ADVERTISEMENT

ಸಂಗೀತದ ಹೊಸ ಮಿಂಚು ಗಣೇಶ್‌ ಕಾರಂತ

ಮಂಜುಶ್ರೀ ಎಂ.ಕಡಕೋಳ
Published 8 ಸೆಪ್ಟೆಂಬರ್ 2016, 19:30 IST
Last Updated 8 ಸೆಪ್ಟೆಂಬರ್ 2016, 19:30 IST
ಗಣೇಶ್‌ ಕಾರಂತ
ಗಣೇಶ್‌ ಕಾರಂತ   

ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ನೋಡಲು ಹೋಗಿದ್ದ ಮಗ ಇನ್ನೂ ಮನೆಗೆ ಬಂದಿಲ್ಲವಲ್ಲ ಎಂಬ ಆತಂಕದಲ್ಲಿ ತಾಯಿ ಕಾಯುತ್ತಿದ್ದರೆ, ಇತ್ತ ಕೃಷ್ಣನ ಭಕ್ತಿಗೀತೆಯ ಸ್ಪರ್ಧೆಯಲ್ಲಿ ವಾರಗೆಯವರನ್ನು ಮೀರಿಸಿ, ಪ್ರಶಸ್ತಿ ಪಡೆದ ಖುಷಿಯಲ್ಲಿದ್ದ ಮಗ.

ತಡವಾಗಿ ಮನೆಗೆ ಬಂದ ಮಗನಿಗೆ ಹೊಡೆಯಲೆಂಬಂತೆ ಕೈ ಎತ್ತಿದ್ದ ತಾಯಿ ಕೈಗೆ ಹತ್ತರ ಪೋರ ಪ್ರಶಸ್ತಿ ಇಟ್ಟಾಗ, ಆಕೆಯ ಕೋಪ ಒಮ್ಮೆಲೇ ಇಳಿದು, ಮುಖ ಅರಳಿತ್ತು. ಮಗ ಹಾಡುತ್ತಾನೆಂಬ ಸಂಭ್ರಮದಲ್ಲಿ ತಾಯಿಯ ಕೋಪ ಕರಗಿಹೋಗಿತ್ತು.

ಅಂದಿನ ಆ ಪೋರನೇ ಇಂದಿನ  ರೇಡಿಯೊ ಸಿಟಿ 91.1 ಎಫ್.ಎಂ.ನ ಸೂಪರ್ ಸಿಂಗರ್– ಸೀಸನ್‌ ಎಂಟರ ವಿಜೇತ ಕೆ.ಗಣೇಶ್‌ ಕಾರಂತ.

ಮೂಲತಃ ಉಡುಪಿ ಜಿಲ್ಲೆಯವರಾದ ಗಣೇಶ್‌ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ‘ಹಾಡುವುದು ನನ್ನ ಹವ್ಯಾಸವಲ್ಲ ಅದು ನನ್ನ ಪ್ಯಾಷನ್‌’ ಎಂದು ಬಲವಾಗಿ ಪ್ರತಿಪಾದಿಸುವ ಅವರು ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಎರಡರಲ್ಲೂ ಸಿದ್ಧಹಸ್ತರು.

ಬಾಲ್ಯದಲ್ಲಿ ಉಷಾ ಮೋಹನರಾವ್ ಅವರ ಬಳಿ ಕರ್ನಾಟಕ ಸಂಗೀತಾಭ್ಯಾಸ ಮಾಡಿರುವ ಗಣೇಶ್ ಅವರಿಗೆ ಯಕ್ಷಗಾನ, ತಾಳಮದ್ದಲೆ ಬಗ್ಗೆಯೂ ಅಪಾರ ಪ್ರೀತಿ.
‌‌
ಎಂಜಿನಿಯರಿಂಗ್ ಓದುವ ಭರದಲ್ಲಿ ಸಂಗೀತಾಭ್ಯಾಸದಿಂದ ತುಸು ಬಿಡುವು ಪಡೆದಿದ್ದ ಅವರು, ಬೆಂಗಳೂರಿನಲ್ಲಿ ವೃತ್ತಿಯ ನಡುವೆಯೇ ಸಂಗೀತ ಪ್ರೀತಿಯನ್ನು ಮುಂದುವರಿಸಿದ್ದಾರೆ. ಪ್ರಸ್ತುತ ಅನಿಂದಿತಾ ಮುಖರ್ಜಿ ಅವರ ಬಳಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಾಭ್ಯಾಸದಲ್ಲಿ ತೊಡಗಿರುವ ಗಣೇಶ್‌ ಅವರ ಸಿನಿಮಾದಲ್ಲಿ ಹಾಡಬೇಕೆನ್ನುವ ಬಯಕೆಯನ್ನು ಈಡೇರಿಸಿದ್ದು ರೇಡಿಯೊ ಸಿಟಿ ಸೂಪರ್ ಸಿಂಗರ್‌ ಷೋ.

‘24,500 ಸ್ಪರ್ಧಿಗಳ ನಡುವೆ ನಾನು ಫೈನಲ್‌ಗೆ ಆಯ್ಕೆಯಾಗುತ್ತೇನೆ. ಅದರಲ್ಲೂ ವಿಜೇತನಾಗಿ ಹೊರಹೊಮ್ಮುತ್ತೇನೆಂದು ಕನಸೂ ಕಂಡಿರಲಿಲ್ಲ’ ಎನ್ನುವ ಗಣೇಶ್ ಯಶಸ್ಸಿಗಾಗಿ ಯಾವುದೇ ಶಾರ್ಟ್ ಕಟ್‌ ಮೊರೆ ಹೊಕ್ಕವರಲ್ಲ.

‘ಸಿನಿಮಾ ಸಂಗೀತ ಕ್ಷೇತ್ರಕ್ಕೆ ಬರಬೇಕೆಂದರೆ ದೊಡ್ಡ ಹಿನ್ನೆಲೆ, ಶಿಫಾರಸು ಇರಬೇಕು. ಆದರೆ, ಇದ್ಯಾವುದೂ ಇಲ್ಲದೇ ರಮೇಶ್ ಅರವಿಂದ್‌ ಅವರ 100ನೇ ಸಿನಿಮಾ  ‘ಪುಷ್ಪಕ ವಿಮಾನ’ದಲ್ಲಿ ಹಾಡುವ ಅದೃಷ್ಟ ಪಡೆದಿರುವುದು ನಿಜಕ್ಕೂ ನನ್ನ ಪುಣ್ಯ. ಇದು ಒದಗಿದ್ದು ರೇಡಿಯೊ ಸಿಟಿ ಪ್ಲಾಟ್‌ಫಾರಂ ಮೂಲಕ’ ಎಂದು ಕೃತಜ್ಞತೆಯಿಂದ ಸ್ಮರಿಸುತ್ತಾರೆ ಅವರು.

‘ಸಹೋದ್ಯೋಗಿ ಪ್ರಶಾಂತ್ ಹೊಳ್ಳ ಅವರ ಸಲಹೆ ಮೇರೆಗೆ ರೇಡಿಯೊ ಸಿಟಿ ಸೂಪರ್ ಸಿಂಗರ್ ಆಡಿಷನ್‌ಗೆ ಹೋಗಿದ್ದೆ. ಆಗಲೇ ಕೊನೆಯ ದಿನಾಂಕ ಮುಗಿದಿತ್ತು. ಆದರೂ ಒಂದು ದಿನ ಅವಕಾಶ ವಿಸ್ತರಿಸಿ, ರೇಡಿಯೊ ಸಿಟಿ ತಂಡ ಹಾಡಲು ಅವಕಾಶ ನೀಡಿತು. ಬಗೆಬಗೆಯ ಎಂಟ್ಹತ್ತು ಹಾಡುಗಳನ್ನು ರೆಕಾರ್ಡ್ ಮಾಡಿಕೊಂಡಿತ್ತು. ಆಮೇಲೊಂದು ದಿನ ಫೋನ್ ಮಾಡಿ ನೀವು ಟಾಪ್‌–6ಗೆ ಆಯ್ಕೆಯಾಗಿದ್ದೀರಿ ಎಂದಾಗ ನನಗೆ ನಂಬಲಾಗಲಿಲ್ಲ’ ಎಂದು ರೇಡಿಯೊ ಸಿಟಿಯ ಪಯಣದ ಹಾದಿ ಬಿಚ್ಚಿಡುತ್ತಾರೆ ಅವರು.

‘ಸೂಪರ್ ಸಿಂಗರ್ ಫೈನಲ್‌ನ ಮೊದಲ ಹಂತದಲ್ಲಿ ಗೆಲ್ಲುತ್ತೇನೆಂಬ ಭರವಸೆ ಹೊರಟುಹೋಗಿತ್ತು. ಆದರೆ, ಎರಡು ಮತ್ತು ಮೂರನೇ ಹಂತ ನನ್ನನ್ನು ಲಿಫ್ಟ್‌ ಮಾಡಿತು. ರೊಮ್ಯಾಂಟಿಕ್‌ ರೌಂಡ್‌ನಲ್ಲಿ ಸಹ ಹಾಡುಗಾರ್ತಿ ವಿಜೇತಾ ನನ್ನನ್ನು ಬೆಂಬಲಿಸಿದರು. ಸ್ಪರ್ಧೆಯಲ್ಲಿ ಸಂಗೀತವಷ್ಟೇ ಅಲ್ಲ, ಪರ್ಫಾಮೆನ್ಸ್‌ ಕೂಡಾ ನೆರವಿಗೆ ಬಂತು.  ‘ಸಂತೋಷಕ್ಕೆ ಹಾಡು ಸಂತೋಷಕ್ಕೆ’ ಹಾಡಿಗೆ ಪ್ರೇಕ್ಷಕರ ಚಪ್ಪಾಳೆಯ ಸಾಥ್ ಮತ್ತಷ್ಟು ಹುರಿದುಂಬಿಸಿತು. ಇದೆಲ್ಲದರ ಫಲವಾಗಿ ಅಂತಿಮವಾಗಿ ಗೆಲುವು ನನ್ನದಾಯಿತು’ ಎಂದು ಸೂಪರ್ ಸಿಂಗರ್ ಯಶಸ್ಸಿನ ಹಾದಿಯನ್ನು ತೆರೆದಿಡುತ್ತಾರೆ ಗಣೇಶ್‌.

ಹಿಂದಿಯಲ್ಲಿ ಸೋನು ನಿಗಂ, ಕನ್ನಡದಲ್ಲಿ ವಿಜಯಪ್ರಕಾಶ್, ರಘು ದೀಕ್ಷಿತ್ ಅವರನ್ನು ಅಪಾರವಾಗಿ ಮೆಚ್ಚುವ ಗಣೇಶ್ ಅವರಿಗೆ ಶ್ರೇಯಾ ಘೋಷಾಲ್‌ ಅವರ ಕೋಗಿಲೆ ಕಂಠದ ಬಗ್ಗೆಯೂ ಅಪ್ಯಾಯಮಾನವಾದ ಒಲವು.

ಸಂಗೀತ ನಿರ್ದೇಶಕರಾದ ಅರ್ಜುನ ಜನ್ಯ, ಅನೂಪ್‌ ಸೀಳಿನ್, ಹರಿಕೃಷ್ಣ ಅವರ  ಜತೆ ಕೆಲಸ ಮಾಡುವ ಆಸೆಯಲ್ಲಿರುವ ಅವರಿಗೆ, ‘ಪುಷ್ಪಕ ವಿಮಾನ’ದ ಮೂಲಕ ಚರಣ್‌ರಾಜ್ ಅವರ ಜತೆ ಕೆಲಸ ಮಾಡುವ ಅವಕಾಶ ಪಡೆದಿರುವುದು ಅಪಾರ ಸಂತಸ ತಂದಿದೆಯಂತೆ.

‘ಗೋಧಿ ಬಣ್ಣ, ಸಾಧಾರಣ ಮೈಕಟ್ಟು’ ಚಿತ್ರದಿಂದ ಚರಣ್‌ ರಾಜ್ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಅವರ ಜತೆ ಕೆಲಸ ಮಾಡುವ ಅದೃಷ್ಟ ಎಷ್ಟು ಜನಕ್ಕೆ ಸಿಗುತ್ತದೆ ಹೇಳಿ? ಅದರಲ್ಲೂ ರಮೇಶ್ ಅರವಿಂದ್ ಅವರ 100ನೇ ಚಿತ್ರಕ್ಕೆ ಹಾಡುವ ಅವಕಾಶ ಸಿಗುವುದು ನಿಜಕ್ಕೂ ಅದೃಷ್ಟವಲ್ಲದೇ ಮತ್ತೇನು?’ ಎಂದು ಖುಷಿಯಿಂದ ನುಡಿಯುತ್ತಾರವರು.

ಸಂಗೀತವೆನ್ನುವುದು ಸಾಗರದಂತೆ. ವರ್ಷಾನುಗಟ್ಟಲೇ ಸಾಧನೆ ಮಾಡಿದಲ್ಲಿ ಮಾತ್ರ ಅದರಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದು ವಿನಮ್ರವಾಗಿ ನುಡಿಯುವ ಗಣೇಶ್, ಚಂದನವನದಿಂದ ಮತ್ತಷ್ಟು ಅವಕಾಶಗಳ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.