ADVERTISEMENT

ಕರಾಟೆ; ಕ್ರೀಡೆಯಲ್ಲ, ಸಮರಕಲೆ...

ಆರ್.ಜಿತೇಂದ್ರ
Published 19 ಅಕ್ಟೋಬರ್ 2014, 19:30 IST
Last Updated 19 ಅಕ್ಟೋಬರ್ 2014, 19:30 IST

‘ಭಾರತದಲ್ಲಿ ಸದ್ಯ ಕಲಿಸಲಾಗುತ್ತಿರುವ ಕರಾಟೆಗೂ, ಜಪಾನಿನ ಒಕಿನೊವಾದ ಮೂಲ ಕರಾಟೆಗೂ ಸಾಕಷ್ಟು ವ್ಯತ್ಯಾಸ ಇದೆ. ಇಲ್ಲಿ ಜಪಾನಿಗಿಂತ ಅಮೆರಿಕಾ ಮೊದಲಾದ ಶೈಲಿಯನ್ನು ಅಭ್ಯಾಸ ಮಾಡಿಸ ಲಾಗುತ್ತಿದೆ. ಗುಣಮಟ್ಟದ ಕೊರತೆಯಂತೂ ಇದ್ದೇ ಇದೆ’ –ಇದು ಜಪಾನಿನ ಯುವ ಕರಾಟೆ ಪಟುಗಳಾದ ಹಿರೊಮು ಕನಮರಿ ಹಾಗೂ ಕಜಿ ಕೈ ಅಭಿಪ್ರಾಯ.

ಸದ್ಯ ದೇಶದೆಲ್ಲೆಡೆ ಕರಾಟೆ ಕಲೆಯ ಅಭ್ಯಾಸ ಭರದಿಂದ ನಡೆದಿದೆ. ಪ್ರತಿ ಊರುಗಳಲ್ಲೂ ತರಬೇತಿ ಕೇಂದ್ರಗಳು ಹುಟ್ಟಿಕೊಂಡಿವೆ. ಎಳೆಯ ವಯಸ್ಸಿನ ಹುಡುಗ–ಹುಡುಗಿಯರಿಗೆ ಕರಾಟೆ ಕಲಿಸುವುದು ಪೋಷಕರ ಮೊದಲ ಆಯ್ಕೆಯಾಗಿದೆ. ಆದರೆ ಅದಕ್ಕೆ ತಕ್ಕಂತೆ ಗುಣಮಟ್ಟದ ತರಬೇತಿ ಸಿಗುತ್ತಿದೆಯೇ ಎಂದು ಪ್ರಶ್ನಿಸಿಕೊಂಡರೆ ಉತ್ತರ ಸಿಗುವುದು ಕಷ್ಟ.

ಜಪಾನಿನ ಈ ಮಾಸ್ಟರ್‌ಗಳದ್ದು ಇದೇ ಸಂದೇಹ. ಅದಕ್ಕೆ ಅವರು ಕೊಡುವ ಕಾರಣಗಳು ಹಲವು. ಅದರಲ್ಲಿ ಮೊದಲನೆಯದು, ಕರಾಟೆ ಜಪಾನಿನಿಂದ ಇಲ್ಲಿಗೆ ನೇರವಾಗಿ ಪ್ರವೇಶಿಸದೇ ಬೇರೆ ಶೈಲಿಗಳ ಮೂಲಕ ಇಲ್ಲಿ ಕಲಿಕೆ ನಡೆದಿರುವುದು. ಭಾಷೆಯ ಸಂವಹನ ತೊಡಕು ಇದಕ್ಕೆ ಮುಖ್ಯ ಕಾರಣ. ಜಪಾನಿಗರಿಗೆ ಇಂಗ್ಲಿಷ್‌ ಜ್ಞಾನ ಸ್ವಲ್ಪ ಕಡಿಮೆಯೇ. ಹೀಗಾಗಿ ಅವರು ಭಾರತದಂತಹ ದೇಶಗಳಿಗೆ ಬಂದು ಕರಾಟೆ ಹೇಳಿಕೊಡುವುದು ಕಷ್ಟ. ಇಲ್ಲಿನವರು ಅಲ್ಲಿಗೆ ಹೋದರೂ ಅದೇ ತೊಂದರೆ. ಹೀಗಾಗಿ ಇಂಗ್ಲಿಷ್‌ ಬಲ್ಲವರ ಮೂಲಕವೇ ಈ ಕಲೆ ಇಲ್ಲಿಗೆ ಪರಿಚಯಗೊಂಡಿದೆ ಎನ್ನುವುದು ಅವರ ವಿವರಣೆ.

‘ಕರಾಟೆ ರೂಪುಗೊಂಡದ್ದು ಜಪಾನಿನ ಒಕಿನೊವಾ ದಲ್ಲಿ. ಚೀನಿಯರಿಂದ ಪ್ರಭಾವಿತಗೊಂಡು 20ನೇ ಶತಮಾನದ ಆರಂಭದಲ್ಲಿ ಸ್ಪಷ್ಟ ರೂಪ ಪಡೆದ ಈ ಸಮರ ಕಲೆ ಮೊದಲಿಗೆ ಜಪಾನಿನ ಶಾಲೆಗಳಲ್ಲಿ ಪರಿಚಯ ಗೊಂಡು ನಂತರ ಜಗತ್ತಿಗೆ ವ್ಯಾಪಿಸಿದೆ. ಅಮೆರಿಕಾ, ಕೆನಡಾ ಸಹಿತ ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಬೆಳೆದಿದೆ. ಭಾರತದಲ್ಲೂ ಈಗೀಗ ಬೆಳವಣಿಗೆ ಹೊಂದುತ್ತಿದೆ. ಆದರೆ ತರಬೇತಿಯಲ್ಲಿ ಅದರದ್ದೇ ಆದ ವ್ಯತ್ಯಾಸಗಳೂ ಇವೆ’ ಎನ್ನುತ್ತಾರೆ ಅವರು.

ಹಿರೊಮು ಕರಾಟೆ ಕಲಿಯಲು ಆರಂಭಿಸಿದ್ದು ತಮ್ಮ ಐದನೇ ವಯಸ್ಸಿನಲ್ಲಿ. ಗೊಜು ರಿಯೊ ಮತ್ತು ಶೋಟೊಕಾನ್‌ ಮಾದರಿಗಳಲ್ಲಿ ಬ್ಲ್ಯಾಕ್‌ ಬೆಲ್ಟ್‌ ಪಡೆದು ನಂತರ ‘ಮಾಸ್ಟರ್‌’ ಪಟ್ಟದೊಂದಿಗೆ ಅಧಿಕೃತ ಕರಾಟೆ ತರಬೇತುದಾರರಾಗಿ ಆಸಕ್ತರಿಗೆ ಪಾಠ ಹೇಳಿಕೊಡು ತ್ತಿದ್ದಾರೆ. ಸುಮಾರು ಎರಡು ವರ್ಷ ಕಾಲ  ಬೆಂಗಳೂರಿ ನಲ್ಲಿ  ಅಕಾಡೆಮಿಯೊಂದರಲ್ಲಿ ತರಬೇತುದಾರರಾಗಿ ದ್ದರು. ಇದೀಗ ಸ್ವದೇಶಕ್ಕೆ ಹೊರಟು ನಿಂತಿದ್ದಾರೆ.

‘ಕರಾಟೆಯನ್ನು ಮೂರು ಹಂತಗಳಲ್ಲಿ ಹೇಳಿ ಕೊಡಲಾಗುತ್ತದೆ. ಮೊದಲು ದೇಹ ಮತ್ತು ಅದರ ಅಂಗಾಂಗಗಳ ಬಳಕೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ನಂತರವಷ್ಟೇ ಮುಂದಿನ ಹಂತಕ್ಕೆ ಹೋಗಲಾಗುತ್ತದೆ. ಭಾರತದಲ್ಲಿ ಮೊದಲ ಹಂತದಿಂದಲೇ ಮಕ್ಕಳಿಗೆ ಹೇಳಿಕೊಡಬೇಕಾಗುತ್ತದೆ’ ಎನ್ನುವುದು ಅವರ ವಿವರಣೆ. ‘ಗೊಜು ರಿಯೊ ಮತ್ತು ಶೋಟೊಕಾನ್‌ ಶೈಲಿ ಸೇರಿದಂತೆ ಕರಾಟೆಯಲ್ಲಿ ಸಾಫ್ಟ್‌ ಮತ್ತು ಹಾರ್ಡ್‌ ಎರಡೂ ಬಗೆಯ ಅಭ್ಯಾಸಗಳಿವೆ. ಬ್ಲಾಕ್ಸ್‌, ಕಿಕ್ಸ್‌, ಪಂಚ್‌ ಸಹಿತ ಒಂದೊಂದು ಶೈಲಿಯೂ ಭಿನ್ನ ಅಭ್ಯಾಸಗಳನ್ನು ಒಳಗೊಂಡಿರುತ್ತದೆ’ ಎಂದು ವಿವರಿಸುತ್ತಾರೆ ಅವರು.

ಸಂಪೂರ್ಣ ಕ್ರೀಡೆಯಲ್ಲ: ಕರಾಟೆಯನ್ನು ಒಲಿಂಪಿಕ್ಸ್‌ ಕ್ರೀಡೆಗಳ ಪಟ್ಟಿಯಲ್ಲಿ ಸೇರಿಸಲು ದಶಕಗಳಿಂದ ಪ್ರಯತ್ನ ನಡೆಯುತ್ತಲೇ ಬಂದಿದೆ. 2009ರಲ್ಲಿ ಅಂತರರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಈ ಸಂಬಂಧ ನಡೆಸಿದ ಮತದಾನ ದಲ್ಲಿ ಮೂರನೇ ಎರಡು ಪ್ರಮಾಣದ ಮತಗಳು ದೊರೆಯದ ಕಾರಣ ಆ ಪ್ರಯತ್ನ ಫಲ ನೀಡಿಲ್ಲ.

ಜಪಾನಿನ ಶಾಲೆಗಳಲ್ಲಿ ಸಮರ ಕಲೆಯ ಅಭ್ಯಾಸ ಕಡ್ಡಾಯ. ಕರಾಟೆಯೂ ಸೇರಿದಂತೆ ಯಾವುದಾದರೂ ಒಂದು ಕಲೆಯನ್ನು ಮಕ್ಕಳು ಆಯ್ಕೆ ಮಾಡಿಕೊಳ್ಳ ಬಹುದು. ಇದರಿಂದ ಆರಂಭದ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಕ್ರೀಡೆಯ ಪರಿಚಯ ಆಗುತ್ತದೆ. ಜೊತೆಗೆ ಹೆಚ್ಚು ಫಿಟ್ ಆಗಿರಲು ಸಾಧ್ಯವಾಗುತ್ತದೆ. ಭಾರತದ ಮಕ್ಕಳಲ್ಲಿ ಕ್ರೀಡೆಯ ಬಗ್ಗೆ ಮಾಹಿತಿ ಕಡಿಮೆ. ಅವರಿಗೂ ಆರಂಭದಲ್ಲಿಯೇ ಕ್ರೀಡೆ ಬಗ್ಗೆ ಆಸಕ್ತಿ ಬೆಳೆಸುವ ಅವಶ್ಯಕತೆ ಇದೆ ಎನ್ನುತ್ತಾರೆ ಹಿರೊಮು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.