಕೊನೆಗಾಣಿಸುವ ಛಲದೊಂದಿಗೆ ಡಾ. ಬಿ.ಆರ್.ಅಂಬೇಡ್ಕರ್ ಮಾರ್ಗದರ್ಶನದಲ್ಲಿ ನಡೆಸುವ ಪ್ರಯತ್ನಗಳ ಸರಮಾಲೆಯ ‘ಇಂಗಳೆ ಮಾರ್ಗ’, ಸ್ವಾತಂತ್ರ್ಯಪೂರ್ವ ಹಾಗೂ ನಂತರದ ಅವಧಿಯ ಕಥೆ.

ದಲಿತರ ಅಡ್ಡ ಹೆಸರು (ಸರ್‌ನೇಮ್) ಬದಲಾಯಿಸುವಿಕೆ, ದೇವದಾಸಿಯರಿಗೆ ಮದುವೆ, ದೇವರಾಯ– ಅಂಬೇಡ್ಕರ್ ಭೇಟಿ, ದಲಿತ ವಿದ್ಯಾರ್ಥಿಗಳ ಹಾಸ್ಟೆಲ್ ಆರಂಭ ಇತ್ಯಾದಿ ಪ್ರಯತ್ನಗಳು ಸಹಜವಾಗಿ ಮೂಡಿಬಂದಿವೆ. ಅಂದಿನ ಘಟನೆಗಳನ್ನು ಆಗಿನ ಕಾಲದ ಛಾಯೆಯಲ್ಲೇ ಸೆರೆಹಿಡಿಯುವ ಯತ್ನ ಸಫಲವಾಗಿದೆ. ಆದರೆ ಹೋರಾಟದ ಸರಣಿ ತೋರಿಸುವಾಗ ಚಿತ್ರ ತುಂಬ ವೇಗವಾಗಿ ಸಾಗುವುದರಿಂದ ಕೆಲವು ಘಟನೆಗಳು ಮಹತ್ವ ಕಳೆದುಕೊಂಡುಬಿಟ್ಟಿವೆ.

ಸ್ವಾತಂತ್ರ್ಯ ಆಂದೋಲನ ನಡೆಸುವವರಿಗೆ ‘ನಿಮಗೆ ಬ್ರಿಟಿಷರ ಜೀತ ಸಾಕಾಗಿದೆ. ನಮಗೆ ನಿಮ್ಮ ಜೀತ ಸಾಕಾಗಿದೆ’ ಎಂಬ ದೇವರಾಯನ ತೀಕ್ಷ್ಣ ಮಾತು ಚಿತ್ರದ ಜೀವಾಳ. ಆದರೆ ಆ ಶೋಷಣೆ ಎಂಥದೆಂಬುದನ್ನು ತೋರಿಸುವ ದೃಶ್ಯಗಳು ಪ್ರೇಕ್ಷಕರ ಹೃದಯ ತಾಕುವುದೇ ಇಲ್ಲ. ‘ಮನಿ ರೇನ್’ ಕಂಪೆನಿ ವಂಚನೆ ಹಿನ್ನೆಲೆಯಲ್ಲಿ ಭೂಗತನಾದ ದೇವರಾಯ ಬೇರೊಂದು ಧರ್ಮಕ್ಕೆ ಮತಾಂತರ ಹೊಂದುವುದು, ಆರೋ­ಪಮುಕ್ತನಾದ ಬಳಿಕ ಆ ಧರ್ಮದ ಉಡುಪು ಬಿಚ್ಚಿಟ್ಟು ಹಳ್ಳಿಗೆ ಬರುವುದು ಇನ್ನೇನೋ ಸಂದೇಶ ನೀಡಬಹುದಲ್ಲ?

ಸುಚೇಂದ್ರ ಪ್ರಸಾದ್ ಮುಖ್ಯ ಪಾತ್ರದಲ್ಲಿ (ದೇವರಾಯ) ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತಾರೆ. ಅವರನ್ನು ನಿಯಂತ್ರಿ­ಸುವುದು ನಿರ್ದೇಶಕರಿಗೆ ಸಾಧ್ಯವಾದಂತಿಲ್ಲ! ಹೀಗಾಗಿ ಚಿತ್ರ­ಮಂದಿರದಿಂದ ಹೊರಬಂದರೂ ಅವರ ಮಾತುಗಳೇ ಕಿವಿ­ಯಲ್ಲಿ ಗುಂಯ್‌ಗುಡುತ್ತವೆ. ಗೃಹಿಣಿಯಾಗಿ ಶಿವಾನಿ, ನೃತ್ಯ­ಗಾತಿ ಪಾತ್ರದಲ್ಲಿ ರೂಪಿಕಾ ಅಭಿನಯ ಗಮನ ಸೆಳೆಯುತ್ತದೆ. ಚಿಕ್ಕದಾದರೂ ಚೊಕ್ಕದಾದ ಪಾತ್ರ ಸುಭಾಷ್ (ಅಂಬೇಡ್ಕರ್) ಹಾಗೂ ಶಂಕರ್ ಅಶ್ವತ್ಥ (ತಹಸೀಲ್ದಾರ್) ಅವರದು. ವಿ.ಮನೋಹರ ಸಂಗೀತ ಪೂರಕವಾಗಿದ್ದರೆ, ನಾಗರಾಜ ಅದ್ವಾನಿ ಛಾಯಾಗ್ರಹಣದಲ್ಲಿ ವಿಶೇಷವೇನಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.