ADVERTISEMENT

ಆಹಾ! ಹಲಸಿನ ಖಾದ್ಯ

ಸರಸ್ವತಿ ಎಸ್.ಭಟ್ಟ
Published 31 ಮೇ 2017, 19:30 IST
Last Updated 31 ಮೇ 2017, 19:30 IST
ಹಲಸಿನ ಹಣ್ಣಿನ ಚಾಕೊಲೆಟ್
ಹಲಸಿನ ಹಣ್ಣಿನ ಚಾಕೊಲೆಟ್   

ಹಲಸಿನ ಹಣ್ಣಿನ ಚಾಕೊಲೆಟ್
ಬೇಕಾಗುವ ವಸ್ತುಗಳು:
1ಕಪ್ ಹಲಸಿನ ಹಣ್ಣಿನ ಸೊಳೆ, 1 ಕಪ್ ಸಕ್ಕರೆ, ¼ ಕಪ್ ತೆಂಗಿನ ತುರಿ, ¼ ಕಪ್ ಗೋಧಿಪುಡಿ, ½ ಚಮಚ ಶುಂಠಿ, ¼  ಚಮಚ ಕಾಳುಮೆಣಸು ಪುಡಿ, 1 ಚಮಚ  ತುಪ್ಪ, ಅಲಂಕರಿಸಲು ಗೋಡಂಬಿ.

ಮಾಡುವ ವಿಧಾನ: ಹಲಸಿನ ಹಣ್ಣನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ನಂತರ ಒಂದು ಬಾಣಲೆಯನ್ನು ಒಲೆಯ ಮೇಲಿಟ್ಟು ರುಬ್ಬಿದ ಹಣ್ಣಿನ ಮಿಶ್ರಣ ಹಾಕಿ. ಹಣ್ಣಿನ ಮಿಶ್ರಣ ಬೇಯುವವರೆಗೆ ಬೇಯಿಸಿ. ನಂತರ ತೆಂಗಿನ ತುರಿ, ಸಕ್ಕರೆ ಹಾಕಿ ತೊಳೆಸಿ. ಬಾಣಲೆಯಿಂದ ತಳ ಬಿಡುವ ತನಕ ಕಾಯಿಸಿ ಒಲೆಯಿಂದ ಕೆಳಗಿಳಿಸಿ. ಕೈಗೆ ತುಪ್ಪದ ಪಸೆ ಮಾಡಿ ಸಣ್ಣ ಸಣ್ಣ ಉಂಡೆ ಮಾಡಿ ತಟ್ಟೆಯಲ್ಲಿ ಹಾಕಿ. ನಂತರ ಗೋಡಂಬಿಯಿಂದ ಅಲಂಕರಿಸಿ. ಈಗ ರುಚಿಯಾದ ಚಾಕೊಲೆಟ್‌ ಸವಿಯಲು ಸಿದ್ಧ.

*


ಹಲಸಿನ ಹಣ್ಣಿನ ಪಾಯಸ
ಬೇಕಾಗುವ ವಸ್ತುಗಳು:
1 ಕಪ್ ಹಲಸಿನ ಹಣ್ಣಿನ ಸೊಳೆ, 1 ಕಪ್ ತೆಂಗಿನ ತುರಿ, ½ ಕಪ್ ಬೆಲ್ಲ, 1 ಚಮಚ ಅಕ್ಕಿ ಹಿಟ್ಟು, ½ ಚಮಚ ಹುರಿದ ಎಳ್ಳು, ¼ ಚಮಚ ಏಲಕ್ಕಿ ಪುಡಿ, ಚಿಟಿಕೆ ಉಪ್ಪು.

ADVERTISEMENT

ಮಾಡುವ ವಿಧಾನ: ಹಲಸಿನ ಹಣ್ಣನ್ನು ಸಣ್ಣಗೆ ಕತ್ತರಿಸಿ. ತೆಂಗಿನತುರಿ ರುಬ್ಬಿ ದಪ್ಪ ಕಾಯಿಹಾಲು ತೆಗೆದು, ಪುನಃ ನೀರು ಕಾಯಿ ಹಾಲು ತೆಗೆದುಕೊಳ್ಳಿ. ದಪ್ಪ ತಳದ ಪಾತ್ರೆಯಲ್ಲಿ ಹಲಸಿನ ಹಣ್ಣು, ನೀರು ಕಾಯಿ ಹಾಲು ಹಾಕಿ ಬೇಯಿಸಿ. ಅಕ್ಕಿ ಹಿಟ್ಟನ್ನು ನೀರು ಹಾಕಿ ಕಲಸಿಡಿ. ಹಲಸಿನ ಹಣ್ಣು ಬೆಂದ ಮೇಲೆ ಬೆಲ್ಲ, ಉಪ್ಪು ಹಾಕಿ ಚೆನ್ನಾಗಿ ಕುದಿಸಿ. ನಂತರ ಅಕ್ಕಿ ಹಿಟ್ಟು ಮಿಶ್ರಣ ಹಾಕಿ ಕೈ ಬಿಡದೆ ತೊಳೆಸಿ. ನಂತರ ದಪ್ಪ ಕಾಯಿ ಹಾಲು ಹಾಕಿ ಒಂದೆರಡು ಕುದಿ ಕುದಿಸಿ ಇಳಿಸಿ. ನಂತರ ಹುರಿದ ಎಳ್ಳು, ಏಲಕ್ಕಿ ಪುಡಿ ಹಾಕಿ ಸರಿಯಾಗಿ ಬೆರೆಸಿ. ಈಗ ಘಮಘಮಿಸುವ ಹಲಸಿನ ಪಾಯಸ ತಿನ್ನಲು ಸಿದ್ಧ.

*


ಹಲಸಿನ ಹಣ್ಣಿನ ಸುಟ್ಟೇವು
ಬೇಕಾಗುವ ವಸ್ತುಗಳು:
1 ಕಪ್ ಬೆಳ್ತಿಗೆ ಅಕ್ಕಿ, 2 ½ ಕಪ್ ಹಲಸಿನ ಹಣ್ಣಿನ ಸೊಳೆ, ½ ಕಪ್ ತೆಂಗಿನ ತುರಿ, ½ ಕಪ್ ಬೆಲ್ಲದ ತುರಿ, 2 ಚಮಚ ಹುರಿದ ಎಳ್ಳು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಬೇಕಾದಷ್ಟು ಎಣ್ಣೆ.

ಮಾಡುವ ವಿಧಾನ: ಅಕ್ಕಿಯನ್ನು 2-3 ಗಂಟೆ ನೆನೆಸಿ ತೊಳೆದು ನೀರು ಬಸಿದು ತೆಗೆದಿಡಿ. ನಂತರ ಹಲಸಿನ ಹಣ್ಣಿನ ಸೊಳೆ, ತೆಂಗಿನ ತುರಿ, ಉಪ್ಪು, ಬೆಲ್ಲದ ತುರಿ ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಪಾತ್ರೆಗೆ ಹಾಕಿ. ಎಳ್ಳು ಹಾಕಿ ಬೆರೆಸಿ. ನಂತರ ಬೆರೆಸಿದ ಹಿಟ್ಟಿನ ಮಿಶ್ರಣದಿಂದ ಚಿಕ್ಕ ಗಾತ್ರದ ಮಿಶ್ರಣ ತೆಗೆದು ಕಾದ ಎಣ್ಣೆಗೆ ಹಾಕಿ ಕರಿಯಿರಿ. ಎಣ್ಣೆಯಲ್ಲಿ ಹಿಡಿಸುವಷ್ಟು ಒಂದೊಂದಾಗಿ ಹಾಕಿ ಹದ ಉರಿಯಲ್ಲಿ ಕರಿಯಿರಿ. ನಂತರ ತೆಗೆದು ಕಣ್ಣು ಪಾತ್ರೆಗೆ ಹಾಕಿ. ಹಲಸಿನ ಖಾದ್ಯ ತಯಾರಿಸುವಾಗ ಹಲಸಿನ ಹಣ್ಣಿನ ಸಿಹಿಗೆ ಅನುಗುಣವಾಗಿ ಬೆಲ್ಲ ಹೆಚ್ಚು ಕಡಿಮೆ ಮಾಡಿಕೊಳ್ಳಿ.

*


ಹಲಸಿನ ಹಣ್ಣಿನ ಮಿಶ್ರ ರಸಾಯನ
ಬೇಕಾಗುವ ವಸ್ತುಗಳು:
1 ಕಪ್ ಮಾವಿನ ಹಣ್ಣಿನ ಚೂರು, ½ ಕಪ್ ಹಲಸಿನ ಹಣ್ಣಿನ ಚೂರು, ½ ಕಪ್ ಖರ್ಜೂರದ ಚೂರು, ½ ಕಪ್ ಬಾಳೆಹಣ್ಣಿನ ಚೂರು, ½ ಕಪ್ ಬೆಲ್ಲದ ಪುಡಿ, ತೆಂಗೆನಕಾಯಿ ಹಾಲು 3-4 ಕಪ್, ½ ಚಮಚ ಏಲಕ್ಕಿ ಪುಡಿ, ½ ಕಪ್ ಸೇಬಿನ ಚೂರು.

ಮಾಡುವ ವಿಧಾನ: ಹಣ್ಣುಗಳನ್ನೆಲ್ಲಾ ಸಣ್ಣಗೆ ಹೆಚ್ಚಿ ಒಂದು ಪಾತ್ರೆಗೆ ಹಾಕಿ. ಖರ್ಜೂರದ ಬೀಜ ತೆಗೆದು ನಂತರ ಅದನ್ನು ಸಣ್ಣಗೆ ಹೆಚ್ಚಿ 1 ½  ಕಪ್ ತೆಳು ಕಾಯಿ ಹಾಲಲ್ಲಿ ತರಿ ತರಿ ರುಬ್ಬಿ ಪಾತ್ರೆಗೆ ಹಾಕಿ. ನಂತರ ಬೆಲ್ಲ, ಏಲಕ್ಕಿ ಪುಡಿ, ಚಿಟಿಕೆ ಉಪ್ಪು, ಉಳಿದ ತೆಂಗಿನಕಾಯಿ ಹಾಲು ಹಾಕಿ ಬೆರೆಸಿ. ಈಗ ಪೌಷ್ಟಿಕ ಮಿಶ್ರ ರಸಾಯನ ಸವಿಯಿರಿ.

*


ಸರಸ್ವತಿ.ಎಸ್.ಭಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.