ADVERTISEMENT

ದೇವಲೋಕದ ಸುಂದರ...

ಶ್ರೀಧರ ಭಟ್ಟ ಐನಕೈ
Published 25 ಸೆಪ್ಟೆಂಬರ್ 2021, 19:31 IST
Last Updated 25 ಸೆಪ್ಟೆಂಬರ್ 2021, 19:31 IST
   

ತಲೆಯ ಮೇಲೊಂದು ಶಿಖೆ ಹೊತ್ತ ದೇವಲೋಕದ ಸುಂದರ ಪಕ್ಷಿ ಮರ‍್ರೆ ಈ ಹಟ್ಟಿ ಮುದ್ದ. ಇಂಗ್ಲಿಷ್ ಬಲ್ಲವರು ಇದಕ್ಕೆ ಪ್ಯಾರಡೈಸ್ ಪ್ಲೈ ಕ್ಯಾಚರ್ ಎಂದು ಹೇಳಿ ನಮ್ಮನ್ನು ತಬ್ಬಿಬ್ಬು ಮಾಡಿದ್ದೂ ಉಂಟು!

**

ಮಾಗಿ ಚಳಿಯ ಸಮಯ, ಸ್ನೇಹಿತ ಕಾಲ್ ಮಾಡಿ ‘ನೇರಳ ಕಟ್ಟೆಯಲ್ಲಿ ಹಳೆ ವಸ್ತು ಮಾರಾಟಗಾರನಿದ್ದಾನೆ. ಅವನಲ್ಲಿ ಹೊಸ ಹೊಸ ಹಳೆ ವಸ್ತುಗಳು ಬಂದಿವೆಯಂತೆ ನೋಡಿ, ಕೊಂಡು ಬರೋಣವೇ?’ ಎಂದು ಕೇಳಿದ. ಸರಿ ಎಂದು ಹೊರಟೆ. ನೇರಳಕಟ್ಟೆಯಿಂದ ಮುಂದೆ ಗುಲ್ವಾಡಿಯಲ್ಲಿ ಆತನ ಮನೆಯಿತ್ತು.

ADVERTISEMENT

ಒಂದು ಗೋಣಿಚೀಲದಷ್ಟು ಹಳೆ ವಸ್ತುಗಳನ್ನು ಆ ಮಾರಾಟಗಾರ ನಮ್ಮ ಮುಂದೆ ರಾಶಿ ಹಾಕಿದ. ನಮಗೂ ಅವನಿಗೂ ವ್ಯಾಪಾರ ಕುದುರದೇ ಅಲ್ಲಿಂದ ಹೊರಟೆವು. ಹಾದಿ ನಡುವಿನ ನೇರಳಕಟ್ಟೆಯಲ್ಲಿ ಚಹಾ ಹೀರಲು ನಿಲ್ಲಿಸಿದೆವು. ಮಕ್ಕಳ ಸಾಹಿತಿ ನೆಂಪು ನರಸಿಂಹ ಭಟ್, ಕವಯಿತ್ರಿ ಜ್ಯೋತಿ ನೇರಳಕಟ್ಟೆ, ನಾಟಕಕಾರ ಆನಂದ ತಪ್ಪಲು, ಅಕ್ಷರ ಸಂಚಾರದ ಪುಸ್ತಕಪ್ರೇಮಿ ಭಾಸ್ಕರ ಮುಂತಾದವರು ಇದೇ ಊರಿನವರು.

ನೇರಳಕಟ್ಟೆಯು ಚಿತ್ರಕಾರನೊಬ್ಬ ಬಿಡಿಸಿದ ಕೊಲಾಜ್‍ನಂತೆ. ಹೆಸರೇ ಎಷ್ಟು ಸುಂದರ. ಕೇರಳದಿಂದ ಬಂದ ಮಾಪಿಳ್ಳೆಗಳು, ಕ್ರಿಶ್ಚಿಯನ್ನರು ಈ ಭಾಗದವರೇ ಆಗಿಹೋಗಿದ್ದಾರೆ. ಬಹುತೇಕರು ಕೃಷಿಕರು. ಕೊಡ್ಲಾಡಿ ಸಮೀಪದ ಪ್ರಸನ್ನ ಅಡಿಗ ತಮ್ಮ ಸಹಜಕೃಷಿಯ ಮೂಲಕ ನೇರಳಕಟ್ಟೆಗೆ ಹೆಸರು ತಂದುಕೊಟ್ಟವರು.

ಕ್ಯಾಮೆರಾಕ್ಕೊಂದು ದೊಡ್ಡ ಲೆನ್ಸ್ ಹಾಕಿ ನೇರಳಕಟ್ಟೆಯ ಬೀದಿಯಲ್ಲಿ ಬಜ್ಜಿ ಅಂಗಡಿ ಎದುರು ನಿಂತೆ. ಶಕುಂತಲೆಯಂತೆ ಶಿಖೆ ಹೊತ್ತ ಬೋಂಡಾ ಮಾರುತ್ತಿದ್ದ ಹೆಂಗಸೊಬ್ಬಳು ಹಿಟ್ಟು ಕಲೆಸುತ್ತಾ ನನ್ನನ್ನು ‘ಏನು?’ ಎಂದು ವಿಚಾರಿಸಿಕೊಂಡಳು. ‘ಹೀಗೇ ಸುಮ್ನೆ’ ಎಂಬ ಜಾರಿಕೆಯ ಉತ್ತರವನ್ನಿತ್ತೆ. ಈ ಬೋಂಡಾ ಅಂಗಡಿ ಎದುರಿಗೇ ಅನೇಕ ವರ್ಷಗಳಿಂದ ನನ್ನನ್ನು ಪೀಡಿಸಿದ, ಕಾಡಿಸಿದ ಹಟ್ಟಿ ಮುದ್ದ ಕುಳಿತಿದ್ದ! ಇವನ ಫೋಟೊಗಾಗಿ ಊರೂರು ಅಲೆದಿದ್ದೆ. ಎಷ್ಟೋ ಕಾಡು ಸುತ್ತಿದ್ದೆ. ಲೀಟರ್‌ಗಟ್ಟಲೆ ಬೆವರು ಹರಿಸಿದ್ದೆ. ಅಚಾನಕ್ ಆಗಿ ಸಿಕ್ಕಿದ್ದನ್ನು ನೋಡಿ ಖುಷಿಯಾಯಿತು.

ತಲೆಯ ಮೇಲೊಂದು ಶಿಖೆ ಹೊತ್ತ ದೇವಲೋಕದ ಸುಂದರ ಪಕ್ಷಿ ಮರ‍್ರೆ ಈ ಹಟ್ಟಿ ಮುದ್ದ. ನಾನಿಟ್ಟ ಹೆಸರಲ್ಲ ಇದು. ಪರಿಸರದೊಂದಿಗೆ ಹಲವು ಶತಮಾನಗಳಿಂದ ಸಹಜೀವನ ನಡೆಸುತ್ತಾ ಬಂದ ಕುಡುಬಿ ಮತ್ತು ಮರಾಠಿ ಜನಾಂಗದವರಿತ್ತ ಹೆಸರು! ಹಟ್ಟಿ ಎಂದರೆ ನಮ್ಮ ಕಡೆ ದನ, ಎಮ್ಮೆ ಕಟ್ಟುವ ಜಾಗ. ಅಲ್ಲಿರುವ ಕೀಟಗಳನ್ನು ಬೇಟೆಯಾಡಿ ತನ್ನ ಹೊಟ್ಟೆ ಹೊರೆದುಕೊಳ್ಳುವವನೀತ. ಗಂಡುಗಲಿ. ಅಲ್ಲದೆ ಮರಾಠಿಗರ ಹೋಳಿ ಹಬ್ಬದ ಕುಣಿತದಲ್ಲಿ ಧರಿಸುವ ಮುಂಡಾಸು ಅಥವಾ ಕಿರೀಟದ ತುದಿಯಲ್ಲಿ ಇವನ ಚಂದ ಬಾಲವಿದ್ದರೆ ಅದರ ಗತ್ತೇ ಬೇರೆ. ಅವನ ಬಾಲಕ್ಕೆ ಒಳ್ಳೆ ಬೆಲೆ! ಹಾಗೆಂದು ಹಿಡಿಯಲು ಹೋಗಬೇಡಿ. ಫಾರೆಸ್ಟ್ ಡಿಪಾರ್ಟ್‌ಮೆಂಟಿನವರು ಹಿಡಿದಾರು ಜೋಕೆ. ಈಗಾಗಲೇ ಅಳಿವಿನಂಚಿಗೆ ಸರಿದಿದೆ ಸ್ವಾಮಿ.

ಹೇಗಿದ್ದಾನಿವ ಎಂದು ಕೇಳಿದಿರಾ? ತಲೆಯ ಮೇಲೊಂದು ಶಿಖೆ. ಸೀಳಿಕೊಂಡ ಉದ್ದನೆಯ ಬಿಳಿ ಬಾಲ. ಚೂಪು ಕಣ್ಣು. ಎದೆ, ದೇಹವೆಲ್ಲಾ ಕಪ್ಪೆನಿಸುವ ಕಡು ನೀಲಿ. ಅದಕೆ ಮ್ಯಾಚಿಂಗ್ ಆದ ಬಿಳಿ ಪುಕ್ಕ ಮತ್ತು ಅದಕ್ಕೆ ಮ್ಯಾಚಿಂಗ್‌ ಸುಂದರ ಬಾಲ. ಥೇಟ್ ಸ್ವರ್ಗದಿಂದಿಳಿದು ಬಂದ ದೇವತೆ. ಹಾಗಾಗಿ ಇಂಗ್ಲಿಷ್ ಬಲ್ಲವರು ಪ್ಯಾರಡೈಸ್ ಪ್ಲೈ ಕ್ಯಾಚರ್ ಎಂದು ಹೇಳಿ ನಮ್ಮನ್ನು ತಬ್ಬಿಬ್ಬು ಮಾಡಿದ್ದೂ ಉಂಟು.

ಇರಲಿ, ಇದೊಂದು ಅಗ್ದಿ ನೊಣಹಿಡುಕ. ಹಾಗಾಗಿ ಅಲ್ಲಿಯೇ ಮೀನು ಹೆಂಗಸರ ಬೆನ್ನು ಬಿದ್ದಿದ್ದ. ಹಟ್ಟಿ ಮುದ್ದನ ವಿವಿಧ ಭಂಗಿಯಲ್ಲಿ ಫೋಟೊ ಕ್ಲಿಕ್ಕಿಸಿಕೊಂಡುಬಿಟ್ಟೆ. ನನ್ನ ಕ್ಯಾಮೆರಾ ಇವತ್ತು ತೃಪ್ತಿಯ ತೇಗು ತೇಗಿತ್ತು. ಫೋಟೊ ಕ್ಲಿಕ್ಕಿಸಿಕೊಂಡ ಖುಷಿಯಲ್ಲಿ ಆತನೂ ಬಾಲ ಅಲ್ಲಾಡಿಸುತ್ತಾ ಹಾರಿಹೋದ!

Caption

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.